ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಿ ವಿಮಾನ: ಕೇಂದ್ರಕ್ಕೆ ವರದಿ

Last Updated 9 ಫೆಬ್ರುವರಿ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು: ಸ್ವದೇಶಿ ನಾಗರಿಕ ವಿಮಾನ ತಯಾರಿಕೆಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ನಾಗರಿಕ ವಿಮಾನ ಅಭಿವೃದ್ಧಿ ಸಂಸ್ಥೆಯು (ಎನ್‌ಸಿಎಡಿ) ಏಪ್ರಿಲ್‌ನಲ್ಲಿ ಕಾರ್ಯ ಸಾಧ್ಯತಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ದೊರೆತರೆ 2017ರ ಹೊತ್ತಿಗೆ ಸ್ವದೇಶಿ ನಿರ್ಮಿತ ನಾಗರಿಕ ವಿಮಾನ ಹಾರಾಡಲಿದೆ.

‘ಈಚಿನ ವರ್ಷಗಳಲ್ಲಿ ದೇಶದಲ್ಲಿ ದ್ವಿತೀಯ ಹಾಗೂ ತೃತೀಯ ದರ್ಜೆ ನಗರಗಳ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ ಮಹಾನಗರಗಳ ಜತೆಗೆ ಸಣ್ಣ ಪುಟ್ಟ ನಗರಗಳಲ್ಲೂ ಬಂಡವಾಳ ಹೂಡಿಕೆ ಹಾಗೂ ಕೈಗಾರಿಕೆಗಳ ಸ್ಥಾಪನೆ ಹೆಚ್ಚಾಗಿದೆ. ಈ ನಗರಗಳ ನಡುವೆ ವಿಮಾನಯಾನ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ವಿವಿಧ ಸಂಸ್ಥೆಗಳ ಸಹ ಯೋಗದಲ್ಲಿ ಸ್ವದೇಶಿ ನಾಗರಿಕ ವಿಮಾನ ನಿರ್ಮಿಸುವ ಪ್ರಸ್ತಾವ ನಮ್ಮ ಮುಂದೆ’ ಇದೆ ಎಂದು ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯದ (ಎನ್‌ಎಎಲ್) ನಿರ್ದೇಶಕ ಡಾ.ಎ.ಆರ್. ಉಪಾಧ್ಯ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಹಾನಗರ, ನಗರ- ಪಟ್ಟಣಗಳಲ್ಲೂ ದೊಡ್ಡ ಪ್ರಮಾಣದಲ್ಲಿ ಉದ್ಯಮಗಳು ಆರಂಭವಾಗುತ್ತಿವೆ. ಹಾಗಾಗಿ ಜನರು ಹಾಗೂ ಸರಕು ಸಾಗಣೆಗೆ ಸುಧಾರಿತ ವ್ಯವಸ್ಥೆ ಕಲ್ಪಿಸಬೇಕಿದೆ. ಆ ಹಿನ್ನೆಲೆಯಲ್ಲಿ ದ್ವಿತೀಯ, ತೃತೀಯ ದರ್ಜೆ ನಗರಗಳು, ಮಹಾನಗರದ ನಡುವೆ ಸಂಪರ್ಕ ಕಲ್ಪಿಸಲು 70 ಇಲ್ಲವೇ 90 ಆಸನಗಳ ನಾಗರಿಕ ವಿಮಾನ ಸೇವೆ ಒದಗಿಸುವುದು ಅಗತ್ಯವೆನಿಸಿದೆ’ ಎಂದರು.

‘ಸದ್ಯದ ಬೆಳವಣಿಗೆಯ ವೇಗ ಗಮನಿಸಿದರೆ ಮುಂದಿನ 20 ವರ್ಷಗಳಲ್ಲಿ 1,000ಕ್ಕೂ ಹೆಚ್ಚು ನಾಗರಿಕ ವಿಮಾನಗಳ ಸಂಚಾರ ಆರಂಭಿಸಬೇಕಿದೆ. ಸುಮಾರು 10,000 ಕೋಟಿ ಡಾಲರ್ (4.50 ಲಕ್ಷ ಕೋಟಿ ರೂಪಾಯಿ) ವಹಿವಾಟು ನಡೆಯುವ ನಿರೀಕ್ಷೆ ಇದೆ’ ಎಂದರು.

‘ಈ ಯೋಜನೆಗೆ ಪೂರಕವಾಗಿ ದೇಶದಲ್ಲಿ ವಿಮಾನಯಾನ ಕ್ಷೇತ್ರದ ಮಾರುಕಟ್ಟೆಯ ಸ್ಥಿತಿಗತಿ, ವಿಮಾನದಲ್ಲಿ ಬಳಸಬಹುದಾದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಇತರೆ ಅಂಶಗಳ ಕುರಿತು ಇಸ್ರೊ ಮಾಜಿ ಅಧ್ಯಕ್ಷ ಡಾ.ಜಿ.ಮಾಧವನ್ ನಾಯರ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಕಾರ್ಯ ಸಾಧ್ಯತಾ ವರದಿ ಸಿದ್ಧಪಡಿಸುತ್ತಿದ್ದು, ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ’ ಎಂದರು. ಎನ್‌ಎಎಲ್ ಯೋಜನಾ ನಿರ್ದೇಶಕ ಸತೀಶ್‌ಚಂದ್ರ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT