ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ ಸಾಮ್ರಾಟನ ಸ್ಮರಣೆ ಇಂದು

Last Updated 6 ಮಾರ್ಚ್ 2011, 9:40 IST
ಅಕ್ಷರ ಗಾತ್ರ

ಬೀಳಗಿ:  ‘ನನಗ ಏನಾದ್ರೂ ಕೊಡಬೇಕಂತ ನಿಮ್ಮ ಮನಸ್ಸಿನೊಳಗ ಇದ್ರ, ಬೀಳಗಿ ಊರ ಸಮಸ್ತ ದೈವದ ಪರವಾಗಿ ಒಂದ ತೆಂಗಿನಕಾಯಿ ಒಡದ ಮ್ಯಾಲ ಮಹಾಲಿಂಗೇಶ್ವರ ಸ್ವಾಮಿ ತೇರ ಮುಂದಕ್ಕ ಎಳೀಬೇಕು, ತೇರ ಮುಂದ ಸಾಗೂವರೆಗೂ ಮತ್ಯಾರದೂ ಕಾಯಿ ಒಡಿಬಾರ್ದು, ಇದರ ಹೊರ್ತು ಮತ್ತೇನೂ ಬ್ಯಾಡ’

ಶಹನಾಯ್ ವಾದನದಲ್ಲಿ  ಗುಲಾಮ್ ಕಾಶೀಮ್ ಅವರನ್ನು ಸ್ಪರ್ಧೆಯಲ್ಲಿ ಸೋಲಿಸಿ ಮುಧೋಳದ ಘೋರ್ಪಡೆ ಮಹಾರಾಜರಿಂದ ‘ಸ್ವರ ಸಾಮ್ರಾಟ’ ಬಿರುದು ಪಡೆದುಕೊಂಡ ಬೀಳಗಿಯ ಅಪ್ಪಣ್ಣ ವಾಲಗದ ಅವರನ್ನು ನಿಮಗೇನು ಬೇಕು ಎಂದು ಮಹಾರಾಜರು ಕೇಳಿದಾಗ ಅಪ್ಪಣ್ಣ ಅವರು ಮುಂದಿಟ್ಟ ಬೇಡಿಕೆ ಇದು.

ಬೀಳಗಿಯ ವಾಲಗದ ಅವರ ಬಡ ಕುಟುಂಬದಲ್ಲಿ ಜನಿಸಿದ ಅಪ್ಪಣ್ಣ (ಜನಿಸಿದ್ದು 1876ರಲ್ಲಿ. ಮರಣ 6-9-1945), ಮೊದಲು ಅಭ್ಯಸಿಸಿದ್ದು ದಕ್ಷಿಣಾದಿ ಸಂಗೀತವನ್ನು. ಪ್ರತಿವರ್ಷ ಮೀರಜ್ ಪಟ್ಟಣದ ಮೀರಾಸಾಬ್ ಎಂಬ ಸಂತರ ಉರುಸಿಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ಅವರನ್ನು ಸೆಳೆದಿದ್ದು ಉಸ್ತಾದ್ ಕರೀಮ್‌ಖಾನ್ ಅವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ. ನಂತರ ಅವರಿಂದಲೇ ಹಿಂದೂಸ್ತಾನಿ ಸಂಗೀತ ಕಲಿತು ಸಂಗೀತ ಲೋಕದ ದಿಗ್ಗಜರ ಗಮನ ಸೆಳೆದವರು.

ನಿತ್ಯ ಬೀಳಗಿಯ ಬೆಟ್ಟದ ಮೇಲಿರುವ ದುರ್ಗಾದೇವಿಯ ಸಾನ್ನಿಧ್ಯ ಅವರ ಸಂಗೀತಾಭ್ಯಾಸದ ತಾಣವಾಗಿತ್ತು.  ಜಮಖಂಡಿ, ಮುಧೋಳ, ರಾಮದುರ್ಗ, ಮೀರಜ್, ಸಾಗಲಿ, ಕೊಲ್ಹಾಪುರ ಸಂಸ್ಥಾನಿಕರ ಆಸ್ಥಾನಗಳಲ್ಲಿ ವರ್ಷಕ್ಕೊಂದಾವರ್ತಿ ಅಪ್ಪಣ್ಣನವರ ಸಂಗೀತ ಕಚೇರಿ ನಡೆಯಲೇಬೇಕು ಎಂಬ ಒತ್ತಾಸೆ ಇತ್ತು, ಸಂಸ್ಥಾನಿಕರಲ್ಲಿ.

ಸಾರಂಗ್, ದುರ್ಗಾ, ಮಾರವಾ, ಮಾಲ್‌ಕೌನ್ಸ್ ಮುಂತಾದ ರಾಗಗಳನ್ನು ಅಪ್ಪಣ್ಣನವರು ನುಡಿಸುತ್ತಿದ್ದರೆ ಗಂಧರ್ವರೇ ನರ್ತಿಸುವಂತಿತ್ತು ಎಂದು ಸಂಗೀತ ಪ್ರಿಯರು ಈಗಲೂ ಹೇಳುತ್ತಾರೆ.

ಮುಧೋಳ ತಾಲ್ಲೂಕಿನ ಲೋಕಾಪುರ, ಅಪ್ಪಣ್ಣನವರ ಪತ್ನಿ ಪೀರವ್ವನ ತವರು ಮನೆ. ಅವರ ವಾದನ ಕಾರ್ಯಕ್ರಮವಿದ್ದಲ್ಲೆಲ್ಲ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸುತ್ತಿದ್ದ ಪ್ಯಾರೇಮಾ, ಬೀಳಗಿ ತಾಲೂಕಿನ ಬಿಸನಾಳದವರು. ಅಪ್ಪಣ್ಣನವರ ಸಂಗೀತ ಕಚೇರಿ ನಡೆಯುವಲ್ಲೆಲ್ಲ ಪ್ಯಾರೇಮಾರ ನೃತ್ಯ ಇರುತ್ತಿತ್ತು. ಅಂತಹ ರಾಗ- ನೃತ್ಯಗಳ ಸಮರಸ ಅಲ್ಲಿರುತ್ತಿತ್ತು ಎಂದು ಹೇಳಲಾಗುತ್ತದೆ.

ಸಂಗೀತ ಲೋಕದ ದಂತಕಥೆ, ಸ್ವರಸಾಮ್ರಾಟ ತಮ್ಮ ಶಹನಾಯ್‌ಯನ್ನು ಸಂಗೀತ ಶಾರದೆಯ ಪಾದಕ್ಕೊಪ್ಪಿಸಿ ಸಂಗೀತ ಪ್ರಪಂಚಕ್ಕೆ ವಿದಾಯ ಹೇಳಿದ್ದು 1945ರ ಸೆಪ್ಟೆಂಬರ್ 6ರಂದು.

ಈ ಮಹಾನ್ ಸಂಗೀತ ಕಲಾವಿದನ ಹೆಸರಿನಲ್ಲಿ 20 ವರ್ಷಗಳ ಹಿಂದೆ ಸನಾದಿ ಅಪ್ಪಣ್ಣ ಕಲಾಕಾರರ ಸಂಘವನ್ನು ರಚಿಸಲಾಗಿದೆ. ಸಂಘ ಪ್ರತಿವರ್ಷ ರಾಷ್ಟ್ರ, ರಾಜ್ಯಮಟ್ಟದ ಸಂಗೀತ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಕಲಾವಿದರನ್ನು ಪರಿಚಯಿಸುವ ಪುಸ್ತಕ ಪ್ರಕಟಣೆ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸಂಘದ ಕಲಾವಿದರು ವಿದೇಶಗಳಲ್ಲಿಯೂ ಕಲಾ ಪ್ರೌಢಿಮೆ ಮೆರೆದಿದ್ದಾರೆ.

ಸನಾದಿ ಅಪ್ಪಣ್ಣನವರ 65ನೇ ಪುಣ್ಯ ಸ್ಮರಣೆ ಹಾಗೂ ಸಂಘದ 20ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ಜಾನಪದ ಅಕಾಡೆಮಿಯ ಸಹಯೋಗದಲ್ಲಿ ಮಾ 6ರಂದು ಅಖಿಲ ಭಾರತ ಸನಾದಿ ಸಂಭ್ರಮ ಹಾಗೂ ರಾಜ್ಯ ಮಟ್ಟದ ಜಾನಪದ ಸಂಭ್ರಮ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ರಂಗ ಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಲೆ, ಸಂಗೀತ, ಸಾಹಿತ್ಯ, ಕ್ರೆಡೆ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಸನಾದಿ ಅಪ್ಪಣ್ಣ ಕಲಾಶ್ರೆ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಂಪ್ರದಾನಿ, ಕರಡಿ ವಾದನ, ತಾಸೆವಾದನ ವೀರಗಾಸೆ, ಭಜನೆ, ರಿವಾಯತ್, ನೌಬತ್, ಲೇಜಿಮ್ ತಂಡ, ಚೌಡಕಿ ಮೇಳಗಳು ಮುಂತಾದ ತಂಡಗಳ ಕಾರ್ಯಕ್ರಮಗಳು ನಡೆಯಲಿವೆ.            
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT