ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮೃತಿಗೆ ಸಂದ ಕಲಾಕೋಶಗಳು

Last Updated 13 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಎನ್. ಮರಿಶಾಮಾಚಾರ್ (1951-2013) ಮೃದುಭಾಷಿಗಳು. ವಿದ್ಯಾರ್ಥಿಗಳು, ಕಲಾವಿದರು ಎನ್ನದೆ, ಎಲ್ಲರನ್ನೂ ಒಂದೇ ಸ್ನೇಹದಿಂದ ನಡೆಸಿಕೊಂಡು ಆದರದಿಂದ ಕಂಡವರು. ಸದಾ ಒಂದಲ್ಲ ಒಂದು ಕಲಾ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಿದ್ದ ಮರಿಶಾಮಾಚಾರ್ ವಿಶ್ರಮಿಸಿದ್ದು ವಿರಳ. ಕಳೆದ ಕೆಲವು ದಶಕಗಳಲ್ಲಿ ರಾಜ್ಯದಲ್ಲಿ ಎಲ್ಲಿ ಕಲಾ ಕಾರ್ಯಕ್ರಮಗಳು ನಡೆದರೂ ಅದರಲ್ಲಿ ಅವರ ಪಾತ್ರ ಸ್ವಲ್ಪವಾದರೂ ಇರುತ್ತಿತ್ತು. ಹತ್ತು ಹಲವು ಕೆಲಸಗಳಲ್ಲಿ ಒಮ್ಮೆಲೇ ತಮ್ಮನ್ನು ತೊಡಗಿಸಿಕೊಳ್ಳಬಲ್ಲ ರೀತಿ ಅವರದ್ದು. ಕಲಾ ಬರಹಗಾರರಾಗಿ, ಕಲಾವಿದರಾಗಿ, ಕಲಾಸಂಸ್ಥೆಗಳನ್ನು ಕಟ್ಟಿ ಯಶಸ್ವಿಯಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿ, ರಾಜ್ಯ ಕಲಾ ವಲಯಕ್ಕೆ ಅಪಾರ ಕಾಣ್ಕೆ ನೀಡಿದ ಹೆಗ್ಗಳಿಕೆ ಅವರದ್ದು.

ತೀರ ಇತ್ತೀಚೆಗೆ, ಎರಡು ವರುಷಗಳ ಕೆಳಗೆ ನಿವೃತ್ತರಾಗುವ ತನಕ ಲಲಿತಕಲಾ ಅಕಾಡೆಮಿ, ಶಿಲ್ಪ ಕಲಾ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಅವಿಭಾಜ್ಯ ಅಂಗವೆನಿಸಿದ್ದ ಮರಿಶಾಮಾಚಾರ್ ಅಘೋಷಿತ ಮಾಹಿತಿ ಕೇಂದ್ರದಂತಿದ್ದರು. ಯಾರಿಗಾದರೂ ಕಲೆ / ಕಲಾವಿದರ ಬಗ್ಗೆ, ಕಲಾ ವಲಯದ ಬಗ್ಗೆ ಏನು ವಿಚಾರ ಬೇಕಿದ್ದರೂ `ಮರಿ'ಯನ್ನು ಕೇಳಿ ಎನ್ನುವುದು ವಾಡಿಕೆ. (ಅವರ ನಿಕಟವರ್ತಿಗಳೆಲ್ಲ ಅವರನ್ನು `ಮರಿ' ಎಂತಲೇ ಕರೆಯುತ್ತಿದ್ದುದು). ಅಂತಲೇ ಅವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥದ ಹೆಸರು `ನಡೆದಾಡುವ ಕಲಾ ಕೋಶ' ಅನ್ವರ್ಥಕವೆಂದೇ ಹೇಳಬೇಕು.

ಮರಿಶಾಮಾಚಾರ್ ಜನಿಸಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರದಲ್ಲಿ, 1951ರಲ್ಲಿ. ಕೆನ್ ಕಲಾಶಾಲೆಯಲ್ಲಿ ಹಡಪದ್ ಮೇಷ್ಟರ ಉಸ್ತುವಾರಿಯಲ್ಲಿ ಕಲೆಯ ಅಧ್ಯಯನ. 1976ರಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆಯುವುದರೊಂದಿಗೆ ಡಿಪ್ಲೊಮಾ ಮುಗಿಸಿದ ನಂತರ 1977ರಲ್ಲಿ ಆರ್ಟ್ ಮಾಸ್ಟರ್ ಕೋರ್ಸ್‌ನಲ್ಲಿ ಉತ್ತೀರ್ಣ. ಮುಂದೆ 1978-79ರಲ್ಲಿ ಕೆ.ಕೆ.ಹೆಬ್ಬಾರ್ ಅವರು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾದ ಸಮಯದಲ್ಲಿ ಕರ್ನಾಟಕದ ಕಲಾ ವಿದ್ಯಾರ್ಥಿಗಳಿಗೆ ಹೊರ ರಾಜ್ಯಗಳಲ್ಲಿ ಕಲಿತು ಬರಲು ಶಿಷ್ಯವೇತನ ನೀಡಿದರು. ಆ ಅವಕಾಶವನ್ನು ಬಳಸಿಕೊಂಡು ಬರೋಡಾದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಲ್ಲಿ ಕೆ.ಜಿ. ಸುಬ್ರಮಣ್ಯನ್ ಅವರ ಶಿಷ್ಯತ್ವದಲ್ಲಿ ಕಲಿಕೆ ಮುಂದುವರೆಯಿತು. ಅಲ್ಲಿಂದ ಹಿಂತಿರುಗಿದ ನಂತರ ಕೆಲವೇ ಸಮಯದಲ್ಲಿ ಲಲಿತ ಕಲಾ ಅಕಾಡೆಮಿಯಲ್ಲಿ ಕೆಲಸಕ್ಕೆ ಸೇರಿದರು.

ಅಕಾಡೆಮಿಯಲ್ಲಿ ಕೆಲಸಕ್ಕೆ ಸೇರಿಯಾದ ಮೇಲೂ ಮರಿಶಾಮಾಚಾರ್ ಅವರ ಕ್ರಿಯಾಶೀಲತೆಗೆ ಕುಂದು ಬರಲಿಲ್ಲ. ಬದಲಿಗೆ ಅವರ ಚಟುವಟಿಕೆಗೆ ದೊಡ್ಡದಾದ ಕ್ಯಾನ್ವಾಸ್ ಸಿಕ್ಕಂತಾಯಿತು. ಸ್ವತಃ ತಾವೂ ಬೆಳೆದರಲ್ಲದೆ ಇತರರಿಗೂ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಚಿತ್ರಕಲೆ, ಶಿಲ್ಪ, ಗ್ರಾಫಿಕ್ ಹೀಗೆ ಹಲವಾರು ಮಾಧ್ಯಮಗಳಲ್ಲಿ ಕೃತಿಗಳನ್ನು ರಚಿಸುತ್ತಾ ಹೋದರು. ಅವರ ಕೃತಿಗಳಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಪ್ರಶಸ್ತಿ, ಕರ್ನಾಟಕ ಚಿತ್ರ ಕಲಾ ಪರಿಷತ್ತಿನ 15ನೇ ಅಖಿಲ ಭಾರತ ಪ್ರಶಸ್ತಿ, ಐಫಾಕ್ಸ್ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯ ದಶಮಾನೋತ್ಸವ ಪ್ರಶಸ್ತಿ- ಹೀಗೆ ಹಲವಾರು ಗೌರವಗಳು ಸಂದಿವೆ. ಕಲಾವಿದರಾಗಿ ಸಾಧಿಸಿದಕ್ಕಿಂತ ಹೆಚ್ಚನ್ನು ಅವರು ತಮ್ಮ ದೃಶ್ಯ ಕಲೆ ಕುರಿತ ಬರಹಗಳಲ್ಲಿ ಸಾಧಿಸಿದರು.

ಅವರ `ಪ್ರತಿಮಾ ಲೋಕದಲ್ಲಿ ಪಯಣ', `ಸೃಜನಶೀಲರು', `ದೃಶ್ಯ ಕಲಾ ಪ್ರಪಂಚ', `ಭಾರತದಲ್ಲಿ ಜನಪದ ಕಲೆ', `ಭಾರತದ ದೃಶ್ಯ ಕಲಾವಿದರು', `ಕಲಾಭಿವ್ಯಕ್ತಿ'ಯಂತಹ ಪುಸ್ತಕಗಳು ಒಟ್ಟಾರೆ ಕಲಾಲೋಕದ ಬಗ್ಗೆಯಾದರೆ, `ಸರ‌್ರಿಯಲಿಸಂ'ನಂತಹ ಪುಸ್ತಕಗಳು ಕಲಾ ಚಳವಳಿಗಳ ಬಗ್ಗೆ ಮಾಹಿತಿ ನೀಡುತ್ತವೆ; `ಕೆ.ಕೆ. ಹೆಬ್ಬಾರ್', `ಕೆ.ಜಿ. ಸುಬ್ರಮಣ್ಯಂ', `ರಾಜಾ ರವಿ ವರ್ಮ', `ಎಸ್.ಎನ್. ಸ್ವಾಮಿ', `ಎಮ್.ಎಫ್. ಹುಸೇನ್', `ಎಸ್.ಎಂ. ಪಂಡಿತ್', ಈ ಪುಸ್ತಕಗಳು ಆಯಾ ಕಲಾವಿದರ ವ್ಯಕ್ತಿ ಚಿತ್ರವನ್ನೂ ಮತ್ತು ಅವರ ಕೃತಿಗಳ ಬಗ್ಗೆಯೂ ವಿವರ ನೀಡುತ್ತವೆ. ಅವರ ಅನೇಕ ಪುಸ್ತಕಗಳಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರಗಳಿಂದ ಪ್ರಶಸ್ತಿಗಳೂ, ಸಮ್ಮಾನಗಳೂ ಸಂದಿವೆ. ಶ್ರಿಯುತರು 25ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದಲ್ಲದೆ ಕಲಾ ಕೋಶ, ಚಿತ್ರ ಕಲಾ ಪ್ರಪಂಚ, ಕಲಾ ಚರಿತ್ರೆಯಂತಹ ಗ್ರಂಥಗಳ ಸಂಪಾದಕರಾಗಿಯೂ ದುಡಿದಿದ್ದಾರೆ.

ಕೃತಿ ರಚನೆ, ಬರಹದ ಜೊತೆಗೇ ಮರಿಶಾಮಾಚಾರ್ ಅವರು ಕಲಾ ಸಂಘಟಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇತರ ಕಲಾವಿದರೊಂದಿಗೆ ಅವರು ಕೂಡಿಕೊಂಡು ಆರಂಭಿಸಿದ `ಸಂಯೋಜಿತ' ಸಂಸ್ಥೆ ರಾಜ್ಯದಲ್ಲಿ ಪ್ರದರ್ಶನ, ಸಂವಾದ, ಸೆಮಿನಾರ್, ಕಲಾ ಪುಸ್ತಕ ಪ್ರಕಟಣೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಂಬತ್ತರ ದಶಕದಲ್ಲಿ ರಾಜ್ಯ ಕಲಾ ವಲಯದ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಿತು. ಇಂತಹ ಹಲವು ಸಾಧನೆಗಳನ್ನು ಮಾಡಿದ ಮರಿಶಾಮಾಚಾರ್ ಅವರ ನಿಧನದಿಂದ (3-4-2013) ಕಲಾವಲಯ ಬಡವಾಗಿದೆ ಎಂಬುದು ಅತಿಶಯೋಕ್ತಿಯಲ್ಲ.

ಪ್ರೀತಿಯ ಕೆಲಸಗಾರ
ಓಡಾಡುವ ಜಾಗ ಬಿಟ್ಟು ಮಿಕ್ಕೆಲ್ಲ ಕಡೆಯೂ ಪುಸ್ತಕಗಳೇ ತುಂಬಿಕೊಂಡ, ಮನೆಗಿಂತಲೂ ಹೆಚ್ಚಾಗಿ ಗ್ರಂಥಾಲಯದಂತಿದ್ದ, ಬೆಂಗಳೂರಿನ ಕಾಡು ಮಲ್ಲೇಶ್ವರದ ದೇವಸ್ಥಾನದ ಬಳಿಯ ನರಸಿಂಹನ್‌ರವರ (1946-2013) ಮನೆಗೆ ಹೋದರೆ ತಾಸುಗಟ್ಟಲೆ ಮಾತನಾಡದೆ ಹೊರಬಂದಿದ್ದು ಕಮ್ಮಿ. ಹೊರಟಾಗಲೂ ಬಾಗಿಲ ಬಳಿ, ಗೇಟಿನ ಬಳಿ ಇನ್ನಷ್ಟು ಮಾತು. ವೈಯಕ್ತಿಕವಾಗಿ ಸಿಕ್ಕಾಗ ಇಷ್ಟು ಮಾತನಾಡುತ್ತಿದ್ದ ನರಸಿಂಹನ್ ಸಾರ್ವಜನಿಕವಾಗಿ  ಮಾತನಾಡಬೇಕಾದಾಗ ಸಂಕೋಚದ ಮುದ್ದೆಯಾಗುತ್ತಿದ್ದರು. ಪುಸ್ತಕಗಳ ನಡುವೆ, ಪರಿಮಿತ ಸ್ನೇಹಿತರ ನಡುವೆ ಅರಳುತ್ತಿದ್ದ ಅವರದ್ದು ಮುನ್ನುಗ್ಗಿ ವೇದಿಕೆಯನ್ನು ಹಿಡಿಯುವ ಸ್ವಭಾವವಲ್ಲ. ಅವರ ಮೆಲು ಮಾತಿನ ಧಾಟಿಯನ್ನು ಬಹಳ ಜನ ಅವರ ತಿಳಿವಿನ ಬಗ್ಗೆಯೇ ಅನುಮಾನ ಎಂಬಂತೆ ಕಂಡಿದ್ದುಂಟು. ಅಪಾರವಾದ ಓದು, ವಿದ್ವತ್ತು ಇದ್ದರೂ ಸಹ ಹೊಸತನ್ನು ತಿಳಿದುಕೊಳ್ಳುವ ಹಸಿವು, ನನಗೆ ಕಂಟೆಂಪರರಿ ಕಲೆಯ ಕೆಲವೆಲ್ಲ ವಿಷಯ ಅರ್ಥವಾಗೊಲ್ಲ ಎನ್ನುವ ವಿನಯವೂ ಇತ್ತು. ಅದು ಅಪರೂಪದ ಗುಣ.

ಮನೆಯಲ್ಲಿ ಕೂತು ಮಾತನಾಡುವಾಗ ನೆನಪಿನಿಂದಲೇ ಎಷ್ಟೋ ದಿನಾಂಕ, ಘಟನೆ ಹೇಳುತ್ತಿದ್ದ ಅವರು ಮಧ್ಯೆ ಮಧ್ಯೆ ಎದ್ದು ಹೋಗಿ ತಾವು ಹೇಳಿದ್ದಕ್ಕೆ ಆಧಾರವಾಗಿ, ಮನೆಯ ತುಂಬ ಪೇರಿಸಿದ್ದ, ತಮ್ಮ `ಗೊಬ್ಬರದ ಗುಂಡಿ' ಎಂದು ತಮಾಷೆಯಾಗಿ ಅವರು ಕರೆದುಕೊಳ್ಳುತ್ತಿದ್ದ ಪುಸ್ತಕ, ವೃತ್ತಪತ್ರಿಕೆ, ಕ್ಯಾಟ್‌ಲಾಗ್‌ಗಳು, ಫೋಟೋಗಳ ಸಂಗ್ರಹದ ಯಾವುದೋ ಮೂಲೆಯಿಂದ ಪುಸ್ತಕವನ್ನೋ, ಲೇಖನವನ್ನೋ ಹೆಕ್ಕಿ ತರುತ್ತಿದ್ದರು. ಅವರ ಮನೆ/ ಸಂಗ್ರಹ ಜ್ಞಾನದ ಗಣಿ. ಅಲ್ಲಿಗೆ ಬಂದು ಅದರ ಲಾಭ ಪಡೆದುಕೊಂಡವರೆಷ್ಟೋ ಮಂದಿ, ಅದರೆ ನೆನಪಿಸಿಕೊಂಡವರು ಕಮ್ಮಿ.

ನರಸಿಂಹನ್ ಹುಟ್ಟಿದ್ದು 1946ರಲ್ಲಿ. ಮುದ್ರಣ ತಂತ್ರಜ್ಞಾನದಲ್ಲಿ ಡಿಪ್ಲೊಮಾ, ಕೆನ್ ಕಲಾ ಶಾಲೆಯಿಂದ ಚಿತ್ರ ಕಲೆಯಲ್ಲಿ ಡಿಪ್ಲೊಮಾ, ಬೆಂಗಳೂರು ವಿ.ವಿ.ಯಿಂದ ಸ್ನಾತಕ್ಕೋತ್ತರ ಪದವಿ ಪಡೆದು ಮುಂದೆ `ಕರ್ನಾಟಕದ ಚಿತ್ರಕಲೆಯ ಸಾಂಸ್ಕೃತಿಕ ಅಧ್ಯಯನ' ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನೂ ಸಹ ಪಡೆದರು. ಅವರು ಮೊದಲು ಕೆಲಸಕ್ಕೆ ಸೇರಿದ್ದು ಸರ್ಕಾರಿ ಮುದ್ರಣಾಲಯದಲ್ಲಿ, 1965ರಲ್ಲಿ. 1978ರಲ್ಲಿ ಅವರು ಕರ್ನಾಟಕ ಗ್ಯಾಸೆಟಿಯರ್‌ನಲ್ಲಿ ಅನ್ವೇಷಕರಾಗಿ ಸೇರಿಕೊಂಡವರು ನಿವೃತ್ತರಾಗುವ ತನಕ ಆ ಇಲಾಖೆಯಲ್ಲಿಯೇ ಇದ್ದರು.

ಡಿಪ್ಲೊಮಾ ಪಡೆದದ್ದು ಚಿತ್ರಕಲೆಯಲ್ಲಿಯಾದರೂ ಅವರ ಹೆಚ್ಚಿನ ಒಲವು ಓದು, ಬರಹದ ಕಡೆಗೇ. ಹಾಗಾಗಿ ಚಿತ್ರರಚನೆಗಿಂತ ಕಲೆಯ ಬಗ್ಗೆ ಬರೆಯುವುದರಲ್ಲೇ ಅಪಾರ ಸಮಯ ಕಳೆದರು. ಆಗೀಗ ಚಿತ್ರ ರಚಿಸಿದರಾದರೂ ಅದೇ ಮುಖ್ಯ ಕಾಳಜಿಯಾಗಲಿಲ್ಲ. `ಕರ್ನಾಟಕದ ಭಿತ್ತಿ ಚಿತ್ರ ಪರಂಪರೆ', `ಆಲೇಖ್ಯ' ಇವು ಅವರು ಬರೆದ ಆರು ಪುಸ್ತಕಗಳಲ್ಲಿ ಕೆಲವು. ಚಿತ್ರಕಲಾ ಇತಿಹಾಸ ಕುರಿತು 130ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ, ಜೊತೆಗೇ ಹಲವು ಸಂಸ್ಥೆಗಳಲ್ಲಿ ಸಂಶೋಧನಾ ಲೇಖನಗಳ ಮಂಡಣೆ ಹೀಗೆ ಅವರ ಕಾಣ್ಕೆ ಅಪಾರ. ಬರೆಯುವಾಗ ಅವರು ಬರೀ ಚಿತ್ರಕಲೆಯ ಬಗ್ಗೆಯಷ್ಟೇ ಅಲ್ಲ ವಾಸ್ತು ಶಿಲ್ಪ, ಸಾಹಿತ್ಯ ಹೀಗೆ ವಿಭಿನ್ನ ಪ್ರಕಾರಗಳ ಬಗ್ಗೆ, ಚಿತ್ರಕಲೆಯೊಂದಿಗೆ ಅವುಗಳ ಸಂಬಂಧದ ಬಗ್ಗೆ ಬರೆದರು.

ಸ್ವಂತ ಲೇಖನಗಳನ್ನು ಬರೆಯುವುದರೊಂದಿಗೆ `ಕಲಾ ವಿಕಾಸ' ಎಂಬ ದೃಶ್ಯಕಲೆಗೆ ಮೀಸಲಾದ ಪತ್ರಿಕೆಯೊಂದನ್ನು ಹುಟ್ಟು ಹಾಕಿ ಅದರ ಸಂಪಾದಕರಾಗಿದ್ದರು. 1976ರಲ್ಲಿ ಆರಂಭವಾದ `ಕಲಾ ವಿಕಾಸ' 80ರ ದಶಕದ ಮಧ್ಯಭಾಗದವರೆಗೆ ನಡೆಯಿತು. ಆ ತಲೆಮಾರಿನ ಕಲಾ ಬರಹಗಾರರಿಗೆ ಅದು ಉತ್ತಮ ವೇದಿಕೆಯನ್ನು ಕಲ್ಪಿಸಿತಲ್ಲದೆ, ತನ್ನ ಕಾಲದ ಕಲಾವಲಯದ ಆಗುಹೋಗುಗಳ ದಾಖಲೆಯೂ ಆಯಿತು. ಮುಂದೆ 2002ರಲ್ಲಿ ಲಲಿತ ಕಲಾ ಅಕಾಡೆಮಿಯ `ಕಲಾ ವಾರ್ತೆ' ಪತ್ರಿಕೆಯ ಸಂಪಾದಕರಾಗಿ ಅದಕ್ಕೊಂದು ಹೊಸ ರೂಪು ರೇಷೆ ನೀಡಿದರು.

ನರಸಿಂಹನ್‌ರವರು ಕಲಾ ಸಂಘಟನೆಯಲ್ಲೂ ಕ್ರಿಯಾಶೀಲರಾಗಿದ್ದರು. `ಸಂಯೋಜಿತ', `ಕಲಾ ಮೇಳ'ಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ, ನಾಡೋಜ ಅರ್.ಎಂ. ಹಡಪದ್ ಪ್ರಶಸ್ತಿ, ಲಲಿತ ಕಲಾ ಅಕಾಡೆಮಿ ವಾರ್ಷಿಕ ಬಹುಮಾನ ಇವು ಅವರಿಗೆ ಸಂದ ಕೆಲವು ಗೌರವಗಳು. ಆದರೆ ಅವರ ಕಾಣ್ಕೆಗೆ ಸಿಕ್ಕಬೇಕಾದಷ್ಟು ಮನ್ನಣೆ ಅವರ ಜೀವಿತಾವಧಿಯಲ್ಲಿ ಅವರಿಗೆ ಸಿಕ್ಕಲಿಲ್ಲ, ಇದು ದುಃಖದ ವಿಷಯ.    

1974ರಿಂದ ಆರಂಭಿಸಿ ಅವರ ಕೊನೆ ದಿನಗಳ ತನಕವೂ ವೃತ್ತ ಪತ್ರಿಕೆಗಳಲ್ಲಿ ಕಲೆ, ಸಂಸ್ಕೃತಿ ಕುರಿತಾಗಿ ಬಂದ ಲೇಖನಗಳನ್ನು ಕತ್ತರಿಸಿ ಸಂಗ್ರಹಿಸಿದ್ದಾರೆ. ಜೊತೆಗೇ ಕಲಾ ಪ್ರದರ್ಶನಗಳ ಆಮಂತ್ರಣ ಪತ್ರಿಕೆ, ಕ್ಯಾಟ್‌ಲಾಗ್‌ಗಳು, ಕೃತಿಗಳ ಛಾಯಾಚಿತ್ರಗಳು, ಪಾರದರ್ಶಿಕೆಗಳು, ಪುಸ್ತಕಗಳು, ಸಿ.ಡಿ.ಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ.

ಇದು ಕರ್ನಾಟಕದ ಕಲೆ ಕುರಿತಾದ ಬಹು ಅಮೂಲ್ಯವಾದ ಆಕರ. ಅಕಾಡೆಮಿಯಂತಹ ಒಂದು ಸಂಸ್ಥೆ ಮಾಡಬೇಕಾಗಿದ್ದ ಕೆಲಸವನ್ನು ಅವರೊಬ್ಬರೇ ಮಾಡಿದ್ದಾರೆ. ಅವರು ಮಾಡಿದ್ದು ಪ್ರೀತಿಯ ಕೆಲಸ. ಇದು ಮಾಹಿತಿಯ ಅಪಾರ ರಾಶಿಯಷ್ಟೇ ಅಲ್ಲದೆ ಆಯಾ ದಶಕದ ಕಲಾ ಚಟುವಟಿಕೆಗಳನ್ನು, ಅವುಗಳಿಗೆ ಬಂದ ವಿಮರ್ಶೆಯನ್ನೂ ದಾಖಲಿಸುವಲ್ಲಿ ನಮಗೆ ನೆರವಾಗುವ ಮೂಲ ಮಾಹಿತಿ. ರಾಜ್ಯದ ಕಲೆಯ ಹೆಜ್ಜೆ ಗುರುತುಗಳನ್ನು ನಾವಿಲ್ಲಿ ಕಾಣಬಹುದು. ಮುಂದಿನ ದಿನಗಳಲ್ಲಿ ಯಾರಾದರೂ ಕರ್ನಾಟಕದ ನವ್ಯ ಹಾಗೂ ಸಮಕಾಲೀನ ಕಲೆಯ ಬಗ್ಗೆ ಸಂಶೋಧನೆ ಮಾಡುವುದಿದ್ದರೆ ಅದಕ್ಕೆ ಇದು ಬುನಾದಿ. ಇಂತಹ ಮಹತ್ತರವಾದ ಬುನಾದಿಯನ್ನು ಹಾಕಿಕೊಟ್ಟ ನರಸಿಂಹನ್‌ರವರನ್ನು (ನಿಧನ: 5-4-2013) ಮುಂದಿನ ತಲೆಮಾರಿನವರು ಸದಾ ಸ್ಮರಿಸಬೇಕು.
***
ಪರಿಚಾರಿಕೆ ಎನ್ನುವ ಪರಿಕಲ್ಪನೆ ಸಾಹಿತ್ಯ ವಲಯದಲ್ಲಿ ರೂಢಿಯಲ್ಲಿದೆ. ಕಲಾವಲಯದಲ್ಲಿ ಈ ಪರಿಚಾರಿಕೆಗೆ ಘನತೆಯನ್ನು ತಂದುಕೊಟ್ಟ ಅಗ್ಗಳಿಕೆ ಮರಿಶಾಮಾಚಾರ್ ಮತ್ತು ನರಸಿಂಹನ್ ಅವರದು. ಅವರ ಸಾಂಸ್ಕೃತಿಕ ಪರಿಚಾರಿಕೆ ಕರ್ನಾಟಕದ ಕಲಾವಲಯವನ್ನು ಶ್ರೀಮಂತವಾಗಿಸಿದೆ. ಅನೇಕ ಕಲಾವಿದರ ಸಾಧನೆಯ ಹಿಂದೆ ಈ ಹಿರಿಯ ಚೇತನಗಳ ಬೆಂಬಲ, ಪ್ರಯತ್ನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT