ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್ ಮೋಡಿಯ ನೋಡಿದಿರಾ...?

Last Updated 26 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಕೊಲಂಬೊ: ‘ಬೇಸ್‌ಬಾಲ್ ಎಸೆದಂತೆ ಬೌಲಿಂಗ್ ಮಾಡುತ್ತಾನೆ’, ‘ಕವಣಿ ಕಲ್ಲು ಎಸೆಯುವ ಇಂಥವರೆಲ್ಲಾ ಬೌಲರ್‌ಗಳು’, ‘ಅನುಮಾನಕ್ಕೆ ಅವಕಾಶ ನೀಡುವ ಸ್ಪಿನ್ನರ್’ ಎಂದೆಲ್ಲಾ ವಿಶ್ವ ಮಾಧ್ಯಮಗಳಲ್ಲಿ ಕ್ರಿಕೆಟ್ ಪಂಡಿತರಿಂದ ಟೀಕೆ ಎದುರಿಸಿದ್ದ ಮುತ್ತಯ್ಯ ಮುರಳೀಧರನ್ ಅನೇಕ ಬಾರಿ ದೇಹಚಲನಾ ಶಾಸ್ತ್ರದಲ್ಲಿ ಪರಿಣತಿ ಹೊಂದಿದವರ ಮುಂದೆ ತಮ್ಮ ಬೌಲಿಂಗ್ ಶೈಲಿಯು ‘ಶುದ್ಧ’ವಾದದ್ದೆಂದು ಸಾಬೀತುಪಡಿಸಿದವರು.

ಟೀಕಾಸ್ತ್ರಗಳ ಪ್ರಹಾರದ ನಡುವೆಯೂ ವಿಶ್ವಾಸದಿಂದ ಹೋರಾಡಿ ಬೆಳೆದು ನಿಂತ ಶ್ರೀಲಂಕಾದ ಸ್ಪಿನ್ನರ್ ಮಾಡಿರುವ ದಾಖಲೆಯನ್ನು ಮುರಿಯುವುದು ಸುಲಭ ಸಾಧ್ಯವಲ್ಲ. ದೀರ್ಘ ಕಾಲ ಪ್ರದರ್ಶನ ಮಟ್ಟವನ್ನು ಕಾಯ್ದುಕೊಂಡು ಬಂದಿರುವ ಸಿಂಹಳೀಯರ ನಾಡಿನ ಕ್ರಿಕೆಟ್ ಪ್ರಿಯರ ನೆಚ್ಚಿನ ‘ಮುರಳಿ’ಯ ಸ್ಪಿನ್ ಮೋಡಿಯನ್ನು ಎದುರಾಳಿ ಬ್ಯಾಟ್ಸ್‌ಮನ್‌ಗಳು ಕೊಂಡಾಡಿದ್ದೂ ಅದೆಷ್ಟೊಂದು ಬಾರಿ!

ವಯಸ್ಸಿನ ಭಾರಕ್ಕೆ ಕುಗ್ಗದಿದ್ದರೂ 38 ವರ್ಷ ವಯಸ್ಸಿನ ಆಫ್‌ಸ್ಪಿನ್ನರ್ ಈ ಬಾರಿಯ ವಿಶ್ವಕಪ್ ಕ್ರಿಕೆಟ್ ನಂತರ ಎಲ್ಲ ಪ್ರಕಾರದ ಕ್ರಿಕೆಟ್‌ಗೆ ವಿದಾಯ ಹೇಳಿ, ಹೊಸಬರಿಗೆ ಅವಕಾಶ ಮಾಡಿಕೊಡಲಿದ್ದಾರೆ. ಸದಾ ಸುದ್ದಿಯಲ್ಲಿದ್ದ ಮುರಳೀಧರನ್ ತಮ್ಮ ಸ್ನೇಹಪರ ವ್ಯಕ್ತಿತ್ವದಿಂದ ಅಂಗಳದಲ್ಲಿ ಮಾತ್ರವಲ್ಲ ಹಾಗೂ ಅಂಗಳದ ಹೊರಗೆಯೂ ಎಲ್ಲರ ಹೃದಯ ಗೆದ್ದ ಕ್ರಿಕೆಟಿಗ.
‘ಮುದಿ ಬೌಲರ್; ಇನ್ನೂ ಏಕೆ ಆಟ?’ ಎನ್ನುವ ಟೀಕೆಯನ್ನು ಮನಸ್ಸಿಗೆ ಹಚ್ಚಿಕೊಳ್ಳದೇ ಸ್ಪಿನ್ ಮೋಡಿಯಿಂದ ಈಗಲೂ ಪ್ರೇಕ್ಷಕರ ಹೃದಯ ಗೆಲ್ಲುತ್ತಿರುವ ಮುರಳಿ, ತಮ್ಮನ್ನು ವ್ಯಂಗ್ಯ ಮಾಡಿದವರಿಗೆ ಅಂಗಳದಲ್ಲಿನ ಪ್ರದರ್ಶನದಿಂದಲೇ ಉತ್ತರ ನೀಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಅವರು ದಾಳಿ ನಡೆಸಿದ ರೀತಿಯಂತೂ ಮೆಚ್ಚುವಂಥದು. ಇಂಗ್ಲೆಂಡ್ ವಿರುದ್ಧ ಇಲ್ಲಿನ ಆರ್. ಪ್ರೇಮದಾಸಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿಯೂ ಅವರು ಆಕ್ರಮಣಕಾರಿಯಾಗುತ್ತಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಲು ಶ್ರಮಿಸಿದರು. ಉತ್ಸಾಹದಿಂದ ಬ್ಯಾಟ್ ಬೀಸಲು ಸಜ್ಜಾಗುತ್ತಿದ್ದ ರವಿ ಬೋಪರಾ ವಿಕೆಟ್ ಕೆಡವಿದ್ದಂತೂ ಮಹತ್ವದ್ದು.

ಇಲ್ಲಿನ ಪಿಚ್‌ನಲ್ಲಿ ಶ್ರೀಲಂಕಾಕ್ಕೆ ದುಬಾರಿ ಎನಿಸುವಂಥ ಬ್ಯಾಟ್ಸ್‌ಮನ್ ಬೋಪರಾ ಮೂವತ್ತೊಂದು ರನ್‌ಗೆ ನಿರ್ಗಮಿಸಿದ್ದರಿಂದ ಆತಿಥೇಯ ತಂಡದ ಮೇಲಿದ್ದ ಒತ್ತಡವೂ ನಿವಾರಣೆ ಆಯಿತು. ಹೀಗೆ ದೊಡ್ಡ ವಿಕೆಟ್ ಕೆಡವಿ ತಂಡಕ್ಕೆ ನೆರವಾಗುತ್ತಲೇ ಬಂದಿರುವ ಮುರಳಿ ತಮ್ಮ ವೈಯಕ್ತಿಕ ಸಾಧನೆಯನ್ನೂ ಉತ್ತಮಪಡಿಸಿಕೊಳ್ಳುತ್ತಾ ಬಂದಿದ್ದಾರೆ. ಟೆಸ್ಟ್‌ನಲ್ಲಿ ಎಂಟನೂರು ವಿಕೆಟ್ ಪಡೆದಿರುವ ಮುರಳಿ ಏಕದಿನ ಕ್ರಿಕೆಟ್‌ನಲ್ಲಿ ಐದನೂರರ ಗಡಿಯನ್ನು ದಾಟಿ ಬೆಳೆದಿದ್ದಾರೆ.

ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿಯೂ ಅವರದ್ದು ಗಮನ ಸೆಳೆಯುವ ಸಾಧನೆ. ಒಟ್ಟಾರೆಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮುರಳಿಗೆ ಎರಡನೇ ಸ್ಥಾನ. ಆಸ್ಟ್ರೇಲಿಯಾದ ಗ್ಲೇನ್ ಮೆಕ್‌ಗ್ರಾ (71) ನಂತರದ ಸ್ಥಾನ ಲಂಕಾದ ಈ ಅನುಭವಿ ಬೌಲರ್‌ಗೆ ಸಿಕ್ಕಿದೆ. ವಿಶ್ವಕಪ್‌ನಲ್ಲಿ ಆಡುತ್ತಿರುವ ಹಾಲಿ ಬೌಲರ್‌ಗಳು ಮುರಳಿಗಿಂತ ಬಹಳ ಹಿಂದಿದ್ದಾರೆ. ಅವರೆಲ್ಲಾ ಮೆಕ್‌ಗ್ರಾ ಮತ್ತು ಮುರಳೀಧರನ್ ಅವರ ಹತ್ತಿರಕ್ಕೆ ಬರಲು ಇನ್ನೂ ಒಂದು ವಿಶ್ವಕಪ್ ಆಡಬೇಕು.

ವಿಶ್ವಕಪ್‌ನಂಥ ದೊಡ್ಡ ಕ್ರಿಕೆಟ್ ಸಮರಾಂಗಣದಲ್ಲಿ ಅರವತ್ತಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿರುವುದೇ ಮುರಳಿ ಪ್ರದರ್ಶನ ಮಟ್ಟವನ್ನು ಕಾಯ್ದುಕೊಂಡು ಬಂದಿರುವುದಕ್ಕೆ ಸಾಕ್ಷಿ. ಇಷ್ಟೊಂದು ದೀರ್ಘ ಕಾಲದವರೆಗೆ ಒಂದು ತಂಡದಲ್ಲಿ ಉಳಿಯುವುದೇ ಕಷ್ಟ. ಅಂಥದರಲ್ಲಿ ದಾಖಲೆಗಳ ಮೇಲೆ ದಾಖಲೆ ಮುರಿಯುವುದು ಇನ್ನೊಂದು ಸಾಹಸ. ಅಂಥ ಸಾಹಸ ಯಾತ್ರೆಯಲ್ಲಿ ಮುರಳಿ ಯಶಸ್ವಿ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT