ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಕ್ಷೇತ್ರದ ಸಂಸದರಾಗಿ ಮಾಲಿ ಮರಿಯಪ್ಪ

41967ರ ಮಧುಗಿರಿ ಲೋಕಸಭೆ ಚುನಾವಣೆ 4ಮತದಾರರು 303235, ಮತದಾನ ಶೇ 60
Last Updated 27 ಮಾರ್ಚ್ 2014, 10:12 IST
ಅಕ್ಷರ ಗಾತ್ರ

ತುಮಕೂರು: ನಾಲ್ಕನೇ ಮಹಾ ಚುನಾವಣೆಗೆ ಲೋಕಸಭಾ ಕ್ಷೇತ್ರಗಳನ್ನು ಪುನರ್‌ ವಿಂಗಡಿಸಲಾಯಿತು. ತಿಪಟೂರು ಕ್ಷೇತ್ರ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ವಿಲೀನವಾಗಿ, ಮಧುಗಿರಿ ಕ್ಷೇತ್ರ ಉದಯವಾಯಿತು. ಹಿಂದಿನಂತೆ ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳು ಮುಂದುವರೆದವು.

ಮಧುಗಿರಿ ಕ್ಷೇತ್ರದ ರೂವಾರಿ ಕಾಂಗ್ರೆಸ್‌ ಹಿರಿಯ ಮುಖಂಡ ಮಾಲಿ ಮರಿಯಪ್ಪ. ಲೋಕಸಭಾ ಕ್ಷೇತ್ರ ಪುನರ್‌ ವಿಂಗಡಣಾ ಸಮಿತಿ ಸದಸ್ಯರಾಗಿದ್ದ ಮರಿಯಪ್ಪ ತಮ್ಮ ಕ್ಷೇತ್ರವನ್ನು ಕೇಂದ್ರವಾಗಿಸಿಕೊಂಡು ಮಧುಗಿರಿ ಲೋಕಸಭಾ ಕ್ಷೇತ್ರ ರೂಪಿಸುವಲ್ಲಿ ಯಶಸ್ವಿಯಾಗಿದ್ದರು.

ಮಧುಗಿರಿ ಲೋಕಸಭಾ ಕ್ಷೇತ್ರಕ್ಕೆ ಮಧುಗಿರಿ, ಕಳ್ಳಂಬೆಳ್ಳ, ಶಿರಾ, ಪಾವಗಡ, ಕೊರಟಗೆರೆ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿದ್ದವು.

ನೂತನ ಕ್ಷೇತ್ರದಿಂದ ಮಾಲಿ ಮರಿಯಪ್ಪ ಕಾಂಗ್ರೆಸ್‌ ಅಭ್ಯರ್ಥಿಯಾಗಿ, ಸ್ವತಂತ್ರ ಪಕ್ಷದಿಂದ ಎನ್‌.ಸಿ.ತಿಮ್ಮಾರೆಡ್ಡಿ ಸ್ಪರ್ಧಿಸಿದ್ದರು. ಮಾಲಿ ಮರಿಯಪ್ಪ ಚಿಹ್ನೆ ಜೋಡಿ ಎತ್ತು. ತಿಮ್ಮಾರೆಡ್ಡಿ ಅವರದ್ದು ಸೈಕಲ್‌. ಮುದ್ದಪ್ಪ, ಜಲ್ಲಪ್ಪ ಎಂಬ ದಲಿತರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇವರಿಬ್ಬರನ್ನು ಮಾಲಿ ಮರಿಯಪ್ಪ ಬೆಂಬಲಿಗರೇ ಚುನಾವಣಾ ತಂತ್ರವಾಗಿ ಅಖಾಡಕ್ಕಿಳಿಸಿದ್ದರು. ಟಿ.ತರಗೇಗೌಡ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

ಮಾಲಿ ಮರಿಯಪ್ಪ ರಾಜ್ಯದ ಪ್ರಭಾವಿ ಕಾಂಗ್ರೆಸ್‌ ಮುಖಂಡರಲ್ಲಿ ಪ್ರಮುಖರು. ಮುಖ್ಯಮಂತ್ರಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಮುತ್ಸದ್ಧಿ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಕಾಂಗ್ರೆಸ್‌ ಅಲೆ, ವೈಯಕ್ತಿಕ ಪ್ರಭಾವದಿಂದ ನಿರಾಯಾಸವಾಗಿ 91167 ಮತಗಳ ಅಂತರದ ಗೆಲುವು ದಾಖಲಿಸಿದರು.
1952ರಲ್ಲಿ ಶಿರಾ–ಪಾವಗಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. 57ರಲ್ಲಿ ಸ್ವಕ್ಷೇತ್ರ ಮಧುಗಿರಿ ಕ್ಷೇತ್ರದ ಶಾಸಕರಾಗಿ ಮತ್ತೊಂದು ಅವಧಿಗೆ ಆಯ್ಕೆಯಾದರು. ನಿಜಲಿಂಗಪ್ಪ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿದು ಬಿ.ಡಿ.ಜತ್ತಿ ಮುಖ್ಯಮಂತ್ರಿಯಾದಾಗ ರಾಜ್ಯದ ಸಹಕಾರ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ಶಿರಾ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಒತ್ತಡದಿಂದ 1962ರಲ್ಲಿ ಸ್ಪರ್ಧಿಸಿ ಪರಾಭವಗೊಂಡರು. ಇದು ಮಾಲಿ ಮರಿಯಪ್ಪ ಅವರಿಗೆ ಭರಿಸಲಾಗದ ದುಃಖವಾಯಿತು. ಆ ಸಂದರ್ಭ ಬಳ್ಳಾರಿ ಜೆಲ್ಲೆಯ ಕಾಂಗ್ರೆಸ್‌ ಪ್ರಮುಖ ಅಲ್ಲಂ ಕರಿಬಸಪ್ಪ ಮಾಲಿಮರಿಯಪ್ಪ ಮನೆಗೆ ಬಂದು ನಾಲ್ಕು ದಿನವಿದ್ದು ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು.

1962ರಲ್ಲಿ ಸಂಸದ ಎಂ.ವಿ.ಕೃಷ್ಣಪ್ಪ ಅವರು ನಿಜಲಿಂಗಪ್ಪ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ಸೇರಲು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತೆರವಾದ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು. ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ಆಪ್ತ ಉತ್ತರ ಪ್ರದೇಶ ಮೂಲದ ಅಜಿತ್‌ ಪ್ರಸಾದ್‌ ಜೈನ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಜೈನ್‌ ಸಹ ಸಂಸದರಾಗಿ ಪೂರ್ಣಾವಧಿ ಪೂರೈಸಲಿಲ್ಲ. ಆರು ತಿಂಗಳೊಳಗೆ ರಾಜೀನಾಮೆ ಸಲ್ಲಿಸಿ, ರಾಜ್ಯಪಾಲರಾಗಿ ನೇಮಕಗೊಂಡರು. ಕಾಂಗ್ರೆಸ್‌ನಿಂದ ಕಣಕ್ಕಿಳಿದ ಮಾಲಿ ಮರಿಯಪ್ಪ ಸಂಸದರಾಗಿ ಆಯ್ಕೆಗೊಂಡು, ಕ್ಷೇತ್ರ ಪುನರ್‌ ವಿಂಗಡಣಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಇದರ ಪ್ರತಿಫಲವೇ ಮಧುಗಿರಿ ಕ್ಷೇತ್ರ ಉದಯವಾಯಿತು. ನೂತನ ಕ್ಷೇತ್ರದ ಸಂಸದರಾಗಿ ಮಾಲಿ ಮರಿಯಪ್ಪ ಸಹ ಅವಧಿ ಪೂರ್ಣಗೊಳಿಸಲಿಲ್ಲ.

1969ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್‌.ನಿಜಲಿಂಗಪ್ಪ ರಾಜೀನಾಮೆ ನೀಡಿ ಎಐಸಿಸಿ ಅಧ್ಯಕ್ಷರಾದರು. ಮುಖ್ಯಮಂತ್ರಿ ಗಾದಿಗಾಗಿ ವೀರೇಂದ್ರ ಪಾಟೀಲ್‌, ಬಿ.ಡಿ.ಜತ್ತಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಿತು.

ಆರಂಭದಲ್ಲಿ ಬಿ.ಡಿ.ಜತ್ತಿ ಪರ 120 ಶಾಸಕರು ಬೆಂಬಲ ವ್ಯಕ್ತಪಡಿಸಿದ್ದರು. ರಾತ್ರಿ ನಡೆದ ಸಭೆಯಲ್ಲಿ ಎಲ್ಲರೂ ಪಾಲ್ಗೊಂಡಿದ್ದರು. ಇಷ್ಟೊಂದು ಶಾಸಕರ ಬೆಂಬಲ ಪಡೆಯಲು ಮಾಲಿ ಮರಿಯಪ್ಪ ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ ಬೆಳಿಗ್ಗೆ ನಡೆದ ಸಭೆಯಲ್ಲಿ 120 ಶಾಸಕರು ವೀರೇಂದ್ರ ಪಾಟೀಲರಿಗೆ ಬೆಂಬಲ ವ್ಯಕ್ತಪಡಿಸಿದರು. ಬಿ.ಡಿ.ಜತ್ತಿ ಪರ 56 ಶಾಸಕರಿದ್ದರು. ಎಐಸಿಸಿ ಅಧ್ಯಕ್ಷ ಎಸ್‌.ನಿಜಲಿಂಗಪ್ಪ ಅವರು ವೀರೇಂದ್ರಪಾಟೀಲ್‌ ಬೆಂಬಲಿಸಿದ್ದು, ಜತ್ತಿ ಹಿನ್ನೆಡೆಗೆ ಕಾರಣವಾಯಿತು.

ಈ ಘಟನೆಯಿಂದ ಮಾಲಿ ಮರಿಯಪ್ಪ ವಿಚಲಿತರಾದರು. ಎದೆನೋವಿನಿಂದ ಬಳಲಿ ಬೌರಿಂಗ್‌ ಆಸ್ಪತ್ರೆಗೆ ದಾಖಲಾದರು. ಅರ್ಧ ತಾಸಿನಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ 1968ರ ಮೇ 22ರಂದು ಮೃತಪಟ್ಟರು ಎಂದು ಮಾಲಿ ಮರಿಯಪ್ಪ ಅವರ ಆಪ್ತ ಬಿ.ವಿ.ನಾಗರಾಜಪ್ಪ ತಮ್ಮ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.

ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಿತು. ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಕೆ.ಸಿ.ರೆಡ್ಡಿ ಕುಟುಂಬದ ಕೋಲಾರ ಮೂಲದ ಸುಧಾ ವಿ.ರೆಡ್ಡಿ ಸಂಸದರಾಗಿ ಆಯ್ಕೆಯಾದರು.

ಸಾಲದಲ್ಲೇ ಸಾವು
ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ್ದ ಮಾಲಿ ಮರಿಯಪ್ಪ ಮೃತಪಟ್ಟಾಗ ಈಗಿನ ರಾಜಕಾರಣಿಗಳಂತೆ ಕೋಟಿ ಕೋಟಿ ಆಸ್ತಿ ಸಂಪಾದಿಸಿರಲಿಲ್ಲ. ಮಧುಗಿರಿ ತಾಲ್ಲೂಕಿನ ಸಿದ್ದಾಪುರದ ಬಳಿಯಿದ್ದ ಆರು ಎಕರೆ ಜಮೀನು ಅವರ ಆಸ್ತಿಯಾಗಿತ್ತು. ಅದು ಪೂರ್ವಿಕರಿಂದ ಬಂದಿದ್ದು. ಮೂರು ದಶಕ ರಾಜ್ಯದ ಪ್ರಭಾವಿ ಮುಖಂಡರಾಗಿ ಮೆರೆದರೂ; ಮೃತಪಟ್ಟಾಗ 4ರಿಂದ 5 ಲಕ್ಷ ಸಾಲವಿತ್ತು. ಇದನ್ನು ತಮ್ಮ ದಿನಚರಿಯಲ್ಲಿ ನಮೂದಿಸಿದ್ದರು. ಅದರಂತೆ ಅವರ ಅಭಿಮಾನಿಗಳು, ಬೆಂಬಲಿಗರು ಸಾಲ ತೀರಿಸಿದರು ಎನ್ನುವುದು ಚರಿತ್ರಾರ್ಹ.

      ಪಕ್ಷ                           ಅಭ್ಯರ್ಥಿ                      ಪಡೆದ ಮತ          ಶೇ
ಕಾಂಗ್ರೆಸ್                      ಮಾಲಿ ಮರಿಯಪ್ಪ          156423              54.68
ಸ್ವತಂತ್ರ ಪಕ್ಷ                  ಎನ್‌.ಸಿ.ತಿಮ್ಮಾರೆಡ್ಡಿ        65256               22.81
ಪಕ್ಷೇತರ                        ಟಿ.ತರಗೇಗೌಡ             37734               13.19
ಪಕ್ಷೇತರ                        ಮುದ್ದಪ್ಪ                      17812               6.23
ಪಕ್ಷೇತರ                        ಜಲ್ಲಪ್ಪ                         8864                 3.10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT