ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೀಕರ್ ವಿರುದ್ಧದ ತನಿಖೆ ರದ್ದು

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆ ಕಾಮಗಾರಿಗೆ ಸಂಬಂಧಿಸಿದಂತೆ ವಿಧಾನಸಭೆ ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ತನಿಖೆಯನ್ನು ರದ್ದುಮಾಡಿ ಹೈಕೋರ್ಟ್ ಶುಕ್ರವಾರ ಆದೇಶ ನೀಡಿದೆ.
ಕೊಡಗು ಜಿಲ್ಲೆಯ ದೊಡ್ಡರೇಷ್ಮೆಹಡ್ಲು ಕೆರೆ ಕಾಮಗಾರಿಯಲ್ಲಿ ವಂಚನೆ ಎಸಗಿರುವ ಆರೋಪವನ್ನು ಇವರು ಎದುರಿಸುತ್ತಿದ್ದರು.

ಆದರೆ ಇದೇ ಆರೋಪದಲ್ಲಿ ಸಿಲುಕಿರುವ ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಸ್.ಎನ್.ರಾಜಾರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಹಾಗೂ ಕೊಡಗು ನಿರ್ಮಿತಿ ಕೇಂದ್ರ ಯೋಜನಾ ವ್ಯವಸ್ಥಾಪಕ ಎಚ್.ಎನ್. ಯೋಗನರಸಿಂಹಸ್ವಾಮಿ ಅವರ ವಿರುದ್ಧ ತನಿಖೆ ಮುಂದುವರಿಸಲು ನ್ಯಾಯಮೂರ್ತಿ ಎನ್.ಆನಂದ ಅನುಮತಿ ನೀಡಿದ್ದಾರೆ. ತನಿಖೆ ರದ್ದತಿಗೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ ಲೋಕಾಯುಕ್ತಕ್ಕೆ ದೂರು ದಾಖಲಿಸ್ದ್ದಿದರು. ಈ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದರು. ಮಡಿಕೇರಿಯ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇವುಗಳ ರದ್ದತಿಗೆ ಎಲ್ಲರೂ ಹೈಕೋರ್ಟನ್ನು ಕೋರ್ದ್ದಿದರು.

ಆರೋಪಗಳೇನು?:
`ದೊಡ್ಡರೇಷ್ಮೆ ಗ್ರಾಮದಲ್ಲಿ ಸಣ್ಣನೀರಾವರಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು 2007ರ ಮಾರ್ಚ್‌ನಲ್ಲಿ ಸರ್ಕಾರ ನಿರ್ಧರಿಸಿತ್ತು. ಆದರೆ ಕಾಮಗಾರಿ ಬಗ್ಗೆ ಕೆಲವೊಂದು ಆಕ್ಷೇಪವಿದ್ದ ಕಾರಣ ಇದನ್ನು ಕೈಬಿಟ್ಟು ಹೆಚ್ಚು ಉಪಯೋಗ ಆಗುವ ಬೇರೆ ಕಾಮಗಾರಿ ರೂಪಿಸುವ ಸಂಬಂಧ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ನಿರ್ಣಯವಾಗಿತ್ತು. ಆದರೆ ಬೋಪಯ್ಯನವರು, ರಾಜಾರಾವ್ ಹಾಗೂ ಕೃಷ್ಣಪ್ಪ ಜೊತೆ ಸೇರಿ ಹಣ ಲಪಟಾಯಿಸಲು ಸುಳ್ಳು ದಾಖಲೆ ಸೃಷ್ಟಿಸಿ ಇದೇ ಕಾಮಗಾರಿಯನ್ನು ಮುಂದುವರಿಸಿದ್ದಾರೆ~ ಎನ್ನುವುದು ಸರಿತಾರವರ ಆರೋಪವಾಗಿತ್ತು.

`ಈ ಕಾಮಗಾರಿಗೆ ರೂ 59 ಲಕ್ಷಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ. 20 ಸಾವಿರ ರೂಪಾಯಿಗಳ ಕಾಮಗಾರಿಯೂ ಅಲ್ಲಿ ನಡೆದಿಲ್ಲ. ಆದರೆ ಈ ಎಲ್ಲರೂ 40 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂಬಂತೆ ದಾಖಲೆ ಸೃಷ್ಟಿಸಿ ಹಣ ನುಂಗಿಹಾಕಿದ್ದಾರೆ. ಅರಣ್ಯ ಇಲಾಖೆಯ ಅನುಮತಿ ಪಡೆದುಕೊಳ್ಳದೇ ಅರಣ್ಯ ಪ್ರದೇಶವನ್ನೂ ಒತ್ತುವರಿ ಮಾಡಿಕೊಂಡು ಕಾಮಗಾರಿ ನಡೆಸಲಾಗಿದೆ~ ಎಂದು ಅವರು ದೂರ್ದ್ದಿದರು.

ಕೋರ್ಟ್ ಹೇಳಿದ್ದೇನು?: `ಇವೆಲ್ಲ ಆರೋಪಗಳ ಕುರಿತು ವಿಚಾರಣೆ ನಡೆಸಿದಾಗ, ಬೋಪಯ್ಯನವರು ಶಾಸಕರಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ~ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

 `ಆದರೆ ಉಳಿದವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ರಾಜಾರಾವ್ ಅವರು ಕೊಡಗು ಜಿಲ್ಲಾ ಪಂಚಾಯಿತಿಯ ಎಂಜಿನಿಯರಿಂಗ್ ವಿಭಾಗಕ್ಕೆ ವಹಿಸಿಕೊಟ್ಟ ಕಾಮಗಾರಿಯನ್ನು ರದ್ದುಗೊಳಿಸಿ ಅದನ್ನು ಕೊಡಗು ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡಲು ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.ಇದು ನಿಯಮ ಉಲ್ಲಂಘನೆ.

`ಕೃಷ್ಣಪ್ಪ ಅವರು ಯೋಗನರಸಿಂಹಸ್ವಾಮಿ ಅವರ ಜೊತೆಗೂಡಿ ಕೆರೆ ಕಾಮಗಾರಿಯ ಹಣಕಾಸಿನ ವ್ಯವಹಾರದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ. ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುವಲ್ಲಿ  ವಿಫಲವಾಗಿದ್ದಾರೆ ಎಂದು ದಾಖಲೆಗಳು ತಿಳಿಸುತ್ತಿವೆ. ಆದ್ದರಿಂದ ಇವರ ವಿರುದ್ಧ ತನಿಖೆ ಮುಂದುವರಿಯುವುದು ಅಗತ್ಯ~ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT