ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಅಧ್ಯಯನಕ್ಕೆ ಒಲಿವ ಯಶಸ್ಸು

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಖಾಸಗಿ ತರಬೇತಿ ಕೇಂದ್ರಗಳಿಗೆ ಸೇರುವುದರಿಂದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಪ್ರವೇಶ ಪರೀಕ್ಷೆಗಳಲ್ಲಿ ಸುಲಭವಾಗಿ ಉತ್ತೀರ್ಣರಾಗಬಹುದು ಎಂಬ ಮನೋಭಾವವನ್ನು ವಿದ್ಯಾರ್ಥಿಗಳು ಬಿಡಬೇಕು~ ಎಂದು ಸೂಪರ್ 30 ಖ್ಯಾತಿಯ ಗಣಿತಶಾಸ್ತ್ರಜ್ಞ ಆನಂದ್ ಕುಮಾರ್ ಕರೆ ನೀಡಿದರು.

ನಗರದ ಶಿಕ್ಷಕರ ಸದನದಲ್ಲಿ ಭಾನುವಾರ `ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಸಮೂಹವು ರಾಜ್ಯ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಐಐಟಿ ಪ್ರವೇಶ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ವಾಸ್ತವವಾಗಿ ಐಐಟಿಯಲ್ಲಿ ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳಲ್ಲಿ ಶೇ 80 ರಷ್ಟು ವಿದ್ಯಾರ್ಥಿಗಳು ಯಾವುದೇ ಖಾಸಗಿ ತರಬೇತಿ ಕೇಂದ್ರಗಳಿಗೆ ಹೋಗದೇ ಸ್ವಂತ ಅಧ್ಯಯನದಿಂದ ಪ್ರವೇಶ ಪರೀಕ್ಷೆ ಎದುರಿಸಿದ್ದಾರೆ. ಇದೇ ವಿದ್ಯಾರ್ಥಿಗಳು ಮುಂದೆ ಐಐಟಿಯ ಸೆಮಿಸ್ಟರ್ ಪರೀಕ್ಷೆಗಳಲ್ಲೂ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ  ಎಂದು ತಿಳಿಸಿದರು.

`ಹೊಸ ಮಾದರಿಯ ಐಐಟಿ ಪ್ರವೇಶ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಐಐಟಿ ಜೆಇಇ ಹಾಗೂ ಇಂಡಿಯನ್ ಸೈನ್ಸ್ ಎಂಜಿನಿಯರಿಂಗ್ ಎಲಿಜಿಬಿಲಿಟಿ ಟೆಸ್ಟ್ (ಐಎಸ್‌ಇಇಟಿ) ಪರೀಕ್ಷೆಗಳು ಒಂದೇ ಮಾದರಿಯಾಗಲಿವೆ. ಮೊದಲ ಹಂತದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ 1,50,000 ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಐಐಟಿ ಹಾಗೂ ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆಯುತ್ತಾರೆ~ ಎಂದು ಅವರು ತಿಳಿಸಿದರು.

`ಯಾವುದೇ ರಾಜ್ಯಗಳ ರಾಜ್ಯ ಶಿಕ್ಷಣ ಮಂಡಳಿಗಳು ನಡೆಸುವ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ನಿದರ್ಶನಗಳಿವೆ. ಐಐಟಿ ಪ್ರವೇಶ ಪರೀಕ್ಷೆಗಳಿಗೆ ಪ್ರತ್ಯೇಕ ರೀತಿಯ ಕಲಿಕೆ ಅಗತ್ಯವಿದ್ದು, ಇದಕ್ಕಾಗಿ ಮಕ್ಕಳಿಗೆ ಚಿಕ್ಕಂದಿನಿಂದಲೇ ತಾಂತ್ರಿಕ ಹಾಗೂ ವಿಜ್ಞಾನ ಶಿಕ್ಷಣದ ಬಗ್ಗೆ ತಿಳಿವು ನೀಡಬೇಕಾಗುತ್ತದೆ~ ಎಂದರು.

ಪೋಷಕರಿಗೇ ಹೆಚ್ಚು ಉತ್ಸಾಹ
ಐಐಟಿ ಪ್ರವೇಶಕ್ಕೆಮಕ್ಕಳಿಗಿಂತಾ ಪೋಷಕರೇ ಹೆಚ್ಚು ಉತ್ಸುಕತೆ ತೋರುತ್ತಾರೆ. ಮುಖ್ಯವಾಗಿ ಮಕ್ಕಳಲ್ಲಿ ತಾಂತ್ರಿಕ ಶಿಕ್ಷಣದ ಬಗ್ಗೆ ಆಸಕ್ತಿ ಬೆಳೆಯಬೇಕೇ ಹೊರತು ಪೋಷಕರ ಒತ್ತಡದಿಂದ ಯಾವುದೇ ಶಿಕ್ಷಣದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ~ ಎಂದು ಆನಂದ್ ಕುಮಾರ್ ಅಭಿಪ್ರಾಯಪಟ್ಟರು.

`ರಾಜ್ಯದಲ್ಲೂ ಶಾಖೆ ತೆರೆಯಲು ಸಿದ್ಧ~
ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಆನಂದ್ ಕುಮಾರ್, `ಸೂಪರ್ 30 ರಾಮಾನುಜನ್ ಸ್ಕೂಲ್ ಆಫ್ ಮ್ಯಾತ್‌ಮೆಟಿಕ್ಸ್ ಸಂಸ್ಥೆಯಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಐಟಿ ಪ್ರವೇಶ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಸಂಸ್ಥೆಗೆ ಆಯ್ಕೆ ಮಾಡಲಾಗುವುದು. ಕರ್ನಾಟಕದಲ್ಲಿ ಸಹಕಾರ, ಪ್ರೋತ್ಸಾಹ ಸಿಕ್ಕರೆ ಇಲ್ಲಿಯೂ ಸಂಸ್ಥೆಯ ಒಂದು ಶಾಖೆ ತೆರೆಯಲು ಸಿದ್ಧವಿದ್ದೇನೆ~ ಎಂದರು.

ಸೂಪರ್ 30 ಸಂಸ್ಥೆಯ ಪ್ರವೇಶ ಪರೀಕ್ಷೆ ಹಾಗೂ ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಬಹುದು:www.sup-er30.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT