ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟದ ಭೀತಿಯಲ್ಲಿ ವೆಂಗಳಪ್ಪನ ತಾಂಡ!

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಬಾಚೇನಹಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಿಮ್ಮಪ್ಪನ ಬೆಟ್ಟದಲ್ಲಿ ಜಲ್ಲಿ ಕ್ರಷರ್‌ಗಳ ಸಿಡಿಮದ್ದು ಸ್ಫೋಟದಿಂದ ಸಮೀಪದ ವೆಂಗಳಪ್ಪನ ತಾಂಡದ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಈ ಬೆಟ್ಟವು ಸುಮಾರು ನೂರು ಎಕರೆ ವಿಸ್ತೀರ್ಣದಲ್ಲಿದ್ದು ಈ ಪ್ರದೇಶದಲ್ಲಿ ನಿರಂತರ ಜಲ್ಲಿ ಕಲ್ಲುಗಳ ಕ್ರಷರ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಂಜೆಯಾದೊಡನೆ ಇಲ್ಲಿ ಭಾರಿ ಪ್ರಮಾಣದ ಸ್ಫೋಟಕ ಸದ್ದು ಕೇಳಿಸುತ್ತದೆ. ಇದರಿಂದ ಮಾಗಡಿ ಪಟ್ಟಣವೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ರಂಗನಾಥಪುರ, ತಿರುಮಲ, ಮರಲಗೊಂಡಲ, ಜ್ಯೋತಿಪಾಳ್ಯ, ಪಣಕನಕಲ್ಲುಗಳ ಜನತೆ ತೊಂದರೆ ಅನುಭವಿಸುವಂತಾಗಿದೆ.

ಈ ಬೆಟ್ಟದಲ್ಲಿ 10 ಕ್ರಷರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಭಾರಿ ಬಂಡೆ ಕಲ್ಲುಗಳನ್ನು ಒಡೆಯಲು ಪ್ರಬಲ ಸಿಡಿಮ್ದ್ದದುಗಳನ್ನು ಬಳಸಲಾಗುತ್ತಿದೆ. ಇವುಗಳ ಸ್ಫೋಟದಿಂದ ತೂರಿ ಬರುವ ಕಲ್ಲಿನ ಚೂರುಗಳು ಸುತ್ತಮುತ್ತಲಿನ ಗ್ರಾಮಗಳ ಮನೆಯ ಮೇಲೂ ಸಿಡಿದು ಬೀಳುತ್ತಿವೆ. ಹಗಲು ರಾತ್ರಿ ನಡೆಯುವ ಕ್ರಷರ್ ಕಾರ್ಯಾಚರಣೆಯಿಂದಾಗಿ ಸುತ್ತಮುತ್ತಲಿನಲ್ಲಿ ಭಾರಿ ಶಬ್ದಮಾಲಿನ್ಯ ಮತ್ತು  ಪರಿಸರ ನಾಶವಾಗುತ್ತಿದೆ ಎಂದು ತಾಂಡಾದ ಜನತೆ ಹಾಗೂ ಗ್ರಾಮಸ್ಥರು ದೂರಿದ್ದಾರೆ.

 ಬೆಟ್ಟದ ಸುತ್ತಮುತ್ತಲಿನ ಕೃಷಿ ಭೂಮಿಯಲ್ಲಿ ಸಿಡಿದ ಕಲ್ಲಿನ ತುಂಡುಗಳು ಬೀಳುವುದರಿಂದ ಈಗಾಗಲೇ ಸಾಕಷ್ಟು ಬೆಳೆ ಹಾನಿಯೂ ಆಗಿದೆ. ಮಾಗಡಿ ಪಟ್ಟಣದಲ್ಲಿರುವ ತಿರುಮಲ ರಂಗನಾಥ ಸ್ವಾಮಿಯ ಪೂರ್ವದ್ವಾರದ ಮೇಲಿನ ಇಂಡೊ ಸಾರ್ಸೆನಿಕ್ ಶೈಲಿಯ ರಾಯಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಸ್ಫೋಟ ನಡೆದಾಗಲೆಲ್ಲಾ ಸುತ್ತಮುತ್ತಲೂ ಭೂಮಿ ಕಂಪಿಸುವ ಅನುಭವವಾಗುತ್ತದೆ. ಇದರಿಂದ ಜೀವ ಭಯದಿಂದ ಬದುಕು ಸಾಗಿಸುವಂತಾಗಿದೆ ಎಂದು ಗ್ರಾಮಸ್ಥರು ವಿವರಿಸಿದ್ದಾರೆ.

ಲೆಕ್ಕಕ್ಕಿಲ್ಲ: ಈ ಕ್ರಷರ್‌ಗಳ ಕಾರ್ಯಾಚರಣೆ ವಿರೋಧಿಸಿ ರಾಜ್ಯ ರೈತ ಸಂಘದ ವತಿಯಿಂದ ಹಿಂದಿನ ವರ್ಷ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.

ಅಂದು ಜಿಲ್ಲಾಧಿಕಾರಿ ಕ್ರಷರ್ ಕಾರ್ಯಾಚರಣೆ ಪ್ರದೇಶಕ್ಕೆ ಭೇಟಿ ನೀಡಿ,  ಕಡಿಮೆ ಶಬ್ದದ ಸಿಡಿಮದ್ದು ಬಳಸುವಂತೆ ಜಲ್ಲಿ ಕ್ರಷರ್‌ಗಳ ಮಾಲೀಕರಿಗೆ ಸೂಚನೆ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳ ಈ ಆದೇಶ ಲೆಕ್ಕಕ್ಕೇ ಇಲ್ಲದಂತಾಗಿದೆ. ಅದೇ ಸ್ಥತಿ ಮುಂದುವರಿದಿದೆ ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT