ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಮನೆಯಲ್ಲೇ ಗ್ರಂಥಾಲಯ

Last Updated 19 ಡಿಸೆಂಬರ್ 2012, 10:44 IST
ಅಕ್ಷರ ಗಾತ್ರ

ಹನುಮಸಾಗರ: ಇಲ್ಲಿನ ಗೋವಿಂದಾಚಾರ ಪುರೋಹಿತ ಎಂಬುವವರ ಮನೆಯಲ್ಲಿ ಮನೆ ಬಳಕೆಯ ಸಾಮಾನುಗಳು ಕಾಣುವುದಕ್ಕಿಂತ ಹೆಚ್ಚಾಗಿ ಪುಸ್ತಕಗಳೆ ಕಾಣುತ್ತವೆ. ಸಾಯಂಕಾಲ ಹಾಗೂ ಬೆಳಗಿನ ಹೊತ್ತಿನಲ್ಲಿ ವಿದ್ಯಾರ್ಥಿಗಳು, ಯುವಕರು ತಮ್ಮ ಬಿಡುವಿನ ಸಮಯದಲ್ಲಿ ವಿವಿಧ ಪುಸ್ತಕಗಳನ್ನು ಓದುತ್ತಾ ಕುಳಿತಿರುವುದು ಕಂಡು ಬರುತ್ತದೆ.

ಹಾಗಂತ ಇದು ಸರ್ಕಾರಿ ಗ್ರಂಥಾಲಯವಲ್ಲ. ಹವ್ಯಾಸಕ್ಕೆಂದು ಸಂಗ್ರಹಿಸಿಕೊಂಡು ಬಂದಿರುವ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈ ಪುಸ್ತಕಗಳ ಮೌಲ್ಯವನ್ನು ಹೆಚ್ಚಿಸುವುದಕ್ಕಾಗಿ ಹಾಗೂ ಅಜ್ಜನ ನೆನಪು ಈ ಮೂಲಕ ನೆನಪಿಸಿಕೊಳ್ಳಲು ಖಾಸಗಿಯಾಗಿ ತೆರೆದ ಗ್ರಂಥಾಲಯವಿದು. ಒಂದರ್ಥದಲ್ಲಿ ಆಸಕ್ತ ಓದುಗರಿಗೆ ಸದಾ ತೆರೆದುಕೊಂಡಿರುವ ಓದುವ ಮನೆಯಂತಲೂ ಹೇಳಬಹುದು.

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿ.ರಾಮಾಚಾರ ಪುರೋಹಿತ ಅವರು ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡಿಸಿ ಜ್ಞಾನಾರ್ಜನೆ ಹೆಚ್ಚಿಸುವುದಕ್ಕಾಗಿ 60ರ ದಶಕದಲ್ಲಿ ಸ್ವಂತ ಖರ್ಚಿನಿಂದ ಇಲ್ಲಿ ಕರ್ನಾಟಕ ಗ್ರಂಥಾಲಯವನ್ನು ಸ್ಥಾಪಿಸಿದ್ದರು. ಅವರ ಅಪ್ಪಟ ಪುಸ್ತಕ ಅಭಿಮಾನದಿಂದಾಗಿ ನಾಡಿನ ಮೂಲೆ ಮೂಲೆಗಳಿಂದ ಪುಸ್ತಕಗಳನ್ನು ತಂದು ಇಲ್ಲಿ ಸಂಗ್ರಹಿಸಿದರು.

ಆದರೆ ಅವರು ತೀರಿದ ಬಳಿಕ ಅವರ ಮಗ ಗೋವಿಂದಾಚಾರ ಪುರೋಹಿತ ಪುಸ್ತಕಗಳ ಬಳಕೆ ಹೆಚ್ಚಿಸುವುದಕ್ಕಾಗಿ ಸ್ಥಳೀಯ ವಿವೇಕಾನಂದ ಶಕ್ತಿ ಕೇಂದ್ರಕ್ಕೆ ಉಚಿತವಾಗಿ ಇದರಲ್ಲಿನ ಕೆಲ ಪುಸ್ತಕಗಳನ್ನು ನೀಡಿದ್ದರು. ಆದರೆ ಕೆಲ ದಿನಗಳಲ್ಲಿ ಆ ಕೇಂದ್ರವು ಸ್ಥಗಿತಗೊಂಡಿತು ಕೊಟ್ಟಿದ್ದ ಪುಸ್ತಕಗಳು ಮರಳಿ ಬರಲಿಲ್ಲ. ಅಜ್ಜನ ಓದಿಸುವ ಕನಸು ನನಸಾಗಲಿ ಎಂಬ ಉದ್ದೇಶದಿಂದ ಅವರ ಮೊಮ್ಮಕ್ಕಳಾದ ಹನುಮೇಶ ಹಾಗೂ ವಾಸುದೇವ ಪುರೋಹಿತ ಮತ್ತಷ್ಟು ಹೊಸ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲದ ಗೌರವ ಹೆಚ್ಚಿಸಿದ್ದಾರೆ.

ಸದ್ಯ ಸುಮಾರು 3ಸಾವಿರಕ್ಕೂ ಹೆಚ್ಚು ಪುಸ್ತಕಗಳು ಸಂಗ್ರಹಗೊಂಡಿವೆ. ಮಕ್ಕಳ ಮನಸ್ಸಿನ ಮೇಲೆ ಪರಿಸರ ಪ್ರಭಾವ ಬೀರಿಸುವ ಕಥೆಗಳು, ಈಸೂಪನ ನೀತಿಕಥೆಗಳು, ದುರ್ಗಸಿಂಹ ಬರೆದ ಪಂಚತಂತ್ರಗಳಂತಹ ಮಕ್ಕಳ ಕಥೆ ಪುಸ್ತಕಗಳು, ಜ್ಞಾನಪೀಠ ಸಾಹಿತಿಗಳ ಗ್ರಂಥಗಳು, ಕಾದಂಬರಿಗಳು, ಕವನ ಸಂಕಲನಗಳು, ದೇಶಾಭಿಮಾನ ಮೂಡಿಸುವ ಸ್ವಾತಂತ್ರ್ಯಹೋರಾಟಗಾರರ ಬದುಕು ಬರಹಗಳು, ಕನ್ನಡ, ಹಿಂದಿ, ಇಂಗ್ಲೀಷ ಸಾಹಿತ್ಯ ಗ್ರಂಥಗಳು ಇಲ್ಲಿ ಸಂಗ್ರಹಗೊಂಡಿವೆ.

ಮೂಲತಃ ಕೃಷಿಕರಾಗಿ ಸಂಸ್ಥೆಯೊಂದರಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಮನೆಯ ಯಜಮಾನ ಗೋವಿಂದಾಚಾರ ಅವರಲ್ಲಿಗೆ ಯಾರಾದರು ತಮ್ಮಲ್ಲಿರುವ ಪುಸ್ತಕ ಕೇಳಲು ಬಂದರೆ ಅತೀವ ಸಂತಸವಾಗುತ್ತದೆ ಎಂದು ಹೇಳುತ್ತಾರೆ. ಪುಸ್ತಕ ಓದುವುದಕ್ಕಾಗಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ, ಕೆಲವರು ಸರಿಯಾಗಿ ತಂದು ಮುಟ್ಟಿಸುತ್ತಾರೆ ಮತ್ತೆ ಕೆಲವರು ಪುಸ್ತಕ ಮರಳಿಸುವುದಿಲ್ಲ ಎಂದು ಗೋವಿಂದಾಚಾರ ಹೇಳುತ್ತಾರೆ.

ಇವರ ಗ್ರಂಥಾಲಯದಲ್ಲಿ ಅಭ್ಯಾಸ ಮಾಡಿದ ಅನೇಕ ಯುವಕರು ಸದ್ಯ ಸರ್ಕಾರಿ ನೌಕರಿಯಲ್ಲಿ ಸೇರಿದ್ದಾರೆ. ಹೀಗೆ ನೌಕರಿ ಸೇರಿದದವರು ಅಮೂಲ್ಯವಾಗಿರುವ ಪುಸ್ತಕವೊಂದನ್ನು ಗ್ರಂಥಾಲಯಕ್ಕೆ ತಂದು ಕೊಡುತ್ತಾರೆ ಎಂದು ಹನುಮೇಶ ಪುರೋಹಿತ ಹೇಳುತ್ತಾರೆ.

ಓದುಗರು ಇಲ್ಲಿ ಕುಳಿತು ಓದಬಹುದು ಅಥವಾ ಮನೆಗೆ ತೆಗೆದುಕೊಂಡು ಹೋಗಿ ಓದಿ ಮರಳಿಸಬಹುದು. ಎಲ್ಲವೂ ಇಲ್ಲಿ ಉಚಿತ. ಅಷ್ಟೆ ಅಲ್ಲ ಆ ಮನೆಯ ಯಜಮಾನರು ಇರಲಿ ಬಿಡಲಿ, ಬಾಗಿಲು ತೆರೆದಿದ್ದರೆ ಸಾಕು ಬೇಕಾದ ಪುಸ್ತಕವನ್ನು ಹುಡುಕಿಕೊಂಡು ಅಲ್ಲಿರುವ ನೋಟ್‌ಪುಸ್ತಕದಲ್ಲಿ ನಮೂದಿಸಿದರೆ ಮುಗಿಯಿತು.

ನಮ್ಮ ತಂದೆ ಅಭಿಮಾನದಿಂದ ಬೆಳೆಸಿಕೊಂಡು ಬಂದಿದ್ದ ಪುಸ್ತಕ ಭಂಡಾರದ ಸೇವೆ ಅಲ್ಲಿಗೆ ನಿಲ್ಲಬಾರದು ಎಂಬ ಉದ್ದೇಶದಿಂದ ನಾವು ಮುನ್ನಡೆಸಿಕೊಂಡು ಹೊರಟಿದ್ದೇವೆ, ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಇಲ್ಲಿಗೆ ಬಂದು ಓದುತ್ತಾರೆ, ಖುಷಿಪಡುತ್ತಾರೆ ಅಷ್ಟೆ ನಮಗೆ ಹಿತ ಎಂದು ಗೋವಿಂದಾಚಾರ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT