ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಕ್ಕೆ ಮರಳಿದ 5000 ಭಾರತೀಯರು

Last Updated 17 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಪಾನಿನಲ್ಲಿರುವ ಸುಮಾರು 25 ಸಾವಿರ ಭಾರತೀಯರಲ್ಲಿ ಈಗಾಗಲೇ ಸುಮಾರು ಐದು ಸಾವಿರ ಜನರು ದೇಶಕ್ಕೆ ಮರಳಿದ್ದಾರೆ.

ಟೋಕಿಯೊ ಅಲ್ಲದೆ ಬೇರೆ ಬೇರೆ ವಿಮಾನ ನಿಲ್ದಾಣಗಳಿಂದ ಭಾರತೀಯರು ವಾಪಸಾಗಿರುವುದರಿಂದ ಎಷ್ಟು ಜನರು ದೇಶಕ್ಕೆ ವಾಪಾಸಾಗಿದ್ದಾರೆ ಎಂದು ಖಚಿತವಾಗಿ ಹೇಳುವುದು ಕಷ್ಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಣು ವಿಕಿರಣ ಸೋರಿಕೆಯ  ಸಂಕಷ್ಟದಲ್ಲಿರುವ ಜಪಾನ್‌ನ ಬೆಳವಣಿಗೆಯನ್ನು ಸತತವಾಗಿ ಗಮನಿಸಲಾಗಿದ್ದು ಮುಂದಿನ 24 ಅಥವಾ 48 ಗಂಟೆಗಳಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಾಂಟೊ ಮತ್ತು ಕಾನ್ಸಾಯಿ ಪ್ರದೇಶದಲ್ಲೇ ಹೆಚ್ಚಾಗಿ ಭಾರತೀಯರು ವಾಸವಾಗಿದ್ದು, ಒಟ್ಟು ಸುಮಾರು 25 ಸಾವಿರ ಜನರು ಅಲ್ಲಿದ್ದಾರೆ ಎಂದು ಹೇಳಲಾಗಿದೆ.

ಪರಿಹಾರ ಸಾಮಗ್ರಿ ರವಾನೆ:      ಸಂಕಷ್ಟದಲ್ಲಿರುವ ಜಪಾನಿನ ಜನತೆಗೆ     ನೆರವಾಗಲು ಭಾರತ ರಗ್ಗು ಮತ್ತು ಇತರ ಪರಿಹಾರ    ಸಾಮಗ್ರಿಗಳನ್ನು  ಈಗಾಗಲೇ  ಕಳುಹಿಸಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಂಡವೊಂದನ್ನು ಕಳುಹಿಸಲು ಜಪಾನ್ ಸರ್ಕಾರದ     ಸೂಚನೆಗೆ ಕಾಯುತ್ತಿದೆ.

ಬಂದವರ ಪ್ರತಿಕ್ರಿಯೆ: ‘ಅದೊಂದು ಭೀಕರ ಭೂಕಂಪವಾಗಿತ್ತು. ನಾನು ವಾಪಸು ಮರಳಿ ಬರುತ್ತೇನೆಯೊ ಇಲ್ಲವೊ ಎಂದು ಭಯವಾಗಿತ್ತು’ ಎಂದು ದುರಂತದ ಕ್ಷಣಗಳನ್ನು ಅನುಭವಿಸಿ ಸುರಕ್ಷಿತವಾಗಿ ಮರಳಿ ಬಂದ ನಿಧಿ ಜೈನ್ ಹೇಳಿದರು.

‘ಇಂತಹ ಭೀಕರ ದುರಂತವನ್ನು ನಾನು ನನ್ನ ಜೀವನದಲ್ಲಿಯೇ ಕಂಡಿರಲಿಲ್ಲ’ ಎಂದು ಸ್ವದೇಶಕ್ಕೆ ಮರಳಿ ಬಂದ ಮತ್ತೊಬ್ಬ ಪ್ರಯಾಣಿಕರು ತಿಳಿಸಿದರು.

‘ವಾಪಸು ಬರುವಂತಹ ಅವಶ್ಯಕತೆ ಇರಲಿಲ್ಲ’ ಎಂದು  ಕೆಲವು ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

ಜಪಾನ್ ಸರ್ಕಾರ ಏರ್ಪಡಿಸಿರುವ ವ್ಯವಸ್ಥೆಗೆ ರಿಧಿ ಸಿಂಗ್ಲ ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು. ‘ನಾನಂತೂ ಬರುವ ಇರಾದೆಯಲ್ಲಿ ಇರಲಿಲ್ಲ. ಆದರೆ ಗರ್ಭಿಣಿ ಇದ್ದುದರಿಂದ ವಾಪಸು ಬಂದಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ನನ್ನ ಕೆಲವು ಸ್ನೇಹಿತರು ಇನ್ನೂ ಕೂಡಾ ಅಲ್ಲಿಯೇ ಇದ್ದಾರೆ. ವಾಪಸು ಬರುವಂತಹ ಧಾವಂತವೇನೂ       ಇರಲಿಲ್ಲ’ ಎಂದು ಮತ್ತೊಬ್ಬರಾದ ಸುಪ್ರಿಯಾ ಖತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT