ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ತಿಕ್ ಮೆಟ್ರೊ ನಿಲ್ದಾಣದ ಕಾಮಗಾರಿಯಲ್ಲಿ ಅಕ್ರಮ

Last Updated 2 ಸೆಪ್ಟೆಂಬರ್ 2011, 20:10 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದ ಮಂತ್ರಿಮಾಲ್ ಹಿಂಭಾಗದಲ್ಲಿ ನಿರ್ಮಾಣವಾಗಲಿರುವ ಸ್ವಸ್ತಿಕ್ ಮೆಟ್ರೊ ರೈಲು ನಿಲ್ದಾಣದ ಕಾಮಗಾರಿಯಲ್ಲಿ ಮಂತ್ರಿ ಡೆವಲಪರ್ಸ್‌, ರಾಷ್ಟ್ರೀಯ ಜವಳಿ ನಿಗಮ ಹಾಗೂ ಬಿಬಿಎಂಪಿಯ ಕಂದಾಯ ಅಧಿಕಾರಿಗಳು ಅಕ್ರಮವಾಗಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.

ಸ್ಥಳೀಯರು, ಶಾಸಕರು ಹಾಗೂ ಪಾಲಿಕೆ ಸದಸ್ಯರ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಬಿಬಿಎಂಪಿಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಹಾಗೂ ಮಂತ್ರಿ ಡೆವಲಪರ್ಸ್‌ನ ಅಂಗ ಸಂಸ್ಥೆಯಾದ ಹಮಾರಾ ಶೆಲ್ಟರ್ಸ್‌ ಅಕ್ರಮವಾಗಿ ಭಾಗಿಯಾಗಿರುವುದು ಪತ್ತೆಯಾಗಿದೆ. ತನಿಖಾ ವರದಿಯಲ್ಲಿ ನಿರ್ಮಾಣ ಯೋಜನೆಯನ್ನು ರದ್ದುಗೊಳಿಸಿ ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ಶಿಫಾರಸು ಮಾಡಲಾಗಿದ್ದು ಬಿಲ್ಡರ್‌ಗಳು ಹಾಗೂ ಜವಳಿ ನಿಗಮದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಮಾಜಿ ಮೇಯರ್ ಪಿ.ಆರ್.ರಮೇಶ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ತನಿಖಾ ವರದಿಯ ವಿವರಗಳನ್ನು ಪಡೆದುಕೊಂಡಿದ್ದಾರೆ.

`ತಕ್ಷಣ ಬಿಎಂಆರ್‌ಸಿಎಲ್‌ಗೆ ಅನಧಿಕೃತವಾಗಿ ನೀಡಲಾಗಿರುವ 20,400 ಚದುರ ಅಡಿ ವಿಸ್ತೀರ್ಣದ ಜಮೀನಿನ ಖಾತೆಯನ್ನು ರದ್ದುಗೊಳಿಸಬೇಕು. ಜವಳಿ ನಿಗಮಕ್ಕೆ ಯಾವುದೇ ಹಕ್ಕು ಇಲ್ಲದಿದ್ದರೂ ಅದು ಅಕ್ರಮವಾಗಿ ಆಸ್ತಿಯನ್ನು ಹಮಾರಾ ಶೆಲ್ಟರ್ಸ್‌ಗೆ ಪರಭಾರೆ ಮಾಡಿದೆ~ ಎಂದು ಅವರು ಆರೋಪಿಸಿದ್ದಾರೆ.

ಯೋಜನೆಯ ಹಿನ್ನೆಲೆ: `ನಿರ್ಮಾಣ, ಕಾರ್ಯಾಚರಣೆ ಹಾಗೂ ವರ್ಗಾವಣೆ~ ಆಧಾರದ ಮೇಲೆ ಮಂತ್ರಿ ಡೆವಲಪರ್ಸ್‌ ಜತೆಗೆ 99 ವರ್ಷಗಳ ಒಪ್ಪಂದಕ್ಕೆ ಬಿಎಂಆರ್‌ಸಿಎಲ್ ಮುಂದಾಯಿತು. 18 ಎಕರೆ 27 ಗುಂಟೆ ಜಮೀನಿನಲ್ಲಿ ಬಿಲ್ಡರ್ 5.4 ಎಕರೆಯಷ್ಟು ಜಾಗದಲ್ಲಿ ನಿಲ್ದಾಣ ನಿರ್ಮಿಸಬೇಕು ಎಂಬುದು ಒಪ್ಪಂದದ ಸೂತ್ರವಾಗಿತ್ತು. ಇದರ ಪ್ರಕಾರ ಮಂತ್ರಿ ಮಾಲ್ ಹಿಂಭಾಗದ ಪ್ರದೇಶದಲ್ಲಿ ನಿಲ್ದಾಣ ನಿರ್ಮಿಸಿ 99 ವರ್ಷಗಳ ನಂತರ ಅದನ್ನು ಬಿಎಂಆರ್‌ಸಿಎಲ್‌ಗೆ ಮರಳಿಸಬೇಕು ಎಂದು ಒಪ್ಪಂದದಲ್ಲಿ ಸೂಚಿಸಲಾಗಿದೆ. ವಾಸ್ತವ ಸಂಗತಿ ಎಂದರೆ ಹಮಾರಾ ಶೆಲ್ಟರ್ಸ್‌ ಹಿಡಿತದಲ್ಲಿರುವ ಈ ಐದು ಎಕರೆ 4 ಗುಂಟೆ ಪ್ರದೇಶದಲ್ಲಿ ಸುಮಾರು 2 ಎಕರೆ ಜಾಗ ಭಾರತೀಯ ರೈಲ್ವೆ, ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ಸೇರಿದೆ ಎಂಬುದು ತನಿಖೆಯಿಂದ ಬಯಲಾಗಿದೆ.

ಇತರೆ ಅಕ್ರಮಗಳು: 5.4 ಎಕರೆ ಪ್ರದೇಶದಲ್ಲಿ ನಿಲ್ದಾಣ ನಿರ್ಮಾಣವಾಗುತ್ತಿದ್ದು ಮಂತ್ರಿ ಡೆವಲಪರ್ಸ್‌ಗೆ ಒಟ್ಟು 18.27 ಎಕರೆ ಪ್ರದೇಶ ಸೇರಿರುವ ಬಗ್ಗೆ ಕೂಡ ವರದಿ ಆಕ್ಷೇಪಿಸಿದೆ. ಒಟ್ಟು 18.27 ಎಕರೆ ಪ್ರದೇಶದಲ್ಲಿ ಕೇವಲ 9.23 ಎಕರೆ ಪ್ರದೇಶ ಮಾತ್ರ ಮಂತ್ರಿ ಡೆವಲಪರ್ಸ್‌ಗೆ ಸೇರಿದ್ದಾಗಿದೆ. ಇದರಲ್ಲಿ 2.31 ಗುಂಟೆ ಪ್ರದೇಶ ರಸ್ತೆಗೆ ಸೇರಿದ್ದು ಎಂದು ಗ್ರಾಮ ನಕ್ಷೆ ಹಾಗೂ ಕಂದಾಯ ಸರ್ವೆಯಿಂದಲೂ ದೃಢಪಟ್ಟಿದೆ. ಅಲ್ಲದೇ ಇದರಲ್ಲಿ ಹನುಮಂತಪುರ ಹಾಗೂ ಕೇತಮಾರನಹಳ್ಳಿ ವ್ಯಾಪ್ತಿಯ 1.27 ಎಕರೆ ಪ್ರದೇಶ ರೈಲ್ವೆ ಇಲಾಖೆಗೆ ಸೇರಿದೆ. ಉಳಿದ 35 ಗುಂಟೆ ಜಾಗ (ಸರ್ವೆ ನಂ 3593/1) ವಾಸ್ತವವಾಗಿ ಜಕ್ಕರಾಯ ಕೆರೆಗೆ ಸೇರಿದೆ.

ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿರುವ 32 ಗುಂಟೆ ಪ್ರದೇಶ ಸರ್ಕಾರಕ್ಕೆ ಸೇರಿದೆ. ಉಳಿದ 14.21 ಗುಂಟೆ ಪ್ರದೇಶದಲ್ಲಿ 4 ಎಕರೆ 38 ಗುಂಟೆ ಜಾಗ ಯಾರ ಒಡೆತನಕ್ಕೆ ಸೇರಿದೆ ಎಂಬ ಬಗ್ಗೆ ದಾಖಲೆಗಳಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಒಟ್ಟು 18 ಎಕರೆ 27.5 ಗುಂಟೆ ಪ್ರದೇಶದಲ್ಲಿ 17 ಎಕರೆ 23 ಗುಂಟೆ ಪ್ರದೇಶಕ್ಕೆ ಮಾತ್ರ ಬಿಲ್ಡರ್ ಖಾತೆ ಹೊಂದಿದ್ದಾರೆ. `ಸರ್ವೆ ಇಲಾಖೆ ವರದಿ ಪ್ರಕಾರ 4 ಎಕರೆ 38 ಗುಂಟೆ ಜಾಗಕ್ಕೆ ನೀಡಲಾಗಿರುವ ಖಾತೆಯನ್ನು ರದ್ದುಪಡಿಸಬೇಕು~ ಎಂದು ವರದಿ ಸೂಚಿಸಿದೆ.

ಇಕ್ಕಟ್ಟಿನಲ್ಲಿ ಅಧಿಕಾರಿಗಳು: ಮಂತ್ರಿ ಡೆವಲಪರ್ಸ್‌ಗಾಗಿ ನಕಲಿ ಖಾತೆಗಳನ್ನು ಸೃಷ್ಟಿಸಿರುವ ಬಿಬಿಎಂಪಿ ಗಾಂಧಿನಗರ ಉಪವಿಭಾಗದ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವರದಿ ಸೂಚಿಸಿದೆ. ಸಹಾಯಕ ಕಂದಾಯ ಅಧಿಕಾರಿಗಳಾದ ಲಕ್ಷ್ಮಮ್ಮ, ಚಿಕ್ಕಣ್ಣ, ಕಂದಾಯ ಅಧಿಕಾರಿಗಳಾದ ಮುನಿಯಪ್ಪ, ಮಂಜಪ್ಪ, ಉಪ ಆಯುಕ್ತ ಲಿಂಗರಾಜು, ಕಂದಾಯ ಅಧಿಕಾರಿ ಬಿ.ಎನ್.ದಯಾನಂದ್ ಅವರು ಅಕ್ರಮ ಎಸಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಭೂಮಿಯ ಮೇಲೆ ಹಕ್ಕಿಲ್ಲದಿದ್ದರೂ ಸುಮಾರು 3 ಎಕರೆ ಪ್ರದೇಶವನ್ನು ರಸ್ತೆ ಅಭಿವೃದ್ಧಿಗಾಗಿ ಬಿಬಿಎಂಪಿಗೆ ನೀಡಿ ಟಿಡಿಆರ್ ಪಡೆದಿರುವುದು ವರದಿಯಿಂದ ಪತ್ತೆಯಾಗಿದೆ.

ಪ್ರತಿಕ್ರಿಯೆ

ವಿಷಯಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಜಂಟಿ ಆಯುಕ್ತರು ಆಗಸ್ಟ್ 29ರಂದು ನೋಟಿಸ್ ನೀಡಿದ್ದಾರೆ. ಶುಕ್ರವಾರ ನೋಟಿಸ್‌ಗೆ ಪ್ರತಿಕ್ರಿಯಿಸಿ ಎಂದು ಸೂಚಿಸಲಾಗಿತ್ತು. ಆದರೆ ಆಯುಕ್ತರು ಕಚೇರಿಯಲ್ಲಿ ಲಭ್ಯ ಇರಲಿಲ್ಲವಾದ್ದರಿಂದ ಪ್ರತಿಕ್ರಿಯೆ ನೀಡಲು ಸಾಧ್ಯವಾಗಿಲ್ಲ. ಶನಿವಾರ ಪ್ರತಿಕ್ರಿಯೆ ಪತ್ರವನ್ನು ಸಲ್ಲಿಸಲಾಗುವುದು.
 -ಎನ್. ಶಿವಶೈಲಂ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ

ನಾವು ಜಮೀನಿನ ಒಂದು ಭಾಗವನ್ನು ಬಿಎಂಆರ್‌ಸಿಎಲ್‌ಗೆ ಬಿಟ್ಟುಕೊಟ್ಟಿದ್ದೇವೆ. ಆದರೆ ಯಾವುದೇ ಖಾಸಗಿ ವ್ಯಕ್ತಿಗೆ ಅಲ್ಲ. ಇಲಾಖೆ ಜಮೀನು ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ.
- ಸುರೇಂದು ಬಿಸ್ವಾಸ್, ಸಾರ್ವಜನಿಕ ಸಂಪರ್ಕಾಧಿಕಾರಿ, ರೈಲ್ವೆ ಇಲಾಖೆ

ಅಧಿಕಾರಿಗಳು ಕಾನೂನು ಸಲಹೆ ಪಡೆಯುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಮಾರಾ ಶೆಲ್ಟರ್ ಜತೆ ಒಪ್ಪಂದ ಮಾಡಿಕೊಳ್ಳುವ ಮುನ್ನ ಬಿಎಂಆರ್‌ಸಿಎಲ್ ಕಾನೂನು ಸಲಹೆ ಪಡೆದಿರಲಿಲ್ಲ ಎಂಬುದು ನನ್ನ ನಂಬಿಕೆ.
- ಪಿ.ಆರ್.ರಮೇಶ್, ಮಾಜಿ ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT