ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಗತಾರ್ಹ ಸಲಹೆ!

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬಿಬಿಎಂಪಿಯ 2011-12ನೇ ಸಾಲಿನ ಬಜೆಟ್ ಮೇಲಿನ ಮುಂದುವರೆದ ಸಭೆಯಲ್ಲಿ ಪಾಲಿಕೆಯ ಜನತಾದಳ (ಎಸ್) ನಾಯಕ ಪದ್ಮನಾಭರೆಡ್ಡಿ ಅವರು ಮಾತನಾಡುತ್ತಾ `ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ~ಗೆ ಕೊಳಚೆ ನೀರಿನ ಅಭಿಷೇಕ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
 
ದೇವಸ್ಥಾನದ ಬದಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆಯಿಂದಾಗಿ `ದೇವಸ್ಥಾನ ಸ್ಥಳಾಂತರ ಆದೀತು~ ಎಂದು ಆತಂಕಗೊಂಡಿದ್ದರು.
ಜನಾನುರೂಢಿಯಂತೆ ದೇವರ ಬಗೆಗಿನ ಅವರ ಆತಂಕ ತೀರ ಸ್ವಾಭಾವಿಕ.
 
ಆದರೆ ಅವರು ಈ ಆತಂಕದಿಂದ ಹೊರಬಂದು, ಈ ಜನನಿಬಿಡ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವಸ್ಥಾನ ಸ್ಥಳದ ಬಳಿಯ ಅಪಾಯಕಾರಿ ಸಂಗತಿಗಳ ಬಗ್ಗೆ ಅವಲೋಕಿಸಬೇಕು. ಆಗ ಇಲ್ಲಿನ ನಿಜರೂಪದ ದರ್ಶನವಾಗುತ್ತದೆ.

ರಸ್ತೆಯ ಎರಡೂ ಬದಿಯಲ್ಲಿ (ಪರಸ್ಪರ ವಿರುದ್ಧವಾಗಿ) ಒಂದೆಡೆ ಕಲ್ಯಾಣ ಮಂಟಪವಿದ್ದರೆ ಮತ್ತೊಂದೆಡೆ ದೇವಸ್ಥಾನ. ಈ ಎರಡರಿಂದಲೂ ಸದಾ ಸಡಗರ-ಸಂಭ್ರಮಗಳ ಗುಂಗಿನಲ್ಲಿ ಓಡಾಡುವ ಜನಜಂಗುಳಿ.

ಮುಖ್ಯ ರಸ್ತೆಯೆಡೆಗೆ ಚಾಚಿಕೊಂಡಿರುವ ದೇವಸ್ಥಾನದ ಕಾಂಪೌಂಡ್. ಈ ಗೋಡೆಯನ್ನೇ ಆಶ್ರಯ ಮಾಡಿಕೊಂಡು ಪಾದಚಾರಿ ಸ್ಥಳನ್ನೇ ಆಕ್ರಮಿಸಿದ ಪೂಜಾ ಸಾಮಗ್ರಿಗಳ ಅಂಗಡಿ. ಹೀಗಾಗಿ ಜನ ವಿಧಿಯಿಲ್ಲದೆ ಮುಖ್ಯ ರಸ್ತೆಗೆ ಇಳಿಯುವ ದುಸ್ಥಿತಿ ಬಂದಿದೆ.

ಇಂತಹ ದುರವಸ್ಥೆಗಳ ನಡುವೆ ಈ ರಾಷ್ಟ್ರೀಯ ಹೆದ್ದಾರಿಯನ್ನು ಸೀಳಿಕೊಂಡು ಸಂಚರಿಸಲೇಬೇಕಾದ ವಾಹನಗಳ ಚಾಲನೆ ತೀರಾ ಅಪಾಯಕಾರಿ.

ಈ ಎಲ್ಲಾ ಆತಂಕಗಳ ನಿವಾರಣೆಗೆ `ದೇವಸ್ಥಾನದ ಸ್ಥಳಾಂತರ~ ಅನಿವಾರ್ಯ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ. `ಜನಗಳ ಸೇವೆಯೇ ಅರ್ಥಾತ್ ಜನ-ಜೀವಗಳ ರಕ್ಷಣೆಯೇ ನಿಜವಾದ ಜನಾರ್ದನನ ಸೇವೆ~ ಎಂಬ ಸತ್ಯವನ್ನು ಸಂಬಂಧಿಸಿದವರು ಅರಿತುಕೊಳ್ಳಬೇಕು. ಆಗ ಮಾತ್ರ ಈ ಸ್ಥಳದಲ್ಲಿ ಆಗಾಗ್ಗೆ ಸಂಭವಿಸುವ ಅವಘಡ, ಸಾವು- ನೋವು ತಡೆಯಬಹುದಾಗಿದೆ.

ಅಪಾಯಕಾರಿ ಸ್ಥಳಗಳಲ್ಲಿರುವ ಮಂದಿರ, ಮಸೀದಿ, ಚರ್ಚುಗಳನ್ನುತೆರವುಗೊಳಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಸಕಾಲಿಕ ಹಾಗೂ ಸ್ವಾಗತಾರ್ಹ. ಅದನ್ನು ಪಾಲಿಸುವ ಮನಸ್ಸುಗಳು ಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT