ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟ ಖಂಡಿಸಿ ಪ್ರತಿಭಟನೆ

Last Updated 9 ಸೆಪ್ಟೆಂಬರ್ 2011, 10:25 IST
ಅಕ್ಷರ ಗಾತ್ರ

ದಾವಣಗೆರೆ: ದೆಹಲಿಯ ಹೈಕೋರ್ಟ್ ಬಳಿ ಬುಧವಾರ ಬೆಳಿಗ್ಗೆ ಸಂಭವಿಸಿದ ಶಕ್ತಿಯುತ ಬಾಂಬ್ ಸ್ಫೋಟವನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಸಂಘದ ಆವರಣದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷ ವಿ. ತಿಮ್ಮೇಶ್ ಮಾತನಾಡಿ, ಹೈಕೋರ್ಟ್‌ನ ಕಕ್ಷಿದಾರರು ಮತ್ತಿತರರು ಓಡಾಡುವ ಗೇಟ್ 4 ಮತ್ತು 5ಕ್ಕೆ `ಕ್ಲೋಸ್ ಸರ್ಕಿಟ್ ಟಿವಿ~ (ಸಿಸಿಟಿವಿ) ಹಾಗೂ ಲೋಹ ಶೋಧಕಗಳನ್ನು ಅಳವಡಿಸಲು ಅನುಸರಿಸಿದ ವಿಳಂಬ  ನೀತಿಯಿಂದಾಗಿ ಬಾಂಬ್ ಸ್ಫೋಟಕ್ಕೆ ಕಾರಣವಾಯಿತೇ? ಅಥವಾ ಭಯೋತ್ಪಾದಕರ ಕೃತ್ಯದಿಂದಾಗಿ ನಡೆಯಿತೇ ಎಂಬುದನ್ನು ಪರಿಶೀಲಿಸಬೇಕೆಂದು ಆಗ್ರಹಿಸಿದರು.

ಸಂಘದ ಕಚೇರಿ ಆವರಣದಿಂದ ಜಿಲ್ಲಾಧಿಕಾರಿ ಕಚೇರಿಗೆ ಬೈಕ್‌ರ‌್ಯಾಲಿ ಮೂಲಕ ಪ್ರತಿಭಟನೆ ನಡೆಸಿದ ಸಂಘದ ವಕೀಲರು ನಮಗೆ, ನಮ್ಮ ಕಕ್ಷಿದಾರರಿಗೆ ಹಾಗೂ ನ್ಯಾಯಾಲಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ರ‌್ಯಾಲಿಯಲ್ಲಿ ಸಂಘದ ಉಪಾಧ್ಯಕ್ಷ ಐನಳ್ಳಿ ವಸಂತಕುಮಾರಿ, ಕಾರ್ಯದರ್ಶಿ ಬಿ.ಎಂ. ಬಸವನಗೌಡ, ಎನ್.ಎಂ. ಆಂಜನೇಯ, ಎಚ್.ಎನ್. ರಾಜಶೇಖರಪ್ಪ, ಎಲ್. ಶಾಮ್, ನಾಗಮಣಿ, ಮಂಜುಳಾ, ಕೆ.ಎಂ. ಶಿವಲಿಂಗಯ್ಯ, ಡಿ. ವಿಜಯ ಪ್ರಕಾಶ್, ಕುಮಾರಸ್ವಾಮಿ ಇತರರು ಹಾಜರಿದ್ದರು.

ಹರಪನಹಳ್ಳಿ ವರದಿ
ಕೃತ್ಯಗಳನ್ನು ನಡೆಸಿದ ಉಗ್ರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯ ವಕೀಲರ ಸಂಘ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.

ಕೋರ್ಟ್ ಆವರಣದಲ್ಲಿನ ವಕೀಲರ ಸಂಘದ ಕಚೇರಿಯಲ್ಲಿ ತುರ್ತುಸಭೆ ನಡೆಸಿದ ಪದಾಧಿಕಾರಿಗಳು, ದೆಹಲಿ ಘಟನೆ  ಅತ್ಯಂತ ಅಮಾನವೀಯ ಹಾಗೂ ಖಂಡಿನೀಯ ಕೃತ್ಯ ಎಂದು ವಿಷಾದಿಸಿ, ಉಗ್ರರ ಅಟ್ಟಹಾಸಕ್ಕೆ ಬಲಿಯಾದವರ ಗೌರವಾರ್ಥ ಶ್ರದ್ಧಾಂಜಲಿ ಸಲ್ಲಿಸಿ ಗಾಯಾಳುಗಳ ಚೇತರಿಕೆಗೆ ಪ್ರಾರ್ಥಿಸಿದರು. ನಂತರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಭಯೋತ್ಪಾದಕರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವಹಿಸಿದ್ದ ಸಂಘದ ಅಧ್ಯಕ್ಷ ಕಣವಿಹಳ್ಳಿ ಮಂಜುನಾಥ ಮಾತನಾಡಿ, ನ್ಯಾಯಾಲಯದ ಆವರಣದಲ್ಲಿ ಬಾಂಬ್‌ಸ್ಫೋಟಿಸುವ ಮೂಲಕ ಭಯೋತ್ಪಾದಕರು ನ್ಯಾಯಾಲಯದ ತೀರ್ಪುಗಳನ್ನು ತಮ್ಮ ಪರವಾಗಿ ನಿರ್ಣಯಿಸುವಂತೆ ಒತ್ತಡ ತಂತ್ರ ಹಾಕಿ, ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಹೇಡಿತನದ ಕೃತ್ಯ. ಸ್ಫೋಟದಿಂದ ಸಮಾಜದಲ್ಲಿ ತಲ್ಲಣ ಸೃಷ್ಟಿಸಿ ಅಮಾಯಕರ ಸಾವು- ನೋವುಗಳಿಗೆ ಕಾರಣರಾಗುತ್ತಿರುವ ಭಯೋತ್ಪಾದಕರ ವಿರುದ್ಧ ಕೇಂದ್ರ ಸರ್ಕಾರ ಮೃದುಧೋರಣೆ ತೋರದೆ, ಉಗ್ರ ಕಾನೂನು ಕ್ರಮ  ಜರುಗಿಸಿ, ಭಯೋತ್ಪಾದಕರ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಹಿರಿಯ ವಕೀಲ ಪಿ. ರಾಮನಗೌಡ, ಎಂ. ಅಜ್ಜಣ್ಣ, ಕೆ. ಜಗದಪ್ಪ, ಚಂದ್ರಮೌಳಿ, ಕೊಟ್ರೇಶ್, ವಿ.ಜಿ. ಪ್ರಕಾಶ್‌ಗೌಡ, ಸಿ.ಎಂ. ಚನ್ನಬಸಯ್ಯ, ಬಂಡ್ರಿ ಆನಂದ್ ಪಾಲ್ಗೊಂಡಿದ್ದರು.

ಹೊನ್ನಾಳಿ ವರದಿ
ಬಾಂಬ್ ಸ್ಫೋಟ ಖಂಡಿಸಿ ಪಟ್ಟಣದ ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿದರು.
ಬುಧವಾರ ದೆಹಲಿ ಹೈಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟದಿಂದ 9 ವಕೀಲರೂ ಸೇರಿದಂತೆ ಒಟ್ಟು 12 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಕಳೆದ ಶನಿವಾರ ಉತ್ತರಪ್ರದೇಶದ ನ್ಯಾಯಾಲಯದ ಆವರಣದಲ್ಲಿ ನಡೆದ ಇಬ್ಬರು ವಕೀಲರ ಹತ್ಯೆ ಖಂಡಿಸಿದರು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಬಿ. ಯತಿರಾಜ್, ಕಾರ್ಯದರ್ಶಿ ಜಯಪ್ಪ, ಖಜಾಂಚಿ ಪುರುಷೋತ್ತಮ್, ಶಾಂತವೀರಪ್ಪ, ಎಸ್.ಎಚ್. ಈಶ್ವರನ್, ಡಿ.ಆರ್. ಸತೀಶ್, ಚಂದ್ರಪ್ಪ, ವೈ.ಜೆ. ರಾಮಚಂದ್ರಪ್ಪ, ವೀರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT