ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛಂದ ಭಗ್ನತಾರೆಗಳು ಪತ್ತೆ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಟೊರಾಂಟೊ (ಐಎಎನ್‌ಎಸ್): ಇನ್ನೂ ಪ್ರಾಯಾವಸ್ಥೆಯಲ್ಲಿರುವ ಎರಡು ತಾರಾಪುಂಜಗಳಲ್ಲಿ ನೆಲೆಯಾಗಿ ಸ್ವಚ್ಛಂದವಾಗಿ ಅಲೆದಾಡುತ್ತಿರುವ 24 ಹೊಸ ಕಂದು ಕುಬ್ಜಗಳನ್ನು ಖಗೋಳವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಭಗ್ನ ತಾರೆಗಳೆಂದೂ ಹೆಸರಾಗಿರುವ ಈ ಕಂದು ಕುಬ್ಜಗಳು ಮಧ್ಯಮಗಾತ್ರದ ಕಾಯಗಳು. ಗೃಹಗಳಿಗೆ ಹೋಲಿಸಿದರೆ ಇವುಗಳ ಗಾತ್ರ ಬೃಹತ್ತಾದುದು; ಆದರೆ ಇವು ಜಲಜನಕವನ್ನು ಸ್ವಯಂ ದಹಿಸಿ ತಾರೆಗಳಾಗಿ ಮಾರ್ಪಾಡಾಗಬಲ್ಲಷ್ಟು ದೊಡ್ಡವಲ್ಲ.

ಇದನ್ನು ಗಮನಿಸಿದರೆ, ಗೃಹದ ದ್ರವ್ಯರಾಶಿ ರೂಪುಗೊಳ್ಳುವಲ್ಲಿ ನಿಸರ್ಗದಲ್ಲಿ ಒಂದಕ್ಕಿಂತ ಹೆಚ್ಚಿನ ಮಾರ್ಗೋಪಾಯಗಳಿರುವುದು ದೃಢಪಡುತ್ತದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಟೊರಾಂಟೊ ವಿ.ವಿ ಪ್ರೊಫೆಸರ್ ರೇ ಜಯವರ್ಧನ ಪ್ರತಿಪಾದಿಸಿದ್ದಾರೆ.

ಈ ಭಗ್ನ ತಾರೆಗಳು ಸೃಷ್ಟಿಯ ಆರಂಭದ ಹಂತದಲ್ಲಿ, ತಾರೆಯಂತೆ ಪ್ರಕಾಶಮಾನವಾಗಿ ಬೆಳಗುತ್ತವೆ. ಆದರೆ ಈ ಕಾಯಗಳು ಕ್ರಮೇಣ ತಣ್ಣಗಾಗಿ ಗೃಹವನ್ನು ಹೋಲುವ ವಾತಾವರಣ ಸೃಷ್ಟಿಯಾಗುತ್ತದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಬಹುತೇಕ ಕಂದುಕುಬ್ಜಗಳು, ತಾರೆಗಳ ಮಾದರಿಯಲ್ಲೇ ಸಂಕುಚಿತ ಅನಿಲ ಮೋಡಗಳಿಂದ ಪ್ರತ್ಯೇಕಗೊಂಡು ಉದ್ಭವಿಸಿರಬಹುದು. ಆದರೆ ಕೆಲವೊಂದು ಕಿರುಗಾತ್ರದ ಸ್ವಚ್ಛಂದ ಕಾಯಗಳು ತಾರೆಯ ಸುತ್ತ ಗೃಹ ರೂಪುಗೊಳ್ಳುವಂತೆ ರೂಪುಗೊಂಡು ನಂತರ ಹೊರಚಿಮ್ಮಿರುವ ಸಂಭವವಿದೆ ಎಂದೂ ತಜ್ಞರು ಹೇಳಿದ್ದಾರೆ.

ಹವಾಯಿಯಲ್ಲಿರುವ ಸುಬರು ದೂರದರ್ಶಕ ಮತ್ತು ಚಿಲಿಯಲ್ಲಿರುವ ವಿಎಲ್‌ಟಿ ದೂರದರ್ಶಕಗಳ ನೆರವಿನಿಂದ ಇವನ್ನು ಪತ್ತೆಹಚ್ಚಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT