ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ಥ ಬದುಕು: ಹೂವಿನಂಥ ಅಂತ:ಪ್ರಜ್ಞೆ ಅರಳಿಸಿ

Last Updated 8 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ದೇ ಹ ನಿದ್ದೆಯಿಂದ ವಂಚಿತವಾದಾಗ ನೀವು ಭಯಭೀತರಾಗುತ್ತೀರಿ. ಅತಿ ಸೂಕ್ಷ್ಮಮತಿಗಳಾಗುತ್ತೀರಿ. ಕುಟುಂಬ ಸದಸ್ಯರು, ಸ್ನೇಹಿತರ ಮೇಲೆ ಸಿಡಿಮಿಡ ಗುಡುತ್ತೀರಿ. ಅವರು ಸಿಟ್ಟಿಗೆದ್ದಾಗ ಬೇಸರ ಮಾಡಿಕೊಳ್ಳುತ್ತೀರಿ. ನೋವು ಅನುಭವಿಸುತ್ತೀರಿ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಆ ಒರಟು ಶಬ್ದಗಳು ಮತ್ತು ಒರಟು ದನಿಯ ಹಿಂದೆ ಭಯ, ಕಾತರ, ನೋವು, ಗೊಂದಲ ಎಲ್ಲವೂ ಅಡಗಿರುತ್ತದೆ. ಆದರೆ, ಇವೆಲ್ಲ ಮನಸ್ಸಿನಲ್ಲಿ ಇರುತ್ತದೆಯೇ ಹೊರತೂ ಹೃದಯದಲ್ಲಿ ಅಲ್ಲ. ಮನಸ್ಸು ಬೊಬ್ಬಿರಿದು ಗುಡುಗುವಾಗ ಹೃದಯ ತಣ್ಣಗಾಗುತ್ತದೆ. ಬಾಗಿಲು ಮುಚ್ಚಿಕೊಳ್ಳುತ್ತದೆ. ಹೃದಯ ಅಂದರೆ ಕೇವಲ ರಕ್ತ ಪಂಪ್ ಮಾಡುವ ಯಂತ್ರವಲ್ಲ. ಅದು ನಿಮ್ಮೊಳಗಿನ ದೈವಿಕ ಶಕ್ತಿಯ ಆವಾಸ ಸ್ಥಾನ. ಅದಕ್ಕಾಗಿಯೇ ಅದು ಹೂವಿನಷ್ಟು ಕೋಮಲ. ನೀವು ಅದನ್ನು ಮುಚ್ಚಿದಲ್ಲಿ ಅದು ಕರುಣೆ, ಪ್ರೀತಿಯ ಸುಗಂಧ ಹೊರಸೂಸಲಾರದು. ಎಲ್ಲರಲ್ಲೂ ಇರುವ ಅಪರಿಪೂರ್ಣತೆಯನ್ನು ಪೂರ್ವಗ್ರಹವಿಲ್ಲದೇ ಸ್ವೀಕರಿಸಲಾಗದು.

ಹೃದಯ ಯಾವಾಗಲೂ ಮುಕ್ತವಾಗಿರಲು ಬಯಸುತ್ತದೆ. ಅದು ಯಾರನ್ನೂ ನಿಂದಿಸುವುದಿಲ್ಲ, ಖಂಡಿಸುವುದಿಲ್ಲ. ಅವಮಾನಿಸುವುದಿಲ್ಲ. ಅನುಮಾನಿಸುವುದಿಲ್ಲ. ಅದು ನಿಮ್ಮ ದೇಹವನ್ನು ಪೊರೆಯಲು ಆಮ್ಲಜನಕಭರಿತ ರಕ್ತವನ್ನು ಪಂಪ್ ಮಾಡುತ್ತ ಇರುತ್ತದೆ. ಕರುಣೆ ಮತ್ತು ಪ್ರೀತಿಯ ಭಾವವೇ ನೀವಾಗಿರಲಿ ಎಂದು ಬಯಸುತ್ತದೆ. ಇದರ ಪ್ರತಿ ಬಡಿತವೂ ಮುಕ್ತವಾಗಿ, ತೆರೆದ ಮನಸ್ಸು ಬೆಳೆಸಿಕೊಳ್ಳಿ ಎಂದು ಹೇಳುತ್ತಿರುತ್ತದೆ.

ಆದರೆ, ಮನಸ್ಸು ಅಬ್ಬರಿಸುತ್ತದೆ. ರೆಕಾರ್ಡ್‌ರ್‌ನಂತೆ ಹಳೆಯ ಜಗಳ, ಕಹಿ ಘಟನೆಗಳನ್ನು ಪದೇ ಪದೇ ನೆನಪಿಸಿಕೊಳ್ಳುತ್ತದೆ. ಅನುಮಾನದ ಬೀಜ ಬಿತ್ತುತ್ತದೆ. ಘಟನೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತದೆ. ಮೌಢ್ಯದಲ್ಲಿ ಮುಳುಗಿರುವ ನೀವು ಆ ಮನಸ್ಸಿನ ಮಾತು ಕೇಳುತ್ತಿರಿ. ಸಭೆ, ಸಮಾವೇಶಗಳಲ್ಲಿ ದೊಡ್ಡದಾಗಿ ಮಾತನಾಡುವವರು ಗಮನ ಸೆಳೆದಂತೆ ಮನಸ್ಸು ನಿಮ್ಮ ಗಮನ ಹಿಡಿದಿಟ್ಟುಕೊಳ್ಳುತ್ತದೆ. ಆ ಭಾವನಾತ್ಮಕ ಸುಳಿಯಲ್ಲಿ ನೀವು ಸಿಕ್ಕಿಹಾಕಿಕೊಳ್ಳುತ್ತೀರಿ. ಪದೇ ಪದೇ ಉಸಿರು ಬಿಡುತ್ತೀರಿ. ಪಾಪ, ಬಡ ಹೃದಯ ಜೋರಾಗಿ ಬಡಿಯಲಾರಂಭಿಸುತ್ತದೆ. ಮನಸ್ಸು ನಿಮ್ಮ ಸಲಕರಣೆಯಾಗಬೇಕು, ಸೇವಕನಾಗಬೇಕು. ಎಂದಿಗೂ ನಿಮ್ಮ ಮ್ಯಾನೇಜರ್ ಆಗಬಾರದು. ಯಜಮಾನನಾಗಬಾರದು. ಸುಮ್ಮನೆ ಇರುವಂತೆ, ಶಬ್ದ ಮಾಡದಂತೆ ಪದೇಪದೇ ಮನಸ್ಸಿಗೆ ಆಜ್ಞಾಪಿಸಿ. ಅದರ ಆಟಗಳಲ್ಲಿ ನೀವು ಭಾಗಿಯಾಗುವುದಿಲ್ಲ ಎಂದು ಅದಕ್ಕೆ ಮನದಟ್ಟಾಗುವವರೆಗೆ ಈ ಆದೇಶ ನೀಡುತ್ತ ಇರಿ. ಸದಾ ವಟಗುಟ್ಟವ ಮನಸ್ಸಿಗೆ ವಿಶ್ರಾಂತಿ ನೀಡಲು ಯತ್ನಿಸಿ.

ರಾತ್ರಿ ಮಲಗಿದ ತಕ್ಷಣ ಗಾಢ ನಿದ್ದೆಗಾಗಿ 1000, 999, 998 ಎಂದು ಎಣಿಸುತ್ತ ಹೋಗಿ. ಮಧ್ಯಾಹ್ನ ಊಟದ ನಂತರ 20-25 ನಿಮಿಷ ಸಣ್ಣ ನಿದ್ದೆ ಮಾಡಿ. 

ವಿಶ್ರಾಂತಿ ಪಡೆದ ಮೇಲೂ ನೀವು ಸಕಾರಾತ್ಮಕವಾಗಿ ಸ್ಪಂದಿಸಲು ಹಿಂಜರಿಯುತ್ತೀರಿ. ಧೂರ್ತ ಮನಸ್ಸು ತರ್ಕದ ಹೆಸರಿನಲ್ಲಿ ಸಮರ್ಥನೆಗಳನ್ನು ನೀಡುತ್ತ ಹೋಗುತ್ತದೆ. ಅಹಂಕಾರದ ಇಕ್ಕಳದಲ್ಲಿ ನಿಮ್ಮನ್ನು ಸಿಕ್ಕಿಸಲು ಮನಸ್ಸು ಮಾಡುವ ಹುನ್ನಾರ ಇದು. ಸುಮ್ಮನೆ ಇರು ಎಂದು ಪದೇ ಪದೇ ಮನಸ್ಸಿಗೆ ಗದರುತ್ತ ಇರಿ. ನಾನು ನನ್ನನ್ನು ಮತ್ತು ಎಲ್ಲರನ್ನೂ ಕ್ಷಮಿಸುತ್ತೇನೆ. ನಮ್ಮೆಲ್ಲರ ನೋವು ಈಗ ಮಾಯವಾಗಿದೆ. ಮರೆತುಹೋಗಿದೆ ಅಂದುಕೊಳ್ಳಿ.

ವರ್ತಮಾನದ ಮುಕ್ತ ಬಯಲಿನಲ್ಲಿ ತೆರೆದ ಮನದಿಂದ ನಿಂತುಕೊಳ್ಳಿ. ಭೂತಕಾಲದ, ಕಳೆದು ಹೋದ ಘಟನೆಗಳ ಯಾವ ನೆರಳೂ ನಿಮ್ಮ ಮೇಲೆ ಬೀಳದಿರಲಿ. ಸ್ವಾತಂತ್ರ್ಯದ ಈ ಹೊಳೆಯುವ ಕ್ಷಣಗಳಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಎಂಬ ಭಾವವೇ ಉದ್ಭವಿಸುವುದಿಲ್ಲ.

ಆ ಕುರಿತು ಲೆಕ್ಕಾಚಾರ ಹಾಕಲೂ ಹೋಗಬೇಡಿ. ಎಷ್ಟು ಸುಗಂಧ ಸೂಸಬೇಕು ಎಂದು ಹೂವು ಎಂದಿಗೂ ಲೆಕ್ಕಾಚಾರ ಹಾಕುವುದಿಲ್ಲ. ಉದಾರವಾಗಿ, ಲೆಕ್ಕಾಚಾರ ಹಾಕದೇ ಎಲ್ಲರನ್ನೂ ಕ್ಷಮಿಸಿ. ನಿಮ್ಮಲ್ಲಿನ ಒತ್ತಡ, ಉದ್ವೇಗ ಕಡಿಮೆಯಾದ ತಕ್ಷಣ ಪರಮಾನಂದದ ಸ್ಥಿತಿಯನ್ನು ನೀವು ಅನುಭವಿಸುತ್ತೀರಿ. ಸಂಚುಗಾರರ ಗ್ಯಾಂಗ್‌ನಂತೆ ಕಾಣುತ್ತಿದ್ದ ಮುಖಗಳೆಲ್ಲ ಹಿಂದಿನ ಪ್ರೀತಿ ತುಂಬಿದ ಮುಖಗಳಾಗಿ ನಿಮಗೆ ಕಾಣುತ್ತವೆ. ನಿಮ್ಮಲ್ಲಿನ ಭಾರ ಕಡಿಮೆಯಾಗುತ್ತದೆ. ಹೃದಯ ತೆರೆದುಕೊಳ್ಳುತ್ತದೆ. ದೈವಿಕ ಸಂತಸ ಮತ್ತು ಪ್ರೀತಿ ನಿಮ್ಮಲ್ಲಿ ಹರಿಯುತ್ತದೆ. ಮಾಂತ್ರಿಕವಾದ, ಸ್ವಾರ್ಥರಹಿತ ಪರಿಶುದ್ಧ ಹೂವಿನಂಥ ಅಂತಪ್ರಜ್ಞೆ ನಿಮ್ಮಲ್ಲಿ ಅರಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT