ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವತಂತ್ರ ಪ್ಯಾಲೆಸ್ಟೈನ್ : ಭಾರತ ಬೆಂಬಲ

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಪ್ಯಾಲೆಸ್ಟೈನ್ ರಾಷ್ಟ್ರದ ಅಸ್ತಿತ್ವವನ್ನು ಮಾನ್ಯ ಮಾಡಿ 1988ರಲ್ಲಿ ಕೈಗೊಂಡಿರುವ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಪ್ಯಾಲೆಸ್ಟೈನ್‌ಗೆ ವಿಶ್ವಸಂಸ್ಥೆಯಲ್ಲಿ ಪೂರ್ಣ ಸದಸ್ಯತ್ಯ ನೀಡಬೇಕು ಎಂದು ನಿರ್ಣಯ ಕೈಗೊಂಡರೆ, ಅದರ ವಿರುದ್ಧ ವಿಟೋ ಅಧಿಕಾರ ಚಲಾಯಿಸುವುದಾಗಿ ಅಮೆರಿಕ ಬೆದರಿಕೆ ಒಡ್ಡಿರುವುದರ ನಡುವೆಯೇ ಭಾರತ ಈ ಸ್ಪಷ್ಟನೆ ನೀಡಿ ಪ್ಯಾಲೆಸ್ಟೈನ್‌ಗೆ ಬೆಂಬಲ ಸೂಚಿಸಿದೆ.

`ಪ್ಯಾಲೆಸ್ಟೈನ್ ಕುರಿತಂತೆ ನಮ್ಮ ನಿಲುವು ಸ್ಪಷ್ಟವಾಗಿದ್ದು, ಅದು ಎಲ್ಲರಿಗೂ ತಿಳಿದಿದೆ.  ಪ್ಯಾಲೆಸ್ಟೈನ್ ಒಂದು ರಾಷ್ಟ್ರ ಎಂಬುದಾಗಿ ನಾವು 1988ರಲ್ಲೇ ಪರಿಗಣಿಸಿದ್ದೇವೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ~ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ರಂಜನ್ ಮಥಾಯ್ ತಿಳಿಸಿದ್ದಾರೆ.

ರಾಷ್ಟ್ರದ ಮಾನ್ಯತೆ ನೀಡಿ ಎಂದು ಕೋರಿ ಪ್ಯಾಲೆಸ್ಟೈನ್ ಸಲ್ಲಿಸಿರುವ ಮನವಿಯನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಭದ್ರತಾ ಮಂಡಲಿ ಅಧ್ಯಕ್ಷರಿಗೆ ರವಾನಿಸಿರುವ ಹಿನ್ನೆಲೆಯಲ್ಲಿ ಮಥಾಯ್ ಈ ಹೇಳಿಕೆ ನೀಡಿದ್ದಾರೆ. ಪ್ಯಾಲೆಸ್ಟೈನ್‌ಗೆ ವಿಶ್ವಸಂಸ್ಥೆ ಸದಸ್ಯತ್ವ ನೀಡುವುದಕ್ಕೆ ಅಮೆರಿಕೆ ವಿರೋಧ ವ್ಯಕ್ತಪಡಿಸಿದೆ.

ರಾಷ್ಟ್ರ ಮಾನ್ಯತೆಗೆ ಮನವಿ
ವಿಶ್ವಸಂಸ್ಥೆ: ಅಮೆರಿಕದ ತೀವ್ರ ವಿರೋಧದ ನಡುವೆಯೂ ಪ್ಯಾಲೆಸ್ಟೈನ್‌ನನ್ನು  ರಾಷ್ಟ್ರವಾಗಿ ಗುರುತಿಸಬೇಕು ಎಂದು ಪ್ಯಾಲೆಸ್ಟೈನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಶುಕ್ರವಾರ ವಿಶ್ವಸಂಸ್ಥೆಗೆ ಮನವಿ ಮಾಡಿದರು.

 ವಿಶ್ವಸಂಸ್ಥೆಯಲ್ಲಿ ಪೂರ್ಣ ಸದಸ್ಯತ್ವ ನೀಡಬೇಕು ಎಂದು ಕೋರುವ ಅಧಿಕೃತ ಮನವಿಯನ್ನೂ ಅಬ್ಬಾಸ್ ಅವರು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ  ಸಲ್ಲಿಸಿದರು.

ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮಾತನಾಡಿದ ಅವರು, `ದಶಕಗಳವರೆಗೆ ಸ್ಥಳಾಂತರ, ವಸಾಹತುಶಾಹಿ ಆಡಳಿತ ಮತ್ತು ಕೊನೆಗಾಣದ ಸಂಕಷ್ಟಗಳನ್ನು ಅನುಭವಿಸಿದ ನನ್ನ ಕೆಚ್ಚಿನ ಮತ್ತು ಹೆಮ್ಮೆಯ ಜನರು ಈಗ ಭೂಮಿ ಮೇಲೆ ಇತರರಂತೆ, ಸ್ವತಂತ್ರ ರಾಷ್ಟ್ರದಲ್ಲಿ ಬದುಕುವ ಕಾಲ ಬಂದಿದೆ~ ಎಂದು ಹೇಳಿದರು.

ಇಸ್ರೇಲ್- ಪ್ಯಾಲೆಸ್ಟೈನ್ ಘರ್ಷಣೆಯನ್ನು ಶಾಂತಿ ಪ್ರಕ್ರಿಯೆ ಮೂಲಕವೇ ಪರಿಹರಿಸಬಹುದು, ಹೇಳಿಕೆಗಳು ಮತ್ತು ವಿಶ್ವಸಂಸ್ಥೆಯಲ್ಲಿನ ನಿರ್ಣಯಗಳಿಂದಲ್ಲ ಎಂದು ಅವೆುರಿಕ ಅಧ್ಯಕ್ಷ  ಒಬಾಮ ಪ್ಯಾಲೆಸ್ಟೈನ್‌ನ ಈ ಕ್ರಮವನ್ನು ಬುಧವಾರ ವಿರೋಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT