ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವತಂತ್ರ ಭಾರತದ ಮಹಾಕಾವ್ಯ

Last Updated 22 ಜನವರಿ 2011, 8:55 IST
ಅಕ್ಷರ ಗಾತ್ರ

ಜನವರಿ 26 ಭಾರತದ ಸಂವಿಧಾನ ಜಾರಿಗೆ ಬಂದ ದಿನ. ಒಂದರ್ಥದಲ್ಲಿ ಅದು ನಿಜವಾದ ಸ್ವಾತಂತ್ರ್ಯ ದಿನ. ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಬಂತು. ಆದರೆ ದೇಶದ ಜನಕ್ಕೆ ಸ್ವಾತಂತ್ರ್ಯ ಬಂದದ್ದು 1950ರಲ್ಲಿ ಸಂವಿಧಾನ ಅನುಷ್ಠಾನಕ್ಕೆ ಬಂದಾಗ. ಅದು ಭಾರತದ ಜನ ಈ ದೇಶದ ಪ್ರಜೆಗಳಾಗಿ ತಮ್ಮನ್ನು ತಾವು ಕಂಡುಕೊಂಡ ದಿನ.

ಅಧಿಕಾರಸ್ಥರನ್ನು ಪ್ರಶ್ನಿಸುವ ಸ್ವಾತಂತ್ರ್ಯ ದೇಶದ ಸಾಮಾನ್ಯ ಪ್ರಜೆಗಳಿಗೆ ವಿಧಿವತ್ತಾಗಿ ಲಭ್ಯವಾದ ದಿನ. ಇಲ್ಲಿ ಯಾರ ಅಧಿಕಾರವೂ ಅಂತಿಮವಲ್ಲ; ಯಾರೊಬ್ಬರೂ ಸಂವಿಧಾನ ಹಾಕಿಕೊಟ್ಟ ಗೆರೆ ಮೀರುವ ಹಾಗಿಲ್ಲ ಎಂಬ ವ್ಯವಸ್ಥೆ ಅಂದಿನಿಂದ ಬಂತು. ಅದೊಂದು ಚಾರಿತ್ರಿಕ ತಿರುವು. ರಾಜ ಮಹಾರಾಜರ, ಸಾಮ್ರಾಜ್ಯಶಾಹಿ ಶಕ್ತಿಗಳ ಮುಂದೆ ಶತಶತಮಾನಗಳಿಂದಲೂ ದೈನೇಸಿ ನಿಲ್ಲಬೇಕಾಗಿದ್ದ ಭಾರತದ ಶ್ರೀಸಾಮಾನ್ಯ ಇನ್ನುಮುಂದೆ ತನ್ನನ್ನು ಆಳುವವರ ಮೇಲೊಂದು ಹಿಡಿತ ಹೊಂದಿರುತ್ತಾನೆ ಎಂದರೆ ಅದು ಅಂತಿಂಥ ಬದಲಾವಣೆಯಲ್ಲ. ಪ್ರಪಂಚದ ಎಷ್ಟೊ ಸ್ವತಂತ್ರ ದೇಶಗಳು ಅಂತಹದ್ದೊಂದು ಬದಲಾವಣೆಯನ್ನು ಇನ್ನೂ ಕಂಡಿಲ್ಲ.

ಇಂತಹ ಸ್ಥಿತ್ಯಂತರಕ್ಕೆ ನಾಂದಿ ಹಾಡಿದ ದಿನವನ್ನು ಗಣರಾಜ್ಯ ದಿನ, ಗಣತಂತ್ರ ದಿನ ಅಂತ ಕರೆಯಲಾಯಿತು. ಇಂಗ್ಲಿಷ್‌ನಲ್ಲಿ ಅದು ‘ರಿಪಬ್ಲಿಕ್ ಡೇ’. ಬಹುಶಃ ಈ ದಿನಕ್ಕೆ ಬೇರೆ ಯಾವುದಾದರೂ ಹೆಸರು ಇಡಬೇಕಿತ್ತು. ಯಾಕೆಂದರೆ ವಾಸ್ತವದಲ್ಲಿ ಇದು ಜನರ ದಿನವಾದರೂ ಇಂದಿಗೂ ಜನರಿಗೆ ಆಗಸ್ಟ್ 15ರ ಜತೆ ಇರುವಂಥ ನಂಟಿಲ್ಲ.  ‘ಇಂಡಿಪೆಂಡನ್ಸ್ ಡೇ’ ಎಂಬ ಇಂಗ್ಲಿಷ್ ಶಬ್ದಕ್ಕಾಗಲೀ, ಸ್ವಾತಂತ್ರ್ಯ ದಿನ ಎನ್ನುವ ಕನ್ನಡ ಶಬ್ದಕ್ಕಾಗಲೀ ಇರುವ ಮಾಂತ್ರಿಕ ಶಕ್ತಿ ‘ರಿಪಬ್ಲಿಕ್ ಡೇ’ ಅಥವಾ ‘ಗಣರಾಜ್ಯ ದಿನ’ ಎಂಬ ಶಬ್ದಗಳಿಗೆಲ್ಲಿದೆ?  ಹೆಚ್ಚೆಂದರೆ ಇದೊಂದು ಸಾರ್ವತ್ರಿಕ ರಜಾದಿನ. ದೆಹಲಿಯಲ್ಲಿ ಅಂದು ನಡೆಯುವುದು ದೇಶದ ಸೇನಾ ಬಲಗಳ ಪ್ರಾಬಲ್ಯ ಪ್ರದರ್ಶಿಸುವ ಪರೇಡ್. ಜನಸಾಮಾನ್ಯರಿಗೆ ಅದರಲ್ಲೇನಿದೆ?

ಸ್ಥಳೀಯವಾಗಿಯೂ ಅಷ್ಟೆ. ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂತೆ ಮಕ್ಕಳಿಗೆ ಚಾಕೊಲೇಟ್ ಸಿಗುವುದಿಲ್ಲ. ಸ್ವಾತಂತ್ರ್ಯ ದಿನದಂದು ಕೇಳುವ ಆವೇಶದ, ದೇಶಭಕ್ತಿಯ ಭಾಷಣಗಳಿರುವುದಿಲ್ಲ. ಇದ್ದ ಭಾಷಣಗಳೆಲ್ಲಾ ತಾಂತ್ರಿಕ ಶಬ್ದಗಳಲ್ಲಿ ಕಳೆದು ಹೋಗುತ್ತವೆ. ಗಣತಂತ್ರ, ಸಂವಿಧಾನ ಇತ್ಯಾದಿಗಳೆಲ್ಲಾ ಸಾಮಾನ್ಯರಿಗೆ ಬಿಡಿ ತೀರಾ ವಿದ್ಯಾವಂತರಲ್ಲೂ ಯಾವುದೇ ಭಾವನೆಗಳನ್ನು ಸ್ಫುರಿಸದ ಶಬ್ದಗಳು. ‘ರಿಪಬ್ಲಿಕ್’ ಎಂಬ ಪದದ ನಿಜ ಅರ್ಥ ಏನು ಅಥವಾ ಭಾರತ ಯಾಕೆ ‘ರಿಪಬ್ಲಿಕ್’ ಎಂದು ಸ್ನಾತಕೋತ್ತರ ತರಗತಿಗಳಲ್ಲಿ ಅಥವಾ ಪತ್ರಕರ್ತರಲ್ಲಿ ಕೇಳಿ ನೋಡಿ. ಒಬ್ಬರು ಅಥವಾ ಇಬ್ಬರು ಉತ್ತರ ನೀಡಿದರೆ ಅದೇ ಹೆಚ್ಚು.

ಗಣರಾಜ್ಯ ದಿನದ ಬಗೆಗೆ ಇರುವ ಒಂದು ರೀತಿಯ ಭಾವನಾತ್ಮಕ ಔದಾಸೀನ್ಯಕ್ಕೆ ಕಾರಣ ಸಂವಿಧಾನ ವ್ಯವಸ್ಥೆಯ ಪ್ರಾಧಾನ್ಯ ಮತ್ತು ಸಂವಿಧಾನದ ಆಶಯಗಳನ್ನು ಯಾರೂ ಅರ್ಥೈಸದೇ ಹೋದದ್ದೇ ಇರಬಹುದು. ಅರ್ಥೈಸಿದವರಿಗೂ ಅದನ್ನು ಒಪ್ಪಿಕೊಳ್ಳಲು ಕಷ್ಟವಾಗಿರಬೇಕು. ಸಂವಿಧಾನ ಸಿದ್ಧವಾದಾಗ ಅದರ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ಭಾರತ ಸಿದ್ಧವಾಗಿರಲಿಲ್ಲ. ಭಾರತೀಯ ಮನಸ್ಸು ಸಿದ್ಧವಾಗಿರಲಿಲ್ಲ. ಆರು ದಶಕಗಳ ನಂತರ ಕೂಡಾ ಅದು ಆಗಲಿಲ್ಲ. ಬಹುಶಃ ಅಂತಹ ಸಿದ್ಧತೆಯೊಂದನ್ನು ಇಷ್ಟು ಬೇಗ ಅಪೇಕ್ಷಿಸುವುದು ತಪ್ಪಾಗಬಹುದು. ಯಾಕೆಂದರೆ ಅದು ಶತಮಾನಗಳನ್ನು ಒಂದೇ ಜಿಗಿತಕ್ಕೆ ದಾಟುವುದಕ್ಕೆ ನಿರ್ಮಿಸಿಕೊಂಡ ರಾಜಕೀಯ ಸೇತುವೆ. ಅದರಲ್ಲಿ ಅಂತರ್ಗತವಾಗಿರುವ ಆದರ್ಶ ಪ್ರಪಂಚದಲ್ಲಿ ಅಂದಿಗೂ ಇಂದಿಗೂ ಅತೀ ಪ್ರಬುದ್ಧವಾಗಿರುವ ಪ್ರಜಾತಾಂತ್ರಿಕ ವ್ಯವಸ್ಥೆ ಇರುವ ದೇಶಗಳ ಸಂವಿಧಾನಕ್ಕೂ ಯಾವ ರೀತಿಯಲ್ಲೂ ಕಡಿಮೆ ಇಲ್ಲದ್ದು. ಅದು ಸರ್ವರ ಸಮಾನತೆಯನ್ನು ಮತ್ತು ಸ್ವಾತಂತ್ರ್ಯವನ್ನು ಅಪೇಕ್ಷಿಸುವ ಆದರ್ಶ. ಮೇಲು-ಕೀಳುಗಳನ್ನು ಕಿತ್ತೊಗೆಯುವ ಆದರ್ಶ. ಎಲ್ಲದಕ್ಕಿಂತಲೂ ಮಿಗಿಲಾಗಿ ಯಾರ ನಿರಂಕುಶತೆಯನ್ನೂ ಒಪ್ಪದ ಆದರ್ಶ. ಇವೆಲ್ಲವನ್ನು ಭಾರತೀಯ ಮನಸ್ಸು ಆರಾಧಿಸಬಹುದು. ಆದರೆ ಅನುಸರಿಸಲು ತಯಾರಿದೆಯೇ?

1927ರಲ್ಲಿ ಇಂಗ್ಲೆಂಡ್‌ನ ಸಂಸತ್ತಿನಲ್ಲಿ ಮಾತನಾಡುತ್ತಾ ಲಾರ್ಡ್ ಬಿರ್ಕಿನ್ ಹೆಡ್ ‘ಸ್ವರಾಜ್ಯದ ಮಾತು ಹಾಗಿರಲಿ; ನೆಟ್ಟಗೆ ಭಾರತದಲ್ಲೇ ಎಲ್ಲರಿಗೂ ಒಪ್ಪಿಗೆಯಾಗುವಂತೆ ಒಂದು ಸಂವಿಧಾನ ಬರೆಯುವುದಕ್ಕೂ ಸಾಧ್ಯವಿಲ್ಲ ಆ ಮಹಾನ್ ಭಾರತೀಯರಿಗೆ’ ಎಂದು ಅಣಕಿಸಿದ್ದರಂತೆ. ಬಿರ್ಕಿನ್ ಹೆಡ್ ಅವರ ಮಾತು ಹುಸಿಯಾಯಿತು. ನಂತರದ ಎರಡು ದಶಕಗಳ ಅವಧಿಯಲ್ಲಿ ಭಾರತದ ಸಂವಿಧಾನ ಸಿದ್ಧವಾಗಿತ್ತು. ಆಗ ಅಮೆರಿಕದ ಪ್ರಸಿದ್ಧ ಸಂವಿಧಾನ ತಜ್ಞ ಗ್ರಾನ್ ವಿಲ್ ಆಸ್ಟಿನ್ ಹೇಳಿದ:  ‘1787ರಲ್ಲಿ ಅಮೆರಿಕದ ಸಂವಿಧಾನ ಸಿದ್ಧವಾದ ನಂತರ ಬರೆಯಲಾದ ಅತೀ ಶ್ರೇಷ್ಠ ರಾಜಕೀಯಗಾಥೆ ಇದು’. ಅದರಲ್ಲೂ ಭಾರತದ ಸಂವಿಧಾನ ಸಂಪೂರ್ಣವಾಗಿ ದೇಶೀಯವಾಗಿ ತಯಾರಾದ ಸಂವಿಧಾನ. ಸಾಮಾನ್ಯವಾಗಿ ಎಲ್ಲಾ ಅಭಿವೃದ್ಧಿಶೀಲ ದೇಶಗಳೂ ಅಮೆರಿಕ ಅಥವಾ ಯುರೋಪ್‌ನ ಸಂವಿಧಾನ ಪಂಡಿತರ ನೆರವು ಪಡೆದು ತಮ್ಮ ಸಂವಿಧಾನಗಳನ್ನು ರಚಿಸಿವೆ. ಆದರೆ ಭಾರತದ ಸಂವಿಧಾನ ಯಾವುದೇ ಬಾಹ್ಯ ನೆರವಿಲ್ಲದೆ ತಯಾರಾಯಿತು.

ಸಂವಿಧಾನದ ಬಹುತೇಕ ಅಂಶಗಳನ್ನು ಇತರ ದೇಶಗಳ ಸಂವಿಧಾನಗಳಿಂದ ಎತ್ತಿಕೊಳ್ಳಲಾಗಿದೆ ಎಂಬ ಆಪಾದನೆ ಇದೆ. ಅದಕ್ಕೆ ಸ್ಪಷ್ಟ ಉತ್ತರ ಸಂವಿಧಾನದ ಪ್ರಧಾನ ಶಿಲ್ಪಿ ಅನ್ನಿಸಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರೇ ನೀಡಿದ್ದಾರೆ: ‘ಪ್ರಜಾತಾಂತ್ರಿಕ ಮೌಲ್ಯಾದರ್ಶಗಳು ಯಾವುದೇ ದೇಶದ ಸ್ವಂತ ಸೊತ್ತಲ್ಲ’.

ಸಂವಿಧಾನ ನಿರ್ಮಾರ್ತೃಗಳು ಕೊನೆಯ ಬಾರಿಗೆ (1950 ಜನವರಿ 24) ಸಭೆ ಸೇರಿದಾಗ ಒಂದು ಕುತೂಹಲಕಾರಿ ಘಟನೆ ನಡೆಯಿತು. ಹಸ್ತಾಕ್ಷರದಲ್ಲಿ ಬರೆಯಲಾದ ಪೂರ್ಣ ಸಂವಿಧಾನದ ಪ್ರತಿಗೆ ಸಂವಿಧಾನ ಸಭೆಯ ಸದಸ್ಯರೆಲ್ಲರೂ ಸಹಿ ಹಾಕುವ ಮೂಲಕ ಅದನ್ನು ಔಪಚಾರಿಕವಾಗಿ ಅಂಗೀಕರಿಸಬೇಕಿತ್ತು. ಆ ದಿನದ ಸಭೆಯಲ್ಲಿ ಸದಸ್ಯರೆಲ್ಲಾ ಸಹಿಹಾಕುವಂತೆ ಅಧ್ಯಕ್ಷ ಬಾಬೂ ರಾಜೇಂದ್ರ ಪ್ರಸಾದ್ ತಿಳಿಸಿದರು. ಮೊದಲಿಗೆ ಜವಾಹರ್ ಲಾಲ್ ನೆಹರು ಸಹಿ ಮಾಡಿದರು. ನಂತರ ಸದಸ್ಯರೆಲ್ಲಾ ಒಬ್ಬರ ನಂತರ ಒಬ್ಬರಂತೆ ಸಹಿ ಮಾಡುತ್ತಾ ಹೋದರು.

ಕೊನೆಗೆ ರಾಜೇಂದ್ರ ಪ್ರಸಾದ್ ಸಹಿ ಮಾಡಲು ಬಂದರು. ಅಧ್ಯಕ್ಷರಾಗಿ ಅವರು ಕೊನೆಯ ಸಾಲಿನಲ್ಲಿ ಸಹಿ ಮಾಡಬೇಕಿತ್ತಂತೆ. ಆದರೆ ಸ್ವಲ್ಪ ಹಿಂದೆ ಮುಂದೆ ನೋಡಿದ ರಾಜೇಂದ್ರ ಪ್ರಸಾದ್ ಹಾಗೆ ಮಾಡದೆ ಸಂವಿಧಾನದ ಕೊನೆಯ ಸಾಲು ಮತ್ತು ನೆಹರು ಅವರ ಸಹಿಯ ಮಧ್ಯೆ ಇದ್ದ ಇಕ್ಕಟ್ಟಾದ ಜಾಗದಲ್ಲಿ ತಮ್ಮ ಸಹಿಯನ್ನು ತೂರಿಸಿದರಂತೆ! ಒಂದು ರೀತಿಯಲ್ಲಿ ಈ ಘಟನೆ ಸಂವಿಧಾನದ ಭವಿಷ್ಯದ ಚರಿತ್ರೆಗೆ ಮುನ್ನುಡಿ. ಸಂವಿಧಾನದ ಆಶಯದ ಪ್ರಕಾರ ಜನತಂತ್ರದಲ್ಲಿ ಸಮಾನತೆ ಎಂಬುದು ಅಧಿಕಾರ, ಅಂತಸ್ತು, ಸಾಮಾಜಿಕ ಸ್ಥಾನ, ಆರ್ಥಿಕ ಬಲ ಎಲ್ಲವನ್ನೂ ಮೀರಿದ ಮೌಲ್ಯವಾಗಿರಬಹುದು. ಆದರೆ ಶತಮಾನದ ಮಾನಸಿಕ ಕಿಲುಬು ಸಮಾನತೆ ಸಂವಿಧಾನದಲ್ಲಿ ದಾಖಲಾದ ಕೂಡಲೇ ತೊಳೆದು ಹೋದೀತೆ?

ಸರ್ಕಾರಿ ಯಂತ್ರ ಹೇಗೆ ನಡೆಯಬೇಕು ಎಂದು ಸಂವಿಧಾನ ಆದೇಶಿಸುತ್ತದೆ. ಆ ತಾಂತ್ರಿಕ ವಿಚಾರಗಳ ಕುರಿತು ಯಾರಿಗೂ ದೊಡ್ಡ ತಕರಾರಿಲ್ಲ. ಅಧಿಕಾರಸ್ಥರಿಗೆ ಅರಗಿಸಿಕೊಳ್ಳಲು ಕಷ್ಟವಾಗುವುದು ಅವರ ಅಧಿಕಾರಕ್ಕೆ ಸಂವಿಧಾನ ವಿಧಿಸುವ ನಿರ್ಬಂಧಗಳನ್ನು. ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಎಲ್ಲರಿಗೂ ಅನ್ವಯಿಸಬೇಕು ಎನ್ನುವ ಆಶಯವನ್ನು. ಅಂದಿಗೂ ಇಂದಿಗೂ ಪಾಳೇಗಾರಿ ಮನೋಭಾವ ಎನ್ನುವುದು ಭಾರತ ಉಪಖಂಡದಲ್ಲಿ ನೆಲೆಸಿದಷ್ಟು ಭದ್ರವಾಗಿ ಪ್ರಪಂಚದ ಬೇರೆ ಯಾವ ಖಂಡದಲ್ಲೂ ನೆಲೆಸಿಲ್ಲ. ಅರುವತ್ತು ವರ್ಷಗಳ ಸಂವಿಧಾನದ ಚರಿತ್ರೆಯಲ್ಲಿ ಎದ್ದು ಕಾಣುವುದು ಜನ ಸಾಮಾನ್ಯರಿಗೆ ಸಂವಿಧಾನ ನೀಡಿದ ಹಕ್ಕುಗಳನ್ನು ಅರಗಿಸಿಕೊಳ್ಳಲಾಗದ ಅಧಿಕಾರಸ್ಥರ ಮನೋಭಾವ.

ಸಂವಿಧಾನ ಜಾರಿಗೆ ಬಂದು ಇನ್ನೂ ವರ್ಷ ತುಂಬಿರಲಿಲ್ಲ. ಮೊದಲನೇ ಚುನಾವಣೆ ಇನ್ನೂ ನಡೆದಿರಲಿಲ್ಲ. ಆಗಲೇ ಸಂವಿಧಾನಕ್ಕೆ ಮೊದಲ ತಿದ್ದುಪಡಿ. ಹಸುಗೂಸಿಗೇ ಬೈಪಾಸ್ ಸರ್ಜರಿ. ಅದರ ಉದ್ದೇಶ ಸಂವಿಧಾನ ನೀಡಿದ ಹಕ್ಕುಗಳನ್ನು ಮೊಟಕುಗೊಳಿಸುವುದು. ಅದಕ್ಕೆ ಸಾಮಾಜಿಕ ನ್ಯಾಯದ ಸಮಜಾಯಿಷಿ ಏನೋ ಇತ್ತು. ಆದರೂ ಮೊದಲನೇ ತಿದ್ದುಪಡಿಯ ಮೂಲಕ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾದ ಒಂಬತ್ತನೇ ಪರಿಚ್ಛೇದ ಇಂದಿಗೂ ದೇಶಕ್ಕಂಟಿದ ಶಾಪ. ನ್ಯಾಯಾಲಯದ ಕೈಗೆಟುಕದಂತೆ ರಾಜಕೀಯವಾಗಿ ಅನುಕೂಲವಾಗುವ ಕಾನೂನುಗಳನ್ನು ಅಡಗಿಸಿಡುವ ಕಸದ ಬುಟ್ಟಿ.

ಆ ನಂತರ ಸರ್ಕಾರದ ಹದ್ದುಮೀರಿದ ಕ್ರಮಗಳಿಂದ ಜನಸಾಮಾನ್ಯರನ್ನು ರಕ್ಷಿಸುವುದಕ್ಕೆಂದು ಇರುವ ಮೂಲಭೂತ ಹಕ್ಕುಗಳ ವಿಚಾರದಲ್ಲಿ ಸಂಸತ್ತಿಗೂ (ಸರ್ಕಾರಗಳಿಗೆ ಅಂತ ಓದಿಕೊಳ್ಳಿ) ಮತ್ತು ನ್ಯಾಯಾಲಯಗಳಿಗೂ ಸುದೀರ್ಘ ಸಮರವೇ ನಡೆದುಹೋಯಿತು. ‘ಈ ವ್ಯವಸ್ಥೆಯಲ್ಲಿ ಜನರೇ ಸಾರ್ವಭೌಮರು. ಅಂದಮೇಲೆ ಜನರಿಂದ ಆರಿಸಲ್ಪಟ್ಟ ಸಂಸತ್ತು ಸಾರ್ವಭೌಮ. ಅಂದಮೇಲೆ ಸಂಸತ್ತು ಸಂವಿಧಾನವನ್ನು ಹೇಗೆ ಬೇಕಾದರೂ ಮೊಟಕುಗೊಳಿಸಬಹುದು’ ಎಂದು ಸರ್ಕಾರ ವಾದಿಸಿತು. ‘ಸಂಸತ್ತು ಸಂವಿಧಾನದ ಕೂಸು. ಸಂಸತ್ತು ತನ್ನ ಅಧಿಕಾರವನ್ನು ಜನರಿಂದ ಸಂವಿಧಾನ ಹಾಕಿಕೊಟ್ಟ ನಿಯಮಗಳ ಪ್ರಕಾರ ಪಡೆದಿದೆ. ಅಂದಮೇಲೆ ಸಂಸತ್ತಿಗಿಂತ ಸಂವಿಧಾನವೇ ಮೇಲು’ ಎಂಬ ವಾದವನ್ನು ನ್ಯಾಯಾಲಯ ಮುಂದಿಟ್ಟಿತ್ತು. ಕೊನೆಗೂ 1974 ಕೇಶವಾನಂದ ಭಾರತೀ ಪ್ರಕರಣದಲ್ಲಿ ಸಂವಿಧಾನದ ಮೂಲ ಆಶಯಗಳಿಗೆ ಭಂಗಬಾರದಂತೆ ಸಂವಿಧಾನವನ್ನು ಬದಲಾಯಿಸುವ ಹಕ್ಕು ಸಂಸತ್ತಿಗೆ ಇದೆ ಎಂದು ನ್ಯಾಯಾಂಗ ಒಪ್ಪುವುದರೊಂದಿಗೆ ಸಮರ ತಾತ್ಕಾಲಿಕ ಅಂತ್ಯ ಕಂಡಿತು. ಆ ನಂತರವೂ ಸರ್ಕಾರ ಈ ವಿಚಾರದಲ್ಲಿ ಆಗಾಗ ತಗಾದೆ ತೆಗೆದರೂ ಕೇಶವಾನಂದ ಭಾರತೀ ತೀರ್ಪೇ ಈ ತನಕ ಅಂತಿಮ. ಮುಂದೇನಾಗಲಿದೆಯೋ?

ಸಂವಿಧಾನದ ಅತೀ ಶೇಷ್ಠ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳನ್ನು ಸ್ವೀಕರಿಸಲು ಕಷ್ಟವಾಗಿರುವುದು ಅಧಿಕಾರಸ್ಥರಿಗೆ ಮಾತ್ರವಲ್ಲ. ಭಾರತೀಯ ಸಮಾಜಕ್ಕೂ ಇವೆಲ್ಲವೂ ಅಪಥ್ಯ ಎನಿಸುವಂಥ ವಿಚಾರಗಳೇ. ಧರ್ಮಗ್ರಂಥಗಳು ಎಷ್ಟೇ ಉದಾತ್ತವಾದುದನ್ನು ಪ್ರತಿಪಾದಿಸಿರಬಹುದು. ಅವೆಲ್ಲಾ ವೇದಿಕೆಗಳಿಗಷ್ಟೇ ಸೀಮಿತ. ಸಂವಿಧಾನಕ್ಕೆ ಬದ್ಧವಾಗಿ ಬದುಕುವ ಮನೋಭೂಮಿಕೆ ಸಮಾಜದಲ್ಲಿ ಇದ್ದಿದ್ದರೆ ವ್ಯವಸ್ಥೆ ಇಷ್ಟೊಂದು ಕೆಡುತ್ತಿರಲಿಲ್ಲ. ಸಂಸತ್ತಿನಲ್ಲಿ ಅರ್ಧದಷ್ಟು ಕ್ರಿಮಿನಲ್‌ಗಳು ತುಂಬಿಹೋಗುತ್ತಿರಲಿಲ್ಲ. ಓಟ್ ಬ್ಯಾಂಕ್‌ಗಳ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ.  ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಂವಿಧಾನ ಘೋಷಿಸಬಹುದು. ಕಾನೂನು ಉಲ್ಲಂಘಿಸಿದವರನ್ನು ಜೈಲಿಗೆ ತಳ್ಳುವಂತೆ ಮಾಡಬಹುದು. ಆದರೆ ಜೈಲಿನಿಂದಲೇ ಅಂಥವರನ್ನು ಆರಿಸಿ ಸಂಸತ್ತಿಗೆ ಕಳುಹಿಸಲು ತಯಾರಿರುವ ಸಮಾಜದಲ್ಲಿ ಸಾಕ್ಷಾತ್ ವೇದಪುರುಷನೇ ಬಂದು ಸರ್ವ ಸಮ್ಮತವಾದ ಅಚ್ಚ ಭಾರತೀಯ ಸಂವಿಧಾನವನ್ನು ರೂಪಿಸಿದರೂ ಏನು ಪ್ರಯೋಜನ?

ಇಷ್ಟೆಲ್ಲಾ ಆದರೂ ಸಂವಿಧಾನ 60ನೇ ವರ್ಷಕ್ಕೆ ಕಾಲಿಟ್ಟಾಗ ‘ಸೆಮಿನಾರ್’ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿದ ಮಾತೊಂದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಭಾರತ ಇಂದು ಪಾಕಿಸ್ತಾನದ ಹಾಗೆ ಆತ್ಮಘಾತುಕತೆಯತ್ತ ಸಾಗದೇ ಇದ್ದರೆ, ಚೀನಾದ ಹಾಗೇ ಆತ್ಮರಹಿತ ಅಭಿವೃದ್ಧಿಯ ಹಾದಿಹಿಡಿಯದೇ ಇದ್ದರೆ, ಇಸ್ರೇಲ್‌ನಂತೆ ಆತ್ಮ ಶ್ರೇಷ್ಠತೆಯಿಂದ ನಲುಗದೇ ಇದ್ದರೆ, ಅಮೆರಿಕಾದ ಹಾಗೆ ಪರಮಲೌಕಿಕತೆಯ ನಶೆ ಏರಿಸಿಕೊಳ್ಳದೇ ಇದ್ದರೆ ಅದಕ್ಕೆ ಬಹುಮುಖ್ಯ ಕಾರಣ ಭಾರತದ ಸಂವಿಧಾನ ಎತ್ತಿ ಹಿಡಿದ ಮೌಲ್ಯಗಳು ಮತ್ತು ಅದು ಹಾಕಿಕೊಟ್ಟ ಆಡಳಿತದ ಹಾದಿ. ಆಶಯದ ವಿಚಾರದಲ್ಲಿ ಭಾರತದ ಸಂವಿಧಾನಕ್ಕಿಂತ ಉತ್ತಮವಾದದ್ದನ್ನು ಹುಡುಕುವುದು ಕಷ್ಟ. ಅದು ದೇಶದಲ್ಲಿ ಆಶ್ರಯ ಪಡೆದಿರುವ ಎಲ್ಲಾ ಧರ್ಮಗಳ ಸುಸಂದೇಶ ಸಾರವನ್ನು ಅಂತರ್ಗತಗೊಳಿಸಿಕೊಂಡ ಜಗತ್ತಿನ ಅತಿದೊಡ್ಡ ‘ಸೆಕ್ಯುಲರ್ ಮಾನವಧರ್ಮ’ ಗ್ರಂಥ. ಆಚರಣೆಯ ವಿಚಾರದಲ್ಲಿ ಹೇಳಹೊರಟರೆ ಅದೊಂದು ದುರಂತ.

ಲೇಖಕರು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT