ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ ನಿಲ್ಲಿಸಿದ ಗಾರುಡಿಗ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಂ. ಭೀಮಸೇನ ಜೋಷಿ ಅವರದು ಅಪೂರ್ವ ಗಾಯನ ಶೈಲಿ. ಕಿರಾಣಾ ಘರಾಣೆಯನ್ನೇ ತಮ್ಮ ‘ಗಾಯಕಿ’ ಆಗಿ ರೂಢಿಸಿಕೊಂಡರೂ ಇವರದು ಎಲ್ಲ ಘರಾಣೆಗಳಿಂದ ರಸ ಹೀರಿದ ಒಂದು ಅದ್ಭುತ ಶೈಲಿ. ಇದನ್ನು ‘ಭೀಮಸೇನ ಶೈಲಿ’ ಎಂದರೂ ತಪ್ಪಿಲ್ಲ.

50-60ರ ದಶಕಗಳಲ್ಲಿ ಅತ್ಯಂತ ಎತ್ತರದ ಶ್ರುತಿ (ಎಫ್ ಮತ್ತು ಎಫ್ ಶಾರ್ಪ್ ಸ್ಕೇಲ್‌ವರೆಗೂ)ಯಲ್ಲಿ ಹಾಡುತ್ತಿದ್ದ ಈ ಅಪ್ರತಿಮ ಗಾಯಕನ ವೇಗದ ‘ಆಕಾರ್’ ತಾನ್‌ಗಳು ಜತೆಗೆ ‘ಬೋಲ್’ ತಾನ್‌ಗಳು ನುರಿತ ಸಂಗೀತಗಾರರಿಗೇ ದಿಗ್ಭ್ರಮೆ ಹುಟ್ಟಿಸುವಂತಿದ್ದವು. ಆಕಾರ್ ಮತ್ತು ಬೋಲ್ ತಾನ್ ಎರಡಕ್ಕೂ ಅನ್ವರ್ಥನಾಮವಾಗಿ ಜಗದ್ವಿಖ್ಯಾ ತರಾದವರು ಪಂಡಿತ್‌ಜಿ.

ಸಂಗೀತದಲ್ಲಿ ಬರುವ ಸಾಹಿತ್ಯ ಮತ್ತು ತಾನ್ ಎರಡನ್ನೂ ಕಲಾತ್ಮಕವಾಗಿ ಮಿಶ್ರಣ ಮಾಡಿ ವೇದಿಕೆಯಲ್ಲಿ ಪರಿಪೂರ್ಣ ಶೈಲಿಯಲ್ಲಿ ಪ್ರಸ್ತುತಪಡಿಸುವುದು ಯಾವುದೇ ಗಾಯಕನಿಗೆ ಸುಲಭದ ಕೆಲಸವಲ್ಲ. ತಮ್ಮ ಅಮೋಘ ಶಾರೀರದಿಂದ ಈ ಬೋಲ್‌ತಾನ್‌ಗಳನ್ನು ಹಾಡುತ್ತಿದ್ದುದು ಪಂ. ಜೋಷಿ ಅವರ ಗಾಯನದ ವೈಶಿಷ್ಟ್ಯ.

ವಿದ್ವತ್‌ಪೂರ್ಣ ಲಯ:
ಶಾಸ್ತ್ರೀಯ ಸಂಗೀತದ ಲಯಕಾರಿ ಅಂಶಗಳನ್ನು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಿದ್ಧಿಸಿಕೊಂಡದ್ದು ಪಂಡಿತ್‌ಜಿಯವರ ಮತ್ತೊಂದು ಅದ್ಭುತ ಸಾಧನೆ.ಲಯದ ಮೇಲಿನ ಪ್ರಭುತ್ವ ಮತ್ತು ಶಾಸ್ತ್ರೀಯ ಗಾಯನ ವಿಲಂಬಿತ್ ಗತಿಯಲ್ಲಿ ಹಾಡುವಾಗ ಪ್ರಬುದ್ಧ ತಬಲಾ ವಾದಕರನ್ನೇ ತಬ್ಬಿಬ್ಬುಗೊಳಿಸುವಂತಹ ಚಮತ್ಕಾರ ಇವರ ಗಾಯನದ ವೈಶಿಷ್ಟ್ಯ. ವಿಲಂಬಿತ್ ಕಾಲದ ಏಕ್‌ತಾಲ್ 12 ಮಾತ್ರೆಗಳಿಂದ ಕೂಡಿದ್ದು, ಪಂಡಿತ್‌ಜಿ 10ನೇ ಮಾತ್ರೆಯಿಂದ ಒಂದನೇ ಮಾತ್ರೆ (ಸಂ)ಗೆ ಬರುವಾಗ ಹಾಡುವ ಚಮತ್ಕಾರಿಕ ಬೋಲ್‌ತಾನ್‌ಗಳು, ತಿಹಾಯ್‌ಗಳು (ಒಂದೇ ಸ್ವರ ಸಮೂಹವನ್ನು ಮೂರು ಬಾರಿ ಹಾಡುವುದು) ಎಂತಹ ಅದ್ಭುತ ತಬಲಾ ವಾದಕರೂ ತಮ್ಮ ಲಯ ತಪ್ಪಿಸುವ ರೀತಿಯಲ್ಲಿ ಹಾಡಿ ತಮ್ಮ ಲಯದ ಮೇಲಿನ ಸಾಮರ್ಥ್ಯ ತೋರಿಸುತ್ತಿದ್ದುದು ಇವರ ಗಾಯನ ಶ್ರೇಷ್ಠತೆಗೆ ಸಾಕ್ಷಿ.

ಹಾಗೆ ನೋಡಿದರೆ ಪಂ. ಜೋಷಿ ತಮ್ಮ ಗಾಯನದ ಆರಂಭದ ದಿನಗಳಲ್ಲಿ ಶಾಸ್ತ್ರೀಯಕ್ಕಿಂತ ಲಘು ಸಂಗೀತದಲ್ಲೇ ಮನೆಮಾತಾಗಿದ್ದರು. ಅವರು ಹಾಡಿರುವ ಹಿಂದಿ ಚಲನಚಿತ್ರ ಗೀತೆ, ಕನ್ನಡ ಸಿನಿಮಾ ಮತ್ತು ಮರಾಠಿ ಹಾಡುಗಳು, ಭಜನ್‌ಗಳು ಇಂದಿಗೂ ಗುನುಗುನಿಸುವಂತಿವೆ.‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ಸಿನಿಮಾದ ‘ಭಾಗ್ಯದ ಲಕ್ಷ್ಮೀ ಬಾರಮ್ಮಾ’ ಪುರಂದರ ದಾಸರ ಹಾಡು ‘ಬಿಭಾಸ್’ ರಾಗದಲ್ಲಿದೆ.

ಸಂಧ್ಯಾರಾಗ ಚಿತ್ರದ ‘ನಂಬಿದೆ ನಿನ್ನ ನಾದ ದೇವತೆಯೇ..’ ‘ಪೂರ್ಯ ಕಲ್ಯಾಣ್’ ರಾಗದಲ್ಲಿ ಹಾಡಿದ್ದು, ಕೇಳುಗರು ಮರೆಯುವಂತೆಯೇ ಇಲ್ಲ. ಇದಲ್ಲದೆ ಶುದ್ಧಕಲ್ಯಾಣ್, ಮಿಯಾಕಿ ತೋಡಿ, ಪೂರಿಯಾ ಧನಾಶ್ರೀ, ಮುಲ್ತಾನಿ, ಭೀಮಪಲಾಸಿ, ದರ್ಬಾರಿ ಮುಂತಾದ ಸುಮಧುರ ರಾಗಗಳನ್ನು ಪಂ.ಜೋಷಿ ಅವರ ದನಿಯಲ್ಲಿಯೇ ಕೇಳಬೇಕು ಎನ್ನುವಷ್ಟು ಜನಪ್ರಿಯ.

ಶಾಸ್ತ್ರೀಯ ಸಂಗೀತದ ದಕ್ಷಿಣಾದಿ ಮತ್ತು ಉತ್ತರಾದಿ ಎರಡು ಶೈಲಿಗಳಲ್ಲೂ ಸಾಮಾನ್ಯವಾಗಿರುವ ಒಂದೇ ರಾಗವನ್ನು ತೆಗೆದುಕೊಂಡು ಹಾಡುವ ಜುಗಲ್‌ಬಂದಿ ಕಛೇರಿ ಶ್ರವಣಾನಂದಕರ. ಕರ್ನಾಟಕ ಶಾಸ್ತ್ರೀಯ ಸಂಗೀತದ ‘ಮೋಹನ’ ಮತ್ತು ಹಿಂದೂಸ್ತಾನಿ ಶೈಲಿಯ ‘ಭೂಪಾಲಿ’ ರಾಗ, ಅದೇ ರೀತಿ ದಕ್ಷಿಣಾದಿಯ ‘ಅಭೇರಿ’ ರಾಗ; ಹಿಂದೂಸ್ತಾನಿಯ ‘ಭೀಮಪಲಾಸಿ’; ಇವೇ ಮುಂತಾದ ರಾಗಗಳನ್ನು ಆಯ್ದುಕೊಂಡು ಪಂ. ಭೀಮಸೇನ ಜೋಷಿ ಮತ್ತು ಕರ್ನಾಟಕ ಸಂಗೀತದ ಮೇರು ಡಾ. ಬಾಲಮುರಳಿ ಕೃಷ್ಣ ಅವರು ಪ್ರಸ್ತುತಪಡಿಸುತ್ತಿದ್ದ ಜುಗಲ್‌ಬಂದಿಯೂ ವಿಶ್ವವಿಖ್ಯಾತ.

‘ವಿಲಂಬಿತ್ ಕಾಲದಲ್ಲಿ ಹಾಡುವಾಗ ಅವರ ಉಸಿರು ನಿಯಂತ್ರಣ ಸಾಮರ್ಥ್ಯ ಅಚ್ಚರಿ ಮೂಡಿಸುತ್ತದೆ, ವಿಲಂಬಿತ್‌ನ ಒಂದು ಆವರ್ತವನ್ನು ಒಂದೇ ಉಸಿರಿನಲ್ಲಿ ಹಾಡುವಂತಹ ಇಂಥ ಕಲಾವಿದರು ವಿರಳಾತಿ ವಿರಳ’ ಎನ್ನುತ್ತಾರೆ ಹಿಂದೂಸ್ತಾನಿ ಸಂಗೀತದ ಬನಾರಸ್ ಘರಾಣೆಯ ಮೇರು ಗಾಯಕ ಪಂ. ರಾಜನ್ ಮಿಶ್ರಾ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತಾವು ಸಂಗೀತ ಕಛೇರಿ ಕೊಡಲು ಹೋದಾಗ ಅಲ್ಲಿನ ಜನ ಪಂ. ಭೀಮಸೇನ ಜೋಶಿ ಅವರ ಗಾಯನವನ್ನು ನೆನೆಸಿ ಪುಳಕಗೊಳ್ಳುತ್ತಾರೆ ಎನ್ನುತ್ತಾರೆ ಪಂ. ಜೋಷಿ ಅವರ ಗಾಯನ ಶೈಲಿಯನ್ನು ವಿಶ್ಲೇಷಿಸುವ ಪಂ.ರಾಜನ್-ಸಾಜನ್ ಮಿಶ್ರಾ ಸಹೋದರರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT