ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಕಾಣದ ಹಣಗೆರೆ ಧಾರ್ಮಿಕ ಕೇಂದ್ರ

ಕೋಟಿ ಆದಾಯ ಬಂದರೂ ಅಭಿವೃದ್ಧಿ ಶೂನ್ಯ!, ಭಕ್ತರಿಗೆ ದೊರೆಯದ ಸೌಲಭ್ಯ
Last Updated 10 ಜನವರಿ 2014, 9:10 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಭಕ್ತಿ ಕೇಂದ್ರಕ್ಕೆ ಇರಬೇಕಾದ ಯಾವ ಶುಚಿತ್ವವೂ ಇಲ್ಲಿ ಇಲ್ಲ. ಎಲ್ಲಿನೋಡಿದರೂ ಕಸದ ರಾಶಿ. ಕೊಚ್ಚೆ ನೀರು, ನೊಣ, ಸೊಳ್ಳೆ, ಕ್ರಿಮಿ–ಕೀಟಗಳಿಂದ ಈ ಧಾರ್ಮಿಕ ಕೇಂದ್ರ ತುಂಬಿ ಹೋಗಿದೆ.

ಇದು ನಾಡಿನ ಹೆಮ್ಮೆಯ ಸೌಹಾರ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ತಾಲ್ಲೂಕಿನ  ಹಣಗೆರೆಯ ಹಜರತ್‌ ಸೈಯದ್‌ ಸಾದತ್‌ ದರ್ಗಾ ಹಾಗೂ ಭೂತರಾಯ ಚೌಡೇಶ್ವರಿ ದೇವಸ್ಥಾನದ ದುಸ್ಥಿತಿ.

ನಾಡಿನ ವಿವಿಧ ಭಾಗಗಳಿಂದ ಪ್ರತಿ ನಿತ್ಯ ಇಲ್ಲಿನ  ಧಾರ್ಮಿಕ  ಕೇಂದ್ರಕ್ಕೆ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಹುಣ್ಣಿಮೆ, ಅಮವಾಸ್ಯೆಯಂದು ವಿಶೇಷ ಪೂಜೆ ಇರುವ ಕಾರಣ ಭಕ್ತರ ದಂಡೇ ಹಣಗೆರೆ ದೇವಸ್ಥಾನಕ್ಕೆ ಬರುತ್ತದೆ.
ಶಿವಮೊಗ್ಗದಿಂದ ಆಯನೂರು ಮಾರ್ಗವಾಗಿ ತೀರ್ಥಹಳ್ಳಿ ಕಡೆಗೆ ಹೋಗುವ ಮಾರ್ಗದಲ್ಲಿ ಸಿಗುವ ದೇವಸ್ಥಾನಕ್ಕೆ  ಹಿಂದೂ, ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯದ ಭಕ್ತರು ಬರುತ್ತಾರೆ. ಹರಕೆ ಒಪ್ಪಿಸುವ ಸಲುವಾಗಿ ತಂದ ಕೋಳಿ, ಕುರಿಗಳನ್ನು ದೇವರಿಗೆ ಬಲಿ ನೀಡಿ ಅಲ್ಲಿಯೇ ಊಟ ಮಾಡಿ ಒಂದು ದಿನದ ಮಟ್ಟಿಗೆ ತಂಗಿ ಹೋಗುತ್ತಾರೆ.

ಮುಜರಾಯಿ ಒಡೆತನಕ್ಕೆ ಸೇರಿರುವ ಈ ಧಾರ್ಮಿಕ ಕೇಂದ್ರದಿಂದ ವರ್ಷಕ್ಕೆ ಎರಡು ಕೋಟಿ ಆದಾಯವಿದ್ದರೂ ಅದನ್ನು ಇಲ್ಲಿನ ಅಭಿವೃದ್ಧಿಗೆ ಬಳಸುತ್ತಿಲ್ಲ. ಮೂರು ತಿಂಗಳಿಗೊಮ್ಮೆ ಮುಜರಾಯಿ ಅಧಿಕಾರಿ ಹಾಗೂ ತಹಶೀಲ್ದಾರ್‌ ನೇತೃತ್ವದಲ್ಲಿ ಹುಂಡಿ ಎಣಿಕೆ ನಡೆಸಿ ಹಣವನ್ನು ಇಲಾಖೆ ಖಜಾನೆಗೆ ಜಮಾ ಮಾಡಲಾಗುತ್ತದೆ.

ಜಿಲ್ಲಾಡಳಿತ ಕೂಡಾ ಹಣಗೆರೆ ದೇವಸ್ಥಾನದ ಅಭಿವೃದ್ದಿಗೆ ಗಮನಹರಿಸಿಲ್ಲ. ಪ್ರತಿ ವರ್ಷ ಉರುಸ್‌ ನಡೆಸಿ ಕೈತೊಳೆದುಕೊಳ್ಳುವ ಆಡಳಿತ ಭಕ್ತರ ಅನುಕೂಲಕ್ಕೆ ಬೇಕಾದ ಕನಿಷ್ಠ ಸೌಕರ್ಯಗಳಾದ ಶೌಚಾಲಯ, ವಸತಿ ವ್ಯವಸ್ಥೆ  ಕಲ್ಪಿಸಿಲ್ಲ. ಧಾರ್ಮಿಕ ದತ್ತಿ ಇಲಾಖೆ ಆಡಳಿತಕ್ಕೆ
ಒಳಪಟ್ಟ  ಕೇಂದ್ರದ ಆಡಳಿತವನ್ನು ಕಂದಾಯ ಇಲಾಖೆ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಭಕ್ತರು ಸಮರ್ಪಿಸುವ ಪೂಜಾ ಸಾಮಗ್ರಿ, ನಗದು ಅಧಿಕಾರಸ್ಥರ ಪಾಲಾಗುತ್ತಿದೆ ಎಂಬ ದೂರು ವ್ಯಾಪಕವಾಗಿ ಕೇಳಿಬಂದಿವೆ. ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲದಂತಾಗಿದೆ.

ಧಾರ್ಮಿಕ ಕೇಂದ್ರದಲ್ಲಿ ನಡೆಯುತ್ತಿರುವ ಪ್ರತಿ ಬೆಳವಣಿಗೆಯನ್ನು ಚಿತ್ರಿಸುವ ಉದ್ದೇಶದಲ್ಲಿ ರೂ. 1,59,773 ವೆಚ್ಚದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ತಾಂತ್ರಿಕ ದೋಷದ ನೆಪ ಹೇಳಿ ಕ್ಯಾಮೆರಾ ಚಾಲನೆಯನ್ನು ಸ್ಥಗಿತಗೊಳಿಸುವ ಕೆಲಸ ಆಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಧಾರ್ಮಿಕ ಕೇಂದ್ರದ ಹೆಸರಿನಲ್ಲಿ ಸುಮಾರು ರೂ. 4 ಕೋಟಿಗೂ ಹೆಚ್ಚು ಹಣವನ್ನು ಠೇವಣಿ ಇಡಲಾಗಿದೆ. ಜಿಲ್ಲಾ ಪಂಚಾಯ್ತಿ ರೂ. 25 ಲಕ್ಷ ವೆಚ್ಚದಲ್ಲಿ ವಿವಿದ್ಧೋದ್ದೇಶ ಮಳಿಗೆ ನಿರ್ಮಿಸಿದ್ದು ಕಾಮಗಾರಿ ಕಳಪೆಯಾಗಿದೆ. ರೂ. 15 ಲಕ್ಷ ವೆಚ್ಚದಲ್ಲಿ ಕೈಗೊಂಡ ಕುಡಿಯುವ ನೀರಿನ ಯೋಜನೆಯಿಂದ ಭಕ್ತರಿಗೆ ಸಮರ್ಪಕ ಕುಡಿಯುವ ನೀರು ದೊರಕುತ್ತಿಲ್ಲ.

ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಆ ಭಾಗದ ಸದಸ್ಯರಾದ ನಾಗರತ್ನಾ ಚನ್ನವೀರಪ್ಪ ಅವರು ಹಣಗೆರೆ ಧಾರ್ಮಿಕ ಕೇಂದ್ರದ ಅಭಿವೃದ್ದಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದರೂ ಅಭಿವೃದ್ಧಿ ಮಾತ್ರ ಆಗಿಲ್ಲ ಎಂದು ಸ್ಥಳೀಯರಾದ ಶಿವಕುಮಾರ್‌ ದೂರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT