ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸ್ಫೋಟದಿಂದ ಬಿಜೆಪಿಗೆ ಲಾಭ'

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಬೆಂಗಳೂರಿನಲ್ಲಿ ಸಂಭವಿಸಿದ ಸ್ಫೋಟದಿಂದ ಮುಂದಿನ ತಿಂಗಳು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಆಗಲಿದೆ ಎಂದು ಕಾಂಗ್ರೆಸ್ ಮುಖಂಡ ಶಕೀಲ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಇದರಿಂದ ಕಾಂಗ್ರೆಸ್ ಮುಜುಗರಕ್ಕೆ ಒಳಗಾಗಿದೆ. ಜೊತೆಗೆ ಶಕೀಲ್ ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

`ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿರುವ ಸಂದರ್ಭದಲ್ಲಿ ನಡೆದಿರುವ ಈ ಘಟನೆ ನಿಜಕ್ಕೂ ಭಯೋತ್ಪಾದಕ ಕೃತ್ಯವೇ ಆಗಿದ್ದರೆ ಇದರಿಂದ ಚುನಾವಣೆಯಲ್ಲಿ ಬಿಜೆಪಿಗೆ ಖಂಡಿತವಾಗಿಯೂ ಲಾಭ ಆಗಲಿದೆ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ. ಈ ಹೇಳಿಕೆಯಿಂದ ಮುಜುಗರಕ್ಕೆ ಒಳಗಾಗಿರುವ ಕಾಂಗ್ರೆಸ್, ಶಕೀಲ್ ಅವರ ಅಭಿಪ್ರಾಯದಿಂದ ಅಂತರ ಕಾಯ್ದುಕೊಂಡಿದೆ. `ಭಯೋತ್ಪಾದನೆಯು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಡುತ್ತಿರುವ ಪಿಡುಗು. ಇದನ್ನು ರಾಜಕೀಯದ ಲಾಭ- ನಷ್ಟದಲ್ಲಿ ಅಳೆಯಲು ಕಾಂಗ್ರೆಸ್ ಬಯಸದು' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಹೇಳಿದ್ದಾರೆ.

ಶಕೀಲ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಇದು ಅಸಮರ್ಥನೀಯ ಹೇಳಿಕೆ ಎಂದಿದೆ. `ಕಾಂಗ್ರೆಸ್ ಹಿರಿಯ ಮುಖಂಡರಿಂದ ಇಂತಹ ಹೇಳಿಕೆ ಅನಪೇಕ್ಷಿತ. ಕರ್ನಾಟಕದಲ್ಲಿ ಚುನಾವಣೆಗೂ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ ಎಂಬುದು ಇದರಿಂದ ವೇದ್ಯವಾಗುತ್ತದೆ' ಎಂದು ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಪಕ್ಷಕ್ಕೆ ಇರಿಸುಮುರಿಸು ಉಂಟುಮಾಡಿದ, ಸಾರ್ವಜನಿಕವಾಗಿ ಛೀಮಾರಿಗೆ ಒಳಗಾದ ಶಕೀಲ್ ಅಹ್ಮದ್ ಏನೂ ಆಗೇ ಇಲ್ಲ ಎನ್ನುವಂತೆ ಪ್ರತಿಕ್ರಿಯಿಸಿದ್ದಾರೆ.

`ನಾನು ಮಾನವ ಸಹಜ ಗುಣದಿಂದ ಆ ರೀತಿ ಬರೆದಿದ್ದೆ. ಚುನಾವಣೆ ಸಮಯದಲ್ಲಿ ಯಾವುದೇ ಪಕ್ಷಕ್ಕೆ ಜನರ ಅನುಕಂಪ ದೊರಕಿದರೆ ಅದು ಫಲಿತಾಂಶದಲ್ಲೂ ವ್ಯಕ್ತವಾಗುತ್ತದೆ. ಹಾಗಾಗಿ ಬಿಜೆಪಿಗೆ ಲಾಭವಾಗುತ್ತದೆ ಎಂದಿದೆ. ಆದರೆ, ಸ್ಫೋಟದ ಘಟನೆಗೆ ರಾಜಕೀಯ ಬೆರೆಸಬಾರದು ಎಂಬ ಪಕ್ಷದ ನಿಲುವನ್ನು ನಾನು ಒಪ್ಪುತ್ತೇನೆ. 28 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಪಕ್ಷಕ್ಕೆ ವಿರೋಧವಾಗಿ ಎಂದೂ ಬೇಜವಾಬ್ದಾರಿಯಿಂದ ಹೇಳಿಕೆ ನೀಡಿಲ್ಲ' ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹೈದರಾಬಾದ್ ವರದಿ:  ಸ್ಫೋಟವನ್ನು ಬಿಜೆಪಿ ಹಿರಿಯ ಮುಖಂಡ ಎಂ.ವೆಂಕಯ್ಯ ನಾಯ್ಡು ಖಂಡಿಸಿದ್ದಾರೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಶ್ರಮಿಸಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT