ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛಂದ ಕಾಮವೂ ಅಸಹಾಯಕತೆಯೂ...

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಸಿನಿಮಾ ತೆರೆಯ ಮೇಲೆ ಲೈಂಗಿಕತೆಯನ್ನು ತೋರಿಸಲು ಭಾರತೀಯ ಸಿನಿಮಾಗಳಲ್ಲಿ ಅವಕಾಶ ಇಲ್ಲ. ಅದಕ್ಕೆ ಸೆನ್ಸಾರ್ ಮಂಡಳಿ ಅವಕಾಶ ಕೊಡುವುದಿಲ್ಲ. ಆದರೆ ಮುಸ್ಲಿಂ ರಾಷ್ಟ್ರಗಳನ್ನು ಹೊರತುಪಡಿಸಿ ಜಗತ್ತಿನ ಬಹುತೇಕ ದೇಶಗಳ ಸಿನಿಮಾಗಳಿಗೆ ಸೆನ್ಸಾರ್‌ನ ಅಡಚಣೆ ಇಲ್ಲ. ಹೀಗಾಗಿ ವಿದೇಶಿ ಸಿನಿಮಾಗಳಲ್ಲಿ ಲೈಂಗಿಕತೆಯ ದೃಶ್ಯಗಳು ತೆರೆಯ ಮೇಲೆ ವಿಜೃಂಭಿಸುತ್ತವೆ.

ಕಳೆದ ತಿಂಗಳು ಪಣಜಿಯಲ್ಲಿ ಸಮಾರೋಪಗೊಂಡ ಭಾರತದ ನಲವತ್ತೆರಡನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ, ಭಾರತೀಯ ಪರಿಸರದಲ್ಲಿ ನಡೆಯುವ ಲೈಂಗಿಕ ಶೋಷಣೆಯ ಕರಾಳ ಮುಖಗಳನ್ನು ಕಟ್ಟಿಕೊಡುವ ಚಿತ್ರವೊಂದು ಪ್ರದರ್ಶನಗೊಂಡು ಗಮನ ಸೆಳೆಯಿತು. ಚಿತ್ರದ ಹೆಸರು `ತ್ರಿಷ್ಣಾ~. ಇಂಗ್ಲೆಂಡ್‌ನ ಮೈಕೇಲ್ ವಿಂಟರ್‌ಬಾಟಮ್ ಅದರ ನಿರ್ದೇಶಕರು. ಥಾಮಸ್ ಹಾರ್ಡಿಯ ಕಾದಂಬರಿಯೊಂದನ್ನು ಆಧರಿಸಿದ ಚಿತ್ರ ಎಂದು ಹೇಳಿಕೊಂಡಿದ್ದರೂ ಅದನ್ನು ಭಾರತೀಯ ಪರಿಸರಕ್ಕೆ ಅನ್ವಯಿಸಿ ಇದು ನಮ್ಮದೇ ಕಥೆ ಆಧರಿಸಿದ ಚಿತ್ರ ಎಂಬಂತೆ ನಿರ್ದೇಶಕರು ನಿರೂಪಿಸಿದ್ದಾರೆ.

ನಿರೂಪಣಾ ಶೈಲಿಯಿಂದಲೇ ಈ ಚಿತ್ರ ಜಗತ್ತಿನ ಸಿನಿಮಾಸಕ್ತರ ಗಮನ ಸೆಳೆದಿದೆ.
2011ರ ಈ ಚಿತ್ರ, ಲಂಡನ್‌ನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡಿತು. ಟೊರೆಂಟೊ, ದುಬೈ ಚಲನಚಿತ್ರೋತ್ಸವಗಳಲ್ಲಿಯೂ ಇದು ಪ್ರದರ್ಶನವಾಯಿತು. `ತ್ರಿಷ್ಣಾ~ ಚಿತ್ರದ ಕಥೆ ಭಾರತೀಯ ಸಿನಿ ಪ್ರೇಕ್ಷಕರಿಗೆ ಹೊಸದಲ್ಲ. ಚಿತ್ರದಲ್ಲಿ ವ್ಯಕ್ತವಾಗಿರುವ ಲೈಂಗಿಕ ಶೋಷಣೆ ನಿಜ ಜೀವನದಲ್ಲೂ ಇದೆ. ಭಾರತೀಯ ಭಾಷೆಗಳ ನೂರಾರು ಸಿನಿಮಾಗಳಲ್ಲಿ ಇದು ಸಾಂಕೇತಿಕವಾಗಿ ಅಭಿವ್ಯಕ್ತಗೊಂಡಿದೆ.
ರಾಜಸ್ತಾನದ ಹಳ್ಳಿಗಾಡಿನ ಬಡ ಕುಟುಂಬವೊಂದರ ಯುವತಿ ತ್ರಿಷ್ಣಾಳನ್ನು ಭಾರತೀಯ ಮೂಲದ ಇಂಗ್ಲೆಂಡ್‌ನ ಹೊಟೇಲ್ ಉದ್ಯಮಿಯ ಮಗನೊಬ್ಬ ಪ್ರೀತಿಯ ಹೆಸರಿನಲ್ಲಿ ನಿರಂತರವಾಗಿ ಲೈಂಗಿಕ ಶೋಷಣೆ ಮಾಡುವುದು ಚಿತ್ರದ ಕಥೆ.

ಲೈಂಗಿಕ ಶೋಷಣೆಗೆ ಒಳಗಾಗುವ ಯುವತಿಯರಿಗೆ ಅದರಿಂದ ಹೊರಬರುವ ಮಾರ್ಗಗಳಿರುತ್ತವೆ. ಆದರೆ ತ್ರಿಷ್ಣಾ ಆಧುನಿಕ ಬದುಕಿನ ಸೆಳೆತಕ್ಕೆ ಒಳಗಾಗಿ ತನ್ನ ಶೋಷಣೆ ಆಗುತ್ತಿದೆ ಎಂದು ಅರಿವಿಗೆ ಬಂದ ಮೇಲೂ ಅದರಿಂದ ಹೊರಬರಲಾಗದೆ ಅದೇ ಜೀವನ ಎಂದು ಒಪ್ಪಿಕೊಳ್ಳುತ್ತಾಳೆ. ಭಾರತೀಯ ಬಡ ಕುಟುಂಬಗಳ ಹೆಣ್ಣುಮಕ್ಕಳು ಆರ್ಥಿಕರಾಗಿ ಸಬಲರಾಗುವ ಪ್ರಯತ್ನದ ಹಾದಿಯಲ್ಲಿ ತಿಳಿದೋ, ತಿಳಿಯದೆಯೋ ಲೈಂಗಿಕ ಶೋಷಣೆಗೆ ಒಳಗಾಗುವ ಸಾಧ್ಯತೆ ಇದೆ. ಒಮ್ಮೆ ಅಂಥ ಬದುಕಿಗೆ ಒಗ್ಗಿಕೊಂಡರೆ ಅದನ್ನು ನಿರಾಕರಿಸಿ ಹಿಂದಕ್ಕೆ ಹೋಗುವುದು ಕಷ್ಟ. ಗ್ರಾಮೀಣ ಪ್ರದೇಶದ ಅನೇಕ ಬಡ ಕುಟುಂಬಗಳ ಹೆಣ್ಣುಮಕ್ಕಳು ಇಂತಹ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ದುಡಿಯಲು ನಗರಗಳಿಗೆ ಹೋದ ಹೆಣ್ಣುಮಕ್ಕಳು ಅಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಲೂ ಆಗದಂತಹ ಪರಿಸ್ಥಿತಿಯಲ್ಲಿ ಎಲ್ಲ ಬಗೆಯ ತಳಮಳಗಳನ್ನು ಜೀರ್ಣಿಸಿಕೊಂಡು ಬದುಕುವ ಮನಸ್ಥಿತಿಯನ್ನು ಅವರ ಕುಟುಂಬಗಳು ಬೆಳೆಸಿಕೊಂಡಿವೆ. ಈ ಕುಟುಂಬಗಳಿಗೆ ಅದು ಅನಿವಾರ್ಯವೂ ಆಗಿರಬಹುದು.

ತನ್ನ ಹಳ್ಳಿಯಿಂದ ಹಾಲು, ತರಕಾರಿ ಮತ್ತಿತರ ವಸ್ತುಗಳನ್ನು ಜೀಪಿನಲ್ಲಿ ನಗರಕ್ಕೆ ಸಾಗಿಸುವ ವೃತ್ತಿಯ ಬಡವನ ಮಗಳು ತ್ರಿಷ್ಣಾ. ಜೀಪ್ ಅಪಘಾತದಲ್ಲಿ ತ್ರಿಷ್ಣಾಳ ಅಪ್ಪ ತೀವ್ರವಾಗಿ ಗಾಯಗೊಂಡು ಹಾಸಿಗೆ ಹಿಡಿಯುತ್ತಾನೆ. ಕುಟುಂಬದ ಜವಾಬ್ದಾರಿ ತ್ರಿಷ್ಣಾ ಮೇಲೆ ಬೀಳುತ್ತದೆ. ಅದೇ ಸಂದರ್ಭದಲ್ಲಿ ಇಂಗ್ಲೆಂಡಿನಲ್ಲಿ ಬೆಳೆದ ಜಯಸಿಂಗ್ ಯುವ ಹೋಟೆಲ್ ಉದ್ಯಮಿ ತ್ರಿಷ್ಣಾಗೆ ಪರಿಚಯವಾಗುತ್ತಾನೆ. ಹೋಟೆಲ್ ಉದ್ಯಮದಲ್ಲಿ ಅಪ್ಪನಿಗೆ ನೆರವಾಗಲು ಬಂದ ಜಯ್‌ಸಿಂಗ್ ತ್ರಿಷ್ಣಾಳತ್ತ ಆಕರ್ಷಿತನಾಗಿ ಅವಳಿಗೆ ಸಹಾಯದ ಹಸ್ತ ಚಾಚುತ್ತಾನೆ. ಅವನ ಔದಾರ್ಯದ ಹಿಂದೆ ದುರುದ್ದೇಶವಿದೆ ಎಂಬುದು ತ್ರಿಷ್ಣಾಗೆ ಅರ್ಥವಾಗುವುದಿಲ್ಲ. ಮೊದಲು ಜಯಸಿಂಗ್‌ನ ಫಾರಂನಲ್ಲಿ, ನಂತರ ಅವನ ಹೋಟೆಲ್‌ನಲ್ಲಿ ಪರಿಚಾರಕಿಯಾಗುತ್ತಾಳೆ. ಇಬ್ಬರ ನಡುವೆ ಲೈಂಗಿಕ ಸಂಬಂಧ ಬೆಳೆಯುತ್ತದೆ. ಅದರಿಂದ ಹೆದರಿದ ತ್ರಿಷ್ಣಾ ಕೆಲಸ ಬಿಟ್ಟು ಊರಿಗೆ ಬರುತ್ತಾಳೆ. ಊರಿಗೆ ಬಂದ ಕೆಲ ದಿನಗಳಲ್ಲಿ ಅವಳು ಗರ್ಭಿಣಿಯಾಗಿರುವುದು ಅವಳ ಅಪ್ಪ ಅಮ್ಮನಿಗೆ ಗೊತ್ತಾಗುತ್ತದೆ. ಗರ್ಭಪಾತ ಮಾಡಿಸಿ ಅವಳನ್ನು ಸಮೀಪದ ಪಟ್ಟಣದಲ್ಲಿರುವ ಸಂಬಂಧಿಕರ ಮನೆಗೆ ಕಳಿಸಿ ಅಲ್ಲಿನ ಕಾರ್ಖಾನೆಯೊಂದರಲ್ಲಿ ದುಡಿಯಲು ಸೇರಿಸುತ್ತಾರೆ. ಜಯಸಿಂಗ್ ಅವಳನ್ನು ಪತ್ತೆ ಹಚ್ಚಿ ಮುಂಬೈಗೆ ಕರೆತರುತ್ತಾನೆ.

ಮುಂಬೈನಲ್ಲಿ ಇಬ್ಬರೂ ಗಂಡಹೆಂಡಿರಂತೆ ಜೀವನ ಆರಂಭಿಸುತ್ತಾರೆ. ತ್ರಿಷ್ಣಾ ಕ್ರಮೇಣ ಮುಂಬೈನ ಜೀವನಕ್ಕೆ ಒಗ್ಗಿಕೊಳ್ಳುತ್ತಾಳೆ. ಬಾಲಿವುಡ್ ಸಿನಿಮಾಗಳಲ್ಲಿ ಡ್ಯಾನ್ಸರ್ ಆಗುವ ಅವಳ ಆಸೆಗೆ ಜಯಸಿಂಗ್ ಉತ್ತೇಜನ ನೀಡುತ್ತಾನೆ. ಕೆಲ ದಿನಗಳ ನಂತರ ಅಪ್ಪನ ಆರೋಗ್ಯ ಕೆಟ್ಟಿದೆ ಎಂಬ ನೆಪ ಹೇಳಿ ಅವಳನ್ನು ಬಿಟ್ಟು ಹೋಗುತ್ತಾನೆ. ಅವಳ ಬದುಕಿನ ಲಯ ತಪ್ಪುತ್ತದೆ. ಅವಳು ಸಿನಿಮಾ ಲೋಕ ಸೇರುವ ಪ್ರಯತ್ನದಲ್ಲಿರುವಾಗಲೇ ಜಯಸಿಂಗ್ ಮತ್ತೆ ಬರುತ್ತಾನೆ. ನಂತರ ತ್ರಿಷ್ಣಾಳ ಬದುಕು ನರಕವಾಗುತ್ತಾ ಹೋಗುತ್ತದೆ.

ಮುಂಬೈ ಬಿಟ್ಟು ಜಯಸಿಂಗ್‌ನ ಒಡೆತನದ ಹೋಟೆಲ್‌ಗಳಲ್ಲಿ ಪರಿಚಾರಕಿಯಾಗಿ ದುಡಿಯುತ್ತಲೇ ಅವನ ಲೈಂಗಿಕ ದಾಹಕ್ಕೆ ಬಲಿಯಾಗುತ್ತಾ ಹೋಗುತ್ತಾಳೆ. ಅವನ ಆಸೆಗಳೆಲ್ಲ ವಿಕೃತ. ಅವನದು ಹಿಂಗದ ದಾಹ. ಅದರಿಂದ ಹೊರ ಬರುವ ದಾರಿ ಇಲ್ಲ ಎನ್ನುವುದು ಗೊತ್ತಾಗುವ ವೇಳೆಗೆ ಜಯಸಿಂಗ್‌ನ ಲೈಂಗಿಕ ದಾಹಕ್ಕೆ ಹಲವು ಹೆಣ್ಣುಗಳು ಬಲಿಯಾಗಿವೆ ಎಂಬುದು ತ್ರಿಷ್ಣಾಗೆ ಗೊತ್ತಾಗುತ್ತದೆ. ಕಾಮಸೂತ್ರದಲ್ಲಿ ಹೇಳಿದ ಎಲ್ಲಾ ಆಸನಗಳನ್ನೂ ತ್ರಿಷ್ಣಾಳ ಮೇಲೆ ಪ್ರಯೋಗಿಸಿ ಸುಖ ಪಡುವ ಜಯಸಿಂಗ್‌ನ ವಿಕೃತ ವರ್ತನೆಯಿಂದ ಜರ್ಝರಿತಳಾದ ತ್ರಿಷ್ಣಾ ಅವನನ್ನು ಹಾಸಿಗೆಯಲ್ಲೇ ಇರಿದು ಕೊಲ್ಲುತ್ತಾಳೆ. ನಂತರ ಊರಿಗೆ ಹೋಗಿ ಅಲ್ಲಿ ಜಯಸಿಂಗ್‌ನನ್ನು ಕೊಂದ ಚೂರಿಯಿಂದ ಇರಿದುಕೊಂಡು ಸಾಯುತ್ತಾಳೆ.

ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ಈ ಚಿತ್ರ ಆಧುನಿಕತೆಗೆ ತೆರೆದುಕೊಂಡ ಭಾರತದ ಹಳ್ಳಿಗಾಡಿನ ಬಡ ಕುಟುಂಬಗಳ ಹೆಣ್ಣುಮಕ್ಕಳಿಗೆ ಆರ್ಥಿಕ ದುಸ್ಥಿತಿಯಿಂದ ಹೊರಬರುವ ದಾರಿಗಳೇ ಅವರನ್ನು ಲೈಂಗಿಕ ಶೋಷಣೆಗೆ ದೂಡುತ್ತವೆ ಎನ್ನುವ ಕಟು ವಾಸ್ತವವನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ.

ಥಾಮಸ್ ಹಾರ್ಡಿಯ ಕಾದಂಬರಿಯ ವಸ್ತುವೂ ಇದೇ. ಆದರೆ ಅದನ್ನೇ ಭಾರತೀಯ ಪರಿಸರಕ್ಕೆ ಸಂಗತಗೊಳಿಸುವ ಪ್ರಯತ್ನವಾಗಿ ತ್ರಿಷ್ಣಾ ಲೈಂಗಿಕ ಶೋಷಣೆಯ ಕರಾಳತೆಯನ್ನು ಅನಾವರಣಗೊಳಿಸುತ್ತದೆ. ಜಯಸಿಂಗ್‌ನ ಶೋಷಣೆಯಿಂದ ತಪ್ಪಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳುವ ಬದಲು ಅವನನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗುವ ಅನಿವಾರ್ಯತೆ ಇತ್ತೇ ಎಂಬ ಪ್ರಶ್ನೆ ಹಾಗೇ ಉಳಿದುಬಿಡುತ್ತದೆ.

`ಸ್ಲಂ ಡಾಗ್ ಮಿಲೇನಿಯರ್~ ಚಿತ್ರದ ನಾಯಕಿಯಾಗಿ ಭಾರತೀಯ ಸಿನಿಮಾ ಪ್ರೇಕ್ಷಕರ ಗಮನಸೆಳೆದ ಫ್ರೀಡಾ ಪಿಂಟೊ ತ್ರಿಷ್ಣಾ ಪಾತ್ರದಲ್ಲಿ ವಿಜೃಂಭಿಸಿದ್ದಾರೆ. ಲೈಂಗಿಕತೆಯನ್ನು ತೆರೆಯ ಮೇಲೆ ಸಾಂಕೇತಿಕವಾಗಿ ತೋರಿಸಿ ಗಾಢ ಪರಿಣಾಮ ಬೀರುವ ಸಾಧ್ಯತೆಗಳನ್ನೆಲ್ಲ ಪಕ್ಕಕ್ಕಿಟ್ಟು ಲೈಂಗಿಕ ಶೋಷಣೆಯ ಹೆಸರಿನಲ್ಲಿ ವಿಕೃತ ಕಾಮ ಹಾಗೂ ಅಸಹಾಯಕತೆಗಳನ್ನು ನಿರ್ದೇಶಕ ಮೈಕೇಲ್ ಭಾರತೀಯ ಪ್ರೇಕ್ಷಕರಿಗೆ ಅಚ್ಚರಿಯಾಗುವಂತೆ ತೆರೆಯ ಮೇಲೆ ತೋರಿಸಿದ್ದಾರೆ. ಭಾರತೀಯ ಚಿತ್ರಗಳಲ್ಲಿ ಇಲ್ಲದ ಲೈಂಗಿಕ ದೃಶ್ಯಗಳಿಂದ ಈ ಚಿತ್ರ ಭಿನ್ನವಾಗುತ್ತದೆ.

ಭಾರತೀಯ ನಟಿಯರಿಂದ ಇಂತಹ ಮುಕ್ತ ಅಭಿನಯ ಸಾಧ್ಯವೇ ಇಲ್ಲ ಎನ್ನಿಸುವಷ್ಟು ತೆರೆದುಕೊಂಡು ಲೈಂಗಿಕ ದೃಶ್ಯಗಳಲ್ಲಿ ಫ್ರೀಡಾ ಚಿತ್ರದ ಉದ್ದಕ್ಕೂ ಆಕ್ರಮಿಸಿಕೊಂಡಿದ್ದಾರೆ. ಹಳ್ಳಿ ಹುಡುಗಿಯ ಮುಗ್ಧತೆ, ಮುಂಬೈ ಸೇರಿ ಅಲ್ಲಿನ ಬದುಕಿಗೆ ಒಗ್ಗಿಕೊಂಡು ಗೆಳೆಯನ ಲೈಂಗಿಕ ಆಕ್ರಮಗಳನ್ನು ಒಪ್ಪಿಕೊಂಡು ಬದುಕುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ ದಿಟ್ಟತನಗಳನ್ನು ಅವರು ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ.

ಜಯಸಿಂಗ್‌ನದ್ದು ಪ್ರೀತಿಯಲ್ಲ, ಲೈಂಗಿಕ ವಿಕೃತಿ ಎನ್ನುವುದು ಗೊತ್ತಾದ ನಂತರ ಅದರಿಂದ ಹೊರಬರುವ ಮಾರ್ಗ ಕಾಣದೆ ಚಡಪಡಿಸುವ ಅಸಹಾಯಕ ಸನ್ನಿವೇಶಗಳಲ್ಲಿ ಫ್ರೀಡಾ ಅಭಿನಯ ಸೊಗಸಾಗಿದೆ. `ನಮ್ಮ ಹುಡುಗಿ~ ಎಂಬ ಅಭಿಮಾನದಲ್ಲಿ ಚಿತ್ರ ನೋಡಲು ಬಂದ ಗೋವಾದ ಅನೇಕ ಮಹಿಳೆಯರು ಈ ಚಿತ್ರ ನೋಡಿದ ನಂತರ ಫ್ರೀಡಾ ಬಗ್ಗೆ ಏನನ್ನೂ ಹೇಳದ ಸ್ಥಿತಿ ತಲುಪಿದ್ದರು.

`ಸ್ಲಂಡಾಗ್ ಮಿಲೇನಿಯರ್~ ಚಿತ್ರದ ಮೂಲಕ ಭಾರತೀಯ ಕೊಳೆಗೇರಿ ಜನರ ಬದುಕು ತೆರೆಯ ಮೇಲೆ ವಿಜೃಂಭಿಸಿತ್ತು. ಅದು ಜಗತ್ತಿನ ಗಮನವನ್ನೂ ಸೆಳೆದಿತ್ತು. ಈಗ ಥಾಮಸ್ ಹಾರ್ಡಿ ಕಾದಂಬರಿ ಆಧಾರಿತ ಚಿತ್ರ ಎಂಬ ಹೆಸರಿನಲ್ಲಿ ಆರ್ಥಿಕ ಸ್ವಾವಲಂಬಿಯಾಗುವ ಅನಿವಾರ್ಯತೆಯಲ್ಲಿ ಲೈಂಗಿಕ ಶೋಷಣೆಯನ್ನೂ ಒಪ್ಪಿಕೊಳ್ಳುವ ಭಾರತೀಯ ಗ್ರಾಮೀಣ ಬಡ ಕುಟುಂಬಗಳ ಯುವತಿಯರ ಬದುಕನ್ನು ಈ ಚಿತ್ರ ಸಮರ್ಥವಾಗಿ ಧ್ವನಿಸುತ್ತದೆ. 

ರಾಜಸ್ತಾನದ ಅರಮನೆಗಳು, ಕೋಟೆ ಕೊತ್ತಲಗಳ ಹಿನ್ನೆಲೆಯ ಗ್ರಾಮೀಣ ಪರಿಸರ ಚಿತ್ರಕ್ಕೆ ವಿಶೇಷ ಮೆರಗು ನೀಡಿದೆ. ಈ ಸಿನಿಮಾ ಚಿತ್ರೋತ್ಸವದಲ್ಲಿ ಮೂರು ಸಲ ಪ್ರದರ್ಶನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT