ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ಥ ಬದುಕು: ಉನ್ನತ ಮಟ್ಟಕ್ಕೇರಲಿ ಜೀವನ

Last Updated 18 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಯಾಂತ್ರಿಕ ಬದುಕನ್ನು ಉನ್ನತ ಮಟ್ಟಕ್ಕೇರಿಸಿಕೊಳ್ಳುವ ಆಯ್ಕೆ ನಮ್ಮ ಬಳಿಯೇ ಇದೆ. ಇದಕ್ಕಾಗಿ ನೀವು ಭೇಟಿಯಾಗುವ ಎಲ್ಲರನ್ನೂ ಅರ್ಥ ಮಾಡಿಕೊಳ್ಳಿ. ಸಿಡುಕುವ ಟಾಕ್ಸಿ ಡ್ರೈವರ್ ಎದೆಯಲ್ಲಿ ಭಯದ ಕಂಪನ ಅಡಗಿರುತ್ತದೆ. ಕುಟುಕು ಮಾತನಾಡುವ ಸಂಬಂಧಿಗಳಲ್ಲಿ ಹೊಟ್ಟೆ ಸುಡುವಂತಹ ಅಸೂಯೆ ಅಡಗಿರುತ್ತದೆ. ನಿಮ್ಮನ್ನು ಶಪಿಸುವ ಹಿರಿಯ ಸಹೋದ್ಯೋಗಿಯ ಕೈಕಾಲಿನ ಗಂಟುಗಳಲ್ಲಿ ಚುಚ್ಚುವ ನೋವು ಇರುತ್ತದೆ.

ನಿಮ್ಮ ಸಹನೆ ಪರೀಕ್ಷಿಸುವ ಎಂತಹದ್ದೇ ಘಟನೆಯಾದರೂ ರೊಚ್ಚಿಗೇಳಬೇಡಿ. ಇತರರನ್ನು ರೊಚ್ಚಿಗೆಬ್ಬಿಸಬೇಡಿ. ದಲಾಯಿ ಲಾಮ ತರಹದ ಸಂತರು, ಪ್ರೀತಿಯ ಸ್ನೇಹಿತರು, ನಗೆಸೂಸುವ ನೆರೆಮನೆಯವರನ್ನು ನೆನಪಿಸಿಕೊಳ್ಳಿ. ಸ್ವಿಕಾರವೆಂಬ ಜೇನು ನಿಮ್ಮಳಗಿನಿಂದ ಉಕ್ಕಿ, ಉಕ್ಕಿ ಹರಿಯುತ್ತಿರಲಿ. ಇದರಿಂದ ನೀವು ಕೇವಲ ಆರೋಗ್ಯವಂತರಾಗಿ, ಸಂತಸ ಭರಿತರಾಗಿ ಇರುವುದಿಲ್ಲ. ನೀವು ದೈವಿಕ ನಗೆ ಚೆಲ್ಲುವ ಮಾಂತ್ರಿಕ ವ್ಯಕ್ತಿಯಾಗುತ್ತಿರಿ.

ರಘುವೀರ್ ಹಾಗೆಯೇ ಕಾಣುತ್ತಾನೆ. ಆತ ಮಾಲ್ ಒಂದನ್ನು ನಡೆಸುತ್ತಾನೆ. ರಘುವೀರ್ ಉದ್ಯೋಗ ಬದಲಿಸಿದರೆ, ಮಾಲ್ ಬಿಟ್ಟರೆ ಅವರ ಕೈಕೆಳಗಿನ ನೌಕರರೆಲ್ಲ ಆತನ ಹಿಂದೆ ಹೊರಡುತ್ತಾರೆ. ನೀವು ಹೇಗಿದ್ದೀರಿ ಎಂದು ಪ್ರಶ್ನಿಸಿದಾಗಲೆಲ್ಲ, `ನಾನು ಖುಷಿಯಿಂದ ಇದ್ದರೆ, ಆರೋಗ್ಯದಿಂದ ಇದ್ದರೆ, ಉತ್ತಮ ಜೀವನ ನಡೆಸುತ್ತಿದ್ದರೆ ನನ್ನೊಳಗೆ ಇಬ್ಬರು ಇದ್ದಾರೆ ಎಂದರ್ಥ~ ಎನ್ನುತ್ತ ನಗು ಚೆಲ್ಲುತ್ತಾನೆ.

ನೀವು ಸದಾ ಇಷ್ಟು ಖುಷಿಯಾಗಿ ಇರಲು ಹೇಗೆ ಸಾಧ್ಯ ಎಂದರೆ, ನಾನು ಪ್ರತಿದಿನ ಬೆಳಿಗ್ಗೆ ಎದ್ದಾಗಲೂ ನನ್ನ ಮುಂದೆ ಎರಡು ಆಯ್ಕೆಗಳಿವೆ ಎಂಬುದನ್ನು ನೆನಪಿಸಿಕೊಳ್ಳುತ್ತೇನೆ. ನಾನು ಒಳ್ಳೆಯ ಮೂಡ್‌ನಲ್ಲಿ ಇರಬಹುದು ಅಥವಾ ಕೆಟ್ಟ ಮೂಡ್‌ನಲ್ಲಿ ಇರಬಹುದು. ಆದರೆ, ನಾನು ಸದಾ ಒಳ್ಳೆಯ ಮೂಡ್‌ನಲ್ಲಿ ಇರಲು ಬಯಸುತ್ತೇನೆ.

ಏನಾದರೂ ಕೆಟ್ಟದ್ದು, ಅಹಿತಕರವಾಗಿದ್ದು ಸಂಭವಿಸಿದಾಗಲೂ ಪ್ರಶಾಂತವಾಗಿ ಇರಲು ಹೇಗೆ ಸಾಧ್ಯ ಅಂದರೆ ರಘುವೀರ್ ಹೇಳುತ್ತಾನೆ. `ದುಃಖದ ಅಥವಾ ಕೆಟ್ಟ ಘಟನೆ ನಡೆದಾಗ ನನಗೆ ನಾನು ಹೇಳಿಕೊಳ್ಳುತ್ತೇನೆ. ಈಗಲೂ ನನ್ನ ಮುಂದೆ ಎರಡು ಆಯ್ಕೆಗಳಿವೆ. ನಾನು ಘಟನೆಗೆ ಬಲಿಪಶುವಾಗಬಹುದು ಅಥವಾ ಅದರಿಂದ ನಾನು ಕಲಿಯಬಹುದು. ನಾನು ಯಾವಾಗಲೂ ಪಾಠ ಕಲಿಯುತ್ತೇನೆ.~

ಯಾರಾದರೂ ನನ್ನ ಬಳಿ ಸಮಸ್ಯೆ ಹೊತ್ತು ಬಂದಾಗಲೂ ನನ್ನ ಮುಂದೆ ಎರಡು ಆಯ್ಕೆಗಳಿರುತ್ತವೆ. `ನಾನು ಅವರ ಜತೆ ದುಃಖ, ನೆರಳು ಮುಸುಕಿದ ಜೀವನದ ದಾರಿಯಲ್ಲಿ ನಡೆಯಬಹುದು ಅಥವಾ ಅವರನ್ನು ಸೂರ್ಯ ರಶ್ಮಿಯಂತೆ ಕಂಗೊಳಿಸುವ ಸ್ವಚ್ಛ ದಾರಿಯಲ್ಲಿ ನನ್ನ ಜತೆ ಬರಲು ಆಹ್ವಾನ ನೀಡಬಹುದು. ನಾನು ಸ್ವಚ್ಛ ಹವೆಯ ದಾರಿಯಲ್ಲಿ ಬರುವಂತೆ ಅವರನ್ನು ಕೇಳಿಕೊಳ್ಳುತ್ತೇನೆ.~

ತನ್ನ ಸ್ಪಷ್ಟ ನಿಲುವು, ದೃಷ್ಟಿಕೋನದಿಂದ ರಘುವೀರ್ ಇತರರು ನೋಡದ್ದನ್ನು ನೋಡುತ್ತಾನೆ.
ಜೀವನ ಎಂಬುದು ಆಯ್ಕೆಯ ಪ್ರಶ್ನೆ. ಪ್ರತಿ ಸನ್ನಿವೇಶವೂ ಆಯ್ಕೆಯೇ. ಸನ್ನಿವೇಶಕ್ಕೆ ಹೇಗೆ ಸ್ಪಂದಿಸಬೇಕು ಎಂಬ ಆಯ್ಕೆಯನ್ನೂ ನೀವೇ ಮಾಡುತ್ತೀರಿ. ಜನರ ಅಭಿಪ್ರಾಯ ನಿಮ್ಮ ಮೂಡ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಸಹ ನಿಮ್ಮ ಆಯ್ಕೆಯಾಗಿರುತ್ತದೆ. ನೀವು ಒಳ್ಳೆಯ ಮೂಡ್‌ನಲ್ಲಿ ಇರಬೇಕೋ, ಕೆಟ್ಟ ಮೂಡ್‌ನಲ್ಲಿ ನರಳಬೇಕೋ, ನಿಮ್ಮ ಜೀವನ ಹೇಗೆ ಸಾಗಬೇಕು ಎಂಬ ಆಯ್ಕೆಯೂ ನಿಮ್ಮದೇ ಆಗಿರುತ್ತದೆ.

ಒಂದು ದಿನ ಬೆಳಿಗ್ಗೆ ರಘುವೀರ್ ಮಾಲ್‌ನ ಬಾಗಿಲು ತೆರೆದಾಗ ಮೂರು ಶಸ್ತ್ರಧಾರಿಗಳು ಆತನನ್ನು ಸುತ್ತುವರಿದರು. ಗನ್ ಅನ್ನು ಆತನ ತಲೆಗೆ ಹಿಡಿದರು. ಲಾಕರ್ ಬಾಗಿಲು ತೆರೆಯುವಂತೆ ಅಪ್ಪಣೆ ಮಾಡಿದರು. ಆಘಾತದಿಂದಾಗಿ ಆತನ ಕೈಯಿಂದ ಕೀಲಿಕೈ ಜಾರಿಬಿತ್ತು. ಸಿಟ್ಟಿಗೆದ್ದ ಕಳ್ಳರು ಆತನ ತಲೆಗೆ ಗುಂಡು ಹಾರಿಸಿ ಪರಾರಿಯಾದರು.

ಕೆಲ ನಿಮಿಷಗಳಲ್ಲೇ ಅಲ್ಲಿಗೆ ಬಂದ ಮಾಲ್‌ನ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವಾರಕ್ಕೂ ಹೆಚ್ಚು ಕಾಲ ಸಾವು, ಬದುಕಿನ ನಡುವೆ ರಘುವೀರ್ ಹೋರಾಟ ನಡೆಸಿದ್ದ. ಆಸ್ಪತ್ರೆಯಿಂದ ಮನೆಗೆ ಮರಳಿದಾಗ ಮಿದುಳಿನಲ್ಲಿ ಬುಲೆಟ್‌ನ ಸಣ್ಣ ತುಂಡು ಇನ್ನೂ ಉಳಿದುಕೊಂಡಿತ್ತು.

ಹೇಗಿದ್ದೀಯಾ ಎಂದು ಪ್ರಶ್ನಿಸಿದರೆ, `ನಾನು ಖುಷಿಯಿಂದ ಇದ್ದರೆ, ಆರೋಗ್ಯದಿಂದ ಇದ್ದರೆ, ಉತ್ತಮ ಜೀವನ ನಡೆಸುತ್ತಿದ್ದರೆ ನನ್ನೊಳಗೆ ಇಬ್ಬರು ಇದ್ದಾರೆ ಎಂದರ್ಥ~ ಎನ್ನುತ್ತ ನಗು ಚೆಲ್ಲುತ್ತಾನೆ.

ಆಸ್ಪತ್ರೆಯಲ್ಲಿ ಇದ್ದಾಗ ಏನು ಅನ್ನಿಸುತ್ತಿತ್ತು ಎಂದು ಪ್ರಶ್ನಿಸಿದರೆ, `ಅವರು ನನಗೆ ಹೊಡೆದಾಗ ನಾನು ನೆಲದ ಮೇಲೆ ಬಿದ್ದೆ. ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಸಾಯುವುದು ಅಥವಾ ಬದುಕುವುದು. ನಾನು ಬದುಕುವುದನ್ನೇ ಆಯ್ಕೆ ಮಾಡಿಕೊಂಡೆ~ ಎಂದು ನಸುನಗುತ್ತಾನೆ ರಘುವೀರ್.

`ತುರ್ತು ನಿಗಾ ಘಟಕದಲ್ಲಿ ನರ್ಸ್ ನಿಮಗೆ ಯಾವುದಾದರೂ ಔಷಧಿ ಅಲರ್ಜಿಯಾಗುತ್ತದೆಯೇ ಎಂದು ಕೇಳಿದಳು.  ಹೌದು, ನನಗೆ ಬುಲೆಟ್ ಅಲರ್ಜಿಯಿದೆ ಎಂದು ಉತ್ತರಿಸಿದೆ. ಅವರೆಲ್ಲ ನಗುತ್ತಿರುವಾಗ, ನಾನು ಬದುಕಬೇಕು, ದಯವಿಟ್ಟು ಆಪರೇಷನ್ ಮಾಡಿ~ ಎಂದು ಕೇಳಿಕೊಂಡೆ.

`ಈಗ ನಾನು ಮತ್ತಷ್ಟು ಖುಷಿಯಿಂದ ಇದ್ದೇನೆ. ನಾನು ಬದುಕನ್ನು ಪ್ರೀತಿಸಬಹುದು ಅಥವಾ ದ್ವೇಷಿಸಬಹುದು. ಆದರೆ, ನಾನು ಸತ್ತಿದ್ದರೆ ನನ್ನ ಪಾಲಿಗೆ ಬದುಕು ಇರುತ್ತಿರಲಿಲ್ಲ. ನಿಮ್ಮ ಮನೋಭಾವ ಸಂಪೂರ್ಣವಾಗಿ ನಿಮ್ಮದಾಗಿರುತ್ತದೆ. ಅದನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ. ಅದನ್ನು ಮನಗಂಡರೆ ಜೀವನ ಸುಲಭವಾಗುತ್ತದೆ. ಸುಗಮವಾಗುತ್ತದೆ.~

ಆ ಅವಘಡದ ನಂತರ ರಘುವೀರ್ ಮುಖದಲ್ಲಿ ವಿಶೇಷ ಕಳೆಯೊಂದು ಮೂಡಿದೆ. ಈಗ ಆತ ನಿಧಾನವಾಗಿ ಮಾತನಾಡುತ್ತಾನೆ. ಸರಳವಾಗಿ ಮಾತನಾಡುತ್ತಾನೆ. ಆತನ ಮಾತು ಸ್ವಲ್ಪ ತೊದಲುತ್ತದೆ.

`ಕೆಲ ಸಮಯ ಸಾವೆಂಬ ಕಳ್ಳ ನಿಮ್ಮ ಉಸಿರು ಕದಿಯಲು ಸಜ್ಜಾಗಿ ನಿಂತಿರುತ್ತದೆ. ಆದರೆ, ಆ ದೈವಿಕ ಶಕ್ತಿ ನಿಮ್ಮ ಆಯ್ಕೆಗೆ ಅನುಗುಣವಾಗಿ ಉಸಿರು ತುಂಬುತ್ತದೆ. ನಾನು ಕೆಳಕ್ಕೆ ಕುಸಿದಾಗ ನನ್ನ ದೇಹದಲ್ಲಿ ಉಸಿರಾಡಿದ್ದು ನಾನಲ್ಲ. ಆ ದೈವಿಕ ಶಕ್ತಿಯೇ ಎಂದು ನಾನು ನಂಬಿದ್ದೇನೆ. ಈ ಅನುಭವ ನನ್ನನ್ನು ಬದಲಾಯಿಸಿದೆ. ನನ್ನಲ್ಲಿ ಈಗ ಸಂಪೂರ್ಣ ಕೃತಜ್ಞತಾ ಭಾವ ಇದೆ. ಕೇವಲ ಯಶಸ್ಸಲ್ಲ. ಬದುಕನ್ನು ಸಮೃದ್ಧವಾಗಿಸಿಕೊಳ್ಳಲು ನಾನು ಪಣ ತೊಟ್ಟಿದ್ದೇನೆ~ ಎನ್ನುತ್ತಾನೆ ರಘುವೀರ್.

ರಘುವೀರ್ ಮಾತು ಆಲಿಸಿದವರ ಮೊಗದಲ್ಲಿ ನಗು ಮೂಡಿದಲ್ಲಿ ಆಶ್ಚರ್ಯ ಏನಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT