ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರಮಾಧುರ್ಯ ಅಂಧ ಕಲಾವಿದರ ಗೂಡು

Last Updated 4 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಇಲ್ಲಿ ಎಲ್ಲರಲ್ಲೂ ಗೆಲ್ಲುವ ಉತ್ಸಾಹ. ಪ್ರಪಂಚ ಕತ್ತಲೆನಿಸಿದರೂ ಬೆಳಕು ಹುಡುಕುವ ತವಕ. ಮುಳ್ಳಿನ ಹಾದಿಯನ್ನು ಮೆಟ್ಟಿನಿಂತು ಬದುಕು ಕಟ್ಟಿಕೊಳ್ಳುವ ಛಲ. ಕಣ್ಣಿದ್ದವರೂ ಇವರತ್ತ ಅರೆಕ್ಷಣ ನೋಡಿ ದಂಗಾಗುವಂತಹ ಉತ್ಸಾಹ. ಅಂಧಕಾರಕ್ಕೆ ಸವಾಲೆಸೆಯುವ ಈ ಗುಂಪಿನ ಮನಃಸ್ಥೈರ್ಯ ಎಂತಹವರಿಗೂ ಸ್ಫೂರ್ತಿ.

ಕಣ್ಣುಕಳೆದುಕೊಂಡು ಹಲವು ನೋವು, ಕಷ್ಟ ಎದುರಿಸಿರುವ ಇವರಿಗೆ ತಾವು ಅನುಭವಿಸಿದ ಕಷ್ಟವನ್ನು ಇತರರು ಅನುಭವಿಸದಿರಲಿ ಎಂಬ ಕಳಕಳಿ. ಈ ನಿಟ್ಟಿನಲ್ಲಿ ಆರಂಭಗೊಂಡಿರುವ ಸಂಸ್ಥೆ ‘ಸ್ವರ ಮಾಧುರ್ಯ’. ಅಂಧ ಮತ್ತು ಅಂಗವಿಕಲ ಕಲಾವಿದರ ಪ್ರತಿಭೆ ಗುರುತಿಸಿ ಪ್ರೊತ್ಸಾಹ ನೀಡಲೆಂದೇ ವಿಶೇಷವಾಗಿ ಹುಟ್ಟಿದ ಸಂಸ್ಥೆ. ಅಂಗವಿಕಲರು, ಅಂಧರನ್ನು ಉಪಯೋಗಿಸಿಕೊಂಡು ಹಣ, ಹೆಸರು ಗಳಿಸಿಕೊಳ್ಳುವ ಕೆಲವು ಸಂಸ್ಥೆಗಳಿಂದ ದೂರವುಳಿದು ತಮ್ಮದೇ ಹಾದಿಯಲ್ಲಿ ಸಾಗಿ ಅಲ್ಲಿ ಜೀವನಕ್ಕೆ ಸಾರ್ಥಕತೆ ಕಂಡುಕೊಳ್ಳಲು ತವಕಿಸುತ್ತಿರುವ ಹೃದಯಗಳಿಗೆ ‘ಸ್ವರಮಾಧುರ್ಯ’ ಸಾರಥಿ.

ಮೂಲ ಸಂಗೀತ ಕೇಂದ್ರವಾಗಿರುವ ಸಂಸ್ಥೆ ಇನ್ನಷ್ಟು ಅಂಧ ಕಲಾವಿದರನ್ನು ಗುರುತಿಸಿ ಸಂಗೀತ ಕಲೆಯನ್ನು ಪಸರಿಸುವ ಯತ್ನದಲ್ಲಿದೆ. ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ಸಂಸ್ಥೆಗೆ ಸಮಾಜದಲ್ಲಿ ತಮ್ಮನ್ನು ನೇರವಾಗಿ ಗುರುತಿಸಿಕೊಳ್ಳುವ ಹಂಬಲ.

‘ಎಲ್ಲರಲ್ಲೂ ಕಲೆ ಇರುತ್ತದೆ. ಅದರಲ್ಲೂ ಸಂಗೀತ ಶ್ರೇಷ್ಠ ಕಲೆ. ಈ ಕಲೆಯನ್ನು ಉಪಯೋಗಿಸಿಕೊಂಡು ನಮ್ಮಂತಹ ಅಂಧ ಮತ್ತು ಅಂಗವಿಕಲರ ಅಭಿವೃದ್ಧಿಗಾಗಿ ಶ್ರಮಿಸಬಯಸಿದ್ದೇವೆ. ಆರೋಗ್ಯ, ಶಿಕ್ಷಣ, ತಾಂತ್ರಿಕ ಶಿಕ್ಷಣ, ಕ್ರೀಡೆ ಹೀಗೆ ಎಲ್ಲದರಲ್ಲೂ ನಮ್ಮಂತಹ ಹಲವರಿಗೆ ಸ್ಥಾನ ಸಿಗಲಿ ಎಂಬುದೆ ನಮ್ಮ ಧ್ಯೇಯ. ಸಂಸ್ಥೆ ಬೆಳೆದರೆ, ಒಂದಷ್ಟು ಮಕ್ಕಳಿಗೆ ಸಂಗೀತ ಶಾಲೆ ನಡೆಸುವ, ವಸತಿ ಸೌಕರ್ಯ ನೀಡುವ, ವೃದ್ಧರಿಗೆ ಮಾಸಾಶನ ನೀಡುವ ಕನಸು ನಮಗಿದೆ’ ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷ ಶೈಲೇಂದ್ರ ಸ್ವಾಮಿ. ‘ನಮ್ಮಂತಹ ಅಂಧ ಕಲಾವಿದರಿಗೆ ನಿರಂತರ ಕೆಲಸ ಸಿಗಬೇಕು. ನಮ್ಮಿಂದ ಹಲವರಿಗೆ ಉಪಯೋಗವಾಗಬೇಕು ಎಂಬ ಹಂಬಲವಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಆರಂಭಗೊಂಡಿದೆ. ಇದಕ್ಕೆ ಇನ್ನಷ್ಟು ಸಹಕಾರದ ಅಗತ್ಯವಿದೆ. ಅದು ದೊರೆತರೆ ಮುನ್ನಡೆ ಸಾಧಿಸಿ ನಮ್ಮ ಗುರಿ ತಲುಪುವುದು ಸತ್ಯ’ ಎಂಬ ಆಶಾವಾದ ವ್ಯಕ್ತಪಡಿಸುತ್ತಾರೆ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ನರಸಿಂಗ್. ಆರು ವರ್ಷದವರಿರುವಾಗಲೇ ಕಣ್ಣು ಕಳೆದುಕೊಂಡ ನತದೃಷ್ಟರು ಇವರು.

ಮೂಲತಃ ಬೀದರ್‌ನವರಾದ ನರಸಿಂಗ ಅವರ ಪತ್ನಿ ನಗೀನಾ ಸಹ ಅಂಧರು. ನಗೀನಾ ರಾಮನಗರದವರು. ಸಂಗೀತವೆಂಬ ಮಾಂತ್ರಿಕ ಕಲೆ ಇವರನ್ನು ಬೆಸೆದಿದೆ. ಈ ಇಬ್ಬರೂ ಈಗ ಸ್ವರಮಾಧುರ್ಯಕ್ಕಾಗಿ ಜತೆಯಾಗಿ ದುಡಿಯುತ್ತಿದ್ದಾರೆ.

ಈ ಹೋರಾಟದಲ್ಲಿ ಅವರ ಜತೆ ಹಲವರು ಭಾಗಿಯಾಗಿದ್ದಾರೆ. ಅನಾರೋಗ್ಯಪೀಡಿತ ನಗೀನಾ ಅವರ ಹೃದಯದ ಕವಾಟದಲ್ಲಿ ರಂಧ್ರವಿತ್ತು. ಶಸ್ತ್ರಚಿಕಿತ್ಸೆಗೆ ಕನಿಷ್ಟ ಎಂದರೂ 6 ಲಕ್ಷ ರೂಪಾಯಿ ವೆಚ್ಚವಾಗುತ್ತಿತ್ತು. ಆಗ ನೆರವಿಗೆ ಮುಂದಾದವರು ಆಯುರ್ವೇದ ತಜ್ಞ ಡಾ. ಅಶೋಕ್. ನಗೀನಾ ಅವರಿಗೆ ಉಚಿತ ಚಿಕಿತ್ಸೆ, ಔಷಧೋಪಚಾರ ನೀಡಿ ಗುಣಮುಖವಾಗುವಂತೆ ಮಾಡಿದರು. ಈಗ ಸ್ವರಮಾಧುರ್ಯದ ಎಲ್ಲರಿಗೂ ಈ ವೈದ್ಯರು ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.

  ‘ಸಮಾಜ ನಮ್ಮ ನೋವು ನಲಿವಿಗೆ ಸ್ಪಂದಿಸಿದೆ. ನಾವೂ ಕೂಡ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಬಯಸಿ ಈ ಸಂಸೆ ಆರಂಭಿಸಿದ್ದೇವೆ. ನಮ್ಮಂತಹ ನೂರಾರು ಮಂದಿಗೆ ಆಶ್ರಯ ಒದಗಿಸುವ ಮಹತ್ವಾಕಾಂಕ್ಷೆ ನಮ್ಮದು. ಭವಿಷ್ಯದಲ್ಲಿ ಸ್ವರಮಾಧುರ್ಯದ ಕಲಾವಿದರ ಸಂಗೀತ ಧ್ವನಿ ಮುದ್ರಿಕೆ ಹೊರತರುವ ಯೋಜನೆಯೂ ಇದೆ’ ಎನ್ನುತ್ತಾರೆ ಗಾಯಕಿ ನಗೀನಾ. ಅಂದ ಹಾಗೆ ನಮ್ಮ ಬೆಂಗಳೂರು ಪ್ರತಿಷ್ಠಾನದ ನಮ್ಮ ಬೆಂಗಳೂರು ಪ್ರಶಸ್ತಿಗೆ ಸಂಸ್ಥೆಯ ಹೆಸರು ಸೂಚಿತವಾಗಿದೆ. ನಮ್ಮನ್ನು ಗುರುತಿಸುತ್ತಿರುವ ಸಮಾಜಕ್ಕೆ ಚಿರಋಣಿ ಎಂದು ಸಂಸ್ಥೆಯ ಎಲ್ಲರೂ ಭಾವುಕರಾಗಿ ನುಡಿಯುತ್ತಾರೆ. ಮಾಹಿತಿಗೆ: 99451 09846

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT