ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟ: ಸಿಗದ ಸುಳಿವು

ತನಿಖೆ ಚುರುಕು , ದುಷ್ಕರ್ಮಿಗಳ ಮಾಹಿತಿಗೆ ರೂ 5 ಲಕ್ಷ ಇನಾಮು
Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿ ಸಮೀಪ ಬುಧವಾರ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಪೊಲೀಸರು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಸ್ಫೋಟ ಸಂಭವಿಸಿದ ಪ್ರದೇಶದ ಸುತ್ತಲಿನ ಸ್ಥಳಗಳಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿ ಮಾಹಿತಿಗಾಗಿ ಜಾಲಾಡಿದ್ದಾರೆ. ಆದರೆ ಇದುವರೆಗೂ ಯಾವುದೇ ಸ್ಪಷ್ಟ ಸುಳಿವು ಸಿಕ್ಕಿಲ್ಲ.

ಇದರ ನಡುವೆಯೇ, ಸ್ಫೋಟದ ಸಂಚುಕೋರರ  ಬಗ್ಗೆ ಖಚಿತ ಸುಳಿವು ಕೊಟ್ಟವರಿಗೆ ರೂ 5 ಲಕ್ಷ ನಗದು ಬಹುಮಾನ ನೀಡಲಾಗುವುದು. ಮಾಹಿತಿದಾರರ ಹೆಸರು ಮತ್ತು ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪೊಲೀಸರು ಪ್ರಕಟಿಸಿದ್ದಾರೆ.

ಸ್ಫೋಟಕ್ಕೆ ಕೆಲ ಕ್ಷಣಗಳ ಮುನ್ನ ಸುಮಾರು 25 ವರ್ಷದ ಯುವಕನೊಬ್ಬ ವಾಹನ ನಿಲುಗಡೆ ಸ್ಥಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ. ಆತ ನೀಲಿ ಬಣ್ಣದ ಅಂಗಿ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದ ಎಂದು ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್ ಒಬ್ಬರು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಸುಳಿವುಗಳ ನೆರವಿನಿಂದ ಪೊಲೀಸರು ಶಂಕಿತನ ರೇಖಾಚಿತ್ರ ಸಿದ್ಧಪಡಿಸಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

`ಬಿಜೆಪಿ ಕಚೇರಿ ಸಮೀಪದ ಅಪಾರ್ಟ್‌ಮೆಂಟ್‌ಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಸೇರಿದಂತೆ, ಸುತ್ತಮುತ್ತಲ ರಸ್ತೆಗಳ ಜಂಕ್ಷನ್‌ಗಳಲ್ಲಿನ ಒಟ್ಟು 11 ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆದರೆ, ಸ್ಫೋಟದ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಪ್ರತ್ಯಕ್ಷದರ್ಶಿಗಳು, ಸ್ಥಳೀಯ ನಿವಾಸಿಗಳು, ಮಳಿಗೆಗಳ ಮಾಲೀಕರು ಸೇರಿದಂತೆ ಈಗಾಗಲೇ ಹಲವರಿಂದ ಮಾಹಿತಿ ಪಡೆಯಲಾಗುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು' ಎಂದು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ತಿಳಿಸಿದ್ದಾರೆ.

`ರಾಜ್ಯದಲ್ಲಿ ಉಗ್ರರ ದಾಳಿ ನಡೆಯುವ ಬಗ್ಗೆ ಗುಪ್ತಚರ ಇಲಾಖೆಯಿಂದ ನಾಲ್ಕು ದಿನಗಳ ಹಿಂದೆಯೇ ಮಾಹಿತಿ ಬಂದಿತ್ತು. ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತಾದರೂ ಸ್ಫೋಟ ಸಂಭವಿಸಿದೆ. ಸ್ಥಳದಲ್ಲಿ ಟೂತ್‌ಪೇಸ್ಟ್, ನಾಣ್ಯ, ಕೆಲ ಕಾಗದದ ಚೂರುಗಳು ಪತ್ತೆಯಾಗಿವೆ.  ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು ಆ ವಸ್ತುಗಳ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಫೋಟದ ಹಿಂದೆ ಯಾವ ಭಯೋತ್ಪಾದನಾ ಸಂಘಟನೆ ಭಾಗಿಯಾಗಿದೆ ಎಂಬುದು ಗೊತ್ತಾಗಿಲ್ಲ. ರಾಜಕೀಯ ಕೈವಾಡವಿದೆಯೇ ಎಂಬ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ' ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ರಾಘವೇಂದ್ರ ಔರಾದಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಸ್ಫೋಟದ ಹಿಂದೆ ಉಗ್ರರ ಕೈವಾಡವಿರುವುದು ಸಾಬೀತಾಗಿದೆ. ಈಗಾಗಲೇ ಎನ್‌ಐಎ, ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಹಾಗೂ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳದಿಂದ ಲಭ್ಯ ಮಾಹಿತಿಗಳು, ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳದಲ್ಲಿ ದೊರೆತ ವಸ್ತುಗಳು ಹಾಗೂ ಸ್ಫೋಟಕದ ಚೂರುಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ' ಎಂದು ರಾಜ್ಯ ಪೊಲಿಸ್ ಮಹಾ ನಿರ್ದೇಶಕ ಲಾಲ್ ರೊಕುಮಾ ಪಚಾವೊ ತಿಳಿಸಿದರು.

ಬೈಕ್ ಮಾಲೀಕ ಚೆನ್ನೈನವರು
ಚೆನ್ನೈ (ಪಿಟಿಐ): ಬೆಂಗಳೂರಿನಲ್ಲಿ ಬುಧವಾರ ಬಾಂಬ್ ಸ್ಫೋಟಿಸಲು ಬಳಸಲಾಗಿದ್ದ ಬೈಕ್‌ನ ಮೂಲ ಮಾಲೀಕರನ್ನು ಇಲ್ಲಿನ ಪೊಲೀಸರು ಪತ್ತೆ ಹಚ್ಚಿದ್ದಾರೆ.

ತಮಿಳುನಾಡಿನಲ್ಲಿ ನೋಂದಣಿಯಾಗಿರುವ ಟಿಎನ್ 22 ಆರ್  3769 ಬೈಕ್‌ನ ಮೂಲ ಮಾಲೀಕರು ಕೆ.ಎಸ್.ಶಂಕರನಾರಾಯಣನ್. ದೂರಸಂಪರ್ಕ ಇಲಾಖೆಯ ನಿವೃತ್ತ ಉದ್ಯೋಗಿಯಾದ ಅವರು ಇಲ್ಲಿನ ತಿಲ್ಲೈ ಗಂಗಾನಗರದ ನಿವಾಸಿಯಾಗಿದ್ದಾರೆ.

`ಈ ಬೈಕ್ ನನ್ನ ಮಗನ ಹೆಸರಿನಲ್ಲಿ ಇತ್ತು. ಆದರೆ, ಆತ ಅಮೆರಿಕಕ್ಕೆ ತೆರಳಿದ ಕಾರಣ ನಾಲ್ಕು ವರ್ಷಗಳ ಹಿಂದೆ ಅದನ್ನು ಮಾರಾಟ ಮಾಡಲಾಗಿತ್ತು' ಎಂದು ಶಂಕರನಾರಾಯಣನ್ ಅವರು ಹೇಳಿದ್ದಾರೆ.ರಾಜ್ಯ ಪೊಲೀಸರು ಈ ಕುರಿತು ಕರ್ನಾಟಕ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಜತೆಗೂಡಿ ತನಿಖೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಕರ್ನಾಟಕ ಪೊಲೀಸರು ತಮಿಳುನಾಡಿನ ವೆಲ್ಲೂರಿನಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT