ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಫ್‌ : ಭಾರತ ಎಡವಿದ್ದೇಕೆ?

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಗೆಲ್ಲುವ ಮೂಲಕ ಆಫ್ಘಾನಿಸ್ತಾನ ಐತಿಹಾಸಿಕ ಸಾಧನೆ ಮಾಡಿದೆ.  ಯುದ್ಧದ ಕಾರಣ ಸಾಕಷ್ಟು ತೊಂದರೆ ಅನುಭವಿಸಿರುವ ಈ ದೇಶದ  ತಂಡ ದಕ್ಷಿಣ ಏಷ್ಯಾದ ಫುಟ್‌ಬಾಲ್‌ ಶಕ್ತಿಯಾಗಿ ಹೊರಹೊಮ್ಮಿದ್ದು ಸುಲಭದ ವಿಷಯವೇನಲ್ಲ. ಆಫ್ಘನ್‌ ಆಟಗಾರರು ತೋರಿದ ಛಲವನ್ನು ಮೆಚ್ಚಲೇಬೇಕು.

‘ಫುಟ್‌ಬಾಲ್‌ಗೆ ಅಭಿನಂದನೆಗಳು... ಜೀವನದಲ್ಲಿ ಇದೇ ಮೊದಲ ಬಾರಿಗೆ ನನಗೆ ಗೆಲುವಿನ ಸಂಭ್ರಮ ಆಚರಿಸುವ ಅವಕಾಶ ದೊರೆತಿದೆ’
– ದಕ್ಷಿಣ ಏಷ್ಯಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ (ಎಸ್‌ಎಎಫ್‌ಎಫ್‌) ಕಿರೀಟ ಮುಡಿಗೇರಿಸಿಕೊಂಡ ಆಫ್ಘಾನಿಸ್ತಾನದ ಫುಟ್‌ಬಾಲ್‌ ಪ್ರೇಮಿಯೊಬ್ಬ ಪ್ರತಿಕ್ರಿಯಿಸಿದ ರೀತಿಯಿದು.

ಯುದ್ಧ,  ಬಾಂಬ್‌ ಸ್ಫೋಟ, ತಾಲಿಬಾನ್‌ ಉಗ್ರರ ದಾಳಿಗಳಿಂ­ದಾಗಿಯೇ ಸುದ್ದಿಯಾಗುತ್ತಿದ್ದ ಈ ದೇಶದ ಜನತೆಗೆ ಗೆಲುವಿನ ಸಂಭ್ರಮ ಏನು ಎಂಬುದೇ ತಿಳಿದಿರಲಿಲ್ಲ. ಆದರೆ ಫುಟ್‌ಬಾಲ್‌ ಆಟ­ಗಾ­ರರು ಈ ದೇಶದಲ್ಲಿ ಸಂಭ್ರಮದ ಅಲೆ ಏಳುವಂತೆ ಮಾಡಿದ್ದಾರೆ.
ನೇಪಾಳದ ಕಠ್ಮಂಡುವಿನಲ್ಲಿ ಹೋದ ವಾರ ನಡೆದ ಸ್ಯಾಫ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಆಫ್ಘಾನಿಸ್ತಾನ 2–0 ಗೋಲುಗಳಿಂದ ಭಾರತ ತಂಡವನ್ನು ಮಣಿಸಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿತ್ತು.

ಆಫ್ಘಾನಿಸ್ತಾನದ ಸಾಧನೆಯನ್ನು ಮೆಚ್ಚಲೇಬೇಕು. ಹಲವು ವರ್ಷಗಳ ಯುದ್ಧದಿಂದ ಜರ್ಜರಿವಾದ ದೇಶದ ತಂಡವೊಂದು ಫುಟ್‌ಬಾಲ್‌ ಶಕ್ತಿಯಾಗಿ ಮೆರೆದಿದೆ.  ಫಿಫಾ ಪ್ರಕಟಿಸಿದ ನೂತನ ರ‍್ಯಾಂಕಿಂಗ್‌ನಲ್ಲಿ ಈ ದೇಶದ ತಂಡ 132ನೇ ಸ್ಥಾನದಲ್ಲಿದೆ.

ತಾಲಿಬಾನ್‌ ಆಡಳಿತದ ಅವಧಿ ಹಾಗೂ ಬಳಿಕದ ಯುದ್ಧದಿಂದಾಗಿ ಈ ದೇಶದಲ್ಲಿ ಕ್ರೀಡಾ ಚಟುವಟಿಕೆಗಳು ನಿಂತೇಹೋಗಿದ್ದವು. ತಾಲಿಬಾನ್‌ನ ಪತನದ ಬಳಿಕ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳು ಗರಿಗೆದರಿದವು. ಫುಟ್‌ಬಾಲ್‌ ತಂಡ ಕೂಡಾ ನಿಧಾನವಾಗಿ ಶಕ್ತಿ ಪಡೆಯತೊಡಗಿತು. ಆಟಗಾರರು ತಮಗೆ ದೊರೆತ ಸೀಮಿತ ಸೌಲಭ್ಯಗಳನ್ನು ಬಳಸಿ ಕಠಿಣ ಅಭ್ಯಾಸ ನಡೆಸಿದರು. ಅದರ ಫಲ ಇದೀಗ ಲಭಿಸಿದೆ.

ಆಫ್ಘನ್‌ ತಂಡದ ಎದುರು ಸೋಲು ಅನುಭವಿಸಿದೆ ಎಂಬ ಕಾರಣ ಭಾರತ ತಂಡದ ಮೇಲಿನ ಭರವಸೆ ಕೈಬಿಡುವುದು ಸರಿಯಲ್ಲ. ಆರು ಸಲ ಸ್ಯಾಫ್‌ ಚಾಂಪಿಯನ್‌ ಆಗಿರುವ ಭಾರತ ತಂಡ ಆಫ್ಘಾನಿಸ್ತಾನದ ಕೈಯಲ್ಲಿ ಸೋಲು ಅನುಭವಿಸಿದ್ದನ್ನು ಇಲ್ಲಿನ ಫುಟ್‌ಬಾಲ್‌ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಈ ಸೋಲಿನಿಂದ ಎಲ್ಲವೂ ಕೊನೆಗೊಂಡಿದೆ ಎಂದು ಭಾವಿಸುವುದು ತಪ್ಪು.
2014ರ ಎಎಫ್‌ಸಿ ಚಾಲೆಂಜ್‌ ಕಪ್‌ಗೆ ದಕ್ಷಿಣ ಏಷ್ಯಾದಿಂದ ಅರ್ಹತೆ ಪಡೆದಿರುವುದು ಆಫ್ಘಾನಿಸ್ತಾನ ಮಾತ್ರ. ಆಫ್ಘನ್‌ ತಂಡ ಪ್ರಸಕ್ತ ಋತುವಿನಲ್ಲಿ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿದೆ. ಈ ವರ್ಷ ಆಡಿದ 10 ಪಂದ್ಯಗಳಲ್ಲಿ ಏಳನ್ನು ಗೆದ್ದುಕೊಂಡಿದೆ. ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಆಫ್ಘನ್‌ ತಂಡದಲ್ಲಿದ್ದ ಹೆಚ್ಚಿನವರು ವಿದೇಶದಲ್ಲಿ ಜನಿಸಿದವರು ಮತ್ತು ವಿದೇಶದಲ್ಲಿ ನೆಲೆಸಿರುವ ಆಟಗಾರರು.

ಆದ್ದರಿಂದ ಭಾರತ ತನಗಿಂತ ಬಲಿಷ್ಠ ತಂಡದ ಎದುರು ಸೋಲು ಅನುಭವಿಸಿದೆ ಎಂಬುದನ್ನು ಮರೆಯಬಾರದು. ಚಾಂಪಿಯನ್‌­ಷಿಪ್‌ನ ಲೀಗ್‌ ಹಂತದಲ್ಲಿ ಭಾರತ ಅದ್ಭುತ ಪ್ರದರ್ಶನವನ್ನೇನೂ ನೀಡಲಿಲ್ಲ. ‘ಅದೃಷ್ಟ’ದ ನೆರವಿನಿಂದ ಸೆಮಿಫೈನಲ್‌ ಪ್ರವೇಶಿಸಿತ್ತು. ಲೀಗ್‌ ಹಂತದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳ ಎದುರು ಪರದಾಟ ನಡೆಸಿತ್ತು.

ಮಾಲ್ಡೀವ್ಸ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ ನೈಜ ಆಟ ತೋರಿತು. ಫೈನಲ್‌ನಲ್ಲೂ ತಂಡ ನೀರಸ ಪ್ರದರ್ಶನ ನೀಡಲಿಲ್ಲ. ಆದರೆ ಸಿಕ್ಕಿದ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗದ್ದು ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದು. ನಾಯಕ ಹಾಗೂ ತಂಡದ ಮುನ್ನಡೆ ವಿಭಾಗದ ‘ಬೆನ್ನೆಲುಬು’ ಎನಿಸಿರುವ ಸುನಿಲ್‌ ಚೆಟ್ರಿ ಎಂದಿನ ಲಯದಲ್ಲಿ ಆಡದೇ ಇದ್ದದ್ದು  ಹಿನ್ನಡೆ ಉಂಟುಮಾಡಿತು.

ಆಕರ್ಷಕ ಡ್ರಿಬ್ಲಿಂಗ್‌ ಮೂಲಕ ಚೆಂಡನ್ನು ಗುರಿ ಸೇರಿಸುವ ಸಾಮರ್ಥ್ಯ ಹೊಂದಿರುವ ಚೆಟ್ರಿ ಈ ಟೂರ್ನಿಯಲ್ಲಿ ಮಾತ್ರ ‘ಫಿನಿಷಿಂಗ್‌’ನಲ್ಲಿ ಸಂಪೂರ್ಣವಾಗಿ ಎಡವಿದರು. ಒಟ್ಟು ಸುಮಾರು 300ಕ್ಕೂ ಅಧಿಕ ನಿಮಿಷಗಳ ಕಾಲ ಆಡುವ ಅವಕಾಶ ಪಡೆದ ಚೆಟ್ರಿ ಗಳಿಸಿದ್ದು ಒಂದು ಗೋಲು ಮಾತ್ರ. 

ಆಫ್ಘನ್‌ ಎದುರು ಈ ರೀತಿ ಅನಿರೀಕ್ಷಿತ ಸೋಲು ಅನುಭವಿಸಿದ ಕಾರಣ ಕೋಚ್‌ ವಿಮ್‌ ಕೊವರ್‌ಮನ್ಸ್‌ ‘ತಲೆದಂಡ’ಕ್ಕೆ ಒತ್ತಡ ಹೆಚ್ಚಿದೆ. ಆದರೆ ಸೋಲಿನ ಎಲ್ಲ ಹೊಣೆಯನ್ನು ಕೋಚ್‌ ಮೇಲೆ ಕೂರಿಸಿ ಕೈತೊಳೆದುಕೊಳ್ಳುವುದರಲ್ಲಿ ಅರ್ಥವಿಲ್ಲ.
‘ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ’ ಎಂಬುದು ಭಾರತದ ಫುಟ್‌ಬಾಲ್‌ ದಂತಕತೆ ಐ.ಎಂ. ವಿಜಯನ್‌ ಹೇಳಿಕೆ.

‘ಸ್ಯಾಫ್‌ ಟೂರ್ನಿಯ ಫೈನಲ್‌ನಲ್ಲಿ ಸೋಲು ಅನುಭವಿಸಿದ ಕಾರಣ ಈ ಮಾತನ್ನು ಹೇಳುತ್ತಿಲ್ಲ. ಟೂರ್ನಿಯಲ್ಲಿ ಭಾರತ ಶ್ರೇಷ್ಠ ಆಟವನ್ನೇ ತೋರಿದೆ. ಆದರೆ ಕಳೆದ ಕೆಲ ಸಮಯಗಳಿಂದ ಉತ್ತಮ ಫಲಿತಾಂಶ ಪಡೆಯುವಲ್ಲಿ ವಿಫಲವಾಗಿದೆ. ನಾನು ಆಡುತ್ತಿದ್ದ ಸಂದರ್ಭ ಫಿಫಾ  ರ‍್ಯಾಂಕಿಂಗ್‌ನಲ್ಲಿ ಭಾರತ 100ರ ಒಳಗಿನ ಸ್ಥಾನದಲ್ಲಿತ್ತು (1996 ರಲ್ಲಿ 94ನೇ ಸ್ಥಾನದಲ್ಲಿತ್ತು). ಆದರೆ ಈಗ ರ‍್ಯಾಂಕಿಂಗ್‌ನಲ್ಲಿ (155) ತೀರಾ ಕೆಳಗಿದೆ’ ಎಂದಿದ್ದಾರೆ. ವಿಜಯನ್‌ ಮಾತಿನಲ್ಲಿ ಸತ್ಯ ಅಡಗಿದೆ.

ಹೋದ ವರ್ಷ ನೆಹರು ಕಪ್‌ ಗೆದ್ದದ್ದನ್ನು ಹೊರತುಪಡಿಸಿದರೆ ಭಾರತದಿಂದ ಹೇಳಿಕೊಳ್ಳುವಂತಹ ಸಾಧನೆಯೇನೂ ಮೂಡಿಬಂದಿಲ್ಲ. 2011ರ ಏಷ್ಯನ್‌ ಕಪ್‌ ಬಳಿಕ ಭಾರತ ಹಿನ್ನಡೆ ಅನುಭವಿಸಿದ್ದೇ ಹೆಚ್ಚು. ಪ್ಯಾಲೆಸ್ಟೈನ್‌ ಮತ್ತು ತಜಿಕಿಸ್ತಾನ ಎದುರಿನ ಸೌಹಾರ್ದ ಪಂದ್ಯಗಳಲ್ಲಿ ಭಾರಿ ಅಂತರದ ಸೋಲು ಅನುಭವಿಸಿತ್ತು.

ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್ಎಫ್‌) ಮತ್ತು ಐ–ಲೀಗ್‌ ಕ್ಲಬ್‌ಗಳ ನಡುವಿನ ‘ಜಟಾಪಟಿ’ ಕೂಡಾ ದೇಶದಲ್ಲಿ ಫುಟ್‌ಬಾಲ್‌ ಕ್ರೀಡೆ ಸೊರಗುವಂತೆ ಮಾಡಿದೆ. ಸ್ಯಾಫ್‌ ಟೂರ್ನಿಯಲ್ಲಿ ಪಾಲ್ಗೊಂಡ ತಂಡದಲ್ಲಿದ್ದ ಏಳು ಆಟಗಾರರು ಇದೀಗ ಐ–ಲೀಗ್‌ನಲ್ಲಿ ಯಾವುದೇ ಕ್ಲಬ್‌ ಜೊತೆ ಒಪ್ಪಂದ ಮಾಡಿಕೊಂಡಿಲ್ಲ. ಈ ಆಟಗಾರರಿಗೆ  ವರ್ಷವಿಡೀ ‘ಮ್ಯಾಚ್‌ ಪ್ರಾಕ್ಟೀಸ್‌’ ಲಭಿಸುವುದಿಲ್ಲ. ಕೇವಲ ಅಭ್ಯಾಸ ನಡೆಸುತ್ತಲೇ ದೈಹಿಕ ಸಾಮರ್ಥ್ಯ ಕಾಪಾಡಬೇಕಷ್ಟೆ. ಆದ್ದರಿಂದ ಆಗಿಂದಾಗ್ಗೆ ಅಂತರರಾಷ್ಟ್ರಿಯ ಪಂದ್ಯಗಳನ್ನು ನಡೆಸುವತ್ತ ಎಐಎಫ್‌ಎಫ್‌ ಗಮನಹರಿಸಬೇಕು ಎಂದು ಕೊವರ್‌ಮನ್ಸ್‌ ಹೇಳಿದ್ದಾರೆ.

‘ದಕ್ಷಿಣ ಏಷ್ಯಾದ ಫುಟ್‌ಬಾಲ್‌ನಲ್ಲಿ ಭಾರತದ ಪ್ರಭುತ್ವಕ್ಕೆ ತೆರೆಬಿದ್ದಿದೆ’ ಎಂದು ಆಫ್ಘಾನಿಸ್ತಾನ ತಂಡದ ಕೋಚ್‌ ಯೂಸೆಫ್‌ ಕರ್ಗರ್‌ ನುಡಿದಿದ್ದರು. ಈ ಮಾತು ಅಲ್ಪ ‘ಅತಿಯಾಯಿತು’ ಎನಿಸುವುದು ಸಹಜ. ಆದರೆ ಅವರ ಮಾತನ್ನು ಎಐಎಫ್‌ಎಫ್‌ ಗಂಭೀರವಾಗಿ ಪರಿಗಣಿಸಬೇಕಿದೆ.

ತಂಡದ ಸುಧಾರಣೆಗೆ ಈಗಿನಿಂದಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಆಗದಿದ್ದರೆ ಆಫ್ಘಾನಿಸ್ತಾನ ಮಾತ್ರವಲ್ಲ, ದಕ್ಷಿಣ ಏಷ್ಯಾದ ಇತರ ತಂಡಗಳ ಕೈಯಲ್ಲೂ ಭಾರತಕ್ಕೆ ಸೋಲು ಎದುರಾದರೆ ಅಚ್ಚರಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT