ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಕಿ ಕೆರೆ ಸೌಂದರ್ಯವೂ ಸವಾಲೂ

Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

ಮಲ್ಲೇಶ್ವರ, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಅರಮನೆ ಮೈದಾನವನ್ನು  ಸಂಪರ್ಕಿಸುವ, ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವ ಪ್ರದೇಶದಲ್ಲೇ ಇದೆ ಸ್ಯಾಂಕಿ ಕೆರೆ. ತಿಳಿನೀರಿನಿಂದ ಸಹಜ ಶಾಂತ ವಾತಾವರಣ ಹೊಂದಿದ್ದರೂ ಈಗ ಅದೂ ಮರೀಚಿಕೆ ಎನಿಸುತ್ತಿದೆ. ಕೆರೆ ಸಮೀಪ ಕಟ್ಟಡ ನಿರ್ಮಾಣ ಮಾಡಿದ್ದು, ಶಕ್ತಿದಾಯಕ ಪೇಯದ ಪ್ರಾಯೋಜಕತ್ವದ ಉದ್ದೇಶಕ್ಕೆ ಬಳಸಿ ತ್ಯಾಜ್ಯವನ್ನು ತುಂಬಿದ್ದು– ಈ ಎರಡೂ ವಿವಾದಗಳಿಂದ ಇತ್ತೀಚೆಗೆ ಸ್ಯಾಂಕಿ ಕೆರೆ ಸುದ್ದಿಯಾಗಿತ್ತು.

ಮಿಲ್ಲರ್ಸ್‌ ಕೆರೆ ಮೂಲಕ ದಂಡು ‍ಪ್ರದೇಶಕ್ಕೆ ಹಾಗೂ ಧರ್ಮಾಂಬುಧಿ ಕೆರೆ ಮೂಲಕ ಅದಕ್ಕೆ ಹೊಂದಿಕೊಂಡ ಸ್ಥಳಗಳಿಗೆ ನೀರು ಪೂರೈಕೆ ಮಾಡುವ ಮುಖ್ಯ ಆಲೋಚನೆಯಿಂದ ಈ ಕೆರೆಯನ್ನು ನಿರ್ಮಿಸಲಾಯಿತು. 1870ರಲ್ಲಿ ನಿರ್ಮಿತವಾದ ಈ ಕೆರೆಗೆ 1600 ಎಕರೆಯಷ್ಟು ವಿಸ್ತಾರವಾದ ಜಲಾನಯನ ಪ್ರದೇಶವಿದೆ. 1885ರ ಪುರಾತನ ನಕ್ಷೆಯ ಪ್ರಕಾರ, ಹಲವು ಕಾಲುವೆಗಳು ಈ ಕೆರೆಗೆ  ನೀರು ಪೂರೈಸುತ್ತಿದ್ದವೆನ್ನುವುದು ಗೊತ್ತಾಗುತ್ತದೆ. ಎಷ್ಟೆಲ್ಲಾ ಜಲಮೂಲಗಳು ಈ ಕೆರೆಗೆ ಇದ್ದವು ಎಂಬುದಕ್ಕೆ ಇದೇ ಸಾಕ್ಷಿ.  ಈ ಕೆರೆ ನಿರ್ಮಾಣ ಮುಗಿಯುತ್ತಿದ್ದಂತೆ, ಬೆಂಗಳೂರಿಗೆ ಹೆಸರಘಟ್ಟ ಜಲಾಶಯದಿಂದ ನೀರಿನ ಸರಬರಾಜು ಆರಂಭವಾಯಿತು. ಸೇನಾ ನೆಲೆಯಿಂದ ಬರುತ್ತಿದ್ದ ಲಂಟಾನ ಇನ್ನಿತರ ಕಳೆಗಳು ಹಾಗೂ ಅರಮನೆ ತೋಟದ ಹೂಳು ಕಾಲುವೆಗಳನ್ನು ತುಂಬುತ್ತಾ ಬಂತು. ಈ ಹೂಳನ್ನು ಎತ್ತಿ, ಸಮರ್ಪಕವಾಗಿ  ನಿರ್ವಹಿಸದ ಕಾರಣಕ್ಕೆ ಜಲಮೂಲಗಳ ಕಾರ್ಯ ಮೊದಲಿನಂತೆ ಸರಾಗವಾಗಿ ಆಗಲಿಲ್ಲ.

1920ರ ದಶಕದ ಮೊದಲ ಭಾಗದಲ್ಲಿ ಸ್ಯಾಂಕಿ ಕೆರೆಯು ಬೆಂಗಳೂರು ಅರಮನೆ ಹಾಗೂ ಸ್ಯಾಂಡಲ್‌ ಆಯಿಲ್‌ ಕಂಪೆನಿಗೆ (ಶ್ರೀಗಂಧದ ತೈಲ ತಯಾರಿಸುವ ಕಂಪೆನಿ) ಪ್ರಮುಖ ನೀರು ಪೂರೈಕೆಯ ಮೂಲವಾಗಿತ್ತು. ಅರಮನೆಯ ಉದ್ಯಾನ, ತೋಟ ಮತ್ತು ಅಲ್ಲಿನ ಪೋಲೊ ಮೈದಾನಕ್ಕೆ ಈ ಕೆರೆಯಿಂದಲೇ ನೀರು ಹರಿಸುತ್ತಿದ್ದುದು. ಶ್ರೀಗಂಧ ತೈಲ ತಯಾರಿಸುವ ಕಂಪೆನಿಗೂ ಅಧಿಕ ಪ್ರಮಾಣದ ನೀರನ್ನು ದಿನನಿತ್ಯವೂ ಒದಗಿಸಲಾಗುತ್ತಿತ್ತು. ಇಷ್ಟೇ ಅಲ್ಲದೆ ಕೆರೆಯ ಕೆಳಭಾಗದಲ್ಲಿ ಇದ್ದ ಮಲ್ಲೇಶ್ವರದ ಸಾರ್ವಜನಿಕ ಈಜುಕೊಳ ಹಾಗೂ ಬಟ್ಟೆ ಒಗೆಯುವ ಘಾಟ್‌ಗೂ ನೀರನ್ನು ಹರಿಸಲಾಗುತ್ತಿತ್ತು.

ಕೆರೆಗೆ ನೀರು ಹರಿದು ಹೋಗುತ್ತಿದ್ದ ಪ್ರದೇಶದಲ್ಲಿ ತೇವಾಂಶದಿಂದಾಗಿ ಸಂಗ್ರಹವಾಗುತ್ತಿದ್ದ ಬಿಳಿ ಮಣ್ಣನ್ನು ಮಲ್ಲೇಶ್ವರದ ಸರ್ಕಾರಿ ಪಿಂಗಾಣಿ ಕಾರ್ಖಾನೆಗೆ ಸಂಗ್ರಹಿಸಿ, ಪೂರೈಸಲಾಗುತ್ತಿತ್ತು. ಕೆರೆಗೆ ಸಮೀಪದಲ್ಲಿ ಇಟ್ಟಿಗೆ ಗೂಡು ಇತ್ತು. ಅಲ್ಲಿಂಗ ಇಟ್ಟಿಗೆಗಳನ್ನ ಹೊತ್ತೊಯ್ಯಲು ಎತ್ತಿನಗಾಡಿಗಳು ಓಡಾಡುತ್ತಿದ್ದವು. ಅವುಗಳು ಇಟ್ಟಿಗೆಗಳನ್ನು ತುಂಬಿಸಿಕೊಳ್ಳಲು ಸಾಲುಗಟ್ಟಿ ನಿಂತಾಗ, ದಟ್ಟಣೆ ಉಂಟಾಗಿ ನೀರಿನ ಸರಾಗ ಹರಿವಿಗೆ  ತೊಂದರೆಯಾಗುತ್ತಿತ್ತು.  ಕಲ್ಲಿನ ಗಣಿಗಾರಿಕೆ ಕೂಡ ಆ ಪ್ರದೇಶದಲ್ಲಿ ನಡೆದಿದ್ದು, ಆಗಲೂ ಇದೇ ರೀತಿಯ ಸಮಸ್ಯೆ ಉದ್ಭವಿಸಿತು. ನಂತರ ಕಲ್ಲುಗಣಿಗಾರಿಕೆಯನ್ನು ನಿಲ್ಲಿಸಿ, ಇಟ್ಟಿಗೆ ಗೂಡನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು.

ಮಲ್ಲೇಶ್ವರದ ಸಾರ್ವಜನಿಕರು ಸ್ನಾನ ಮಾಡಲು ಬಳಸುತ್ತಿದ್ದ ಸ್ಥಳ, ಬಟ್ಟೆ ಒಗೆಯುತ್ತಿದ್ದ ಘಾಟ್‌ ಮತ್ತು ಅಲ್ಲಿ ಇದ್ದ ‘ಸ್ವಿಮ್ಮಿಂಗ್ ಕ್ಲಬ್‌’ಗೆ ತನ್ನ ಪಾಲಿನ ನೀರನ್ನು ಹಂಚಿಕೊಳ್ಳಲು ಅರಮನೆ ಆಡಳಿತ ಒಪ್ಪಿಗೆ ನೀಡಿತು. ಅನೇಕ ಪ್ರತಿಷ್ಠಿತ ಪುರುಷ–ಮಹಿಳೆಯರು ಸ್ವಿಮ್ಮಿಂಗ್‌ ಪೂಲ್‌ನ ಸದಸ್ಯರಾಗಿದ್ದರೆನ್ನುವುದೇ ಇದಕ್ಕೆ ಕಾರಣ. ಇದೇ ಸಮಯದಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕಾರಿಗಳು ತಮ್ಮ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಲಾದ ಉದ್ಯಾನಗಳಿಗೆ ನೀರನ್ನು ನೀಡಬೇಕೆಂದು ಅರಮನೆ ಆಡಳಿತವನ್ನು ಕೇಳಿಕೊಂಡಿತು. ಆದರೆ ಅರಮನೆ ಉದ್ಯಾನದ ಹೊರತಾಗಿ ಬೇರೆ ಉದ್ಯಾನಗಳಿಗೆ ನೀರು ಬಿಡಲು   ಹೆಚ್ಚಿಗೆ ನೀರು ಇಲ್ಲವೇ ಇಲ್ಲ ಎಂದ ಆಡಳಿತ ಮಂಡಳಿ, ನೀರು ಹಂಚಿಕೊಳ್ಳಲು ನಿರಾಕರಿಸಿತು.

ಇಂದು ಸ್ಯಾಂಕಿ ಕೆರೆ ಬೆಂಗಳೂರಿನ  ನೀರಿನ ಮೂಲವಾಗಿ ಉಳಿದಿಲ್ಲ. ಆದರೆ ಹಲವು ರೀತಿಯ ಗಿಡ ಮರಗಳಿಗೆ, ಪಕ್ಷಿ ಚಿಟ್ಟೆಗಳಿಗೆ, ದುಂಬಿಗಳಿಗೆ, ಅಳಿಲುಗಳಿಗೆ ಅಳಿವಿನ ಅಂಚಿನಲ್ಲಿರುವ ಇನ್ನಿತರ ಜೀವ ಪ್ರಭೇದಗಳಿಗೆ ನೆಲೆಯಾಗಿ ಬದಲಾಗಿದೆ. ಹಸಿರಿನಿಂದ ಆವೃತ್ತವಾಗಿರುವ ಈ ತಾಣ ವಯಸ್ಸಾದವರ, ಯುವಜನರ ವ್ಯಾಯಾಮ ಹಾಗೂ ವಿಶ್ರಾಂತಿಯ ಸ್ಥಳವಾಗಿ, ಸಂವಾದ ನಡೆಸುವ ಜಾಗವಾಗಿ ಬದಲಾಗಿದೆ.

ಆದರೂ ಈ ಜಾಗಕ್ಕೆ ಹಲವು ಬಿಲ್ಡರ್‌ಗಳ (ಕಟ್ಟಡಗಳನ್ನು ಕಟ್ಟಿಸುವವರು) ಆತಂಕವಿದೆ. ಕೆರೆಯ ಸುತ್ತಲೂ ಆಕಾಶದೆತ್ತರದ ಕಟ್ಟಡಗಳು ಎದ್ದರೆ ಕಷ್ಟವೆನ್ನುವ ಸ್ಥಿತಿ ಇದೆ. ತಮ್ಮ ಉತ್ಪನ್ನಗಳಿಗೆ ಪ್ರಾಯೋಜಕತ್ವ ನೀಡುವ ಸ್ಥಳವಾಗಿ ಇದನ್ನು ಬಳಸಿಕೊಳ್ಳುವ ಇನ್ನೊಂದು ಆತಂಕವನ್ನೂ ಕೆರೆ ಎದುರಿಸುತ್ತಿದೆ. ಈ ಕೆರೆಯನ್ನು ಮಲಿನ ಮಾಡುವ ಹಲವು ದಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಈ ಕೆರೆ ನಿಸರ್ಗ ಸೌಂದರ್ಯದ ಅಪರೂಪದ ತಾಣವಾಗಿ ಜನರಿಗೆ ಆಪ್ತವೆನಿಸಿದೆ.

ಕೆರೆಯ ಸುತ್ತಮತ್ತಲಿನ ಜೀವವೈವಿಧ್ಯವನ್ನು ರಕ್ಷಿಸುವ ಹಾಗೂ ಈ ಹಸಿರು ತುಂಬಿದ ಪರಿಸರದಿಂದ ಪ್ರಯೋಜನ ಹೊಂದುತ್ತಿರುವ ಲಕ್ಷಾಂತರ ಜನರ ದೃಷ್ಟಿಯಿಂದ ಆಧುನೀಕರಣದ ಹಲವು ಸವಾಲುಗಳನ್ನು ಹಿಮ್ಮೆಟ್ಟಿ ಈ ಕೆರೆಯನ್ನು  ರಕ್ಷಿಸಿಕೊಳ್ಳಬೇಕಾದ ಅವಶ್ಯಕತೆಯೂ ಎದುರಲ್ಲಿ ಇದೆ. 

-ಪೂರಕ ಮಾಹಿತಿ: ಹಿತಾ ಉನ್ನಿಕೃಷ್ಣನ್
ನಾಳೆ: ಬೆಂಗಳೂರಿನ ಬಾವಿಗಳು, ಕಲ್ಯಾಣಿಗಳ ಕಣ್ಮರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT