ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮೈಲ್ ಪ್ಲೀಸ್... ಇದು `ಸ್ಮೈಲ್ ಸರ್ಜರಿ'!

Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಅನೇಕರು ಕನ್ನಡಕ ಧರಿಸಿದರೆ ಜನ ಎಲ್ಲಿ ತಮ್ಮನ್ನು ಅಣುಕಿಸುತ್ತಾರೋ ಎಂಬ ಅಳುಕಿನಿಂದಲೇ ಕನ್ನಡಕ ಧರಿಸಲು ಶುರು ಮಾಡುತ್ತಾರೆ. ಇನ್ನು ಕೆಲವರು ಕೇವಲ ಕೆಲಸದ ಸಮಯದಲ್ಲಿ ಅಥವಾ ಓದುವಾಗ ಮಾತ್ರ ಕನ್ನಡಕ ಬಳಸುವ ರೂಢಿ ಇಟ್ಟುಕೊಂಡಿರುತ್ತಾರೆ. ಇನ್ನು ದೃಷ್ಟಿದೋಷ ಹುಡುಗಿಯರಿಗೆ ಬಂದರಂತೂ ಮುಗಿದೇ ಹೋಯಿತು. ಅದರಲ್ಲೂ ಮದುವೆ ವಯಸ್ಸಿಗೆ ಬಂದ ಹುಡುಗಿಯರಾದರೆ `ಅಯ್ಯೋ ನನ್ನ ಮಗಳನ್ನು ಯಾರು ಮದುವೆಯಾಗುತ್ತಾರೆ?' ಎಂಬ ಚಿಂತೆ ಪೋಷಕರನ್ನು ಕಾಡದೇ ಇರದು.

ವೈಜ್ಞಾನಿಕ ಕ್ಷೇತ್ರದಲ್ಲಾದ ಬೆಳವಣಿಗೆಗಳಿಂದ ಅನೇಕರು ಶಸ್ತ್ರಚಿಕಿತ್ಸೆಯ ಮೂಲಕ ಕಣ್ಣಿನ ದೃಷ್ಟಿ ಸರಿಪಡಿಸಿಕೊಂಡು ಕನ್ನಡಕಗಳಿಗೆ ವಿದಾಯ ಹೇಳಿದ್ದಾರೆ. ಆದರೆ ಹೀಗೆ ಮಾಡಿಸಿಕೊಳ್ಳುವ ಶಸ್ತ್ರಚಿಕಿತ್ಸೆ ಎಷ್ಟು ಲಾಭದಾಯಕ, ಭವಿಷ್ಯದಲ್ಲಿ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಉದ್ಭವಿಸಿದಾಗ ಈ ವಿಧಾನದಲ್ಲಿ ಕೆಲವು ಕೊರತೆಗಳು ಕಾಡಿದ್ದುಂಟು. ಅದಕ್ಕಾಗಿಯೇ ಕಾರ್ಲ್ ಜೀಸ್ ಕಂಪೆನಿ ಹೊಸದೊಂದು ಶಸ್ತ್ರಚಿಕಿತ್ಸಾ ವಿಧಾನಕ್ಕೆ ಮುನ್ನುಡಿ ಬರೆದಿದೆ. ನೂತನ ತಂತ್ರಜ್ಞಾನ ಅಳವಡಿಸಿಕೊಂಡ ಯಂತ್ರ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬೆಂಗಳೂರಿಗೆ ಕಾಲಿಟ್ಟಿದ್ದು, ಈಗಾಗಲೇ 50ಕ್ಕೂ ಹೆಚ್ಚು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ.

`ಹಳೆ ಲೇಸರ್ ಶಸ್ತ್ರಚಿಕಿತ್ಸಾ ವಿಧಾನಕ್ಕೂ ಹೊಸ ವಿಧಾನಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಹೊಸ ವಿಧಾನವನ್ನು `ಸ್ಮೈಲ್ ಸರ್ಜರಿ' ಎಂದು ಹೆಸರಿಸಲಾಗಿದ್ದು, ರೋಗಿಗಳ ಮುಖದ್ಲ್ಲಲಿ ಸ್ಮೈಲ್ ಮೂಡಿಸುವಲ್ಲಿ ಈ ಚಿಕಿತ್ಸೆ ಸಹಕಾರಿ' ಎಂದು ಹೇಳುತ್ತಾರೆ ನೇತ್ರ ಶಸ್ತ್ರಚಿಕಿತ್ಸಾ ತಜ್ಞ ಡಾ. ಶ್ರೀಗಣೇಶ್.

ಲೇಸರ್ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಕಾರ್ನಿಯಾ ಕವಾಟವನ್ನು ಹಿಂದಕ್ಕೆ ತಿರುಗಿಸಿ ದೃಷ್ಟಿದೋಷವನ್ನು ಸರಿಪಡಿಸಲಾಗುತ್ತಿತ್ತು. ಇದರಿಂದ ಕಾರ್ನಿಯಾಗೆ ಏಟಾದರೆ ಅಥವಾ ಕಣ್ಣು ಉಜ್ಜಿಕೊಳ್ಳುವುದರಿಂದ ಮತ್ತೆ ದೃಷ್ಟಿದೋಷ ಬರುವ ಸಾಧ್ಯತೆ ಇತ್ತು. ಆದರೆ ಸ್ಮೈಲ್ ಶಸ್ತ್ರಚಿಕಿತ್ಸೆಯಲ್ಲಿ ಕಾರ್ನಿಯಾಗೆ ಯಾವುದೇ ತೊಂದರೆಯಾಗದಂತೆ, ಕವಾಟವನ್ನು ತಿರುಗಿಸದೇ ದೃಷ್ಟಿದೋಷ ಸರಿಪಡಿಸಬಹುದು. ಈ ಚಿಕಿತ್ಸೆಗೆ ಒಳಗಾದವರಿಗೆ ನೋವಿನ ಅನುಭವ ಆಗದಿರುವುದು, ಕೇವಲ 3- 4 ನಿಮಿಷಗಳಲ್ಲಿ ಚಿಕಿತ್ಸೆ ಪೂರ್ಣಗೊಳ್ಳುವುದು ಹೊಸ ವಿಧಾನದ ವಿಶೇಷ.

`ಈ ಶಸ್ತ್ರಚಿಕಿತ್ಸೆ `ನಾಸಾ'ದಿಂದ ಪ್ರಮಾಣೀಕೃತಗೊಂಡಿದ್ದು, ಅನೇಕ ಪೈಲಟ್‌ಗಳೂ ಚಿಕಿತ್ಸೆಗೆ ಒಳಗಾಗಿದ್ದಾರೆ. ಬ್ಲೇಡ್ ಬಳಸದೇ, ಫ್ಲಾಪ್ ತೆಗೆಯದೇ ನಡೆಸುವ ಈ ವಿಧಾನಕ್ಕೆ ರೋಗಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ' ಎಂದು ನೇತ್ರಧಾಮ ಆಸ್ಪತ್ರೆಯ ವೈದ್ಯರಾದ ಶ್ರೀಗಣೇಶ್ ಹರ್ಷ ವ್ಯಕ್ತಪಡಿಸುತ್ತಾರೆ.

ಇನ್ನು ಚಿಕಿತ್ಸೆಯ ವೆಚ್ಚ ಲೇಸರ್ ಶಸ್ತ್ರಚಿಕಿತ್ಸಾ ವೆಚ್ಚಕ್ಕಿಂತ ದುಬಾರಿಯಾಗಿದ್ದು, ಪ್ರತಿ ಕಣ್ಣಿನ ಸರ್ಜರಿಗೆ ಸುಮಾರು 50,000 ರೂಪಾಯಿಯಷ್ಟು ಖರ್ಚಾಗುತ್ತದೆ ಎನ್ನಲಾಗಿದೆ. ಆದರೆ ಹಣಕ್ಕಿಂತ ಸುರಕ್ಷತೆ ಬಹು ಮುಖ್ಯ ಎನ್ನುವವರಿಗೆ ಈ ಚಿಕಿತ್ಸೆ ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT