ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವನಿಯಂತ್ರಣಕ್ಕೆ ಗಮನವಿರಲಿ

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

>ಚುನಾವಣಾ ವರದಿಗಳ ಮೇಲೆ ಹದ್ದಿನ ಕಣ್ಣು ಇಡುವುದಕ್ಕಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಮಾಧ್ಯಮ ದೃಢೀಕರಣ ಹಾಗೂ ಉಸ್ತುವಾರಿ ಸಮಿತಿ ( ಎಂಸಿಎಂಸಿ)ಗಳನ್ನು ರಾಜ್ಯ ಚುನಾವಣಾ ಆಯೋಗ ಆರಂಭಿಸಿದೆ. ಟವಿ ಮತ್ತು ಪತ್ರಿಕಾ ವರದಿಗಳು ಮಾತ್ರವಲ್ಲದೆ ಫೇಸ್‌ಬುಕ್ ಹಾಗೂ ಟ್ವಿಟರ್‌ಗಳಲ್ಲಿ ಹರಿದಾಡುವ ಸಂದೇಶಗಳಿಗೂ ಈ ಸಮಿತಿಗಳು ಗಾಳ ಹಾಕಲಿವೆ. ವರದಿ ಹೆಸರಲ್ಲಿ ನಿರ್ದಿಷ್ಟ ಪಕ್ಷ ಅಥವಾ ಅಭ್ಯರ್ಥಿಗಳ ಪರ ಜಾಹೀರಾತು ಪ್ರಸಾರವಾಗುವ ವಿರುದ್ಧ ಹದ್ದಿನ ಕಣ್ಣು ಇರಿಸುವುದು ಈ ಸಮಿತಿಗಳ ಉದ್ದೇಶ. ಕಾಸಿಗಾಗಿ ಸುದ್ದಿ ನಿಯಂತ್ರಣದತ್ತ ಇರಿಸಿರುವ ಹೆಜ್ಜೆ ಇದು ಎಂದು ಚುನಾವಣಾ ಆಯೋಗ ಹೇಳಿಕೊಂಡಿದೆ. ಚುನಾವಣಾ ಆಯೋಗದ ಪ್ರಕಾರ, ಕಾಸಿಗಾಗಿ ಸುದ್ದಿ ಮಾರುಕಟ್ಟೆ ಗಾತ್ರ ಸುಮಾರು ರೂ 400ರಿಂದ 500 ಕೋಟಿಯಷ್ಟಿದೆ.

ಚುನಾವಣಾ ವೆಚ್ಚದಲ್ಲಿ ಶೇ 40ರಷ್ಟನ್ನು ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಬಳಕೆ ಮಾಡುತ್ತವೆ ಎಂಬುದು ಒಂದು ಅಂದಾಜು. ಇದರಲ್ಲಿ ಜಾಹೀರಾತು ಕೂಡ ಸೇರಿರುತ್ತದೆ. ಆದರೆ ಈ ಒಟ್ಟು ಮೊತ್ತದಲ್ಲಿ ಅರ್ಧದಷ್ಟು `ಕಾಸಿಗಾಗಿ ಸುದ್ದಿ'ಗಳಿಗೆ ಹೋಗುತ್ತದೆ ಎಂಬ ಅಂದಾಜನ್ನು ಚುನಾವಣಾ ಆಯೋಗ ಮಾಡಿದೆ. ಈ ರೀತಿ ಚುನಾವಣೆಯಲ್ಲಿ ಹಣದ ಶಕ್ತಿಯನ್ನು ಬಳಕೆ ಮಾಡುವುದು ಮುಕ್ತ ಹಾಗೂ ನ್ಯಾಯಯುತವಾದ ಚುನಾವಣೆಗೆ ವಿರುದ್ಧವಾದುದು ಎಂಬುದು ಸರಿ. ಕಾಸಿಗಾಗಿ ಸುದ್ದಿಯಿಂದ ಅನುಕೂಲ ಪಡೆಯುವ ಪ್ರವೃತ್ತಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದೆ. ಆದರೆ ಇದು ಜನರು ಅಥವಾ ಮತದಾರರ ವಿಶ್ವಾಸಗಳಿಗೆ ದ್ರೋಹ ಬಗೆಯುವಂತಹ ಹಾಡಹಗಲಿನ ವಂಚನೆ. ನಿಜಕ್ಕೂ ಕಾಸಿಗಾಗಿ ಸುದ್ದಿ ಎಂಬುದು ಪ್ರಜಾಪ್ರಭುತ್ವದ ಅಣಕ. ಇದು ಪ್ರಜಾತಂತ್ರದ ತತ್ವ ಸಿದ್ಧಾಂತಗಳ ಬೇರುಗಳಿಗೇ ಕೊಡಲಿ ಪೆಟ್ಟು ಹಾಕುವಂತಹದ್ದು.     

ವಾಸ್ತವವಾಗಿ ಕಾಸಿಗಾಗಿ ಸುದ್ದಿ ಎಂಬುದು ಸಂಕೀರ್ಣವಾದ ಸಮಸ್ಯೆ. ಈ ಕುರಿತು ಮಾಧ್ಯಮ ಲೋಕ ಸ್ವತಃ ಆತ್ಮಾವಲೋಕನ ಮಾಡಿಕೊಳ್ಳುವ ತುರ್ತು ಇಂದು ಎದುರಾಗಿದೆ. ಈ ನಿಟ್ಟಿನಲ್ಲಿ ಸ್ವಯಂ ನಿಯಂತ್ರಣವನ್ನು ಹೇರಿಕೊಳ್ಳಲು ಮಾಧ್ಯಮ ಪ್ರಪಂಚ ಮುಂದಾಗಬೇಕಾದುದು ಅತ್ಯವಶ್ಯ. ಇಲ್ಲದಿದ್ದಲ್ಲಿ ಮುಂದೆ ಮಾಧ್ಯಮ ಕ್ಷೇತ್ರಕ್ಕೇ ಇದರಿಂದ ದೊಡ್ಡ ಪೆಟ್ಟು ಬೀಳಲಿದೆ. ಸದ್ಯಕ್ಕೆ ಕಾಸಿಗಾಗಿ ಸುದ್ದಿ ಪಿಡುಗಿನ ನಿಯಂತ್ರಣಕ್ಕೆ ತನ್ನ ಅಧಿಕೃತ ಸಂಸ್ಥೆಗಳ ಮುಖಾಂತರ ನಿಯಂತ್ರಣ ಮಾಡಲು ಮುಂದಾಗಿದೆ ಸರ್ಕಾರ. ಹೀಗೆಯೇ ಮುಂದುವರಿಯುತ್ತಾ ಹೋದಲ್ಲಿ  ಈ ನಿಯಂತ್ರಣ ಮಿತಿಮೀರಬಹುದು.

ಇದರಿಂದ ಕಡೆಗೆ ಮಾಧ್ಯಮ ಸ್ವಾತಂತ್ರ್ಯಕ್ಕೇ  ಹೊಡೆತ ಬೀಳಬಹುದು. ಈ ಬಗೆಯ ನಿಯಂತ್ರಣಗಳಿಗೆ ಒಳಪಡುವಂತಹ ಸನ್ನಿವೇಶಗಳಿಗೆ ಮಾಧ್ಯಮಲೋಕ ಎಂದೆಂದೂ ಅವಕಾಶ ನೀಡಬಾರದು. ನಿರ್ಭೀತ ಹಾಗೂ ಮುಕ್ತ ಮಾಧ್ಯಮವೇ ಪ್ರಜಾತಂತ್ರದ ಜೀವಾಳ. ಹೀಗಾಗಿ, ಈಗಲೇ ಮಾಧ್ಯಮಗಳು ತಮ್ಮ ಹೊಣೆಗಾರಿಕೆ ಬಗ್ಗೆ ಎಚ್ಚೆತ್ತುಕೊಳ್ಳುವುದು ಅವಶ್ಯ. ಮುಖ್ಯವಾಗಿ ಓದುಗರಿಗೆ ಹಾಗೂ ವೀಕ್ಷಕರಿಗೆ ಬದ್ಧವಾಗಬೇಕಾದುದು ಮಾಧ್ಯಮಗಳ ನಿಜವಾದ ಜವಾಬ್ದಾರಿ. ಕಾಸಿಗಾಗಿ ಸುದ್ದಿಯಂತಹ ಪಿಡುಗನ್ನು ಬೇರು ಸಹಿತ ಕಿತ್ತು ಹಾಕಲು ಮುಂದಾಗದಿದ್ದಲ್ಲಿ ಜನರ ವಿಶ್ವಾಸವನ್ನೂ ಮಾಧ್ಯಮ ಪ್ರಪಂಚ ಕಳೆದುಕೊಳ್ಳಲಿದೆ. ಚುನಾವಣೆಯಲ್ಲಿ ಹಣದ ದುರ್ಬಳಕೆ ಹಾಗೂ ಶಕ್ತಿಯನ್ನು ತಡೆಯಲು ಮಾಧ್ಯಮಗಳು ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT