ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರಮೋಹಿ ಟೆಕ್ಕಿಗಳು...

Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ಅದು 2003-04ರ ಆಜುಬಾಜು. ಅಮೆರಿಕದ ಮೆಂಫಿಸ್‌ನಲ್ಲಿ ಉದ್ಯೋಗದಲ್ಲಿದ್ದ ದಂಪತಿ ಬಿಡುವಿನ ವೇಳೆಯಲ್ಲಿ ಬೇರೆ ಬೇರೆ ನಗರಗಳಲ್ಲಿ ಸಂಗೀತ ಕಛೇರಿ ನೀಡುವ ಹವ್ಯಾಸ ಬೆಳೆಸಿಕೊಂಡರು. ಅಲ್ಲಿಯೇ `ಘಮ ಘಮ' ಎಂಬ ಹಾಡುಗಳ ಸೀಡಿ ಹೊರತಂದರು. 2007ರಲ್ಲಿ ಬೆಂಗಳೂರಿಗೆ ಬಂದರು. ಪತಿ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರೆ, ಪತ್ನಿ ಉಪನ್ಯಾಸಕಿಯಾದರು. ಆದರೆ ಪತಿಗೆ ಕಲೆಯ ಗೀಳು ಹಾಗೆಯೇ ಇತ್ತು. ಕಂಪೆನಿಯಲ್ಲಿದ್ದ 40ರಿಂದ 50 ಮಂದಿ ಕಲಾವಿದರನ್ನು ಸೇರಿಸಿಕೊಂಡು `ಎಕ್ಸ್‌ಪ್ರೆಷನ್' ಎಂಬ ಬ್ಯಾಂಡ್ ಕಟ್ಟಿದರು. ಹಲವೆಡೆ ಕಾರ್ಯಕ್ರಮಗಳನ್ನೂ ನೀಡಿದರು. ಅನಿವಾರ್ಯ ಕಾರಣಗಳಿಂದ ಆತ ಕಂಪೆನಿ ಬಿಡಬೇಕಾಯಿತು. ಆದರೆ ಬ್ಯಾಂಡ್ ಮೋಹ ಕರಗಲಿಲ್ಲ.

ಸಂಗೀತ ಪ್ರಧಾನ `ಸ್ವರಾಮೃತ'
ಹಳೆಯ ನೆನಪನ್ನು ಬದಿಗಿಟ್ಟು, ಮತ್ತೆ ಏಳು ಮಂದಿ ಸಹೋದ್ಯೋಗಿ ಸ್ನೇಹಿತರನ್ನು ಸೇರಿಸಿಕೊಂಡು ಅದೇ ದಂಪತಿ `ಸ್ವರಾಮೃತ' ಎಂಬ ಬ್ಯಾಂಡ್ ಕಟ್ಟಿದರು. ಉಡುಪಿಯ ವಿಶ್ವೇಶ್ ಭಟ್ ಹಾಗೂ ಅಶ್ವಿನಿ ಎಂಬುವವರೇ ಈ ಸ್ವರಮೋಹಿಗಳು.

ಬಹುತೇಕ ಕಾರ್ಪೊರೇಟ್ ಮಂದಿಯ ಬ್ಯಾಂಡ್‌ಗಳಲ್ಲಿ ರಾಕ್ ಸಂಗೀತವೇ ಹೆಚ್ಚಾಗಿರುತ್ತದೆ. ಭಾರತೀಯ ಸಂಗೀತ ಕಡಿಮೆ. ಆದರೆ ಈ ತಂಡ ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತವನ್ನು ಬ್ಯಾಂಡ್ ಮೂಲಕ ಜನರಿಗೆ ಕೇಳಿಸುತ್ತಿದೆ.

ಸಾಫ್ಟ್‌ವೇರ್ ಎಂಜಿನಿಯರ್ ವಿಶ್ವೇಶ್ ಭಟ್ ಬಿಡುವಿಲ್ಲದ ಕೆಲಸದ ನಡುವೆಯೂ ಸಂಜೆ ಎರಡು ಗಂಟೆ ಸಂಗೀತಾಭ್ಯಾಸಕ್ಕೆ ಮೀಸಲಿಡುತ್ತಾರೆ. ಬೇರೆಯವರು ಸಂಯೋಜಿಸಿದ ಗೀತೆಗಳನ್ನು ನೆಚ್ಚಿಕೊಳ್ಳದ ಇವರು, ತಾವೇ ಸ್ವರ ಸಂಯೋಜನೆ ಮಾಡುತ್ತಾರೆ. ಫ್ಯೂಷನ್ ಇವರಿಗೆ ಅಷ್ಟು ಇಷ್ಟವಿಲ್ಲ. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಇಟ್ಟುಕೊಂಡೇ `ಕ್ರಿಯೇಟಿವ್ ಬ್ಯಾಂಡ್' ರೂಪಿಸಿದ್ದಾರೆ. ವಾರಾಂತ್ಯದ ದಿನಗಳನ್ನು ಬ್ಯಾಂಡ್‌ಗೆಂದೇ ಮೀಸಲಿಟ್ಟಿರುವ ವಿಶ್ವೇಶ್ ಖುದ್ದು ರೆಕಾರ್ಡ್ ಕೂಡ ಮಾಡುತ್ತಾರೆ. ಸಂಗೀತವೇ ಜೀವನ ಎನ್ನುವ ವಿಶ್ವೇಶ್ ಅವರು ವೀಣಾ ವಾದಕಿ ಅಶ್ವಿನಿ ಅವರನ್ನು ವಿವಾಹವಾಗಿದ್ದೂ ಸ್ವರಮೋಹದಿಂದಲೇ. `ಇಂದು ಪ್ರತಿಯೊಬ್ಬರಿಗೂ ಸಂಗೀತ ಮುಖ್ಯ. ಕೆಲವರಿಗೆ ಅದು ಮನರಂಜನೆ. ಮತ್ತೆ ಕೆಲವರಿಗೆ ವೃತ್ತಿಯಾಗಿರಬಹುದು. ನನಗೆ ಮಾತ್ರ ಅದು ಜೀವನದ ಒಂದು ಭಾಗ, ಉಸಿರು' ಎಂದು ಸಂಗೀತದ ಬಗೆಗಿನ ಪ್ರೀತಿಯನ್ನು ಅವರು ವ್ಯಕ್ತಪಡಿಸುತ್ತಾರೆ.

`ಸ್ವರಾಮೃತ'ದಲ್ಲಿ ವಿಶ್ವೇಶ್ ಭಟ್ ಪ್ರಮುಖ ಗಾಯಕ. ತಂಡದಲ್ಲಿ ವೀಣೆ (ಶ್ರುತಿ ಕುಮಾರ್, ಅಶ್ವಿನಿ ಭಟ್, ಮಂಜೀರಾ), ಕೊಳಲು (ಸಂಜೀತ್ ಕುಮಾರ್), ಕೀಬೋರ್ಡ್ (ಸುಶ್ರುತ್), ತಬಲಾ (ಕೃಷ್ಣಾನಂದ ಪ್ರಭು), ಮೃದಂಗ (ಫಣೀಂದ್ರ ಭಾಸ್ಕರ), ಡ್ರಮ್ಸ (ಶ್ರವಣ್) ಬಳಕೆಯಾಗುತ್ತಿದೆ.

ಈ ಬ್ಯಾಂಡ್‌ನಲ್ಲಿ ಸಾಹಿತ್ಯದ ಬಳಕೆ ಕಡಿಮೆ. ವಾದ್ಯ ಸಂಗೀತ, ಸ್ವರಗಳ ಬಳಕೆ ಹೆಚ್ಚು. ಕನ್ನಡ ಹಾಗೂ ಸಂಸ್ಕೃತ ಹಾಡುಗಳನ್ನು ಹಾಡುವ, ಹೆಚ್ಚಿನ ಭಾಗ ಸ್ವರಗಳನ್ನು ಬಳಸಿಕೊಳ್ಳುವ ಈ ಬ್ಯಾಂಡ್‌ನಲ್ಲಿ ವೀಣೆಯಲ್ಲಿ ಪಾಶ್ಚಾತ್ಯ ಸಂಗೀತ ಪ್ರಯೋಗ ಮಾಡಲಾಗುತ್ತದೆ. `ಜೇಮ್ಸ ಬಾಂಡ್' ಸಿನಿಮಾದ ಥೀಮ್ ಮ್ಯೂಸಿಕ್‌ಅನ್ನು ಉತ್ತಮಪಡಿಸಿ ಪ್ರಸ್ತುತಪಡಿಸುವುದು ತಂಡದ ಹೆಗ್ಗಳಿಕೆ.

“ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸುವುದರಿಂದ ಹೆಚ್ಚಾಗಿ ಸ್ವರಗಳಿಗೆ ಪ್ರಾಮುಖ್ಯ ನೀಡುತ್ತೇವೆ. ಸ್ವರಗಳಿಗೆ ಕೊನೆ ಎಂಬುದೇ ಇಲ್ಲ. ಹಾಗಾಗಿ ಭಾರತೀಯ ಸಂಗೀತವನ್ನೇ ಮೂಲವಾಗಿಟ್ಟುಕೊಂಡು ಬ್ಯಾಂಡ್ ನಡೆಸುತ್ತಿದ್ದೇವೆ.

`ಎಕ್ಸ್‌ಪ್ರೆಷನ್' ತಂಡದಲ್ಲಿ ಕೆಲವರು ಬಿಟ್ಟು ಹೋದರು. ಆದರೂ ಬ್ಯಾಂಡ್ ನಡೆಸುವುದು ಕಷ್ಟವಾಗಲಿಲ್ಲ. ಇದೀಗ ತಂಡದಲ್ಲಿ ಎಂಟು ಮಂದಿ ಸದಸ್ಯರಿದ್ದೇವೆ. ಎಲ್ಲರೂ ಟೆಕ್ಕಿಗಳು. ಸಂಪೂರ್ಣವಾಗಿ ಬ್ಯಾಂಡ್‌ನಲ್ಲಿ ತೊಡಗಿಸಿಕೊಂಡಿದ್ದೇವೆ” ಎಂದು ತಂಡದ ಬಗ್ಗೆ ಹೇಳಿಕೊಳ್ಳುತ್ತಾರೆ ವಿಶ್ವೇಶ್.

ಮೈಸೂರಿನ ಅರಮನೆ ಎದುರು ಎಲ್ಲಾ ಲೈಟ್‌ಗಳನ್ನು ಆಫ್ ಮಾಡಿ ಆಯೋಜಿಸಿದ್ದ `ಅರ್ಥ್ ಅವರ್' ಕಾರ್ಯಕ್ರಮ ಇಂದಿಗೂ ನೆನಪಿನಲ್ಲಿ ಉಳಿದ ಪ್ರದರ್ಶನವಂತೆ. ಬಾಲ್ಯದಲ್ಲಿಯೇ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿರುವ ವಿಶ್ವೇಶ್ ಭಟ್ ಅವರಿಗೆ ಬ್ಯಾಂಡ್ ಕಟ್ಟಿಕೊಂಡು ಸಾಗುವುದು ಕಷ್ಟವೇನಲ್ಲವಂತೆ. ಆತ್ಮವಿಶ್ವಾಸ ಒಂದಿದ್ದರೆ ಸಾಕು ಎಂಬುದು ಅವರ ಮಂತ್ರ.

`ಜರ್ನಿ' ಆಲ್ಬಂ ವಿಶೇಷ
ನಾದದ ಬೆನ್ನೇರಿರುವ ವಿಶ್ವೇಶ್ ಭಟ್ ಅವರು ಆರ್ಕಿಟೆಕ್ಟ್ ವೃತ್ತಿಯ ನಡುವೆಯೂ ಒಂದು ಆಲ್ಬಂ ತಯಾರಿಸಿದ್ದಾರೆ. ಆಲ್ಬಂ ಹೆಸರು `ಜರ್ನಿ'. ಇದರಲ್ಲಿ ಒಂಬತ್ತು ಹಾಡುಗಳಿವೆ. ಒಂದು ಹಾಡಿಗೂ ಮತ್ತೊಂದು ಹಾಡಿಗೂ ಕತೆಯ ಕೊಂಡಿ ಇದೆಯಂತೆ. ಮೊದಲ ಟ್ರ್ಯಾಕ್ `ಅವನು', ಎರಡನೆಯದು `ಅವಳು', ಅದಾದ ನಂತರದ್ದು `ನಾವು'. ಹೀಗೆ ಒಬ್ಬನ ಪಯಣವನ್ನು ಸ್ವರಗಳಲ್ಲಿ ಹಿಡಿದಿಟ್ಟಿದ್ದಾರೆ. ಮುಲ್ತಾನಿ, ನಟಭೈರವಿ, ಚಾರು ಕೌನ್ಸ್, ಪೂರಿಯಾ ಹಾಗೂ ಧನಶ್ರೀ ರಾಗಗಳ ಸಮ್ಮಿಶ್ರದಲ್ಲಿ ಆಲ್ಬಂ ಸಂಯೋಜಿಸಲಾಗಿದೆ. `ವಂದೇ ಮಾತರಂ'ನಿಂದ ಅಂತ್ಯವಾಗಲಿದೆ. ಈ ಆಲ್ಬಂ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಬ್ಯಾಂಡ್ ಮಾಹಿತಿಗೆ: 99001 50642

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT