ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೀಕರ್ ವಿರುದ್ಧ ಪಕ್ಷೇತರರ ಧರಣಿ

Last Updated 30 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಪಕ್ಷೇತರ ಶಾಸಕರು ಮತ್ತು ಕಾಂಗ್ರೆಸ್ ಸದಸ್ಯರು, ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ವಿರುದ್ಧ ತಿರುಗಿಬಿದ್ದರು.  ಸ್ಪೀಕರ್ ವಿರುದ್ಧ ಘೋಷಣೆಗಳನ್ನು ಕೂಗಿ, ಅವರ ರಾಜೀನಾಮೆಗೆ ಪಟ್ಟುಹಿಡಿದ ಪರಿಣಾಮ ಸೋಮವಾರ ವಿಧಾನಸಭೆಯಲ್ಲಿ ಕೆಲಕಾಲ ಗದ್ದಲ ಉಂಟಾಯಿತು. ಪಕ್ಷೇತರರು ಧರಣಿ ಕೂಡ ನಡೆಸಿದರು.

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಭಾಷಣ ಆರಂಭಿಸುತ್ತಿದ್ದಂತೆಯೇ ಪಕ್ಷೇತರ ಸದಸ್ಯರಾದ ಪಿ.ಎಂ.ನರೇಂದ್ರಸ್ವಾಮಿ, ಡಿ.ಸುಧಾಕರ್, ಶಿವರಾಜ ತಂಗಡಗಿ ಮತ್ತು ವೆಂಕಟರಮಣಪ್ಪ  ಏರುಧ್ವನಿಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದರು.

`ಶಾಸಕರ ಅನರ್ಹತೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿರುವ ಸ್ಪೀಕರ್ ಬೋಪಯ್ಯ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭಾಷಣ ಓದುವುದು ಬೇಡ. ಮೊದಲು ಅವರನ್ನು ಹೊರ ಕಳುಹಿಸಿ~ ಎಂದು ಪಕ್ಷೇತರ ಸದಸ್ಯರು ರಾಜ್ಯಪಾಲರನ್ನು ಆಗ್ರಹಪಡಿಸಿದರು.

ಇದಕ್ಕೆ ರಾಜ್ಯಪಾಲರು ಯಾವ ಪ್ರತಿಕ್ರಿಯೆಯನ್ನೂ ನೀಡದೆ, ಭಾಷಣ ಮುಂದುವರಿಸಿದರು. ಇದರ ನಡುವೆಯೇ ಪಕ್ಷೇತರ ಸದಸ್ಯರು ಕೆಲ ಹೊತ್ತು ತಮ್ಮ ಕೂಗಾಟ ಮುಂದುವರಿಸಿ, ಸ್ಪೀಕರ್ ವಿರುದ್ಧ ವಾಗ್ದಾಳಿ ನಡೆಸಿದರು. `ಇಂತಹ ಪಕ್ಷಪಾತಿ ಸ್ಪೀಕರ್ ಆ ಸ್ಥಾನದಲ್ಲಿ ಕೂರಲು ಯೋಗ್ಯರಲ್ಲ. ಮೊದಲು ಅವರಿಂದ ರಾಜೀನಾಮೆ ಪಡೆಯಬೇಕು~ ಎಂದೂ ಒತ್ತಾಯಿಸಿದರು.

ರಾಜ್ಯಪಾಲರ ಭಾಷಣ ನಂತರ ಮತ್ತೆ ಸದನ ಸೇರಿದಾಗಲೂ ಇದೇ ಸದಸ್ಯರು ಸ್ಪೀಕರ್ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರ ಕಾಂಗ್ರೆಸ್ ಸದಸ್ಯರೂ ಧ್ವನಿಗೂಡಿಸಿದರು. ಪಕ್ಷೇತರ ಸದಸ್ಯರಂತೂ ಸ್ಪೀಕರ್ ಪೀಠದ ಮುಂದೆ ತೆರಳಿ ಧರಣಿ ನಡೆಸಿದರು.

`ನ್ಯಾಯ ಎತ್ತಿಹಿಡಿಯಬೇಕಾದ ಸ್ಥಾನದಲ್ಲಿ ಪಕ್ಷಪಾತಿ ಕುಳಿತಿದ್ದಾರೆ. ನಮ್ಮ ರಾಜಕೀಯ ಜೀವನ ಹಾಳು ಮಾಡಿದ ಸ್ಪೀಕರ್‌ಗೆ ತಕ್ಕ ಶಿಕ್ಷೆಯಾಗಬೇಕು. ಮೊದಲು ಅವರ ರಾಜೀನಾಮೆ ಪಡೆಯಿರಿ~ ಎಂದು ಶಾಸಕರು ಏರುಧ್ವನಿಯಲ್ಲೇ ಕೂಗಿದರು.

ಸಿದ್ದರಾಮಯ್ಯ ಮಾತನಾಡಿ, `ಸ್ಪೀಕರ್ ವಿರುದ್ಧ ಸುಪ್ರೀಂಕೋರ್ಟ್ ಆಕ್ಷೇಪ ಎತ್ತಿದೆ. ಛೀಮಾರಿ ಹಾಕಿದೆ. ಹೀಗಾಗಿ ಮೊದಲು ಅವರು ರಾಜೀನಾಮೆ ನೀಡಬೇಕು~ ಎಂದು ಜೋರುದನಿಯಲ್ಲಿ  ಆಗ್ರಹಪಡಿಸಿದರು.

ವಿಧಾನಸಭೆ ಕಾರ್ಯದರ್ಶಿ ವರದಿ ಮಂಡಿಸಲು ಮುಂದಾದಾಗ ಗದ್ದಲ ಉಂಟಾಯಿತು. ಕೆಲಹೊತ್ತು ಕಾರ್ಯದರ್ಶಿ ಸುಮ್ಮನಾದರು. ತಕ್ಷಣ ಬೋಪಯ್ಯ ಅವರು ವರದಿ ಮಂಡಿಸುವಂತೆ ಸೂಚಿಸಿದರು. ನಂತರ ಸದನವನ್ನು ಮಂಗಳವಾರಕ್ಕೆ ಮುಂದೂಡಿ ಹೊರನಡೆದರು.

ಸದನ ಮುಂದೂಡಿದ ಬಳಿಕ ನರೇಂದ್ರಸ್ವಾಮಿ ಮತ್ತು ತಂಗಡಗಿ ಸುದ್ದಿಗಾರರ ಜತೆ ಮಾತನಾಡಿ, `ಸ್ಪೀಕರ್ ಪಕ್ಷಪಾತಿಯಾಗಿದ್ದು, ಅವರಿಂದ ನ್ಯಾಯ ಸಿಗುವುದಿಲ್ಲ. ಹೀಗಾಗಿ ಅವರ ವಿರುದ್ಧದ ಹೋರಾಟ ಮುಂದುವರಿಯಲಿದೆ~ ಎಂದರು.

ಸಿದ್ದರಾಮಯ್ಯ ಆಗ್ರಹ: `ಪಕ್ಷಪಾತದ ಕಳಂಕ ಹೊತ್ತಿರುವ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ರಾಜೀನಾಮೆ ನೀಡುವಂತೆ ಸರ್ಕಾರವೇ ಸೂಚಿಸಬೇಕು~ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಬೋಪಯ್ಯ ಸ್ಪೀಕರ್ ಸ್ಥಾನದಲ್ಲಿ ಕುಳಿತು ಕಾರ್ಯನಿರ್ವಹಿಸುವುದು ಸರಿಯಲ್ಲ. ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಹೋರಾಟವನ್ನು ಮುಂದುವರಿಸಲಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೋಪಯ್ಯ ಸುಪ್ರೀಂಕೋರ್ಟ್‌ನಿಂದ ಛೀಮಾರಿಗೆ ಒಳಗಾಗಿದ್ದಾರೆ. ಸರ್ಕಾರ ಅವರಿಂದ ರಾಜೀನಾಮೆ ಪಡೆದು, ಆ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡಬೇಕು. ಅಲ್ಲಿಯವರೆಗೂ ಉಪಾಧ್ಯಕ್ಷರು ಸದನದ ಕಲಾಪಗಳನ್ನು ನಡೆಸಬೇಕು ಎಂದು ಅವರು ಸಲಹೆ ಮಾಡಿದರು. ಬೋಪಯ್ಯ ರಾಜ್ಯಪಾಲರೊಂದಿಗೆ ಅಧಿವೇಶನಕ್ಕೆ ಆಗಮಿಸಿದ್ದು ಸರಿಯಲ್ಲ ಎಂದರು.

ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ನೋಟಿಸ್ ನೀಡಿದ 14 ದಿನಗಳ ನಂತರ ಕಲಾಪ ಪಟ್ಟಿಯಲ್ಲಿ ಬರುತ್ತದೆ. ಆದರೆ 10 ದಿನಕ್ಕೆ ಅಧಿವೇಶನ ಅಂತ್ಯಗೊಳಿಸುತ್ತಾರೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಬರಬಾರದು ಎಂಬ ಕಾರಣಕ್ಕಾಗಿಯೇ ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು `ಬಿ~ ರಿಪೋರ್ಟ್ ಹಾಕಿರುವ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, `ಅವ್ಯವಹಾರಗಳನ್ನು ಮುಚ್ಚಿಹಾಕುವುದಕ್ಕಾಗಿಯೇ ಲೋಕಾಯುಕ್ತರನ್ನು ನೇಮಕ ಮಾಡಿಲ್ಲ. ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಹೊರಟಿದ್ದಾರೆ~ ಎಂದು ಟೀಕಿಸಿದರು.

ನೈತಿಕ ಹಕ್ಕಿಲ್ಲ: ಸ್ಪೀಕರ್ ವಿರುದ್ಧ ಹೋರಾಟ ಮಾಡುವ ನೈತಿಕ ಹಕ್ಕು ಕಾಂಗ್ರೆಸ್‌ಗೆ ಇಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪುರ ಟೀಕಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT