ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಸಂಗ್ರಾಮದ ಮಹಿಳಾ ಹೆಜ್ಜೆ

Last Updated 12 ಆಗಸ್ಟ್ 2012, 5:20 IST
ಅಕ್ಷರ ಗಾತ್ರ

ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತೀಯರ ವಿಮೋಚನೆಗಾಗಿ ಹೋರಾಡಿದ ಅನೇಕ ವೀರರನ್ನು ಕೊಡುಗೆ ನೀಡಿದ ಹೆಮ್ಮೆಯ ಬೀಡು ನಮ್ಮ ಕರುನಾಡು. ಈ ನಾಡಿನಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಕೊಡುಗೆಗಳನ್ನು ತಮ್ಮದೇ ಆದ ಶೈಲಿಯಲ್ಲಿ ನೀಡಿರುವುದು ಕರ್ನಾಟಕದ ಮಟ್ಟಿಗೆ ಗಮನಿಸಬೇಕಾದ ಅಂಶ. ಈ ದಿಸೆಯಲ್ಲಿ ನಡೆದು ಬಂದ ಹೋರಾಟದ ಹಾದಿಗಳಲ್ಲಿ ಕಾರ್ಗಲ್ ಸಮೀಪದ ಮಾವಿನ ಗುಂಡಿಯ ಮಹಿಳಾ ಸತ್ಯಾಗ್ರಹ ವಿಶಿಷ್ಟವಾದದ್ದು.

ವಿಶ್ವ ಪ್ರಸಿದ್ಧ ಜೋಗ ಜಲಪಾತದಿಂದ ಕೇವಲ 1 ಕಿ.ಮೀ. ದೂರವಿರುವ ಮಾವಿನಗುಂಡಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಸೇರಿ ಕೊಂಡಿರುವ ಗಡಿಭಾಗವಾಗಿದೆ. ಇಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ದಾರಿಹೋಕರನ್ನು ತನ್ನತ್ತ ಸೆಳೆಯುತ್ತಾ ಸ್ವಾತಂತ್ರ್ಯ ಸಂಗ್ರಾಮದ ಕಥೆಗಳನ್ನು ತಿಳಿಸುವ ಪ್ರಾಚೀನ ಮಾದರಿಯ ಭವನವೇ ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕ.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸುವರ್ಣ ಸಂಪುಟದಲ್ಲಿ ಉತ್ತರ ಕನ್ನಡ ಜಿಲ್ಲೆಯ `ಕರ ನಿರಾಕರಣೆ~ ಸತ್ಯಾಗ್ರಹ ರೋಮಾಂಚನಕಾರಿ ಪುಟವಾಗಿದ್ದು, ಅದರಲ್ಲಿ ಮಾವಿನಗುಂಡಿಯ ಮಹಿಳೆಯರ ಉಪವಾಸ ಸತ್ಯಾಗ್ರಹ ಅವರ ದೇಶ ಭಕ್ತಿ, ಛಲ, ಸಂಕಲ್ಪ, ಸಹನೆ, ತ್ಯಾಗ ಹಾಗೂ ಧೈರ್ಯಗಳಿಗೆ ನಿದರ್ಶನವಾಗಿದೆ.

1932ರ ಮೇ 18ರಂದು ಕರ ನೀಡದ ರೈತರ ಎಮ್ಮೆಗಳನ್ನು ಬ್ರಿಟಿಷರ ಪರವಾಗಿ ರಸ್ತೆ ಕೆಲಸದ ಕಾರಕೂನ ಹಾಗೂ ಒಬ್ಬ ಹವಾಲ್ದಾರ ಬಲಾತ್ಕಾರವಾಗಿ ಪಡೆದುಕೊಂಡು ದಬ್ಬಾಳಿಕೆ ನಡೆಸಿದಾಗ, ಅವುಗಳನ್ನು ಮರಳಿ ಪಡೆಯಲು ಇಲ್ಲಿನ ಗ್ರಾಮೀಣ ಮಹಿಳೆಯರು ಕೆಚ್ಚೆದೆಯಿಂದ ಸೆಟೆದು ನಿಂತು ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಈ ಸತ್ಯಾಗ್ರಹದಲ್ಲಿ ಬಾಣಂತಿಯರು, ಹೆಣ್ಣುಮಕ್ಕಳು, ವಯಸ್ಕರು ಜತೆಗೂಡಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾದರು. ಇವರಲ್ಲಿ ಪ್ರಮುಖವಾಗಿ ತ್ಯಾಗಲಿ ಭುವನೇಶ್ವರಮ್ಮ 32 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕುಳಿತರೇ, ಕಲ್ಲಾಳ ಲಕ್ಷ್ಮಮ್ಮ 22 ದಿನ ಕಾಲ ಉಪವಾಸ ಸತ್ಯಾಗ್ರಹ ಕುಳಿತು ಹೋರಾಟಕ್ಕೆ ಸ್ಫೂರ್ತಿಯಾದರು.

ಅವರೊಂದಿಗೆ ದೊಡ್ಮನೆ ಮಹಾದೇವಮ್ಮ, ಕುಳಿಬೀಡು ಗಣಪಮ್ಮ, ಪಣಜಿ ಬೈಲು ದುಗ್ಗಮ್ಮ, ಕುಳಿಬೀಡು ಭಾಗೀರತಮ್ಮ, ಕಲ್ಲಾಳ ಕಾವೇರಮ್ಮ, ಹೊಸಕೊಪ್ಪ ಸೀತಮ್ಮ, ಗುಂಜಗೋಡ ಮಹದೇವಮ್ಮ, ಹೆಗ್ಗಾರ ದೇವಮ್ಮ ಪ್ರಮುಖರು.  

ಮಹಾತ್ಮ ಗಾಂಧೀಜಿ ಅವರ ಸತ್ಯಾಗ್ರಹದಿಂದ ಪ್ರೇರಿತರಾದ ಈ ಗ್ರಾಮೀಣ ಮಹಿಳೆಯರು ತಮ್ಮದೇ ಆದ ಶೈಲಿಯಲ್ಲಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಮೊಳಗಿಸಿದ `ಕರ ನಿರಾಕರಣೆ~ ಸತ್ಯಾಗ್ರಹ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದು ಗಮನಾರ್ಹ ವಿಚಾರ.

ಇಂತಹ ಮಹತ್ವಪೂರ್ಣ ಹೋರಾಟ ಜನಮಾನಸದ ನೆನಪಿನ ಅಂಗಳದಲ್ಲಿ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ನಿರ್ಮಿಸಿರುವ ಯೋಜನೆಯೇ ಮಹಿಳಾ ಸತ್ಯಾಗ್ರಹ ಸ್ಮಾರಕ ಭವನ.

ಇಲ್ಲಿನ ಸ್ಮಾರಕ ಭವನದಲ್ಲಿ ಮಹಿಳೆಯರು ಸತ್ಯಾಗ್ರಹ ಕುಳಿತ ಮಾದರಿಯ ಆಕೃತಿಗಳನ್ನು ನಿಪುಣ ಕಲಾಕಾರರ ಸಹಾಯದಲ್ಲಿ ಸುಂದರವಾಗಿ ನಿರ್ಮಿಸಲಾಗಿದೆ. ಮಹಿಳೆಯರನ್ನು ಕೋಳ ತೊಡಿಸಿ ಬ್ರಿಟೀಷ್ ಸೈನಿಕರು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು, ಪ್ರಮುಖ ಮಹಿಳಾ ಹೋರಾಟಗಾರರನ್ನು ಬಂದೀಖಾನೆಯಲ್ಲಿ ಬಂಧಿಸಿಟ್ಟಿರುವ ರೀತಿಯ ಕಲಾಕೃತಿಗಳು, ಜೀವಂತ ಆಕೃತಿಗಳ ರೀತಿಯಲ್ಲಿ ನೋಡುಗರಿಗೆ ಭಾಸವಾಗುತ್ತದೆ.

ಇವಕ್ಕೆ ಲಗತ್ತಾಗಿ ಬೆಟ್ಟದ ಮೇಲಿನಿಂದ ಹರಿದು ಬರುವ ಸುಂದರ ಝರಿಗಳು, ಕೃತಕ ಬೆಟ್ಟ ಗುಡ್ಡಗಳು, ಆಕರ್ಷಕವಾದ ಹೂದೋಟ, ಕೋಟೆ ಮಾದರಿಯ ಕಾಂಪೌಂಡ್ ನಿಸರ್ಗದ ಮಡಿಲಿನಲ್ಲಿ ಲೀನವಾಗುವ ರೀತಿಯಲ್ಲಿ ಸುಂದರವಾಗಿ ನಿರ್ಮಾಣ ಮಾಡಲಾಗಿದೆ.

66ನೇ ಸ್ವಾತಂತ್ರ್ಯ ಉತ್ಸವ ಸಂದರ್ಭದಲ್ಲಿ ಜೋಗಕ್ಕೆ ಆಗಮಿಸುವ ಪ್ರವಾಸಿಗರಿಗೆ ಈ ಬಗ್ಗೆ ಉಪಯುಕ್ತ ಮಾಹಿತಿ ದೊರಕುವ ಕೆಲಸವನ್ನು ಸರ್ಕಾರ ಮಾಡಲಿ, ಇನ್ನಷ್ಟು ಅಭಿವೃದ್ಧಿ ಪಡಿಸಲಿ ಎನ್ನುವುದು ಮಾವಿನಗುಂಡಿ ಗ್ರಾಮಸ್ಥರ ಆಶಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT