ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸ್ವಚ್ಛತೆಗೆ ಆದ್ಯತೆ ನೀಡದ ಗ್ರಾ.ಪಂ'

Last Updated 27 ಡಿಸೆಂಬರ್ 2012, 9:38 IST
ಅಕ್ಷರ ಗಾತ್ರ

ಗಜೇಂದ್ರಗಡ: ರೋಣ ತಾಲ್ಲೂಕಿನ ಕೊಡಗಾನೂರ ಗ್ರಾಮದಲ್ಲಿ ಸರ್ಕಾರಿ ರೀತಿ-ನಿಯಮ ಗಾಳಿಗೆ ತೂರಿದ ಪರಿಣಾಮ ಗ್ರಾಮಸ್ಥರ ಬದುಕೇ ಡೋಲಾಯಮಾನ ಸ್ಥಿತಿಗೆ ತಲುಪಿದೆ. ಹೌದು, ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಹಾಗೂ ಅತಿಯಾದ ಸ್ವಾರ್ಥ ಮನೋಭಾವದಿಂದಾಗಿ ಗ್ರಾಮ ಸ್ಥರೆಲ್ಲರೂ ಅನಾರೋಗ್ಯಕ್ಕೆ ಸಿಲುಕಿದ ಅವಘಡವೊಂದು ಕಳೆದ ಸೋಮವಾರರಂದು ಗ್ರಾಮದಲ್ಲಿ ಸಂಭವಿಸಿದ್ದು, ಗ್ರಾಮಸ್ಥರಲ್ಲಿ ತಲ್ಲಣವುಂಟು ಮಾಡಿದೆ.

ಅವಘಡಕ್ಕೆ ಕಾರಣ: ಕೊಡಗಾನೂರ ಗ್ರಾಮಸ್ಥರಿಗೆ ಸರಬರಾಜು ಆಗುವ ಕುಡಿಯುವ ನೀರು ಕಲುಷಿತಗೊಂಡ ಪರಿಣಾಮ 64 ಜನ ಅಸ್ವಸ್ಥಗೊಂಡು ಒಬ್ಬ ವ್ಯಕ್ತಿ ಎಸ್‌ಡಿಎಂಸಿ ಆಸ್ಪತ್ರೆಗೆ ಹಾಗೂ ಇನ್ನೊಬ್ಬ ವ್ಯಕ್ತಿ ಗದಗ ಜರ್ಮನ್ ಆಸ್ಪತ್ರೆಗೆ ದಾಖಲಾದ ಘಟನೆ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

ಅವೈಜ್ಞಾನಿಕ ಸರಬರಾಜು?: ತಾಲ್ಲೂಕಿನ ಕುಗ್ರಾಮ ಗಳಲ್ಲಿ ಕೊಡಗಾನೂರ ಗ್ರಾಮವೂ ಒಂದು. ಕನಿಷ್ಠ ಮೂಲ ಸೌಕರ್ಯಗಳಿಂದ ಬಹು ದೂರ ಉಳಿದ ಕೊಡಗಾನೂರ 1,674 ಜನಸಂಖ್ಯೆ ಹಾಗೂ 260 ಕುಟುಂಬಗಳನ್ನು ಹೊಂದಿದೆ. ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ ನಿತ್ಯ 66,960 ಲೀಟರ್ ನೀರು ಸರಬರಾಜು ಆಗಬೇಕು. ಗ್ರಾಮಸ್ಥರಿಗೆ ಅಗತ್ಯವಿರುವ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಗ್ರಾಮದ ಹೊರ ವಲಯದಲ್ಲಿ ಎರಡು ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ.

ಜೊತೆಗೆ ಗ್ರಾಮಸ್ಥರಿಗೆ ಅಗತ್ಯವಿರುವ ನೀರು ಸರಬರಾಜಿನಲ್ಲಿ ವಿಳಂಬವಾಗಬಾರದು ಎಂಬ ಕಾರಣಕ್ಕೆ ಒಂದೂವರೆ ದಶಕದ ಹಿಂದೆ ಗ್ರಾಮದ ಹೊರ ವಲಯದಲ್ಲಿ  2007-08 ರಲ್ಲಿ 11 ಲಕ್ಷ ವೆಚ್ಚದಲ್ಲಿ 50,000 ಸಾವಿರ ಲೀಟರ್ ಸಾಮರ್ಥ್ಯದ ಮೇಲ್ದರ್ಜೆಯ ನೀರು ಸಂಗ್ರಹ ತೊಟ್ಟಿಯನ್ನು ನಿರ್ಮಿಸಿ, ಆ ಮೂಲಕ ಗ್ರಾಮಸ್ಥರಿಗೆ ಶೀಘ್ರ ಗತಿಯಲ್ಲಿ ನೀರು ಸರಬರಾಜು ಆಗುವಂತೆ ನೋಡಿ ಕೊಳ್ಳಲಾಗಿದೆ.

ಆದರೆ, ಕುಡಿಯುವ ನೀರು ಸರಬರಾಜು ಪೈಪ್ ಲೈನ್‌ನ್ನು ದುರಸ್ತಿಗೊಳಿಸದಿರುವುದು ಹಾಗೂ ಮೇಲ್ದರ್ಜೆ ನೀರು ಸಂಗ್ರಹ ತೊಟ್ಟಿಯನ್ನು ಬಹುತೇಕ ವರ್ಷಗಳಿಂದ ಸ್ವಚ್ಛಗೊಳ್ಳದಿರುವುದೇ ಗ್ರಾಮಸ್ಥರು ಕಲುಷಿತ ನೀರು ಸೇವಿಸಿ, ಅನಾರೋಗ್ಯಕ್ಕೆ ತುತ್ತಾಗಲು ಪ್ರಮುಖ ಕಾರಣ ಎನ್ನಲಾಗಿದೆ.

ದುರಸ್ತಿಯಾಗದ ನೀರು ಸರಬರಾಜು ಪೈಪ್‌ಗಳು: ಕೊಡಗಾನೂರ ಗ್ರಾಮದಲ್ಲಿ ನಾಗರಿಕರಿಗೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಗಟಾರುಗಳ ಅಕ್ಕ-ಪಕ್ಕದಲ್ಲಿ ಕುಡಿಯುವ ನೀರು ಸರಬರಾಜು ಪೈಪ್‌ಗಳನ್ನು ನೆಲದಲ್ಲಿ ಹೂಳಲಾಗಿದೆ. ಯೋಜನೆ ಆರಂಭದಲ್ಲಿ ಹೂಳಲಾದ ಪೈಪ್‌ಗಳು ಅಲ್ಲಲ್ಲಿ ತುಕ್ಕು ಹಿಡಿದು ತುಂಡಾಗಿವೆ.

ಹೀಗೆ ತುಂಡಾದ ಪೈಪ್‌ಗಳಲ್ಲಿ ಗಟಾರಿನ ಮಲೀನ ನೀರು ಸೇರಿಕೊಳ್ಳುತ್ತಿವೆ. ಈ ಮಲಿನ ನೀರು ಸೇವನೆಯಿಂದಾಗಿಯೇ ಗ್ರಾಮಸ್ಥರ ಆರೋಗ್ಯದಲ್ಲಿ ಏರು ಪೇರು ಸಂಭವಿಸಿದೆ ಎನ್ನುವುದು ಗ್ರಾಮಸ್ಥರ ವಾದ.

ಗ್ರಾ.ಪಂನ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಬಲಿಪಶು:
ಕುಡಿಯುವ ನೀರಿನ ಪೈಪ್‌ಲೈನ್‌ಗಳು ದುರಸ್ತಿಗೊಂಡು ಗಟಾರು ನೀರನಲ್ಲಿ ಕುಡಿಯುವ ನೀರು ಮಿಶ್ರಗೊಳ್ಳುತ್ತಿರುವ ಕುರಿತು, ಗ್ರಾ.ಪಂ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಸೂಕ್ತ ಕ್ರಮ ಕೈಗೊಳ್ಳಲಾಗುವುದು: ಕೊಡಗಾನೂರ ಗ್ರಾಮದ ಕಲುಷಿತ ನೀರು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಜಿ.ಪಂ ಎಂಜಿನಿಯರ್ ವಿ.ಕೆ.ಕಾಳಪ್ಪನವರ ಅವರಿಗೆ ಎರಡು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಇಂಥ ಅವಘಡಗಳು ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ರುದ್ರಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT