ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ ಸಾಮ್ರಾಟನಿಗೆ ಗಾಯನ ನುಡಿನಮನ

Last Updated 30 ಡಿಸೆಂಬರ್ 2010, 10:25 IST
ಅಕ್ಷರ ಗಾತ್ರ

ಬೆಂಗಳೂರು: ಸುಗಮ ಸಂಗೀತಕ್ಕೆ ಹೊಸ ಆಯಾಮ ನೀಡಿದ ಸ್ವರ ಸಂಯೋಜನೆಯ ಮಾಂತ್ರಿಕ ಸಿ.ಅಶ್ವತ್ಥ್ ಅವರಿಗೆ 3,460 ಕಲಾವಿದರು ಗಾಯನದ ಮೂಲಕ ನುಡಿನಮನ ಸಲ್ಲಿಸಿದ ಘಟನೆಗೆ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನವು ಬುಧವಾರ ಸಂಜೆ ಸಾಕ್ಷಿಯಾಯಿತು. ಮೂರು ಸಾವಿರಕ್ಕೂ ಹೆಚ್ಚು ಜನರು ಒಂದೇ ವೇದಿಕೆಯ ಮೇಲೆ ಸೇರಿ ಗೀತೆಗಳನ್ನು ಹಾಡಿರುವುದು ಕನ್ನಡದ ಮಟ್ಟಿಗೆ ಅಪರೂಪ.

ಸಮೂಹ ಗಾಯನವೆಂದರೆ 20ರಿಂದ 30 ಜನ ಕಲಾವಿದರು ಇರುತ್ತಿದ್ದ ಕಾಲದಲ್ಲಿ ಅಶ್ವತ್ಥ್ ಅವರು ಒಂದು ಸಾವಿರ ಕಲಾವಿದರನ್ನು  ಕಟ್ಟಿಕೊಂಡು ‘ಕನ್ನಡವೇ ಸತ್ಯ’ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಅದರ ಮುಂದುವರಿದ ಭಾಗವೆನ್ನುವಂತೆ ಅವರ ಒಡನಾಡಿ ಕಿಕ್ಕೇರಿ ಕೃಷ್ಣಮೂರ್ತಿ ಅವರು ಮೂರು ಸಾವಿರಕ್ಕೂ ಹೆಚ್ಚು ಕಲಾವಿದರನ್ನು ಸೇರಿಸಿ ಈ ‘ಕನ್ನಡವೇ ಸತ್ಯ-ಅಶ್ವತ್ಥ್ ನಿತ್ಯ’  ಕಾರ್ಯಕ್ರಮವನ್ನು ನಡೆಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ‘ಅಶ್ವತ್ಥ್ ಅವರು ದೈಹಿಕವಾಗಿ ನಮ್ಮನ್ನು  ಅಗಲಿರಬಹುದು, ಆದರೆ ಅವರು ಗಾಯನದ ಮೂಲಕ ಈಗಲೂ ನಮ್ಮೊಂದಿಗೆ ಇದ್ದಾರೆ’ ಎಂದು ಹೇಳಿದರು.‘ಅಶ್ವತ್ಥ್ ಅವರ ಮೂಲಕ ದೇವರಿಗೆ ಇಂದು ಸಹಸ್ರ ಕಂಠಾಭಿಷೇಕ ನಡೆಯಿತು. ಕನ್ನಡದ ಹಾಲಿನ ಮೂಲಕ ಅಭಿಷೇಕ ನಡೆಯಿತು’ ಎಂದು ಅವರು ನುಡಿದರು.

ಅಶ್ವತ್ಥ್ ಕುರಿತಾದ ‘ಗಾನ ಗಾರುಡಿಗ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ನಂತರ ಚುಟುಕಾಗಿ ಮಾತನಾಡಿದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ‘ಸುಗಮ ಸಂಗೀತಕ್ಕೆ ಸಮುದಾಯ ಗಾಯನದ ಪರಂಪರೆಯನ್ನು ಹಾಕಿಕೊಟ್ಟವರು ಈ ಅಶ್ವತ್ಥ್’ ಎಂದು ಹೊಗಳಿದರು.ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮಾತನಾಡಿ, ‘ಗಾಯಕರೊಬ್ಬರಿಗೆ ಇಂತಹದೊಂದು ಗೌರವ ನೀಡುತ್ತಿರುವುದನ್ನು ಇದೇ ಮೊದಲ ಬಾರಿ ನೋಡುತ್ತಿದ್ದೇನೆ. ಬೇರೆಲ್ಲೂ ಇಂತಹ  ಪ್ರಸಂಗಗಳು ನಡೆದಿದ್ದನ್ನು ನಾನು ಕಂಡಿಲ್ಲ, ಕೇಳಿಲ್ಲ’ ಎಂದು ಭಾವಪರವಶವಾಗಿ ನುಡಿದರು.

ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ, ಗೃಹ ಸಚಿವ ಆರ್. ಅಶೋಕ್, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್, ಲಹರಿ ಆಡಿಯೊ ಸಂಸ್ಥೆಯ ರಮೇಶ್ ನಾಯ್ಡು, ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ, ಕವಿ  ದೊಡ್ಡರಂಗೇಗೌಡ ಹಾಗೂ ಇತರರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಆದರ್ಶ ಸುಗಮ ಸಂಗೀತ  ಅಕಾಡೆಮಿ ಟ್ರಸ್ಟ್, ಅದಮ್ಯ ಚೇತನ ಸಂಸ್ಥೆ, ನಿರ್ಮಾಣ್ ಶೆಲ್ಟರ್ಸ್‌, ಕನ್ನಡ-ಸಂಸ್ಕೃತಿ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿಯಾಗಿ ಆಯೋಜಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT