ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರಧಾರೆಯಲ್ಲಿ ಮಿಂದ ಅನನ್ಯ

Last Updated 14 ಮೇ 2012, 19:30 IST
ಅಕ್ಷರ ಗಾತ್ರ

ಲಯ- ಲಾಸ್ಯ

ಹೊಸ ಹೊಸದಾದ ಪ್ರಯತ್ನಗಳಲ್ಲಿ ಪ್ರವಾಹಲೋಲೆಯಾಗಿ ಪ್ರಕಟಗೊಂಡ ನವನವೋನ್ಮೇಷಶಾಲಿನಿ ಯುವ ಪ್ರತಿಭೆಗಳು ಅನನ್ಯ ಸಂಸ್ಥೆಯ ವಾರ್ಷಿಕ  `ಸಂಗತಿ~ ಸಂಗೀತೋತ್ಸವದ ಕಛೇರಿಗಳನ್ನು ಅವಿಸ್ಮರಣೀಯಗೊಳಿಸಿದವು.

ನಾಲ್ಕು ದಿನಗಳ ಸಂಗೀತದೌತಣ ಮೇ 9ರಂದು ಅನನ್ಯ ಸಭಾಂಗಣದಲ್ಲಿ ಆರಂಭಗೊಂಡಿತು.

ಅದೇ ಸಂದರ್ಭದಲ್ಲಿ ನುರಿತ ವೀಣಾವಾದಕ ಡಿ.ಬಾಲಕಷ್ಣ ಅವರು ಪ್ರತಿಭಾನ್ವಿತ ಗಾಯಕಿ ಡಾ.ಹಂಸಿನೀ ನಾಗೇಂದ್ರ ಅವರ  ಅಪೂರ್ವ ಕೃತಿಮಂಜರಿ ಸೀಡಿಯನ್ನು ಬಿಡುಗಡೆ ಮಾಡಿದರು. ಅದರಲ್ಲಿ ಅಪರೂಪದ ಶುದ್ಧ ತೋಡಿ ವರ್ಣ (ಪಟ್ಣಂ), ನೆನರುಂಚರ (ಸಿಂಹವಾಹಿನಿ, ತ್ಯಾಗರಾಜರು), ಕರುಣಜೂಡವಮ್ಮ (ವರಾಳಿ, ಶಾಮಾಶಾಸ್ತ್ರಿ), ನೀನೇದಯಾಳು (ರಾಗಮಾಲಿಕೆ, ಪುರಂದರದಾಸರು), ಸಹಜಗುಣ ರಾಮಚಂದ್ರ (ಶಂಕರಾಭರಣ, ಮುತ್ತಯ್ಯಭಾಗವತರು) ಮತ್ತು ತಿಲ್ಲಾನ (ಆನಂದಭೈರವಿ, ಲಾಲ್ಗುಡಿ ಜಯರಾಮನ್) ರಚನೆಗಳನ್ನು ಹಂಸಿನೀ ವಿದ್ವತ್ಪೂರ್ಣವಾಗಿ ಹಾಡಿರುವುದು ಗಮನಾರ್ಹ.
ಸಂಗೀತೋತ್ಸವದ ಮೊದಲ ಕಛೇರಿ ಎನ್. ರಾಜಕಮಲ್ ಅವರದು. ತಾವು ಆಯ್ದುಕೊಂಡ ರಾಗಗಳ ಜೊತೆಗೆ ಐಕ್ಯವಾಗಿ ಚಿಂತಿಸಿ, ಅನುಭವಿಸಿ ನುಡಿಸಿದರು. ಸಫಲ ಹಾಗೂ ಸಂವೇದನಾಶೀಲ ವೇಣುವಾದನಕ್ಕೆ ಅವಶ್ಯಕವಾದ ಶ್ವಾಸ ನಿಯಂತ್ರಣ, ಸ್ವರ-ಸಾಹಿತ್ಯವನ್ನು ಸ್ಪಷ್ಟವಾಗಿ ಹೊಮ್ಮಿಸುವ ನಿಖರ ಹಾಗೂ ವೈವಿಧ್ಯದ ತುತ್ತುಕ್ಕಾರಗಳು, ಅದೆಲ್ಲವನ್ನೂ ಸುಸೂತ್ರಗೊಳಿಸುವಂತಹ ಪ್ರಖರವಾದ ಲಯ ಪ್ರಭುತ್ವ, ಆಳವಾದ ಮನೋಧರ್ಮ, ರಸಿಕರನ್ನು ಸೂರೆಗೊಳ್ಳುವ ಕಛೇರಿ ತಂತ್ರ ಇತ್ಯಾದಿ ಸಕಲ ಉತ್ತಮಾಂಶಗಳಿಂದ ಅವರ ಕಛೇರಿ ಮುದ ನೀಡಿತು.

ರಘು (ಪಿಟೀಲು), ಶ್ರೀನಿವಾಸ್ (ಮೃದಂಗ) ಮತ್ತು ಕಿರಣ್‌ಕುಮಾರ್ (ಖಂಜರಿ) ಅವರ ಹಿಮ್ಮೇಳ ಸಹಕಾರವಿತ್ತು.

ರಾಗ ಮತ್ತು ಕೃತಿಗಳನ್ನು ಹೆಸರಿಸುತ್ತಾ ನುಡಿಸಿದ್ದು ರಾಜಕಮಲ್ ವಿಶೇಷ. ಹಂಸಧ್ವನಿಯ ರಾಗಛಾಯೆಯನ್ನು ಮೂಡಿಸಿ ಶ್ರೀರಘುಕುಲ (ಹಂಸಧ್ವನಿ, ತಾಗರಾಜ) ಕೀರ್ತನೆಯನ್ನು ಮೇಲ್ಕಾಲ ಸ್ವರಗಳೊಂದಿಗೆ ಸಿಂಗರಿಸಿದರು. ಸಾವಧಾನ ಮತ್ತು ಸಾವಕಾಶವಾಗಿ ಪ್ರಸ್ತುತಪಡಿಸಿದ ಖಮಾಚ್ ರಾಗದ ಚೆಲುವು ಆಪ್ಯಾಯಮಾನವಾಗಿತ್ತು. ಆ ರಾಗದಲ್ಲಿರುವ ಇತರೆ ಜನಪ್ರಿಯ ಕೃತಿಗಳ ಸಾಲುಗಳನ್ನು ರಾಜಕಮಲ್ ಮತ್ತು ರಘು ಅವರು ತಮ್ಮ ರಾಗವಿನ್ಯಾಸದಲ್ಲಿ ಅಡಕಗೊಳಿಸಿದ್ದು ಶ್ರೋತೃಗಳ ಮೆಚ್ಚುಗೆ ಗಳಿಸಿತು. 

ತ್ಯಾಗರಾಜರ ಮತ್ತೊಂದು ಕೀರ್ತನೆ  ಸುಜನ ಜೀವನ (ಖಮಾಚ್) ವಿಳಂಬ ಗತಿಯಲ್ಲಿ ಭಾವವಾಹಕವಾಗಿ ಕೊಳಲಿನಲ್ಲಿ ರೂಪುಗೊಂಡಿತು. ಪಟ್ಣಂ ಅವರ ಅಪೂರ್ವ ರಚನೆ  ಇದಿನ್ಯಾಯಮಾ ರಾಮಚಂದ್ರ (ಮಾಳವಿ) ರಾಮನನ್ನು ಪ್ರಶ್ನಿಸಿದಂತಿತ್ತು. ಕಛೇರಿಯ ಕೇಂದ್ರಬಿಂದುವಾಗಿ  ಸಿಂಹೇಂದ್ರ ಮಧ್ಯಮ ರಾಗ ಮೂಡಿಬಂತು.

ಸ್ವಾತಿ ತಿರುನಾಳರ   ರಾಮ ರಾಮ ಗುಣಸೀಮಾ  ಕೀರ್ತನೆಯ ನುಡಿಸಾಣಿಕೆ,  ಮುನಿಮಾನಸಾಗಮ ಪಂಕ್ತಿಯ ನೆರೆವಲ್ ಹಾಗೂ ಲಯ ಕೌಶಲ್ಯದಿಂದ ತುಂಬಿ ತುಳುಕಾಡಿದ ಸ್ವರಪ್ರಸ್ತಾರ ಅವರ ನಿರೂಪಣೆಯನ್ನು ಪ್ರಬುದ್ಧಗೊಳಿಸಿತು.  ವೆಂಕಟಾಚಲನಿಲಯಂ (ಸಿಂಧುಭೈರವಿ) ಸೊಗಸಾಗಿತ್ತು.

ಸ್ವಾರಸ್ಯಕರ ಹಿಂದೋಳ ಪಲ್ಲವಿ
ಎರಡನೆಯ ದಿನ ಚಂದನಬಾಲಾ ಕಲ್ಯಾಣ್ ಅವರ ಗಾಯನ ಕಛೇರಿ ಅಕ್ಷರಶಃ ಒಂದು ರಸ ಕಾಣಿಕೆ. ಉಚ್ಚ ಶ್ರುತಿಯಲ್ಲಿ ಹೊಮ್ಮಿದ ಅವರ ಗಾಯನವು ಉತ್ತಮ ಚಿಂತನದಿಂದ ವಿಸ್ತಾರಗೊಂಡು ನಮ್ಮನ್ನು ಸಂಪೂರ್ಣವಾಗಿ ಆಕ್ರಮಿಸಿತು. ಕಛೇರಿಗೆ ಭೈರವಿ ಅಟ್ಟತಾಳ ವರ್ಣದ ಸುಭದ್ರ ಬುನಾದಿ. ವರಾಳಿ ರಾಗದ ಆಲಾಪನೆಯಲ್ಲಿ ಸಾರಸರ್ವಸ್ವವೂ ತುಂಬಿತ್ತು. ದೀಕ್ಷಿತರ  `ಲಂಬೋದರಾಯ ನಮಸ್ತೆ~ಯನ್ನು ಪಾಂಡಿತ್ಯಪೂರ್ಣವಾಗಿ ಹಾಡಿ  `ಸಾಂಬಶಿವಾತ್ಮಜಾಯ~ ಪಂಕ್ತಿಯನ್ನು ನೆರೆವಲ್‌ಗೆ ಆಯ್ದುಕೊಂಡರು. 

   ನಂತರ ಅದಕ್ಕೆ ಮಧ್ಯಮಕಾಲದ ಸ್ವರವಿನ್ಯಾಸವನ್ನು ಲಗತ್ತಿಸಿದರು. ನಾದ ಮಾಧುರ್ಯ ಮತ್ತು ಭಾವನೆಯ ಉಜ್ವಲತೆ ನಾಟ್ಟಿಕುರಂಜಿ ರಾಗದ ವಿಸ್ತೃತ ಚಿತ್ರಣದ ಪ್ರಧಾನ ಗುಣಗಳಾಗಿದ್ದವು. ಕನಕದಾಸರ  `ಕುಲ ಕುಲ ಕುಲವೆಂದು ಹೊಡೆದಾಡದಿರಿ~ ರಚನೆಯನ್ನು ಆಹ್ಲಾದಕರ ವಿಳಂಬ ಕಾಲದಲ್ಲಿ ಹಾಡಿ ಚಕಿತಗೊಳಿಸಿದರು.

ಸಿರಿಕಾಗಿನೆಲೆಯಾದಿ ಎಂಬಲ್ಲಿ ಸಾಹಿತ್ಯವಿಸ್ತಾರವನ್ನು ಮಾಡಿ ಎರಡು ಕಾಲಗಳಲ್ಲಿ ಸ್ವರಗಳನ್ನು ಹಾಕಿದರು. ಅದೆಷ್ಟೋ ಸಮಯದ ನಂತರ ತ್ಯಾಗರಾಜರ  ಸೀತಾಮನೋಹರ (ರಾಮಪ್ರಿಯರಾಗ) ಕೀರ್ತನೆ ಚುರುಕಾದ ಲಯದಲ್ಲಿ ಕೇಳಿದ ಖುಷಿ ಶ್ರೋತೃಗಳದ್ದಾಯಿತು. ಗಟ್ಟಿಗಾನು ತ್ಯಾಗರಾಜುನಿ ಎಂಬಲ್ಲಿ ನೆರವಲ್ ಮಾಡಿ ಸ್ವರಪ್ರಸ್ತಾರದಲ್ಲಿ ಸ್ವರಧಾರೆಯನ್ನೇ ಹರಿಸಿದರು.

ಹಿಂದೋಳ ರಾಗದ ಜೀವಸ್ವರಗಳನ್ನು ಪೋಷಿಸಿ, ಲಾಲಿಸಿ ಮಂದ್ರ ಸ್ಥಾಯಿಯಲ್ಲಿ ಸಾಕಷ್ಟು ಕಾಲ ವಿಹರಿಸಿ, ಇತರೆ ಸ್ಥಾಯಿಗಳನ್ನೂ ಆವರಿಸಿಕೊಂಡು ಹಾಡಿದ್ದು ಇಡೀ ಕಛೇರಿಗೆ ಮುಕುಟಪ್ರಾಯದಂತಿತ್ತು. ತಾನದ ಪೀಠಿಕೆಯೊಂದಿಗೆ ಖಂಡತ್ರಿಪುಟದಲ್ಲಿ  `ದಾಸದಾಸರ ಮನೆಯ ದಾಸಾನುದಾಸ~ ಪಲ್ಲವಿಯನ್ನು ನಂತರ ಹಾಡಿದರು. ಸಂಪ್ರದಾಯದಂತೆ ಪಲ್ಲವಿಯನ್ನು ಅನಲೋಮ ವಿಲೋಮದಲ್ಲಿ ಹಾಡಿದ ನಂತರ ಷಟ್ಕಾಲಗಳಲ್ಲಿ ಹಾಡಿದುದು ರೋಚಕವಾಗಿತ್ತು.

ಆರನೆ ಕಾಲದ ವೇಗವು ಹೆಚ್ಚಾಗಿರುವುದರಿಂದ ಸಾಹಿತ್ಯ ಭಾಗಕ್ಕೆ ಯಾವುದೇ ಲೋಪ ಬಾರದಿರಲು ಮೊದಲನೆಯ ಕಾಲವನ್ನು ಯೋಜನಾಬದ್ಧವಾಗಿ ಸಾಕಷ್ಟು ನಿಧಾನವಾಗಿ ಹಾಡುವ ಜಾಣ್ಮೆ ಮತ್ತು ಕೌಶಲ್ಯವನ್ನು ಚಂದನಬಾಲಾ ಲೀಲಾಜಾಲ ಪ್ರದರ್ಶಿಸಿದರು. ರಾಗಮಾಲಿಕಾ ಸ್ವರಮಾಲೆ, ಹಿಂದೋಳ ರಾಗದ ಸಗಮದನಿಸ ಸನಿದಮಗಸ ಸ್ವರಗಳನ್ನೇ ಬೇರೆ ಬೇರೆ ಸ್ಥಾನಗಳಲ್ಲಿ ಹೊಂದಿರುವ ಸೂರ್ಯ, ಸುನಾದವಿನೋದಿನಿ, ಶಿವಶಕ್ತಿ (ರಿಷಭ ರಹಿತ ಬಾಗೇಶ್ರೀ ರಾಗ; ಜಿಎನ್‌ಬಿಅವರ ಸಷ್ಟಿ) ಮತ್ತು ಚಂದ್ರಕೌನ್ಸ್ ರಾಗಗಳನ್ನು ಆ ಸ್ವರಮಾಲೆಗೆ ಅವರು ಪೋಣಿಸಿದ ಪರಿ ಅಪ್ರತಿಮ ಪ್ರತಿಭೆಯ ದ್ಯೋತಕವಾಗಿತ್ತು.

ಅದೇ ರೀತಿಯಲ್ಲಿ ಸ್ವರಪ್ರಸ್ತಾರದ ಸಂದರ್ಭದಲ್ಲಿ ಅವರು ನಿರ್ವಹಿಸಿದ ಕಲಾ ಚಮತ್ಕಾರ ಗ್ರಹ ಭೇದದಿಂದ ಆರಭಿ, ಸುನಾದವಿನೋದಿನಿ, ಮೋಹನ ಮತ್ತು ಮಧ್ಯಮಾವತಿ ರಾಗಗಳನ್ನೂ ರಸಿಕರು ಕೇಳಿ ಆನಂದಿಸುವಂತಾಯಿತು. ಬೇಹಾಗ್ ರಾಗದಲ್ಲಿ `ಮಡಿಮಡಿ~ ಎಂಬುದು ಭಾವಪೂರ್ಣವಾಗಿತ್ತು.

ಹೆಚ್ಚು ಶ್ರುತಿಯಲ್ಲಿ ನುಡಿಸಬೇಕಾಗಿದ್ದು ತಂತಿಗಳ ಸೆಟೆತದಿಂದ ಅಲ್ಲಲ್ಲಿ ತೊಂದರೆಗೊಳಗಾದರೂ ಸಹ ಪಿಟೀಲು ಸಹವಾದ್ಯಗಾರ ಮತ್ತೂರು ಶ್ರೀನಿಧಿ ಅವರ ನುಡಿಸಾಣಿಕೆ ಸಹಾಯಕವಾಗಿತ್ತು. ಬಿ.ಎಸ್. ಪ್ರಶಾಂತ್ (ಮದಂಗ) ಮತ್ತು ಭಾರ್ಗವ ಹಾಲಂಬಿ (ಖಂಜರಿ) ಅವರು ದುಪ್ಪಟ್ಟು ಉತ್ಸಾಹದಿಂದ ನೆರವಾದರು.

ನಿರಾಡಂಬರ ವಾದ್ಯ ವೈಭವ
ಭಾನುವಾರ ಬೆಳಿಗ್ಗೆ ಅನನ್ಯ `ಸಂಗತಿ~ ಸಂಗೀತೋತ್ಸವದ ಸಮಾರೋಪ. ಹಿರಿಯ ಗಾಯಕ ಬಿ.ಎಸ್. ವಿಜಯರಾಘವನ್ (ಅನನ್ಯ ಪುರಸ್ಕಾರ), ಆರ್.ಎಸ್. ನಂದಕುಮಾರ್ (ಶಾಸ್ತ್ರ ಕೌಸ್ತುಭ) ಅವರೊಂದಿಗೆ ಅನನ್ಯ ಯುವ ಪುರಸ್ಕೃತರಾದ ಎನ್.ರಾಜಕಮಲ್(ಕೊಳಲು), ಅಶ್ವಿನ್‌ಆನಂದ್ (ವೀಣೆ) ಮತ್ತು ಎ.ರಾಧೇಶ್ (ಮದಂಗ) ಅವರು ಸನ್ಮಾನಿತರಾದರು.

ಸನ್ಮಾನ ಸಮಾರಂಭಕ್ಕೆ ಮುನ್ನ ಗೀತಾ ರಮಾನಂದ, ರೇವತಿ ಮೂರ್ತಿ, ರಾಧಿಕಾ ಭಾಸ್ಕರ್ ಮತ್ತು ಗೋಪಾಲ್(ಎಲ್ಲರದೂ ವೀಣಾವಾದನ), ಎಲ್.ವಿ. ಮುಕುಂದ್ (ಕೊಳಲು), ವೆಂಕಟೇಶ ಜೋಸೈರ್ (ಪಿಟೀಲು), ರೇಣುಕಾಪ್ರಸಾದ್ (ಮದಂಗ), ಎ.ಎಸ್.ಎನ್. ಸ್ವಾಮಿ (ಖಂಜರಿ), ರಘುನಂದನ್ (ಘಟ) ಮತ್ತು ಲಕ್ಷ್ಮೀನಾರಾಯಣ (ಮೋರ್ಸಿಂಗ್) ಅವರನ್ನೊಳಗೊಂಡಿದ್ದ ವಾದ್ಯ ಸಂಗೀತ ನಿರಾಡಂಬರವಾಗಿ ಸತ್ವಪೂರ್ಣವೂ ಸಾರ್ಥಕವೂ ಆಗಿತ್ತು.

ವಾದ್ಯ ಸಂಗೀತಗಳಲ್ಲಿ ಕೇಳಿಬರುವ ಅಬ್ಬರ ಗಲಾಟೆಗಳು ಇಲ್ಲದೇ ಮೌಲ್ಯಯುತ ಸಂಗೀತ ವಿನಿಕೆ ಸ್ವಾಗತಾರ್ಹವಾಗಿತ್ತು. ಭೈರವಿ ಅಟ್ಟತಾಳದ ವರ್ಣದ ಆರಂಭ. ಪಶುಪತಿಪ್ರಿಯರಾಗದ ಶರವಣಭವ ಹದವಾದ ಸಂಗೀತ ಕಾವನ್ನೇರ್ಪಡಿಸಿತು. ಪೂರ್ವಿಕಲ್ಯಾಣಿರಾಗದ (ಗಂಗಾಧರ ತ್ರಿಪುರಹರ, ಅಹಿಭೂಷಣ ಎಂಬಲ್ಲಿ ನೆರವಲ್ ಮತ್ತು ಕಲ್ಪನಾಸ್ವರಗಳು) ಸವಿಸ್ತಾರ ಪ್ರತಿಪಾದನೆ ಗಮನಸೆಳೆಯಿತು.

ಹಾಗೆಯೇ ಹಂಚಿಕೊಂಡು ಬಿಡಿಸಲಾದ ಖಮಾಚ್ ರಾಗಚಿತ್ರ, ಅದಕ್ಕೆ ತಾನದ ಅಲಂಕಾರದ ನಂತರ `ಬೋಚೆವಾರೆವರು~ ಕೃತಿಯ ಪ್ರತಿಪಾದನೆ ಕೇಳುಗರನ್ನು ಹಿಡಿದಿಟ್ಟಿತು. ಚಿಟ್ಟೆಸ್ವರಗಳಿಗೆ ಸ್ವರಗಳನ್ನು ಹಾಕಿ ವಿಸ್ತರಿಸಿದ ಪರಿ ನನಗೆ ವೀಣಾ ದೊರೆಸ್ವಾಮಿ ಅಯ್ಯಂಗಾರ್ಯರನ್ನು ನೆನಪಿಸಿತು. ಕೀರವಾಣಿ ನಗಮಾ ವಾದ್ಯಗಳ ಬೆಡಗನ್ನು ಹೆಚ್ಚಿಸುವಂತಿತ್ತು. ಜಂಜೂಟಿ ತಿಲ್ಲಾನದೊಂದಿಗೆ ವಾದ್ಯ ಕಛೇರಿ ಸಮಾಪ್ತವಾಯಿತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT