ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ್ಣ ಸಂಪುಟ

ಬ್ಲಾಗಿಲನು ತೆರೆದು...
Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

`ಹುಚ್ಚು ಮನಸ್ಸಿನ ಹತ್ತು ಮುಖಗಳು' ಶಿವರಾಮ ಕಾರಂತರ ಬದುಕಿನ ಕಥೆ. `ಹುಚ್ಚು ಮನಸಿನ ಹಲವು ಹಾಡುಗಳು' ಬ್ಲಾಗ್ ಹೆಸರು. ಹಾಗೆ ನೋಡಿದರೆ ಬ್ಲಾಗ್ ಬರಹದ ಒಂದು ಗುಣವಿಶೇಷಕ್ಕೂ `ಹುಚ್ಚು ಮನಸ್ಸಿನ ಹತ್ತು ಮುಖಗಳು' ಮಾತು ಹೊಂದುವಂತಹದ್ದು. ಆದರೆ, ಬ್ಲಾಗಿತಿ ಸ್ವರ್ಣ ತಮ್ಮ ಬರಹಗಳನ್ನು `ಹಾಡುಗಳು' ಎಂದು ಕರೆದುಕೊಂಡಿದ್ದಾರೆ.

ಸಾಹಿತ್ಯ-ಸಂಗೀತದಾಚೆಗೆ ಸ್ವರ್ಣ ಅವರ ಸ್ವ-ಪರಿಚಯ ಮೀರುವುದಿಲ್ಲ. ಬರಹಗಳ ಮೂಲಕವೇ ಅವರ ಪರಿಚಯ ಆಗಬೇಕು. ಆ ಬರಹಗಳಲ್ಲಂತೂ ಹಾಡುಗಳ ನವಿರುತನ ಹಾಗೂ ಕಾಡುವ ಗುಣ ಇದೆ. ಸ್ವರ್ಣ ಅವರ ಬರಹಗಳ ವಸ್ತು ವೈವಿಧ್ಯವೂ ದೊಡ್ಡದು. ಪ್ರವಾಸ ಕಥನ, ಲಹರಿ, ಪುಟಾಣಿ ಕಥೆಗಳು, ಕವಿತೆ, ನೆನಪು, ಪೌರಾಣಿಕ ಸ್ತ್ರೀಯರು, ಚೆಲ್ಲಾಪಿಲ್ಲಿ ಚಿಂತನೆಗಳು, ಅನುವಾದ- ಹೀಗೆ ಅವರು ಕಟ್ಟಿಕೊಡುವ ಹಾಡುಗಳು ಹಲವು.

ಗದ್ಯದಷ್ಟೇ ಅವರ ಪದ್ಯವೂ ಸೊಗಸು. ಅಲ್ಲಲ್ಲಿ ಮಿಂಚುವ ಒಳನೋಟಗಳಿಂದಾಗಿ `ಹಾಡುಗಳು' ಇಷ್ಟವಾಗುತ್ತವೆ. ಒಂದು ಉದಾಹರಣೆ ನೋಡಿ:

ಅಪಾರ್ಟ್ಮೆಂಟಿನ ಬಾಲ್ಕನಿಯ ಅಮೃತಬಳ್ಳಿ
ಹಬ್ಬಬೇಕು, ಮನೆಗೆ ಹಾಕಿದ ಗ್ರಿಲ್ಲುಗಳ ನಡುವೆ.
ಆದರದೇಕೊ ಹಬ್ಬದು?
ಕಬ್ಬಿಣದೊಂದಿಗಿನ ನಂಟು ಬೇಡವಾಗಿದೆ ಅದಕೆ

ಎಲ್ಲಿಂದಲೋ ಒಂದು ಮಾರು ಮಾಸಿದ
ಚಳ್ಳೇದುರಿ ತಂದು ಒಂದು ಮೊಳೆ ಹೊಡೆದು ಕಟ್ಟಿದೆ
ಅಮೃತಮತಿಗೆ ಆನಂದ, ಏರಿದ್ದೇ ಏರಿದ್ದು,
ಅತ್ತ ಒಂದೆಲೆ, ಇತ್ತ ಒಂದೆಲೆ.

ಹೇಗೆ ಹೇಳಲಿ? ಅಮುದೆಗೆ,
ಕಬ್ಬಿಣದ ನಡುವೆಯೂ ಬೆಳೆಯಬಹುದು,
ಸಿಮೆಂಟಿನ ಕುಂಡದಲ್ಲೂ ಬೇರೂಡಬಹುದು.

ಕುಂಡವಾದರೇನು, ಅದರಲ್ಲೂ ಮಣ್ಣಿದೆ
ಅಪಾರ್ಟ್‌ಮೆಂಟಾದರೇನು, ಅಲ್ಲೂ ಮನೆ ಇದೆ!

ಅಪಾರ್ಟ್‌ಮೆಂಟ್ ಸ್ಥಾವರಕ್ಕೆ ಜೀವದ ಕಸಿಯಂತೆ ಕಾಣುವ ಅಮೃತಬಳ್ಳಿಯ ಹರಹನ್ನು ಕಾಣಿಸುವ ಈ ಪುಟ್ಟ ಕವಿತೆ ಖುಷಿ ಕೊಡುವಂತಿದೆ. ಅಮೃತಬಳ್ಳಿ ಇಲ್ಲಿ ಅಮೃತಮತಿ! ಅತ್ತ ಒಂದೆಲೆ ಇತ್ತ ಒಂದೆಲೆ ಎನ್ನುವುದು ಗಿಡದ ಬೆಳವಣಿಗೆಯೊಂದಿಗೆ ಅಮೃತಮತಿಯ ಎರಡು ಮುಖಗಳ ಚಿತ್ರವೂ ಹೌದು. ಒಂದು ಕವಿತೆ ಬೆಳೆಯುವುದು ಹೀಗೇ ಅಲ್ಲವೇ?
ಮತ್ತೊಂದು ಕಾಡುವ ಸಾಲು- `ಮುಳ್ಳೂ ಬೆಳೆಯದ ನೆಲದಲ್ಲಿ ಮಲ್ಲಿಗೆ ಬೆಳೆಯಲು ರಾಧೆ ಮತ್ತೆ ಬರಬೇಕು/ ಗೊಡ್ಡು ಪಾರಿಜಾತದ ಬೊಡ್ಡೆಯ ಚಿಗುರಿಸಿ ಹೂವರಳಿಸಲು ಅವಳೇ ಬೇಕು'.

ಪದ್ಯದಿಂದ ಗದ್ಯಕ್ಕೆ ಹೊರಳೋಣ. `ಚಿರ ವಿರಹಿ' ರಾಧೆ ಒಂದು ಸುಂದರ ಗದ್ಯ. ಬ್ಲಾಗಿತಿ ಬರೆಯುತ್ತಾರೆ:
“ಪದವಿಗಾಗಿ ರಣ ಬಿಸಿಲಿನ ಮಣ ಖಾರ ತಿನ್ನುವ ಊರು ಬಳ್ಳಾರಿಗೆ ಹೋದಾಗ ಆ ಊರು, ಊರು ಅನ್ನಿಸಿಯೇ ಇರಲಿಲ್ಲ! ಮಕ್ಕಳು ರಸ್ತೆಯ ಮೇಲೆ ಮಾಡಿದ ಚಿತ್ತಾರವನ್ನು ಹಾರುತ್ತಾ ಮಡಿ ಮಡಿ ಅನ್ನೋರು, ವಾರದಿಂದ ವಾರಕ್ಕೆ ನೀರು ಬಂದರೆ ಸ್ನಾನ ಮಾಡೋರು, ಥರಾವರಿ ಜನ ಆ ಊರಲ್ಲಿ. ಅಲ್ಲಿನ ಭಾಷೆಯೂ ಒಂದು ವೈಶಿಷ್ಟ್ಯ.

ಮನೆಯಲ್ಲಿ ಅಜ್ಜಿಯದು ಸಣ್ಣದನಿಯ ಮೈಸೂರು ಕನ್ನಡ, `ಸೌಖ್ಯವೇ...' ಅಂತ ರಾಗ ಎಳೆದು ಮಾತಾಡಿದ್ರೆ ನಮ್ಮೂರಿನ ಬಯಲು ಸೀಮೆ ಜನಕ್ಕೆ ನಗುವುದಕ್ಕೊಂದು ಸರಕು. ನಾವು `ಆರಾಮ, ಚೆನ್ನಾಗಿದೀರ?' ಅಂದು ಮುಗಿಸಿಬಿಡ್ತಿದ್ವಿ. ಆದ್ರೆ ಈ ಊರಲ್ಲಿ ಹೊಸ ಪದ `ಭೇಷ್ ಇದ್ದೀಯೇನು?' ಅನ್ನೋರು. ಚಂದ, ಸುಂದರ ಅನ್ನೋದು ಅವರ ಭಾಷೇಲಿ `ಭೇಷ್' ಆಗಿತ್ತು. ಅತ್ತ ತೆಲುಗಲ್ಲಿ ಬಳಸದ ಇತ್ತ ಕನ್ನಡದಲ್ಲೂ ಅಷ್ಟಾಗಿ ಬಳಸದ ಈ ಪದ ಅದೆಲ್ಲಿಂದ ಬಂದು ಬಳ್ಳಾರಿ ಸೇರಿತೋ ಭಾಷಾ ಪಂಡಿತರೇ ಹೇಳಬೇಕು.

ಬೇರೆ ಊರಿಂದ ಹೋದ ಒಂದಷ್ಟು ಹುಡುಗಿಯರಿಗೆ ಒಂದು ಮಠದ ಬೀದಿಯಲ್ಲಿ ಒಂದು ಸಣ್ಣ ಮನೆಯಲ್ಲಿ ಹಾಸ್ಟೆಲ್ ಅಂತ ಮಾಡಿದ್ದರು. ಕಾಲೇಜ್ನಲ್ಲಿ ಒಂದಷ್ಟು ಜನ ಹುಡುಗಿಯರು ಬಳ್ಳಾರಿಯವರೇ ಇದ್ದರು. ಅದೇನೋ ಯಾವುದೇ ಕಾಲೇಜ್ನಲ್ಲಿ ಹೋದರೂ ಅದೇ ಊರಿನವರಾದ, ಲೋಕಲೈಟ್ಸ್ ಅಂತ ಕರೆಸಿಕೊಳ್ಳುವ ಸ್ಥಳೀಯರಿಗೂ ಹಾಸ್ಟೆಲ್ನಲ್ಲಿರುವ ಹಾಸ್ಟೆಲೈಟ್ಸ್‌ಗಳಿಗೂ ನಡುವೆ ಒಂದು ಅಂತರ ಇರತ್ತೆ. ಹೋಗಿ ಕೆಲ ದಿನಗಳ ನಂತರ ನಾನು ಕ್ಲಾಸ್ ಒಳಗೆ ಅಡಿ ಇಟ್ಟ ಕೂಡಲೇ ಕಂಡದ್ದು ಕಾಲು ಕೇಜಿ ಅರಿಶಿನ ಕೆನ್ನೆಗೆ ಬಳಿದುಕೊಂಡ, ನೋಡಲು ಅಪ್ಪಟ ತಮಿಳು ಹುಡುಗಿಯಂತಿದ್ದ, ಕಪ್ಪಗಿನ ಲಕ್ಷಣವಾದ ಹುಡುಗಿಯೊಬ್ಬಳನ್ನ.

ಮೊದಲ ಬಾರಿ ಮನೆ ಬಿಟ್ಟು ಹಾಸ್ಟೆಲ್ಗೆ ಹೋದ ಹುಡುಗಿಯರು ಸರತಿಯಂತೆ ದಿನಾ ಕ್ಲಾಸಿನಲ್ಲಿ ಅಬ್ಬಾಯಿ ನಾಯ್ಡು ಸಿನಿಮಾ ಹಿರೋಯಿನ್ ಥರ ಅಳ್ತಿದ್ವಿ. ನನ್ನ ಪಾಳಿಯ ಪಾತ್ರ ಮಾಡಿ, ಅತ್ತು ಸುಸ್ತಾಗಿ ಕಣ್ಣೀರ ಕೋಟಾ ಮುಗಿಸಿ ಕೂತಿದ್ದಾಗ, ಆ ಹುಡುಗಿ ಪಕ್ಕ ಬಂದು ಕೂತು `ಈಗ ಭೇಷ್ ಆದಿ?' ಅಂತ ಮುಗುಳ್ನಗೆಯೊಂದಿಗೆ ಕೇಳಿದರೆ, ಇದೊಳ್ಳೆ `ಭೇಷ್' ಆಯ್ತಲ್ಲಪ್ಪ ಅಂತ ನಾ ಅವಳ ಮುಖ ನೋಡಿದೆ. ಗುಂಡು ಮುಖ, ತುಂಬಿದ ಕೆನ್ನೆಯ ಸುಂದರಿಯವಳು. `ನನ್ ಹೆಸರು ರಾಧ' ಅಂದ್ಲು.

ಒಂದೆರಡು ನಿಮಿಷ ಬಿಟ್ಟು `ಮಂಡಾಳ್ ಒಗ್ಗಣಿ ತಂದೀನಿ ತೊಗೋ' ಅಂತ ಒಂದು ಡಬ್ಬ ಮುಂದೆ ಹಿಡಿದರೆ, ಈ ಮಂಡಾಳ್ ಅಂದ್ರೆ ಯಾವ ಪ್ರಾಣಿಯಪ್ಪ ಅಂತ ನಾ ಮನದಲ್ಲೇ ಎನ್ಸೈಕ್ಲೋಪಿಡಿಯ ತೆಗೆದಿದ್ದೆ. ಡಬ್ಬ ತೆಗೆದರೆ ಅಲ್ಲಿದ್ದದ್ದು ಮೈಸೂರ್ ಕಡ್ಲೆಪುರಿ, ಕೆಲ ಕಡೆ ಮಂಡಕ್ಕಿ ಅಂತ ಕರೆಸಿಕೊಳ್ಳುವ ಭತ್ತದ ಒಂದು ರೂಪ.

ನಮ್ಮೂರಿನ  ಮಂಡಕ್ಕಿ ಉಸುಳಿ, ಆದರೆ ನಮ್ಮ ಮಂಡಕ್ಕಿಗಿಂತ ಬಳ್ಳಾರಿ ಪುರಿ ದಪ್ಪ, ರುಚಿಯೂ ಬೇರೆ. ಹಾಸ್ಟೆಲ್ ಊಟ ತಿಂದು ಬರಗೆಟ್ಟ ಹಾಸ್ಟಲೈಟ್ಸ್‌ಗಳು ಕಾರ್ಗಿಲ್ ಯುದ್ಧ ವೀರೆಯರಂತೆ ಡಬ್ಬಕ್ಕೆ ಮುತ್ತಿಗೆ ಹಾಕಿದ್ದು ಕಂಡು, ಮಾರನೇ ದಿನದಿಂದ ಅವಳು ನಮಗೇ ಅಂತ ಒಂದು ಡಬ್ಬ ಹೆಚ್ಚು ತರೋಳು...”

ರಾಧಾಳ ರಮ್ಯಕಥೆ ಕೊನೆಗೊಳ್ಳುವುದು ಕಣ್ಣನ್ನು ಒದ್ದೆಯಾಗಿಸುವುದರೊಂದಿಗೆ. ಆ ಕಥನವನ್ನು ನೀವು ಬ್ಲಾಗಿನಲ್ಲೇ ಓದಬೇಕು.
ಹಾಡುಗಳ ಕದದ ಕೊಂಡಿ- subbajji.blogspot.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT