ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸಹಾಯ ಸಂಘಗಳಿಗೆ ಹೆಚ್ಚುಸಾಲ

Last Updated 18 ಅಕ್ಟೋಬರ್ 2012, 8:25 IST
ಅಕ್ಷರ ಗಾತ್ರ

ಹೊಸನಗರ: ಗೃಹ ಕೈಗಾರಿಕೆಗಳ ಅಭಿವೃದ್ಧಿ ಪಡಿಸುವ ಮೂಲಕ ಗ್ರಾಮೀಣ ಬದುಕನ್ನು ಮರು ಕಟ್ಟುವ ಪ್ರಯತ್ನ ಆಗಬೇಕಿದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡ ಅಭಿಪ್ರಾಯಪಟ್ಟರು.
ಬುಧವಾರ ತಾಲ್ಲೂಕಿನ ನಗರ ಎಂಬಲ್ಲಿ ಕೊಡಚಾದ್ರಿ ಸ್ವಸಹಾಯ ಸಂಘಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸನಗರ ತಾಲ್ಲೂಕಿನಲ್ಲಿ ಸುಮಾರು 1,100ಕ್ಕೂ ಹೆಚ್ಚು ಸ್ವಸಹಾಯ ಸಂಘಗಳನ್ನು ಸ್ಥಾಪಿಸುವ ಮೂಲಕ ಅಳಿವಿನಂಚಿನಲ್ಲಿರುವ ಗ್ರಾಮೀಣ ಬದುಕಿಗೆ ಸಹಾಯ ಹಸ್ತ ನೀಡುವ ಕಾಯಕವನ್ನು ಕೊಡಚಾದ್ರಿ ಟ್ರಸ್ಟ್ ಮಾಡುತ್ತಿದೆ ಎಂದರು.

ಈ ವರ್ಷದಿಂದ ವಿವಿಧ ಉದ್ದೇಶಗಳಿಗಾಗಿ ಸ್ವಸಹಾಯ ಸಂಘಗಳಿಗೆ ಸುಮಾರು ಶೇ 4ರ ಬಡ್ಡಿ ದರದಂತೆ ರೂ 3 ಲಕ್ಷದವರೆಗೆ ಸಾಲ ನೀಡಲು ಡಿಸಿಸಿ ಬ್ಯಾಂಕ್ ಸಿದ್ಧವಾಗಿದೆ ಎಂದರು.

ಈ ವರ್ಷದಿಂದ ಕೊಡಚಾದ್ರಿ ಯುವ ವೇದಿಕೆಯನ್ನು ಹುಟ್ಟು ಹಾಕುವ ಮೂಲಕ ನಗರಕ್ಕೆ ವಿವಿಧ ಕಾರಣಗಳಿಗಾಗಿ ಹಳ್ಳಿಯಿಂದ ಪಲಾಯನ ಮಾಡುತ್ತಿರುವ ಯುವ ಜನತೆಗೆ ಕಡಿವಾಣ ಹಾಕಿ ಅವರಿಗೆ ಆಸರೆ ನೀಡುವ ಕೆಲಸವನ್ನು ಕೊಡಚಾದ್ರಿ ಟ್ರಸ್ಟ್ ಆರಂಭಿಸಿದೆ ಎಂದು ನುಡಿದರು.

ನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನೀಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ್, ಕೊಡಚಾದ್ರಿ ಟ್ರಸ್ಟ್ ನಿರ್ದೇಶಕ ಹರತಾಳು ನಾಗರಾಜ್, ತಾ.ಪಂ. ಮಾಜಿ ಉಪಾಧ್ಯಕ್ಷ ಕಾನ್‌ಬೈಲ್ ದೇವೇಂದ್ರ ಗೌಡ, ನಗರ ಗ್ರಾ.ಪಂ. ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷ ಸತೀಶ್ ಹಾಜರಿದ್ದರು.
ನೇಮಿರಾಜ್ ಸ್ವಾಗರಿಸಿದರು. ವಿಷ್ಣುಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ತೀರ್ಥಹಳ್ಳಿ ಕ್ಷೇತ್ರದತ್ತ ಆರ್‌ಎಂ ಚಿತ್ತ!
ಹೊಸನಗರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದ ಯಾವುದೇ ಪಕ್ಷದ ಅಭ್ಯರ್ಥಿಯಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಆರ್. ಮಂಜುನಾಥ ಗೌಡ ವ್ಯಕ್ತಪಡಿಸಿದರು.

ಬಿಎಸ್‌ವೈ ಹುಟ್ಟು ಹಾಕಲಿರುವ ಕರ್ನಾಟಕ ಜನತಾ ಪಕ್ಷ ಅಥವಾ ಇನ್ನಾವುದೇ ಪಕ್ಷದ ಅಭ್ಯರ್ಥಿಯಾಗಿ ಹೊಸನಗರ ತಾಲ್ಲೂಕಿನ ಎರಡು ಹೋಬಳಿ ಇರುವ ತಮ್ಮ ಹುಟ್ಟೂರಾದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಅಥವಾ ನಾಯಕರು ಬಯಸಿದರೆ ಶಿವಮೊಗ್ಗ ನಗರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಆಶಯವನ್ನು ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಕಳೆದ 2 ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೆ. ಆದರೆ, ಹಲವಾರು ಕಾರಣಗಳಿಂದ ಪಕ್ಷದ ವರಿಷ್ಠರ ತೀರ್ಮಾನದ ಮೇರೆಗೆ ಬೇರೆಯವರಿಗೆ ತ್ಯಾಗ ಮಾಡಿರುವುದಾಗಿ ಹೇಳಿದರು.

ಬಿಎಸ್‌ವೈ ರಾಜ್ಯದ ಪ್ರಶ್ನಾತೀತ ನಾಯಕರು ಎಂಬಲ್ಲಿ ಎರಡು ಮಾತಿಲ್ಲ. ಅವರು ತೆಗೆದುಕೊಂಡ ಯಾವುದೇ ನಿಲುವಿಗೆ ತಾವು ಬದ್ಧನಾಗಿದ್ದೇನೆ. ಬಿಜೆಪಿ, ಜೆಡಿಯು, ಸಮಾಜವಾದಿ ಯಾವ ಪಕ್ಷದ ಜತೆ ಯಡಿಯೂರಪ್ಪ ಗುರುತಿಸಿಕೊಳ್ಳುತ್ತಾರೋ ಅಲ್ಲಿ ತಾವು ಇರುವುದಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ, ಎಸ್. ಬಂಗಾರಪ್ಪ, ಜೆ.ಎಚ್. ಪಟೇಲ್ ಗರಡಿಯಲ್ಲಿ ಬೆಳೆದವನು ತಾವು. ಈಗ ರಾಜ್ಯ ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಒತ್ತಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ್, ಮುಖಂಡರಾದ ವಿದ್ಯಾಧರ್, ಕಾನ್‌ಬೈಲ್ ದೇವೇಂದ್ರ, ಗೊರಗೋಡು ಮಹೇಶ್‌ಗೌಡ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT