ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಉದ್ದಿಮೆ ಕನಸು ನನಸು...

ಅಕ್ಷರ ಗಾತ್ರ

ನಾನೂ ಉದ್ಯಮಿ

ಭಾನುವಾರ ನಸುಕಿನ 1.30 ಗಂಟೆ. ಆ ಹುಡುಗರಿಬ್ಬರೂ ಪಲ್ಲವಿ ಎಂಬ ಯುವತಿಯ ಮನೆಯಿಂದ ತುಸು ದೂರದಲ್ಲಿ ನಿಂತಿದ್ದರು. ಆಕೆ ನೋಡಲು ಹೇಗಿರಬಹುದು? ಸುಂದರಿಯೆ? ವಯಸ್ಸು ಎಷ್ಟಿರಬಹುದು? ಇದಾವುದೂ ಅವರಿಗೆ ತಿಳಿದಿಲ್ಲ. ಆಕೆಯ ಮಧುರ ಧ್ವನಿಯನ್ನಷ್ಟೇ ಕೇಳಿದ್ದರು!

ಅವರಿಬ್ಬರ ನೋಟವೂ ಒಮ್ಮೆ ಯುವತಿಯ ಮನೆಯತ್ತ, ಇನ್ನೊಮ್ಮೆ ರಸ್ತೆ ತಿರುವಿನತ್ತ ಹರಿಯುತ್ತಿತ್ತು.  ಕ್ಷಣಕ್ಷಣಕ್ಕೂ ಕಾತುರ. ಎಲ್ಲವೂ ನಿರೀಕ್ಷೆಯಂತೆ ನಡೆಯುವುದೇ? ಮೊದಲ ಯತ್ನದಲ್ಲಿಯೇ ಸೋಲು ಕಾಣುವಂತಾಗುವುದೇನೋ ಎಂಬ ಆತಂಕ...

ಓದುಗರು ಊಹಿಸಿಕೊಳ್ಳುತ್ತಿರುವಂತೆ ಇದೇನೂ ಹರೆಯದ ಹುಡುಗರಿಬ್ಬರ ಪ್ರೇಮಕಥೆಯ ಕಾತುರದ ಕ್ಷಣಗಳಲ್ಲ! `ಬಡ್ಡಿಂಗ್ ಬಿಜಿನೆಸ್‌ಮನ್~ಗಳಿಬ್ಬರ `ಸ್ವಂತ ಉದ್ದಿಮೆ~ಯ ಮೊದಲ ಅನುಭವದ ನೆನಪು.

ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಶಿಕ್ಷಣ ಪೂರೈಸಿದ್ದ, ಕೈತುಂಬಾ ಸಂಬಳ ತರುತ್ತಿದ್ದ ಕೆಲಸವನ್ನೂ ಬಿಟ್ಟು ಸ್ವಂತ ಉದ್ಯಮ ಕಟ್ಟಲು ಮುಂದಾಗಿದ್ದ ಉದಯೋನ್ಮುಖ ಉದ್ಯಮಿಗಳಿಬ್ಬರ ಕನಸು ನನಸಾದ ಮೊದಲ ದಿನದ ರೋಮಾಂಚಕ ಕ್ಷಣವಿದು.
ಯುವಕರಿಬ್ಬರೂ ಅಹಮದಾಬಾದ್‌ನ ಪ್ರತಿಷ್ಠಿತ ಭಾರತೀಯ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆ(ಐಐಎಂ-ಎ)   ಪ್ರತಿಭೆಗಳು.

ಅದಕ್ಕೂ ಮುನ್ನ 2003-07ರಲ್ಲಿ ಸುರತ್ಕಲ್ `ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ~ಯಲ್ಲಿ ಎಂಜಿನಿಯರಿಂಗ್ ಪೂರೈಸಿದ್ದರು.

ಅಪ್ರಮೇಯ ಮತ್ತು ರಘುನಂದನ್ `ಐಐಎಂ-ಅಹಮದಾಬಾದ್~ನಿಂದ 2008ರಲ್ಲಿ ಹೊರಬೀಳುವ ಮುನ್ನವೇ `ಕ್ಯಾಂಪಸ್ ಸೆಲೆಕ್ಷನ್~ನಲ್ಲಿಯೇ ನೌಕರಿ ಖಚಿತಪಡಿಸಿ ಡಿದ್ದರು. ಉತ್ತಮ ಕಂಪೆನಿಯ ಕೈತುಂಬಾ ಸಂಬಳ ತರುವ ಕೆಲಸ ಸಿಕ್ಕಿತ್ತು.
 
ಆದರೆ, ಇಬ್ಬರಿಗೂ ಒಂದೂವರೆ ವರ್ಷ ಕಳೆಯುವುದರೊಳಗೇ, ಇನ್ನೊಬ್ಬರ ಕೈಕೆಳಗೆ ದುಡಿಯುವ ಕೆಲಸ ಬೇಡವೆನಿಸಿತು. ಚೌಕಟ್ಟಿಗೆ ಒಳಪಟ್ಟ ಕಾರ್ಯಶೈಲಿ ಬೇಸರ ತರಿಸಿತು. ಮನದೊಳಗೆ ಅದಾಗಲೇ `ಸ್ವಂತ ಕಂಪೆನಿ~ಯ ಚಿಂತನೆ ಅರಳಲಾರಂಭಿಸಿತ್ತು. ಪರಿಣಾಮ ಕೆಲಸಕ್ಕೆ ರಾಜೀನಾಮೆ.

 

ಇವರೇ ಅವರು

ಅಪ್ರಮೇಯ ರಾಧಾಕೃಷ್ಣ `ಎನ್‌ಐಟಿಕೆ-ಸುರತ್ಕಲ್~ನಲ್ಲಿ ಎಂಜಿನಿಯರಿಂಗ್, ಪ್ರತಿಷ್ಠಿತ ಶಿಕ್ಷಣ ಸಂಸ್ಥೆ `ಐಐಎಂ-ಅಹಮಬಾದ್~ನಲ್ಲಿ ಮ್ಯಾನೇಜ್‌ಮೆಂಟ್ ವ್ಯಾಸಂಗ ಪೂರೈಸಿದರು. ನಂತರ ಮೂರು ವರ್ಷ `ಜೋನ್ಸ್ ಲ್ಯಾಂಗ್ ಲಾಸೆಲ್ಲೆ ಇಂಡಿಯ~ ಕಂಪೆನಿಯಲ್ಲಿ ಬಿಜಿನೆಸ್ ಡೆವಲಪ್‌ಮೆಂಟ್ ವಿಭಾಗದ ಮುಖ್ಯಸ್ಥ. ಇನ್ಫೋಸಿಸ್ ಕಂಪೆನಿಯಲ್ಲಿಯೂ ಕೆಲಸ ಮಾಡಿದರು.

ಜಿ.ರಘುನಂದನ್, ಸುರತ್ಕಲ್ ಮತ್ತು ಅಹಮದಾಬಾದ್‌ನಲ್ಲಿ ಅಪ್ರಮೇಯನ ಸಹಪಾಠಿ. ಫೀಡ್‌ಬ್ಯಾಕ್ ವೆಂಚರ್ಸ್‌~ ಸಂಸ್ಥೆಯಲ್ಲಿ 3 ವರ್ಷ ಕನ್ಸಲ್ಟೆಂಟ್. `ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್~ ನಲ್ಲಿಯೂ ಕೆಲಕಾಲ ದುಡಿದ ಅನುಭವ. `ಐಐಎಂ-ಎ~ ವ್ಯಾಸಂಗ ವೇಳೆಯೇ `ಸ್ವಂತ ಉದ್ದಿಮೆ~ ಕನಸು ಕಂಡ ಗೆಳೆಯರು, ನೌಕರಿ ಬಿಟ್ಟು `ಟ್ಯಾಕ್ಸಿ ಫಾರ್ ಸ್ಯೂರ್.ಕಾಂ~ ಆರಂಭಿಸಿದರು.

`ವಾಸ್ತವವಾಗಿ `ಸೆರೆಂಡಿಪಿಟಿ~ ಎಂದೇ ನಮ್ಮ ಕಂಪೆನಿ ಹೆಸರು. ಅಂದರೆ `ಏನನ್ನೋ ಹುಡುಕುತ್ತಿದ್ದಾಗ ಇನ್ನೂ ಒಳ್ಳೆಯದೇ ಸಿಕ್ಕಿತು~ ಎಂಬುದು ಇದರ ಅರ್ಥ. ನಮ್ಮಿಬ್ಬರ ಕುಟುಂಬಕ್ಕೂ ಉದ್ಯಮದ ಹಿನ್ನೆಲೆಯೇನೂ ಇಲ್ಲ. ಟ್ಯಾಕ್ಸಿ ಫಾರ್ ಸ್ಯೂರ್‌ನ ಎಂಡಿ ಎನಿಸಿಕೊಂಡಿದ್ದರೂ, 4-5 ಸಂದರ್ಭ ನಮ್ಮ ಕಾರನ್ನೇ ಟ್ಯಾಕ್ಸಿಯಾಗಿಸಿದ್ದು, ನಾವೇ ಚಾಲಕರೂ ಆಗಿ ಗ್ರಾಹಕರಿಗೆ ಸೇವೆ ಸಲ್ಲಿಸಿದ್ದೂ ಇದೆ. ಆ ವಿಚಾರದಲ್ಲಿ ನಮಗೆ ಹೆಮ್ಮೆಯೇ ಹೊರತು ಬೇಸರ ಖಂಡಿತಾ ಇಲ್ಲ~.

`ಮೇರು~ ಏಜೆನ್ಸಿಯಲ್ಲಿ ಹೆಡ್ ಆಫ್ ಆಪರೇಷನ್ ಹುದ್ದೆಯಲ್ಲಿದ್ದ ರೊನಾಲ್ಡ್ ರೊಸಾರಿಯೊ, ಈಗ ನಮ್ಮಲ್ಲಿ `ಸಿಒಒ~ ಆಗಿದ್ದಾರೆ~.
`ಕೆಲವೇ ತಿಂಗಳಲ್ಲಿ ನವದೆಹಲಿಯಲ್ಲಿಯೂ,  2013ರ ಜನವರಿಯಲ್ಲಿ ಮುಂಬೈನಲ್ಲಿಯೂ ಕಚೇರಿ ತೆರೆಯುವ ಆಲೋಚನೆ ಇದೆ.

ನವೆಂಬರ್‌ಗೆ `ಟ್ಯಾಕ್ಸಿ ಫಾರ್ ಸ್ಯೂರ್~ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲಿದ್ದೇವೆ. ಆಗ ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ಸಿಂಗಲ್ ಕ್ಲಿಕ್ ಮೂಲಕವೇ ಟ್ಯಾಕ್ಸಿಗೆ ಬೇಡಿಕೆ ಸಲ್ಲಿಸಬಹುದು~  ಎನ್ನುತ್ತಾರೆ ರಘುನಂದನ್ ಮತ್ತು ಅಪ್ರಮೇಯ.

ಮೊದಲಿಗೆ, ಇಬ್ಬರ ಮನೆಯಲ್ಲಿಯೂ ವಿರೋಧ ವ್ಯಕ್ತವಾಯಿತು. ಕೈತುಂಬಾ ಸಂಬಳ ತರುವ, ಜೀವನ ಭದ್ರತೆ ಒದಿಗಿಸುವ ಕೆಲಸ ಬಿಟ್ಟಿದ್ದೇ ತಪ್ಪು. ಸ್ವಂತ ಉದ್ದಿಮೆಗೆ ಆರಿಸಿಕೊಂಡ `ಟ್ಯಾಕ್ಸಿ~ ಕ್ಷೇತ್ರವಂತೂ ಒಪ್ಪುವಂತಹುದಲ್ಲ ಎಂಬ ಅಸಮಾಧಾನ, ಬೇಸರ ಪೋಷಕರಲ್ಲಿ.

`ಲಕ್ಷಗಟ್ಟಲೆ ಖರ್ಚು ಮಾಡಿ 17 ವರ್ಷ ಓದಿಸಿದ್ದು, ಪ್ರತಿಷ್ಠಿತ ಎನ್‌ಐಟಿಕೆ ಮತ್ತು ಐಐಎಂ-ಎ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಗಿಟ್ಟಿಸಿ ವ್ಯಾಸಂಗ ಮಾಡಿದ್ದು ಇದಕ್ಕೇನಾ?~ ಎಂಬ ಕಟುವಾದ ಪ್ರಶ್ನೆ.

`ಹಗಲು-ರಾತ್ರಿ ಕಷ್ಟಪಟ್ಟು ಓದಿ ಗಳಿಸಿದ ಡಬಲ್ ಡಿಗ್ರಿ, ಬುದ್ಧಿಮತ್ತೆಯನ್ನು ಯಾರದ್ದೋ ಏಜೆನ್ಸಿಯ ಟ್ಯಾಕ್ಸಿಗಳಿಗೆ ಪ್ರಯಾಣಿಕರನ್ನು ಒದಗಿಸುವುದಕ್ಕೆ ಮೀಸಲಿಡುವುದೇ?~ ಎಂಬ ವ್ಯಂಗ್ಯದ ಬಾಣ ಪರಿಚಿತರಿಂದ.

ಹಿಡಿದ ಹಠ ಬಿಡದ ಅಪ್ರಮೇಯ ಮತ್ತು ರಘುನಂದನ್, 2011ರ ಜೂನ್‌ನಲ್ಲಿ ಬೆಂಗಳೂರಿನ ಜೆ.ಪಿ.ನಗರ ಬಡಾವಣೆಯಲ್ಲಿ 10-15 ಅಡಿ ಉದ್ದಗಲದ ಪುಟ್ಟ ಕೋಣೆಯಲ್ಲಿ(ಬಾಡಿಗೆ ರೂ. 3000)  ಸ್ವಂತ ಕಂಪೆನಿ ಆರಂಭಿಸಿಯೇ ಬಿಟ್ಟರು. ಬಂಡವಾಳವಾಗಿ ಮೊದಲಿಗೆ ತೊಡಗಿಸಿದ್ದು ತಲಾ ರೂ. 4 ಲಕ್ಷ. ಪುಟ್ಟ ಕಚೇರಿಯ ಒಳಾಂಗಣ ವಿನ್ಯಾಸ, ಟೆಲಿಫೋನ್-ಫ್ಯಾಕ್ಸ್, ಕಂಪ್ಯೂ    ಟರ್-ಇಂಟರ್ನೆಟ್ ಸಂಪರ್ಕ...

ಇವಿಷ್ಟು ಕಚೇರಿ ಆರಂಭದಲ್ಲಿದ್ದ ಪರಿಕರ. ಕಚೇರಿ ಸಿಬ್ಬಂದಿ? ಮೊದಲಿಗೆ ನೇಮಕವಾಗಿದ್ದು ಇಬ್ಬರು!

ಸಿಬ್ಬಂದಿ ಹೆಸರು: ಅಪ್ರಮೇಯ ಮತ್ತು ರಘುನಂದನ್. ಹುದ್ದೆ; ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರು. ಸಂಬಳ: ಲಾಭ ಬಂದ ನಂತರ, ಅದರ ಪ್ರಮಾಣ ನೋಡಿಕೊಂಡು ನಿರ್ಧಾರ!

ಗೆಳೆಯರಿಬ್ಬರೂ ಮೊದಲಿಗೆ ಮಾಡಿದ್ದೇ `ಟ್ಯಾಕ್ಸಿ ಫಾರ್ ಸ್ಯೂರ್~ ವೆಬ್ ಪೋರ್ಟಲ್ ವಿನ್ಯಾಸ.

ನಂತರ ಬೆಂಗಳೂರಿನ ಟ್ರಾವೆಲ್ ಏಜೆನ್ಸಿಗಳನ್ನು ಅರಸುತ್ತಾ ತಮ್ಮ ಮತ್ತು ಕಂಪೆನಿ ಪರಿಚಯ ಮಾಡಿಕೊಳ್ಳಲಾರಂಭಿಸಿದರು. ಇವರ ಕನಸು-ಉದ್ದೇಶ ಕಂಡು ಕೆಲವರು ನಕ್ಕರು, ಕೆಲವರು ಹುಬ್ಬೇರಿಸಿದರು. ಕಡಿಮೆ ಪ್ರಯಾಣಿಕರ ಸಂಪರ್ಕವಷ್ಟೇ ಇದ್ದ ಕೆಲವೇ ಏಜೆನ್ಸಿಯವರು, `ಇರಲಿ ಇದೂ ಒಂದು ಯತ್ನ~ ಎಂದು ತಮ್ಮ ಕಚೇರಿ ದೂರವಾಣಿ, ಟ್ಯಾಕ್ಸಿ ಮತ್ತು ಚಾಲಕ ವಿವರ ನೀಡಿದರು.

`ಮೊದಲು, ಹೆಸರುವಾಸಿಯಾಗಿದ್ದ ಟ್ರಾವೆಲ್ ಏಜೆನ್ಸಿಗಳನ್ನೇ ಸಂಪರ್ಕಿಸಿದೆವು. ಆದರೆ ಪ್ರತಿಕ್ರಿಯೆ ಆಶಾದಾಯಕವಾಗಿರಲಿಲ್ಲ. ನಂತರ 4-5 ಟ್ಯಾಕ್ಸಿ ಇಟ್ಟುಕೊಂಡಿದ್ದ, ಪ್ರಯಾಣಿಕರಿಂದ ಹೆಚ್ಚು ಬೇಡಿಕೆ ಇರದಿದ್ದ ಸಣ್ಣ ಟ್ರಾವೆಲ್ ಏಜೆನ್ಸಿಗಳನ್ನೇ ನಮ್ಮ ಗುರಿಯಾಗಿರಿಸಿಕೊಂಡೆವು.
 
ಅವರಲ್ಲಿ ಕೆಲವರಿಗೆ ನಮ್ಮಲ್ಲಿ ವಿಶ್ವಾಸ ಮೂಡಿತು. ನಮ್ಮ ಕರೆ ಬಂದ ತಕ್ಷಣ, ಸೂಚಿಸಿದ ಸ್ಥಳಕ್ಕೆ ಟ್ಯಾಕ್ಸಿ ಕಳುಹಿಸಿಕೊಡಲು ಒಪ್ಪಿದರು. ಸಮವಸ್ತ್ರಧಾರಿ ಉತ್ತಮ ಚಾಲಕರನ್ನೇ ಒದಗಿಸುವುದಕ್ಕೂ ಅನುಮೋದಿಸಿದರು. ಹೀಗೆ ನಮ್ಮ `ಟ್ಯಾಕ್ಸಿ ಫಾರ್ ಸ್ಯೂರ್~ ಚಟುವಟಿಕೆ ಶುರುವಾಯಿತು~ ಎಂದು ಆರಂಭದ ದಿನಗಳನ್ನು ನೆನಪು ಮಾಡಿಕೊಂಡರು ಅಪ್ರಮೇಯ.

`ಟ್ಯಾಕ್ಸಿಗಳೇನೋ ಬರಲು ಸಜ್ಜಾಗಿದ್ದವು. ಆದರೆ ಪ್ರಯಾಣಿಕರು? ಅವರನ್ನು ಆಕರ್ಷಿಸುವುದಾದರೂ ಹೇಗೆ? ಇದೇ ದೊಡ್ಡ ಸವಾಲು ಎನಿಸಿತು. ಯೋಜಿತ ರೀತಿಯಲ್ಲಿಯೇ ಬಂಧು-ಮಿತ್ರರು, ಪರಿಚಿತರು, ಮಾಜಿ ಸಹೋದ್ಯೋಗಿಗಳು, ಹಳೆ ಸಹಪಾಠಿಗಳು.. ಒಬ್ಬರನ್ನೂ ಬಿಡದೆ ನಮ್ಮ ಕಂಪೆನಿ ಬಗ್ಗೆ ಪ್ರಚುರ ಪಡಿಸುತ್ತಾ ಹೋದೆವು.
ಬೆಂಗಳೂರಿಗೆ ಬಂದಾಗ ಟ್ಯಾಕ್ಸಿ ಅಗತ್ಯವೆನಿಸಿದರೆ ನಮ್ಮನ್ನೇ ಸಂಪರ್ಕಿಸುವಂತೆ ಮನವಿ ಮಾಡಿಕೊಂಡೆವು. ವಿವಿಧ ಮಾಧ್ಯಮಗಳ ಮೂಲಕವೂ ಸಾಧ್ಯವಿದ್ದ ಮಟ್ಟಿಗೆ ಪ್ರಚಾರ ಕೈಗೊಂಡೆವು. ಅದೊಂದು ಶನಿವಾರ ಮೊದಲ ಕರೆ. ಕಡೆಗೂ ಮೊದಲ ಗ್ರಾಹಕರಾಗಿ ಸಿಕ್ಕವರು ಪಲ್ಲವಿ~ ಎಂದು ಮುಖದಲ್ಲಿ ಉತ್ಸುಕತೆ ತುಂಬಿಕೊಂಡರು ರಘುನಂದನ್.

`ಅಂತರ್ಜಾಲದಲ್ಲಿ ನಮ್ಮ `ಟ್ಯಾಕ್ಸಿ ಫಾರ್ ಸ್ಯೂರ್~ ವಿಚಾರ ತಿಳಿದು ಕರೆ ಮಾಡಿದ ಆಕೆ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರುದಿನ  ಬೇಗನೇ ತೆರಳಬೇಕಿದೆ. ನಸುಕಿನ 2 ಗಂಟೆಗೆಲ್ಲಾ ಮನೆಗೆ ಟ್ಯಾಕ್ಸಿ ಕಳುಹಿಸಲು ಸಾಧ್ಯವೇ?~ ಎಂದರು. ಅದುವೇ ನಮ್ಮ ಕಚೇರಿಗೆ ಗ್ರಾಹಕರಿಂದ ಬಂದ ಮೊದಲ ಕರೆ. ರೋಮಾಂಚನದ ಕ್ಷಣ. ಖುಷಿ  ಹಂಚಿಕೊಳ್ಳೋಣ ಎಂದರೆ ಕಚೇರಿಯಲ್ಲಿದ್ದವರು ನಾವಿಬ್ಬರೇ.

ಮೊದಲ ಅಸೈನ್‌ಮೆಂಟ್‌ಗಾಗಿ ಟ್ರಾವೆಲ್ ಏಜೆನ್ಸಿಗೆ ಕರೆ ಮಾಡಿ ಪಲ್ಲವಿ ಅವರ ಮನೆ ವಿಳಾಸ, ತೆರಳಬೇಕಾದ ಸಮಯ ವಿವರಿಸಿದೆವು. ನಮ್ಮಿಬ್ಬರಿಗೂ ತಳಮಳ, ಒಳಗೊಳಗೇ ಭಯ. ಕಂಪೆನಿ ಹೆಸರನ್ನೇನೋ `ಟ್ಯಾಕ್ಸಿ ಫಾರ್ ಸ್ಯೂರ್~ ಎಂದು ಇಟ್ಟುಕೊಂಡಿದ್ದೇವೆ. ಒಂದೊಮ್ಮೆ ಟ್ಯಾಕ್ಸಿ ಸರಿಯಾದ ಸಮಯಕ್ಕೆ ಪಲ್ಲವಿ ಅವರ ಮನೆ ಬಳಿ ಹೋಗದಿದ್ದರೆ ಅಥವಾ ಏಜೆನ್ಸಿಯಾತ ಟ್ಯಾಕ್ಸಿಯನ್ನೇ ಕಳುಹಿಸದಿದ್ದರೆ? ಪ್ರಶ್ನೆಗಳು ಕಾಡುತ್ತಲೇ ಇದ್ದವು~ ಎಂದು ಕ್ಷಣ ಮಾತು ನಿಲ್ಲಿಸಿದರು ರಘುನಂದನ್.

`ಚಾನ್ಸ್ ತೆಗೆದುಕೊಳ್ಳುವುದೇ ಬೇಡ ಎಂದುಕೊಂಡು ನಮ್ಮ ಕಾರಿನಲ್ಲಿ ಪಲ್ಲವಿ ಅವರ ಮನೆ ಬಳಿ ತಡರಾತ್ರಿ 1.30 ಗಂಟೆಗೆಲ್ಲ ತೆರಳಿದೆವು. ಒಂದೊಮ್ಮೆ ಟ್ಯಾಕ್ಸಿ ಬಾರದೇ ಇದ್ದರೆ ಮೊದಲ ಯತ್ನದಲ್ಲಿ ಸೋಲೊಪ್ಪಿಕೊಳ್ಳಬಾರದು, ನಮ್ಮ ಕಾರನ್ನೇ ದಿನದ ಮಟ್ಟಿಗೆ ಟ್ಯಾಕ್ಸಿಯಾಗಿಸಿ ಮೊದಲ ಗ್ರಾಹಕಿಗೆ ಸೇವೆ ಒದಗಿಸುವುದು ಎಂದೂ ನಿರ್ಧರಿಸಿದೆವು. ಕಡೆಗೂ ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿತು.
 
ಗಂಟೆ 2 ಅಗುವುದಕ್ಕೆ ತುಸುವೇ ಮುನ್ನ ಟ್ಯಾಕ್ಸಿಯೊಂದು ತಿರುವಿನಲ್ಲಿ ಕಾಣಿಸಿಕೊಂಡಿತು. ಪಲ್ಲವಿ ಅವರ ಮನೆ ಬಳಿ ಚಾಲಕ ಕಾರು ನಿಲ್ಲಿಸಿದಾಗಲೇ ನಮಗೆ ನೆಮ್ಮದಿ ಎನಿಸಿತು. ಆದರೂ ಪ್ರಥಮ ಗ್ರಾಹಕಿಗೆ ನಮ್ಮ ಸಂಸ್ಥೆಯ ಮೊದಲ ಸೇವೆ ಸಂದಾಯವಾಗುವ ಕ್ಷಣದವರೆಗೂ(ಆಕೆ ಟ್ಯಾಕ್ಸಿ ಏರುವವರೆಗೂ) ಕಾದಿದ್ದು ನಂತರವೇ ಮನೆಗೆ ಮರಳಿದೆವು~ ಎಂದು `ಸ್ವಂತ ಉದ್ದಿಮೆ~ ಆರಂಭದ ಮೊದಲ ದಿನದ ರೋಮಾಂಚಕ ಅನುಭವವನ್ನು ಎಳೆಎಳೆಯಾಗಿ ತೆರೆದಿಟ್ಟರು ಅಪ್ರಮೇಯ.

 ಮೊದಲ ತಿಂಗಳು 15 ಗ್ರಾಹಕರಷ್ಟೇ ನಮ್ಮ ಸೇವೆ ಸ್ವೀಕರಿಸಿದರು. ನಿದಾನವಾಗಿ ಬೇಡಿಕೆ ಹೆಚ್ಚುತ್ತಾ ಹೋಯಿತು. ಮೊದಲ ಆರು ತಿಂಗಳು ನಾವಿಬ್ಬರೇ ಕಚೇರಿ ನಿರ್ವಹಿಸಿದೆವು. ನಂತರ ಹಂತಹಂತವಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾರಂಭಿಸಿದೆವು. ಈಗ ಕಚೇರಿ ವಿಶಾಲ ಜಾಗಕ್ಕೆ ಸ್ಥಳಾಂತರಗೊಂಡಿದೆ.

ಸಿಬ್ಬಂದಿ ಸಂಖ್ಯೆ 35ಕ್ಕೆ ಹೆಚ್ಚಿದೆ. ಕಾಯಂ ಗ್ರಾಹಕರ ಸಂಖ್ಯೆಯೂ ಹೆಚ್ಚಿದೆ. ಸೆಲ್‌ಕ್ಯಾಬ್, ಫಾಸ್ಟ್‌ಟ್ರ್ಯಾಕ್, ಮೆಗಾಕ್ಯಾಬ್ ಮತ್ತು ಕೆಎಸ್‌ಟಿಡಿಸಿ ಮೊದಲಾದ 50 ಏಜೆನ್ಸಿಗಳ 1000 ಟ್ಯಾಕ್ಸಿಗಳ  ಸೌಲಭ್ಯವಿದೆ. 

ಹೆಚ್ಚಿನ ಗ್ರಾಹಕರು ಗೂಗಲ್ ಮೂಲಕವೇ ನಮ್ಮ ಸಂಪರ್ಕಕ್ಕೆ ಬರುತ್ತಿದ್ದಾರೆ. ಕಡಿಮೆ ಬಾಡಿಗೆ ನಿಗದಿಪಡಿಸಿರುವುದು, ಸಮಯ ಪಾಲನೆ, ಉತ್ತಮ ಚಾಲಕರನ್ನು ನಿಯೋಜಿಸುತ್ತಿರುವುದೇ ನಮ್ಮ  ಕಂಪೆನಿಯ ಆಕರ್ಷಣೆ. ಸದ್ಯ ಕಂಪೆನಿ ಉತ್ತಮ ಹಳಿಯಲ್ಲಿ ಸರಾಗವಾಗಿ ಚಲಿಸುತ್ತಿದೆ. ಈಗ ರಘುವಿಗೆ ಮದುವೆಯೂ ಆಗಿದೆ~ ಎಂದು ಅಪ್ರಮೇಯ ಮಾತು ಮುಗಿಸಿದಾಗ, ಗೆಳೆಯರಿಬ್ಬರ ಮುಖದಲ್ಲೂ ಹರ್ಷದ ಛಾಯೆ.

ಕನಸು ಮೂಡಿದ ಗಳಿಗೆ...

ಅಪ್ರಮೇಯ ಮತ್ತು ರಘುನಂದನ್ ಕಚೇರಿ ಕೆಲಸದ ಮೇಲೆ ಮುಂಬೈ, ನವದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳಿಗೆ ತೆರಳಬೇಕಿರುತ್ತಿತ್ತು. ಅಲ್ಲಿ ಕಚೇರಿ ಕೆಲಸ, ಸ್ವಂತದ ಓಡಾಟಗಳಿಗೆ ವಾಹನದ ಅಗತ್ಯ ಬಿದ್ದಾಗ ಪರದಾಡುವಂತಾಗುತ್ತಿದ್ದಿತು. ಷಾಪಿಂಗ್‌ಗೆ ತೆರಳುವಾಗಲೋ, ಮುಗಿಸಿ ವಾಪಸಾಗುವಾಗಲೋ ಟ್ಯಾಕ್ಸಿಗಾಗಿ ಹುಡುಕಿದರೆ ತಕ್ಷಣಕ್ಕೆ ಸಿಗುತ್ತಿರಲಿಲ್ಲ.

ರಸ್ತೆಯಲ್ಲಿ ಸಾಗುತ್ತಿದ್ದ ಟ್ಯಾಕ್ಸಿಗಳಿಗೆ ಕೈ ಅಡ್ಡ ಹಿಡಿದರೂ ಬಹಳಷ್ಟು ಬಾರಿ ಅವು ಅದಾಗಲೇ ಬುಕ್ ಆಗಿರುತ್ತಿದ್ದುದರಿಂದ ನಿಲ್ಲುತ್ತಿರಲಿಲ್ಲ. ಫರ್ಲಾಂಗ್ ದೂರ ಟ್ಯಾಕ್ಸಿ ಸ್ಟ್ಯಾಂಡ್‌ಗೆ ನಡೆದುಕೊಂಡು ಹೋಗಿ ಯತ್ನಿಸಿದರೂ; ಒಂದೋ, ತಾವು ಕರೆದಲ್ಲಿಗೆ ಟ್ಯಾಕ್ಸಿ ಚಾಲಕರು ಬರಲು ಒಪ್ಪುತ್ತಿರಲಿಲ್ಲ, ಇಲ್ಲವೇ ದುಬಾರಿ ಬಾಡಿಗೆಕೇಳುತ್ತಿದ್ದರು.

ಕೆಲವೊಮ್ಮೆ ಪ್ರಯಾಣದ ಆರಂಭದಲ್ಲಿಯೇ ವಿಘ್ನ ಎದುರಾಗುತ್ತಿತ್ತು. ನಸುಕಿನಲ್ಲಿಯೇ ಎದ್ದು ವಿಮಾನ ನಿಲ್ದಾಣಕ್ಕೆ ತೆರಳಬೇಕಿರುತ್ತಿತ್ತು. ಗಡಿಬಿಡಿಯಲ್ಲಿ ಪ್ರಯಾಣಕ್ಕೆ ಸಿದ್ಧರಾಗಿ ಕಾಯುತ್ತಿದ್ದರೆ ಟ್ಯಾಕ್ಸಿ ಕೈಕೊಟ್ಟ ದಿನಗಳೂ ಇವೆ. ಹಿಂದಿನ ದಿನ ಅಥವಾ ಅದಕ್ಕೂ ಮುನ್ನವೇ ಟ್ರಾವೆಲ್ ಏಜೆನ್ಸಿಗೆ ಕರೆ ಮಾಡಿ ಟ್ಯಾಕ್ಸಿ ಬುಕ್ ಮಾಡಿದ್ದರೂ ಟ್ಯಾಕ್ಸಿ ಬಾರದೆ ಟೆನ್ಷನ್ ಹೆಚ್ಚಿಸಿದ ಉದಾಹರಣೆಗಳೂ ಇವೆ.

ನಿಗದಿತ ಸಮಯಕ್ಕೆ ಟ್ಯಾಕ್ಸಿ ಬಾರದೇ ಹೋದಾಗ, ಕಡೆಗಳಿಗೆಯಲ್ಲಿ ಮನೆಯಿಂದ ಒಂದಷ್ಟು ದೂರ ನಡೆದು ಆಟೊ ಹತ್ತಿ ವಿಮಾನ ನಿಲ್ದಾಣಕ್ಕೆ ತೆರಳಿದ್ದೂ ಇದೆ. ಟ್ಯಾಕ್ಸಿ ಹುಡುಕಾಟದಲ್ಲಿ ಇಷ್ಟೆಲ್ಲ ಕಷ್ಟ ಅನುಭವಿಸಿದ್ದ ಮಿತ್ರರಿಬ್ಬರೂ, ಸೂಕ್ತ ಪರಿಹಾರ ಮಾರ್ಗ ಕಂಡುಕೊಳ್ಳಲೆತ್ನಿಸಿದರು.

ಅವರ ಆ ಆಲೋಚನೆಗೆ ಸುರತ್ಕಲ್‌ನಲ್ಲಿ ಕಲಿತ ತಾಂತ್ರಿಕ ನೈಪುಣ್ಯ, ಅಹಮದಾಬಾದ್‌ನಲ್ಲಿ ಅರಿತ ವ್ಯಾವಹಾರಿಕ ಜ್ಞಾನ ನೆರವಿಗೆ ಬಂದವು. ಆಲೋಚನಾ ಮಗ್ನರಾಗಿದ್ದಾಗ ಒಂದು ದಿನ `ಟ್ಯಾಕ್ಸಿ ಫಾರ್ ಸ್ಯೂರ್.ಕಾಂ~ನ ಬೀಜ ಮೊಳೆಯಿತು.

ಆರಂಭದ ದಿನಗಳು...

`ಟ್ಯಾಕ್ಸಿ ಫಾರ್ ಸ್ಯೂರ್.ಕಾಂ~ ಆರಂಭಗೊಂಡಿದ್ದು 2011ರ ಜೂನ್‌ನಲ್ಲಿ ಬೆಂಗಳೂರಿನಲ್ಲಿ. ಇದಕ್ಕೂ ಮುನ್ನ ಅಪ್ರಮೇಯ ಮತ್ತು ರಘುನಂದನ್ ಇಬ್ಬರೂ ಭಿನ್ನ ಕ್ಷೇತ್ರಗಳಲ್ಲಿ ಅಲ್ಪ ಕೆಲಸ ಮಾಡಿ ಅನುಭವ ಪಡೆದಿದ್ದರು.

ಹಾಗಿದ್ದೂ `ಸ್ವಂತದ ಉದ್ದಿಮೆ~ ಕನಸು ನನಸಾಗಿಸಿಕೊಳ್ಳಬೇಕೆಂಬ ಒತ್ತಡ ಮನದೊಳಗೇ ಹೆಚ್ಚುತ್ತಾ ಹೋದಾಗ ಗೆಳೆಯರಿಬ್ಬರೂ ಕೈತುಂಬಾ ಸಂಬಳ ತರುತ್ತಿದ್ದ ಕೆಲಸಕ್ಕೆ ರಾಜೀನಾಮೆ ನೀಡಿದರು. ಪೋಷಕರಿಂದ ವಿರೋಧ ವ್ಯಕ್ತವಾದಾಗ `ಸ್ವಂತ ಉದ್ಯಮ~ದ ಕನಸಿನ ಬಗ್ಗೆ ವಿವರಿಸಿ ಮನವರಿಕೆ ಮಾಡಿಕೊಟ್ಟರು. ಮನೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿತು. ಜತೆಗೆ, ಅವಿವಾಹಿತರಾಗಿದ್ದುದರಿಂದ `ಸಂಸಾರ ಭಾರ~ ಇಲ್ಲದ್ದೂ ಈ ಪ್ರಯೋಗಕ್ಕೆ ಕೈಯಿಡಲು ಧೈರ್ಯ ತಂದುಕೊಟ್ಟಿತು.

ಕಾರ್ಯವೈಖರಿ-ಉದ್ದೇಶ

ಸದ್ಯ ಬೆಂಗಳೂರಿನಲ್ಲಷ್ಟೇ `ಟ್ಯಾಕ್ಸಿ ಫಾರ್ ಸ್ಯೂರ್.ಕಾಂ~ ಚಟುವಟಿಕೆ ನಡೆಸುತ್ತಿದೆ. ಬೆಂಗಳೂರಿಗೆ ಆಗಮಿಸಿದ ಪ್ರವಾಸಿಗರು, ನಗರದಲ್ಲಿರುವವರು ನಗರ ಸುತ್ತಾಟ, ಏರ್‌ಪೋರ್ಟ್, ರೈಲು ನಿಲ್ದಾಣ, ಷಾಪಿಂಗ್, ಪ್ರೇಕ್ಷಣೀಯ ಸ್ಥಳ ವೀಕ್ಷಣೆಗೆ ಟ್ಯಾಕ್ಸಿ ಅಗತ್ಯ ಎನಿಸಿದಾಗ(http://www.taxiforsure.com) ವೆಬ್‌ಸೈಟ್ ಅಥವಾ ಕಚೇರಿ ದೂರವಾಣಿ (808-60601010) ಸಂಪರ್ಕಿಸಿ ತಾವು ಇರುವ ಸ್ಥಳ, ಎಲ್ಲಿಗೆ ತೆರಳಬೇಕಿದೆ, ಎಷ್ಟು ಸಮಯದವರೆಗೆ ಟ್ಯಾಕ್ಸಿ ಅಗತ್ಯವಿದೆ ಎಂಬ ವಿವರ ನೀಡಿದರಾಯಿತು. ಈ ಕೋರಿಕೆ `ಟ್ಯಾಕ್ಸಿ ಫಾರ್ ಸ್ಯೂರ್.ಕಾಂ~ನಲ್ಲಿ ದಾಖಲಾಗುತ್ತಿದ್ದಂತೆ ಕಚೇರಿ ಸಿಬ್ಬಂದಿ ಕಾರ್ಯಪ್ರವೃತ್ತರಾಗುತ್ತಾರೆ.
 
ತಮ್ಮ ಸಂಸ್ಥೆಯೊಂದಿಗೆ ಅದಾಗಲೇ ಒಪ್ಪಂದ ಮಾಡಿಕೊಂಡಿರುವ ಟ್ರಾವೆಲ್ ಏಜೆನ್ಸಿಗಳಲ್ಲಿ ಯಾವ ಏಜೆನ್ಸಿಯ ಯಾವ ಟ್ಯಾಕ್ಸಿ, ಗ್ರಾಹಕರು ಗೊತ್ತುಪಡಿಸಿದ ಸ್ಥಳಕ್ಕೆ ಸಮೀಪದಲ್ಲಿದೆ ಎಂಬುದನ್ನು `ಜಿಪಿಎಸ್~(ಗ್ಲೋಬಲ್ ಪೊಸಿಷನಿಂಗ್ ಸಿಸ್ಟೆಂ) ಮೂಲಕ ತಿಳಿಯುತ್ತಾರೆ.

ನಂತರ ಆ ಟ್ಯಾಕ್ಸಿ ಚಾಲಕರಿಗೆ ಮತ್ತು ಅದರ ಟ್ರಾವೆಲ್ ಏಜೆನ್ಸಿಗೆ `ಗ್ರಾಹಕರು ಇರುವ  ಸ್ಥಳ, ತೆರಳಬೇಕಿರುವ ಜಾಗ-ಬಾಡಿಗೆ ದರ ಮತ್ತು ಗ್ರಾಹಕರನ್ನು ಗುರುತಿಸಲು ಅವರ ಚಹರೆ ಅಥವಾ ಮೊಬೈಲ್ ಸಂಖ್ಯೆ~ ರವಾನಿಸುತ್ತಾರೆ. ನಂತರದ ಕೆಲವೇ ನಿಮಿಷಗಳಲ್ಲಿ ಟ್ಯಾಕ್ಸಿಯು ಗ್ರಾಹಕರು ಇರುವಲ್ಲಿಗೆ ಧಾವಿಸುತ್ತದೆ. ಇದು ಟ್ಯಾಕ್ಸಿ ಫಾರ್ ಸ್ಯೂರ್.ಕಾಂ  ಕಾರ್ಯವೈಖರಿ.

ಪ್ರಯಾಣಕ್ಕೆ ತುರ್ತಾಗಿ ವಾಹನದ ಅಗತ್ಯ ಇರುವ ಗ್ರಾಹಕರಿಗೆ ಅವರು ಇರುವಲ್ಲಿಗೇ, ತ್ವರಿತವಾಗಿ ಹಾಗೂ ಖಚಿತವಾಗಿ ಟ್ಯಾಕ್ಸಿ ತೆರಳುವಂತೆ ಮಾಡುವುದು, ಪ್ರಯಾಣಿಕರ ಸುರಕ್ಷಿತತೆ ಕುರಿತೂ ಕಾಳಜಿ ವಹಿಸುವುದು...

ಈ ಕ್ರಮದಿಂದಾಗಿ ಟ್ರಾವೆಲ್ ಏಜೆನ್ಸಿಗಳೂ ಸದಾ ಸಂಚಾರದಲ್ಲಿರುವ ತಮ್ಮ ಟ್ಯಾಕ್ಸಿಗಳು ಗ್ರಾಹಕರನ್ನು ಗುರಿ ಮುಟ್ಟಿಸಿದ ನಂತರ ಖಾಲಿಯಾಗಿ ಮರಳದಂತೆಯೂ, ಸಮೀಪದಲ್ಲಿಯೇ ಮತ್ತೊಬ್ಬ ಗ್ರಾಹಕರನ್ನು ಸುಲಭವಾಗಿ ಪಡೆದುಕೊಳ್ಳುವಂತೆ ಮಾಡಿದೆ. ಅಲ್ಲದೆ, ಟ್ರಾವೆಲ್ ಏಜೆನ್ಸಿಗಳೂ ಸುಲಭದಲ್ಲಿ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳುವಂತೆ ಮಾಡುವುದು `ಟ್ಯಾಕ್ಸಿ ಫಾರ್ ಸ್ಯೂರ್.ಕಾಂ~ನ ಉದ್ದೇಶವಾಗಿದೆ.

ಅದು ಸರಿ, ಟ್ಯಾಕ್ಸಿ ಫಾರ್ ಸ್ಯೂರ್ ಶ್ರಮಕ್ಕೆ ಆದಾಯ ಗಳಿಕೆ ಹೇಗೆ? ಟ್ಯಾಕ್ಸಿಗೆ ಕೋರಿಕೆ ಸಲ್ಲಿಸಿ ಸೇವೆ ಪಡೆದ ಗ್ರಾಹಕರು ನೀಡುವ ಬಾಡಿಗೆ ಟ್ರಾವೆಲ್ ಏಜೆನ್ಸಿಗೆ ಸಂದಾಯವಾಗುತ್ತದೆ. ಅದರಲ್ಲಿಯೇ ಶೇಖಡಾವಾರು ಕಮಿಷನ್ ಟ್ಯಾಕ್ಸಿ ಫಾರ್ ಸ್ಯೂರ್‌ಗೆ ಬರುತ್ತದೆ ಎನ್ನುತ್ತಾರೆ ರಘುನಂದನ್. 

ಪ್ರಯಾಣಿಕ ಪ್ರತಿಕ್ರಿಯೆ

`ಟ್ಯಾಕ್ಸಿ ಫಾರ್ ಸ್ಯೂರ್ ಮೂಲಕ ಟ್ಯಾಕ್ಸಿ ಕಾದಿರಿಸುವುದು ಸಲೀಸು. ಟ್ಯಾಕ್ಸಿ ಸಹ ಸಮಯಕ್ಕೆ ಸರಿಯಾಗಿ ಹಾಜರಾಗುತ್ತೆ. ಚಾಲಕರಿಗೂ ವಾಹನ ದಟ್ಟಣೆ ಇಲ್ಲದ ಮಾರ್ಗಗಳ ಪರಿಚಯ ಚೆನ್ನಾಗಿದೆ~ ಎನ್ನುವ ಆಕಾಶ್ ಸೇನಾಪತಿ, ಇತ್ತೀಚಿನ ದಿನಗಳಲ್ಲಿ ಟ್ಯಾಕ್ಸಿ ಅವಶ್ಯಕತೆ ಬಿದ್ದಾಗಲೆಲ್ಲಾ `ಟ್ಯಾಕ್ಸಿ ಫಾರ್ ಸ್ಯೂರ್.ಕಾಂ~ ಮೊರೆ ಹೋಗುವೆ ಎನ್ನುತ್ತಾರೆ.
`ದಿಢೀರ್ ಎಂದು ಹುಬ್ಬಳ್ಳಿಗೆ  ತೆರಳಬೇಕಿತ್ತು. ಕಡೆ ಗಳಿಗೆಯಲ್ಲಿ ಟ್ಯಾಕ್ಸಿಗಾಗಿ ಕರೆ ಮಾಡಿದರೂ ಟ್ಯಾಕ್ಸಿ ಫಾರ್ ಸ್ಯೂರ್ ಸಂಸ್ಥೆ ವಾಹನ ಕಳುಹಿಸಿಕೊಟ್ಟಿತು~ ಎನ್ನುವ ಮೆಚ್ಚುಗೆ ಮಾತು ಪೂನಂ ಕುಲಕರ್ಣಿ ಅವರದ್ದು.

`ದೂರುಗಳೇ ಇಲ್ಲ ಎನ್ನುವಂತಿಲ್ಲ. ಬೆಂಗಳೂರಿನ ವಾಹನ ದಟ್ಟಣೆಯಲ್ಲಿ ಸಮಯ ಪಾಲನೆ ಬಹಳ ಕಷ್ಟದ ಕೆಲಸ. ಅಂದುಕೊಂಡ ಸಮಯಕ್ಕೆ ಗುರಿ ಮುಟ್ಟಿಸದೇ ಹೋದಾಗ ಕೆಲವು ಗ್ರಾಹಕರು ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದಿದೆ. ಆದರೆ, ಯಾವತ್ತಿಗೂ ಗ್ರಾಹಕರ `ಟ್ಯಾಕ್ಸಿ ಬೇಡಿಕೆ~ ಈಡೇರಿಸುವಲ್ಲಿ ನಾವು ವಿಫಲರಾಗಿಲ್ಲ ಎನ್ನುತ್ತಾರೆ ಅಪ್ರಮೇಯ ಮತ್ತು ರಘುನಂದನ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT