ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೆಕ್ಟ್ರಂ: ಸಿಬಿಐ ಮುಂದೆ ಅನಿಲ್ ಅಂಬಾನಿ

Last Updated 16 ಫೆಬ್ರುವರಿ 2011, 17:10 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಿಲಯನ್ಸ್ ಇನ್ಫೋಕಾಂ ಮುಖ್ಯಸ್ಥ ಅನಿಲ್ ಅಂಬಾನಿ ಬುಧವಾರ ಇಲ್ಲಿನ ಸಿಬಿಐ ಪ್ರಧಾನ ಕಚೇರಿಗೆ ತೆರಳಿ, ಸುಮಾರು ಎರಡು ತಾಸುಗಳ ಕಾಲ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಸ್ವಾನ್ ಟೆಲಿಕಾಂಗೆ ಸಂಬಂಧಿಸಿದ ಕೆಲವು ದಾಖಲಾತಿಗಳ ಬಗ್ಗೆ ತನಿಖಾ ಸಂಸ್ಥೆಯು ಸ್ಪಷ್ಟೀಕರಣ ಬಯಸಿದ ಹಿನ್ನೆಲೆಯಲ್ಲಿ ಅವರು ಸಿಬಿಐ ಕಚೇರಿಗೆ ಭೇಟಿ ನೀಡಿದ್ದರು. 2ಜಿ ಸ್ಪೆಕ್ಟ್ರಂನ ಹೊಸ ಪರವಾನಗಿಗೆ ಸ್ವಾನ್ ಅರ್ಜಿ ಸಲ್ಲಿಸುವ ಮುನ್ನ ಸ್ವಾನ್ ಟೆಲಿಕಾಂನಲ್ಲಿ ರಿಲಯನ್ಸ್ ಇನ್ಫೋಕಾಂ ಶೇ 9.9ರಷ್ಟು ಈಕ್ವಿಟಿ ಷೇರು ಹೊಂದಿತ್ತು. ಪ್ರಸ್ತುತ ಸಿಬಿಐ ವಶದಲ್ಲಿರುವ ಶಾಹಿದ್ ಉಸ್ಮಾನ್ ಬಲ್ವಾ ನೇತೃತ್ವದ ಡಿಬಿ ರಿಯಾಲಿಟಿ ಗ್ರೂಪ್ ಈ ಸ್ವಾನ್ ಟೆಲಿಕಾಂ ಅನ್ನು ಅಭಿವೃದ್ಧಿಪಡಿಸಿದೆ. ಸಿಬಿಐ ಈಗ ಸ್ವಾನ್ ಟೆಲಿಕಾಂ ಮತ್ತು ಡಿಎಂಕೆ ಮಾಲೀಕತ್ವದ ಕಲೈಞರ್ ಟೆಲಿವಿಷನ್ ನಡುವಿನ ಹಣಕಾಸು ವ್ಯವಹಾರದ ಕುರಿತು ತನಿಖೆ ನಡೆಸುತ್ತಿದೆ.

 ಸಾಮಾನ್ಯವಾಗಿ ದೇಶದ ಪ್ರತಿಯೊಬ್ಬ ದೂರಸಂಪರ್ಕ ನಿರ್ವಾಹಕರಂತೆಯೇ ಅಂಬಾನಿಯವರು ಸಹ 2001ರಿಂದ 2010ರವರೆಗೆ ನಡೆದ ಟೆಲಿಕಾಂ ವ್ಯವಹಾರಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಸಿಬಿಐ ಕಚೇರಿಗೆ ಹೋಗಿದ್ದು, ಇದರಲ್ಲಿ ವಿಶೇಷವೇನೂ ಇಲ್ಲ. ಇವರಿಗೆ ಸಿಬಿಐ ಮುಂದೆ ಹಾಜರಾಗಲು ಯಾವುದೇ ಸಮನ್ಸ್ ನೀಡಿರಲಿಲ್ಲ ಎಂದು ರಿಲಯನ್ಸ್ ಸಂಸ್ಥೆಯ ಹೇಳಿಕೆ ತಿಳಿಸಿದೆ.

 ರಿಲಯನ್ಸ್ ಟೆಲಿಕಾಂ ಆಗಲಿ ಅಥವಾ ಆರ್‌ಕಾಂ ಇಲ್ಲವೇ ಯಾವುದೇ ರಿಲಯನ್ಸ್ ಎಡಿಎಜಿ ಗುಂಪಿನ ವ್ಯಕ್ತಿಗಳು, ಕಂಪೆನಿ ಅಥವಾ ಪ್ರತಿನಿಧಿಗಳು 2008ರ ಜನವರಿಯಲ್ಲಿ 2ಜಿ ಸ್ಪೆಕ್ಟ್ರಂ ಪರವಾನಗಿ ಮಂಜೂರಾಗುವ ಸಮಯದಲ್ಲಿ ಅಥವಾ ಆನಂತರವೂ ಸ್ವಾನ್ ಟೆಲಿಕಾಂ ಲಿಮಿಟೆಡ್‌ನಲ್ಲಿ ಕನಿಷ್ಠ ಒಂದು ಷೇರನ್ನೂ ಹೊಂದಿರಲಿಲ್ಲ ಎಂದೂ ಸಂಸ್ಥೆ ಸ್ಪಷ್ಟಪಡಿಸಿದೆ.

ಸ್ವಾನ್ ಟೆಲಿಕಾಂಗೆ 2ಜಿ ಪರವಾನಗಿ ಮಂಜೂರಾತಿಯಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿಯಾಗಲೀ ರಿಲಯನ್ಸ್ ಟೆಲಿಕಾಂ ಅಥವಾ ಆರ್‌ಕಾಂ ಇಲ್ಲವೇ ಯಾವುದೇ ಎಡಿಎಜಿ ವ್ಯಕ್ತಿಗಳು, ಕಂಪೆನಿ ಅಥವಾ ಪ್ರತಿನಿಧಿಗಳು ಯಾವ ಬಗೆಯಲ್ಲೂ ಹಣಕಾಸಿನ ಗಳಿಕೆ ಅಥವಾ ಲಾಭವನ್ನು ಪಡೆದಿಲ್ಲ ಎಂದು ಹೇಳಿದೆ.

ಇದಲ್ಲದೆ, 2008ರ ಜನವರಿಯಲ್ಲಿ ಹಳೆಯ ಮತ್ತು ಹೊಸ 2ಜಿ ನಿರ್ವಾಹಕರಿಗೆ ಮಂಜೂರಾದ 13 ಪರವಾನಗಿಗಳು ಅಥವಾ ಸ್ಪೆಕ್ಟ್ರಂ ಮಂಜೂರಾತಿಗೆ ಸಂಬಂಧಿಸಿದಂತೆ ರಿಲಯನ್ಸ್ ಸಮೂಹ ಸಂಸ್ಥೆ ಯಾವುದೇ ಸಂಬಂಧವನ್ನೂ ಹೊಂದಿಲ್ಲ ಎಂದು ಅದು ತಿಳಿಸಿದೆ.

ಕೆಲವು ಮಾಧ್ಯಮಗಳಲ್ಲಿ ಬಂದ ವರದಿಗೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ಸಂಸ್ಥೆಯು, ಸಿಬಿಐ ಮತ್ತು ಇತರ ಆಡಳಿತಗಳ ತನಿಖೆಯು ನಿರ್ದಿಷ್ಟವಾಗಿ ಆರ್‌ಕಾಂಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಈಗಾಗಲೇ ಸುಮಾರು 50ಕ್ಕೂ ಹೆಚ್ಚು ವಿವಿಧ ಟೆಲಿಕಾಂ ನಿರ್ವಾಹಕರನ್ನು ತನಿಖೆಗೆ ಒಳಪಡಿಸಿರುವುದನ್ನು ಸ್ಮರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT