ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಉದ್ಯೋಗಕ್ಕೆ ನೆರವಿನ ಹಸ್ತ

Last Updated 11 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕಚೇರಿ ಕೆಲಸಗಳಿಂದ ಮಾತ್ರವೇ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬೇಕೆಂದೇನೂ ಇಲ್ಲ. ಮನೆಯಲ್ಲಿದ್ದುಕೊಂಡೇ ಉದ್ಯೋಗ ಕಲ್ಪಿಸಿಕೊಳ್ಳುವ ಜಾಣ್ಮೆ ಮಹಿಳೆಯರಿಗೆ ಕರಗತವಾಗಿದೆ. ಹಳ್ಳಿ ಹಳ್ಳಿಗೂ ದಾಪುಗಾಲಿಡುತ್ತಿರುವ ಸ್ವಸಹಾಯ ಸಂಘಗಳು ಹಾಗೂ ಅವುಗಳ ಹಣಕಾಸಿನ ಸಹಾಯ ಮಹಿಳೆಯ ಕಣ್ಣುಗಳಲ್ಲಿ ಅಭಿವೃದ್ಧಿ ಕನಸನ್ನು ಸಾಕಾರಗೊಳಿಸುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ಹಲವು ಸ್ವಸಹಾಯ ಸಂಘಗಳನ್ನು ಕಟ್ಟಿ ಅಭಿವೃದ್ಧಿಯ ಮಂತ್ರವನ್ನು ಪಠಿಸಲು ಆರಂಭಿಸಿದ್ದಾರೆ.

ತರಬೇತಿ ನೀಡುವ ನೆಪದಲ್ಲಿ ಹಣ ವಸೂಲಿ ಮಾಡುವ ತರಬೇತಿ ಕೇಂದ್ರಗಳೇ ಹೆಚ್ಚಾಗಿರುವ ಈ ದಿನಗಳಲ್ಲಿ, ಚಿತ್ರದುರ್ಗದ ‘ಅಂಜನಾದೇವಿ ಮಹಿಳಾ ಗ್ರಾಮೀಣಾಭಿವೃದ್ಧಿ  ಸಮಾಜವು’, ಹೊಲಿಗೆ, ಫ್ಯಾಷನ್ ಡಿಸೈನಿಂಗ್, ಕಸೂತಿ ಕಲೆ, ಫಾಸ್ಟ್‌ಫುಡ್, ಕಾಂಡಿಮೆಂಟ್ಸ್ ತಿನಿಸುಗಳ ತರಬೇತಿ, ಕರಕುಶಲ ವಸ್ತುಗಳ ತರಬೇತಿ, ಬ್ಯಾಗ್, ಕೈಚೀಲಗಳು, ಸೀರೆಗಳು, ದೊಡ್ಡ, ಮಧ್ಯಮ ಹಾಗೂ ಸಾಧಾರಣ ಕೈಚೀಲಗಳ ತಯಾರಿಕಾ ತರಬೇತಿ ನೀಡುವಲ್ಲಿ ನಿರತವಾಗಿದೆ. ಮಹಿಳೆಯರನ್ನು ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಹಕರಿಸುತ್ತಿದೆ.

‘ಸಮಾಜವು’ ತನ್ನ ಕಾರ್ಯವೈಖರಿಗೆ 2006-7ನೇ ಸಾಲಿನ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದರ ಸಂಸ್ಥಾಪಕಿ ಶಶಿರೇಖಾ ರವಿಶಂಕರ್ ಅವರನ್ನು ಇತ್ತೀಚೆಗೆ ಮಾತನಾಡಿಸಿದಾಗ ...

ಸಂಘವನ್ನು ಕಟ್ಟಿದ ಬಗ್ಗೆ...
ಮದುವೆಯ ನಂತರ ಗೃಹಿಣಿಯಾಗಿ ಕೆಲ ಕಾಲ ಕೆಲಸವಿಲ್ಲದೇ ಸುಮ್ಮನಿದ್ದೆ. ಖಾಲಿ ಕೈಗಳು ತಲೆಯಲ್ಲಿ ಬೇಡದ ಚಿಂತನೆಗಳನ್ನು ಹುಟ್ಟುಹಾಕುತ್ತದೆ ಎಂದು ನಂಬಿದ್ದ ನಾನು, ಏನಾದರೂ ಕೆಲಸ ಕೈಗೊಳ್ಳಬೇಕು ಎಂದು ಕಾರ್ಯಪ್ರವೃತ್ತಳಾದೆ.  ಮದುವೆಗೆ ಮುನ್ನ ಆಂಜನೇಯ ಪದವಿ ಪೂರ್ವ ಕಾಲೇಜಿನಲ್ಲಿ ಜೆಒಸಿ ಕೋರ್ಸ್ (ಕ್ಲಾತ್ ಮತ್ತು ಎಂಬ್ರಾಯಿಡರಿ)ಪೂರ್ಣಗೊಳಿಸಿ, ಕೆಲಕಾಲ ಶಿಕ್ಷಕಿಯಾಗಿದ್ದೆ. ನನ್ನ ಅತ್ತೆ ಕೂಡ ‘ತ್ರೀವೆಣಿ ಮಹಿಳಾ ಸಮಾಜ’ ಕಟ್ಟಿ ಬೆಳೆಸಿದ್ದರು. ಅದನ್ನೆ ಸ್ಫೂರ್ತಿಯಾಗಿಟ್ಟುಕೊಂಡು ಮಾವ ಹಾಗೂ ಗಂಡನ ಸಹಕಾರದಿಂದ ಈ ಸಂಘವನ್ನು 1991ರಲ್ಲಿ ಹುಟ್ಟುಹಾಕಿದೆ.

ಸಂಘವು ತರಬೇತಿಗಾಗಿ ಮಹಿಳಾ ಗುಂಪನ್ನು ಆಯ್ಕೆ ಮಾಡುವ ಬಗೆ...
ಕೆಳವರ್ಗದ ಹಾಗೂ ಕೊಳೆಗೇರಿ ಜನರಿಗೆ ಮೊದಲ ಆದ್ಯತೆ ನೀಡುತ್ತೇವೆ. ಅವರಲ್ಲಿ ಸ್ವಾವಲಂಬಿಯಾಗಿ ಬದುಕಲು ಇಚ್ಛಿಸುವ ಪ್ರತಿ ಹೆಣ್ಣುಮಗಳಿಗೂ ತರಬೇತಿ ನೀಡಿ, ಬ್ಯಾಂಕಿನೊಂದಿಗೆ ಸಂಪರ್ಕ ಮಾಡಿಕೊಡುತ್ತೇವೆ. ನಂತರ ಅವರು ಸಾಲ ಪಡೆದು ಉದ್ಯಮವನ್ನು ಪ್ರಾರಂಭಿಸುತ್ತಾರೆ.

ತರಬೇತಿಗಾಗಿ ಶುಲ್ಕವಿದೆಯೇ...
‘ಸಮಾಜವು’ ಅರ್ಜಿಯಿಂದ ಹಿಡಿದು ತರಬೇತಿಗಾಗಿ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ. ತರಬೇತಿ ಸಂದರ್ಭದಲ್ಲಿ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಕೂಡ ಸಂಘವೇ ಪೂರೈಸುತ್ತದೆ, ತರಬೇತಿ ಸಂದರ್ಭದಲ್ಲಿ ಇರುವ ಎಲ್ಲಾ ಖರ್ಚು ವೆಚ್ಚಗಳನ್ನು ಸಂಘ ಭರಿಸುತ್ತದೆ.

ಸಮಾಜವು ತರಬೇತಿಗೆ ಬಂಡವಾಳ ಹೇಗೆ ಹೂಡುತ್ತದೆ?
ನಬಾರ್ಡ್ ಚಿತ್ರದುರ್ಗ ಶಾಖೆ,  ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರ ಸಭೆ (ಚಿತ್ರದುರ್ಗ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ವರ್ಷದಲ್ಲೊಮ್ಮೆ ತರಬೇತಿಯ ಯೋಜನಾ ವರದಿ ಸಿದ್ಧಪಡಿಸಿ ಟೆಂಡರ್ ಕರೆಯುತ್ತದೆ. ಆಯ್ದ ಸಂಘದ ಪ್ರತಿ ಅಭ್ಯರ್ಥಿಗೆ ತಲಾ ಇಷ್ಟು ಹಣವನ್ನು ಪೂರೈಸುತ್ತದೆ. ಈ ಹಣವನ್ನು ಉಪಯೋಗಿಸಿಕೊಂಡು ‘ಸಮಾಜ’  ಆಸಕ್ತ ಮಹಿಳೆಯರಿಗೆ  ಉಚಿತವಾಗಿ ತರಬೇತಿ ನೀಡುತ್ತಿದೆ.

ಪ್ರತಿ ವರ್ಷ ಎಷ್ಟು ಜನ ತರಬೇತಿ ಪಡೆಯುತ್ತಾರೆ?
ವರ್ಷದಲ್ಲಿ  400ರಿಂದ 700 ಮಹಿಳೆಯರು ತರಬೇತಿ ಪಡೆದುಕೊಳ್ಳುತ್ತಾರೆ.  ಪರಿಶಿಷ್ಟ ತರಬೇತಿ ಪಡೆದುಕೊಂಡವರೆಲ್ಲಾ ಅರ್ಥಿಕವಾಗಿ, ಸಾಮಾಜಿಕವಾಗಿ ಸಧೃಡರಾಗಿದ್ದಾರೆ ಎಂಬುದೇ ಮನಸ್ಸಿಗೆ ನೆಮ್ಮದಿ ನೀಡುತ್ತದೆ.

ಆರಂಭದಲ್ಲಿದ್ದ ತೊಡಕುಗಳು...
ಆಗ ಕಲಿತ ಕಸೂತಿ ಕೌಶಲ್ಯವನ್ನೇ ಮುಂದಿಟ್ಟುಕೊಂಡು ಅಂಜನಾದೇವಿ ಮಹಿಳಾ ಗ್ರಾಮೀಣಾಭಿವೃದ್ದಿ ಸಮಾಜದ ಹುಟ್ಟಿಗೆ ಕಾರಣವಾಯಿತು. ಸಂಘವನ್ನು ಸ್ಥಾಪಿಸಿದ ಆರಂಭದಲ್ಲಿ ಯೋಜನೆಗಳನ್ನು ರೂಪಿಸಲು ಯಾವುದೇ ಮಾರ್ಗದರ್ಶ ಕರಿರಲಿಲ್ಲ, ಹೆಣ್ಣೆಂಬ ಕಾರಣಕ್ಕಾಗಿ ಸಾಕಷ್ಟು ಅವಮಾನಗಳನ್ನು ಎದುರಿಸಿದೆ. ಅರ್ಜಿ ತುಂಬಲು ಸರಿಯಾಗಿ ಗೊತ್ತಿಲ್ಲದ್ದಕ್ಕೆ ಬೈಸಿಕೊಂಡಿದ್ದಿದೆ. ಕ್ರಮೇಣ ಹಲವು ಸರ್ಕಾರಿ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳು ಸಹಕರಿಸಿದರು.

ಉತ್ಪನ್ನಗಳ ಮಾರಾಟ...
ಸಂಘದಲ್ಲಿ ತರಬೇತಿ ಪಡೆದಿರುವ ಅನೇಕ ಮಹಿಳೆಯರು ತಾವು ತಯಾರಿಸಿದ ಉತ್ಪನ್ನಗಳನ್ನು ನಬಾರ್ಡ್  ಹಾಗೂ ಇತರ ಸಂಸ್ಥೆಗಳ ನೆರವಿನಿಂದ ವಿವಿಧೆಡೆ ಪ್ರದರ್ಶನ ಏರ್ಪಡಿಸುತ್ತಾರೆ.

ನಿಮ್ಮ ಕೆಲಸಕ್ಕೆ ಮನೆಯವರ ಪ್ರೋತ್ಸಾಹ...
ಸಂಘ ಹುಟ್ಟಿದ ಗಳಿಗೆಯಿಂದ ಇಲ್ಲಿಯವರೆಗೆ ಪತಿ ರವಿಶಂಕರ್ ಅವರ ಪ್ರೋತ್ಸಾಹ, ಸಹಕಾರವಿದೆ. ಈಗೀಗ ಮಕ್ಕಳು ಈ ಕಾರ್ಯದಲ್ಲಿ  ತೊಡಗಿಸಿಕೊಳ್ಳುತ್ತಿದ್ದಾರೆ.

ಪ್ರವೃತ್ತಿ...
ವೃತ್ತ ಪತ್ರಿಕೆಗಳಿಂದ ದಿನದ ಪ್ರಾರಂಭ. ಅದರೊಂದಿಗೆ ಸಂಗೀತ ಕೇಳುತ್ತೇನೆ. ಹೊಸತನ್ನು ಕಲಿಯಬೇಕೆಂಬ ಮನೋಭಾವವೇ ತರಬೇತಿಯನ್ನು ವಿವಿಧ ಮಜಲುಗಳಲ್ಲಿ ಬೆಳೆಯುವಂತೆ ಮಾಡಿದೆ.

ಮುಂದಿನ ಯೋಜನೆ...
ತರಬೇತಿ ನೀಡುವುದರ ಜೊತೆಗೆ ಉದ್ಯಮ ಘಟಕವನ್ನು ಸ್ಥಾಪಿಸುವ ಇರಾದೆಯಿದ್ದು, ಅದಕ್ಕೆ ‘ಮಾತೃ ಕುಟೀರ’ ಎಂದು ಹೆಸರಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT