ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ ಸಾಮ್ರಾಟನ ನೆನಪಿಗೆ ಸ್ಮಾರಕದ ಆಶಯ

Last Updated 25 ಜನವರಿ 2013, 11:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದ ಭೀಮಣ್ಣನಿಗೆ ರಾಜ್ಯದಲ್ಲಿ ಸ್ಮಾರಕ ಇಲ್ಲದಿರುವುದು ದುರದೃಷ್ಟಕರ' ಎಂದು ಭೀಮಸೇನ ಜೋಶಿ ಅವರ ಒಡನಾಡಿ ಹಾಗೂ ಹುಬ್ಬಳ್ಳಿ ಆರ್ಟ್ ಸರ್ಕಲ್ ಕಾರ್ಯದರ್ಶಿ ಬಾಬುರಾವ್ ಹಾನಗಲ್ ಹೇಳಿದರು.

ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಶನ್ ವತಿಯಿಂದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಾ. ಭೀಮಸೇನ ಜೋಶಿ ಅವರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

`ಕುಂದಗೋಳದಿಂದ ನಮ್ಮ ಭೀಮಣ್ಣನ ಹೆಜ್ಜೆ ಗುರುತುಗಳು ಆರಂಭವಾದವು. ಗುರುಕುಲದಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದ ಅವರಿಗೆ ಗಂಗೂಬಾಯಿ ಹಾನಗಲ್ ಉತ್ತಮ ಸಂಗೀತ ಸಾಥಿಯಾಗಿದ್ದರು. ಇಬ್ಬರೂ ತಾಸುಗಟ್ಟಲೆ ಸಂಗೀತಾಭ್ಯಾಸ ಮಾಡುತ್ತಿದ್ದರು. ಗಂಗಜ್ಜಿ ಜೊತೆ ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು.

ಆರಂಭದಲ್ಲಿ ಕಛೇರಿ ಕೊಡಲು ಭೀಮಣ್ಣ ಹೆದರುತ್ತಿದ್ದರು. ನಾಲ್ಕು ಜನರ ಮಧ್ಯೆ ಕೂರಿಸಿ ಅವರನ್ನು ಹಾಡಿಸಬೇಕಾಗಿತ್ತು. ಆದರೆ ಕ್ರಮೇಣ ಅವರು ಎತ್ತರಕ್ಕೆ ಏರಿದ ಪರಿ ವಿಸ್ಮಯಕಾರಿಯಾದುದು. ಶಾಸ್ತ್ರೀಯ, ಸುಗಮ, ಭಕ್ತಿ ಸಂಗೀತದಲ್ಲಿ ಅಪಾರ ಸಾಧನೆ ಮಾಡಿದರು. ಮೊದಲ ಬಾರಿಗೆ ಶಾಸ್ತ್ರೀಯ ಸಂಗೀತಕ್ಕೆ ಭಾರತರತ್ನ ತಂದುಕೊಟ್ಟರು. ಅವರು ಇಹಲೋಕ ತ್ಯಜಿಸಿ ಎರಡು ವರ್ಷ ಸಂದರೂ ಸರ್ಕಾರ ಇನ್ನೂ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿಲ್ಲ' ಎಂದು ವಿಷಾದಿಸಿದರು.

`ಭಾರತರತ್ನ ಭೀಮಸೇನ ಜೋಶಿ ಅವರ ಪುಣ್ಯಸ್ಮರಣೆ  ಸರ್ಕಾರದ ಕಾರ್ಯಕ್ರಮ ಆಗಬೇಕಾಗಿತ್ತು. ಅವರು ನಿಧನ ಹೊಂದಿದಾಗ ಸರ್ಕಾರ ಭರವಸೆಗಳ ಮಳೆಯನ್ನೇ ಸುರಿಸಿತು. ಆದರೆ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಕಡೇ ಪಕ್ಷ ಮೂರನೇ ಪುಣ್ಯ ಸ್ಮರಣೆಯನ್ನಾದರೂ ಸರ್ಕಾರದ ಕಾರ್ಯಕ್ರಮವನ್ನಾಗಿ ಆಚರಣೆ ಮಾಡಲಿ' ಎಂದು ಮಾಜಿ ಮೇಯರ್ ಹನುಮಂತ ಡಂಬಳ ಹೇಳಿದರು.

`ಸಂಗೀತ ಲೋಕದಲ್ಲಿ ಡಾ. ಭೀಮಸೇನ ಜೋಶಿ ಅವರ ಹೆಸರು ಅಮರವಾದುದು. ಸಂಗೀತ ಇರುವವರೆಗೂ ಅವರ ಹೆಸರು ಶಾಶ್ವತವಾಗಿರುತ್ತದೆ' ಎಂದು ಗಂಗೂಬಾಯಿ ಹಾನಗಲ್ ಗುರುಕುಲದ ಸಂಗೀತ ಗುರು ಪಂಡಿತ್ ಮಣಿಪ್ರಸಾದ್ ಹೇಳಿದರು.

ಕಾರ್ಯಕ್ರಮದಲ್ಲಿ ವೀರೇಶ ಕಾಲವಾಡಮಠ, ನಾರಾಯಣರಾವ್ ಹಾನಗಲ್, ವಿಜಯ ಕೋಟಿ, ಪ್ರದೀಪ್ ಭಟ್, ಮನೋಜ್ ಹಾನಗಲ್ ಮುಂತಾದವರು ಹಾಜರಿದ್ದರು.

ಮನಸೂರೆಗೊಂಡ ಮೀನಾ ಗಾಯನ
ಡಾ. ಭೀಮಸೇನ ಜೋಶಿ ಅವರಿಗೆ ಹುಬ್ಬಳ್ಳಿಯ ವಿವಿಧ ಸಂಗೀತ ವಿದ್ಯಾಲಯಗಳ ಮಕ್ಕಳು, ಸ್ಥಳೀಯ ಕಲಾವಿದರು ಹಾಗೂ ಖ್ಯಾತನಾಮ ಸಂಗೀತಗಾರರು ಗಾಯನದ ಮೂಲಕ ನಾದ ನಮನ ಸಲ್ಲಿಸಿದರು.

ಪುಣೆಯಿಂದ ಬಂದಿದ್ದ ಸಂಗೀತರತ್ನ ಉಸ್ತಾದ್ ಅಬ್ದುಲ್ ಕರೀಂ ಖಾನ್ ಅವರ ಮರಿ ಮೊಮ್ಮಗಳು ವಿದುಷಿ ಮೀನಾ ಪಾತರಪೇಕರ ಅವರ ಗಾಯನ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಅವರ ಸ್ವರ ಪ್ರಸ್ತಾರ, ಚೀಜ್, ಆಲಾಪಗಳು ರಸಿಕರನ್ನು ಸ್ವರ ಸಾಗರದಲ್ಲಿ ತೇಲಿಸಿದವು.

ಆರಂಭದಲ್ಲೇ `ಬಾಗೇಶ್ರೀ' ಹಾಡಿದ ಮೀನಾ, ತಮ್ಮ ಶುದ್ಧ ಧ್ವನಿಯ ಮೂಲಕ ಸಭಾಂಗಣದಲ್ಲಿ ಮಾಧುರ್ಯದ ಅಲೆ ಎಬ್ಬಿಸಿದರು. ತಬಲಾದಲ್ಲಿ ಉದಯ ಕುಲಕರ್ಣಿ, ಹಾರ್ಮೋನಿಯಂನಲ್ಲಿ ಗುರುಪ್ರಸಾದ್ ಹೆಗಡೆ ಸಾಥ್ ನೀಡಿದರು.

ಜೊತೆಗೆ ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳು ವಿದುಷಿ ವೈಷ್ಣವಿ ತಲಕಾಡ, ಪಂಡಿತ್ ಕೃಷ್ಣೇಂದ್ರ ವಾಡಿಕರ, ಪಂಡಿತ್ ಅನಂತ ತೇರದಾಳ ಅವರ ಕಛೇರಿಗಳೂ ಕೇಳುಗರನ್ನು ಸೆಳೆದವು. ಸಾಮಗಾನ ಸಂಗೀತ ವಿದ್ಯಾಲಯ, ಶಾಂತರಾಮ ಸಂಗೀತ ವಿದ್ಯಾಲಯ, ಭವಾನಿ ಸಂಗೀತ ಶಾಲೆಯ ಮಕ್ಕಳೂ ಭೀಮಸೇನ ಜೋಶಿ ಅವರಿಗೆ ನಾದ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT