ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನ ಜಾಗ ಅತಿಕ್ರಮಣ, ಆರೋಪ

Last Updated 11 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕನಕಪುರ ಮುಖ್ಯರಸ್ತೆಯ ಯಲಚೇನಹಳ್ಳಿಯಲ್ಲಿ ದೊಂಬರ ಜನಾಂಗದ ಸ್ಮಶಾನವಿರುವ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡಿದ್ದು, ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ. ಈ ಜಾಗವನ್ನು ದೊಂಬರ ಸ್ಮಶಾನವೆಂದು ಕೂಡಲೇ ಸರ್ಕಾರ ಘೋಷಣೆ ಮಾಡಬೇಕು~ ಎಂದು ಅಖಿಲ ಕರ್ನಾಟಕ ದೊಂಬರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.

`ಬೆಂಗಳೂರು ದಕ್ಷಿಣ ತಾಲ್ಲೂಕಿನ ಯಲಚೇನಹಳ್ಳಿಯ ಸರ್ವೆ ನಂ. 27ರ 9 ಗುಂಟೆ ಜಮೀನನ್ನು ಸುಮಾರು 200 ವರ್ಷಗಳ ಹಿಂದಿನಿಂದಲೂ ದೊಂಬರ ಜನಾಂಗದವರ ಅಂತ್ಯಸಂಸ್ಕಾರಕ್ಕಾಗಿ ಬಳಸಲಾಗುತ್ತಿದೆ. ಆದರೆ, ಇತ್ತೀಚೆಗೆ ಖಾಸಗಿ ವ್ಯಕ್ತಿಗಳು ಈ ಜಾಗಕ್ಕೆ ತಡೆಗೋಡೆ ನಿರ್ಮಿಸಿ ದೊಂಬರ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ~ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಈ.ಮುನಿಯಪ್ಪ ಆರೋಪಿಸಿದ್ದಾರೆ.

`ಸರ್ವೆ ನಂ. 27ರಲ್ಲಿ ಒಟ್ಟು 39 ಗುಂಟೆ ಜಾಗವಿದೆ. ಇದರಲ್ಲಿ 30 ಗುಂಟೆ ಜಮೀನು ಕೃಷ್ಣಪ್ಪ ಎಂಬುವರಿಗೆ ಸೇರಿದ್ದು, ಉಳಿದ 9 ಗುಂಟೆ ಜಮೀನು ಸ್ಮಶಾನದ ಜಾಗವಾಗಿದೆ. ಕೃಷ್ಣಪ್ಪ ಅವರ ಮರಣದ ನಂತರ ಅವರ ಕುಟುಂಬದವರು ತಮ್ಮ 30 ಗುಂಟೆ ಜಮೀನಿನ ಜೊತೆಗೆ 9 ಗುಂಟೆ ಖರಾಬು ಜಾಗವನ್ನು ಸೇರಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆ~ ಎಂದು ದೂರಿದ್ದಾರೆ.

`ತಮ್ಮ ಪ್ರಭಾವ ಬಳಸಿ 9 ಗುಂಟೆ ಜಾಗವನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಈ ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಸಮಾಧಿಗಳ ಮೇಲೆ ಮಣ್ಣು ಸುರಿಯುವ ಕಾರ್ಯವೂ ಇಲ್ಲಿ ನಡೆಯುತ್ತಿದೆ. ಇದರಿಂದ ದೊಂಬರ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಈ ಅನ್ಯಾಯವನ್ನು ತಡೆಯಬೇಕು~ ಎಂದು ಒತ್ತಾಯಿಸಿದ್ದಾರೆ.

`ಇಲ್ಲಿನ 9 ಗುಂಟೆ ಜಾಗವನ್ನು ಸ್ಮಶಾನದ ಜಾಗವೆಂದು ಘೋಷಿಸುವಂತೆ ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ.
 
ಈ ಜಾಗವನ್ನು ದೊಂಬರ ಸ್ಮಶಾನದ ಜಾಗವೆಂದು ಸರ್ಕಾರ ಘೋಷಿಸಬೇಕು. ಅಕ್ರಮವಾಗಿ ತಡೆಗೋಡೆ ಹಾಕಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ದೊಂಬರ ಸ್ಮಶಾನದ ಜಾಗವನ್ನು ಬಿಡಿಸಿಕೊಡಬೇಕು~ ಎಂದು ಸಂಘದ ಅಧ್ಯಕ್ಷ ಎಂ.ಸುರೇಶ್ ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT