ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕ ಭವನಕ್ಕೆ ಒಂದು ಕೋಟಿ

Last Updated 23 ಜನವರಿ 2011, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಗಾಂಧೀಜಿ ಅವರ ಜೊತೆ ‘ದಂಡಿಯಾತ್ರೆ’ಯಲ್ಲಿ ಪಾದಬೆಳೆಸಿದ ಏಕೈಕ ಕನ್ನಡಿಗ ಹುತಾತ್ಮ ಮೈಲಾರ ಮಹಾದೇವ ಅವರ ನೆನಪಿಗಾಗಿ ಅವರ ಹುಟ್ಟೂರಾದ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಸ್ಮಾರಕ ಭವನ ನಿರ್ಮಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಪ್ರಕಟಿಸಿದರು.ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹುತಾತ್ಮ ಮೈಲಾರ ಮಹಾದೇವ ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ಈ ಮೂಲಕ ನೆನೆಸಿಕೊಳ್ಳುವ ಯತ್ನ ಇದಾಗಿದೆ. ಮುಂಬರುವ ಬಜೆಟ್‌ನಲ್ಲಿ ಹಣವನ್ನು ನೀಡಲಾಗುವುದು. ಈಗಾಗಲೇ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ     ಸಂಗೊಳ್ಳಿ ರಾಯಣ್ಣ ಅವರ ಸ್ಮಾರಕ ಭವನಕ್ಕಾಗಿ ಹಣ ನೀಡಲಾಗಿದೆ’ ಎಂದು ಅವರು ತಿಳಿಸಿದರು.

‘ಮಹದೇವ ಅವರು 19ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯದ ಹೋರಾಟದಲ್ಲಿ ಧುಮುಕಿದರು. ಇದಲ್ಲದೇ, ತಮ್ಮ ಪತ್ನಿ ಸಿದ್ದಮ್ಮಳನ್ನು ತಮ್ಮ ಜತೆ ಕರೆದೊಯ್ದರು. ಸಾಬರಮತಿ ಆಶ್ರಮದಲ್ಲಿ ಈ ದಂಪತಿ ಗಾಂಧೀಜಿಯವರ ಸೇವೆಯನ್ನು ಮಾಡಿದರು. ಗಾಂಧೀಜಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನಪೂರ್ತಿ ಅಕ್ಷರಶಃ ನಡೆದರು’ ಎಂದು ಗುಣಗಾನ ಮಾಡಿದರು.
ದಲಿತ ಶರಣರ ಜನ್ಮದಿನಾಚರಣೆ:
‘ಮಾದರ ಚೆನ್ನಯ್ಯ, ಕಕ್ಕಯ್ಯ ಅವರಂತಹ ದಲಿತ ಶರಣರ ಜನ್ಮದಿನೋತ್ಸವವನ್ನು ಸರ್ಕಾರದ ವತಿಯಿಂದ ಆಚರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಅನುದಾನ ಮೀಸಲು ಇಡಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ವೀರಣ್ಣ ಮತ್ತೀಕಟ್ಟಿ ಮಾತನಾಡಿ, ‘ಮೈಲಾರ ಮಹದೇವ ಅವರ ಪ್ರಾಮಾಣಿಕತೆಯ ಶೇ 10ರಷ್ಟು ಭಾಗವನ್ನಾದರೂ ಅಳವಡಿಸಿಕೊಂಡರೆ ಇಂದಿನ ಕಲುಷಿತ ವಾತಾವರಣ ತಿಳಿಯಾಗಬಹುದು’ ಎಂದು ನುಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್, ಇಲಾಖೆಯ ಕಾರ್ಯದರ್ಶಿ ರಮೇಶ್ ಝಳಕಿ ಹಾಗೂ ಮೈಲಾರ ಮಹದೇವ ಅವರ ಪುತ್ರಿ ಕಸ್ತೂರಮ್ಮ, ಮೊಮ್ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT