ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹರಣವಲ್ಲ; ಕಾನೂನು ವೈಫಲ್ಯ

ಅಭಿವ್ಯಕ್ತಿ ಸ್ವಾತಂತ್ರ್ಯ: ಬಳಕೆಯೊ? ದುರ್ಬಳಕೆಯೊ?
Last Updated 11 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಇಂದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಪದಗುಚ್ಛವು ಪದೇ ಪದೇ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಕಲಬುರ್ಗಿಯವರಂತಹ ಹಿರಿಯ ವಿದ್ವಾಂಸರ ಹತ್ಯೆಯ ನಂತರ ಸಂಶೋಧಕರು ಹಾಗೂ ವಿಚಾರವಂತರು ದಿಙ್ಮೂಢರಾಗಿದ್ದಾರೆ. ಇದೊಂದು ಖಂಡನೀಯ ಕೃತ್ಯವಾಗಿದೆ.

ಸಂಶೋಧನೆಗಳನ್ನು ನಡೆಸುವುದೇ ಹೊಸ ವಿಷಯಗಳನ್ನು ತಿಳಿದುಕೊಳ್ಳಲಿಕ್ಕೆ. ಸ್ವೀಕೃತ ವಿಚಾರಗಳನ್ನು ಅಲ್ಲಗಳೆಯುವುದೂ ಸಂಶೋಧನೆಯ ಒಂದು ಭಾಗ. ಆದರೆ ಈ ಕೆಲಸಕ್ಕೆ ಪ್ರಾಣ ತೆರಬೇಕೆ? ಇದು ತುಂಬಾ ಅನಾರೋಗ್ಯಕರ ಹಾಗೂ ಅಪಾಯಕರ ಬೆಳವಣಿಗೆ. ಈ ಸಂದರ್ಭದಲ್ಲಿ ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂಬುದಾಗಿ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪದೇ ಪದೇ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯ ಚರ್ಚೆಗೆ ಬರುತ್ತಿದೆ. ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ನಿರ್ದಿಷ್ಟವಾಗಿ ಏನು?  ಇಂಥ ಭೀಕರ ಸ್ವರೂಪದ ಘಟನೆಗಳನ್ನು ಅದರ ಪರಿಧಿಗೆ ತರಬಹುದೆ ಎಂಬ ಕುರಿತು ಪರಿಶೀಲಿಸುವ ಜರೂರು ಇದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ನಿರ್ದಿಷ್ಟವಾಗಿ ಏನು ಎಂಬುದರ ಕುರಿತು ನಾವು ಊಹೆಗಳನ್ನು ಮಾಡುವ ಅಗತ್ಯವಿಲ್ಲ. ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಏನೆಂಬುದನ್ನು ತಿಳಿಸುತ್ತದೆ. ಅದರ ಪ್ರಕಾರ, ಪ್ರಜಾಪ್ರಭುತ್ವವು ಜನಾಭಿಪ್ರಾಯದ ಮೇಲೆ ನಿಂತಿರುವುದರಿಂದ ಪ್ರಭುತ್ವದ ನಿರ್ಬಂಧವಿಲ್ಲದೇ ವ್ಯಕ್ತಿಯೊಬ್ಬನು ಅಭಿಪ್ರಾಯಗಳನ್ನು ತಳೆಯಲು, ಮಾಹಿತಿಗಳನ್ನು ಹಾಗೂ ತನ್ನ ವಿಚಾರಗಳನ್ನು ಸಂವಹನೆ ಮಾಡಲು ಅವನಿಗೆ ಹಕ್ಕನ್ನು ನೀಡಲಾಗಿದೆ. ಅಂದರೆ ಅದು ಕಾನೂನಿನ ನಿರ್ಬಂಧಕ್ಕೆ ಬರುವುದಿಲ್ಲ. ಈ ಅಭಿವ್ಯಕ್ತಿಯಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಪಟ್ಟಂತೆ ಅಭಿಪ್ರಾಯ ವ್ಯಕ್ತಪಡಿಸುವುದು ಮಾತ್ರ ಈ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ಪತ್ರಿಕಾ ಸ್ವಾತಂತ್ರ್ಯವು ಈ ಕಾರಣದಿಂದ ಮಹತ್ವ ಪಡೆದುಕೊಳ್ಳುತ್ತದೆ.

ಈ ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಭುತ್ವ ಮತ್ತು ನಾಗರಿಕನ ನಡುವೆ ಇರುವ ಸಂಬಂಧ, ಅಂದರೆ ಪ್ರಜಾಪ್ರಭುತ್ವವು ಪ್ರಜೆಯೊಬ್ಬನಿಗೆ ನೀಡುವ ಭರವಸೆಯಾಗಿದೆ. ಆದರೆ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿಗಳನ್ನು ಪ್ರಭುತ್ವವು ಹಾಕಬಹುದು: ರಾಷ್ಟ್ರೀಯ ಏಕತೆ ಹಾಗೂ ಸುರಕ್ಷತೆಯ ರಕ್ಷಣೆಗಾಗಿ, ಅವ್ಯವಸ್ಥೆ ಹಾಗೂ ಅಪರಾಧವನ್ನು ತಡೆಗಟ್ಟಲಿಕ್ಕಾಗಿ, ಆರೋಗ್ಯ ಹಾಗೂ ಸದಾಚಾರಗಳನ್ನು ರಕ್ಷಿಸಲು, ಇತರರ ಹಕ್ಕನ್ನು ರಕ್ಷಿಸಲು, ಇತ್ಯಾದಿ ಕಾರಣಗಳಿಗೆ ಅದನ್ನು ಪ್ರಭುತ್ವವು ಹತ್ತಿಕ್ಕಬಹುದು. ಒಬ್ಬ ನಾಗರಿಕನ ಅಭಿವ್ಯಕ್ತಿಯು ಈ ಮೇಲಿನ ಸಮಸ್ಯೆಗಳನ್ನು ಹುಟ್ಟುಹಾಕಿದೆ ಎಂಬುದಾಗಿ ನಿದರ್ಶಿಸಿದರೆ ಪ್ರಭುತ್ವವು ತಾನು ನೀಡಿದ ಈ ಸ್ವಾತಂತ್ರ್ಯವನ್ನು ಮಿತಗೊಳಿಸಬಹುದು. ಅಂದರೆ ಸಮುದಾಯಗಳ ಭಾವನೆಯನ್ನು ನೋಯಿಸಿದ ಬರಹಗಳನ್ನು ನಿಷೇಧಿಸುವುದು, ಭಾಷಣ ಮಾಡದಂತೆ ನಿರ್ಬಂಧಿಸುವುದು ಇತ್ಯಾದಿ. ಆದರೆ ಆ ಹಕ್ಕನ್ನು ಪ್ರಭುತ್ವವೇ ಮೊಟಕು ಮಾಡಬೇಕೇ ವಿನಾ ಇತರ ಪ್ರಜೆಗಳಲ್ಲ. ನೀಡುವುದು ಪ್ರಭುತ್ವವಾಗಿರುವುದರಿಂದ ಈ ಸ್ವಾತಂತ್ರ್ಯವನ್ನು ಕಿತ್ತುಕೊಂಡರೆ ಅದು ಪ್ರಭುತ್ವದಿಂದಲೇ ಆಗಬೇಕು. ಒಬ್ಬ ನಾಗರಿಕನು ಮತ್ತೊಬ್ಬ ನಾಗರಿಕನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ನಾವು ನಡೆಸುವ ಚರ್ಚೆಗಳಲ್ಲಿ ಬಹುತೇಕ ಘಟನೆಗಳು ಅದರ ವ್ಯಾಪ್ತಿಯೊಳಗೇ ಬರುವುದಿಲ್ಲ. 

ಹಾಗಾದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬಣ್ಣಿಸಲಾಗುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸುಳ್ಳೆ ಎಂಬ ಪ್ರಶ್ನೆ ಏಳಬಹುದು. ಇಂಥ ಘಟನೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಸಮಸ್ಯೆ ಎಂದು ತಪ್ಪುತಪ್ಪಾಗಿ ಗುರುತಿಸುವುದರಿಂದ ಅವುಗಳ ಪರಿಹಾರವೂ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಈ ಹಕ್ಕನ್ನು ಅನುಷ್ಠಾನಕ್ಕೆ ತಂದಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚೆಚ್ಚು ಪ್ರಾಶಸ್ತ್ಯ ಸಿಗುವ ಬದಲು ಅಭಿವ್ಯಕ್ತಿ ಹೆಚ್ಚೆಚ್ಚು ಕಷ್ಟವಾಗುತ್ತಿರುವಂತಿದೆ. ಅಡ್ಡಾದಿಡ್ಡಿಯಾಗಿ ಮಾತನಾಡುವವರೂ, ಅದಕ್ಕೆ ಕೆರಳುವವರೂ, ಜೀವ ಬೆದರಿಕೆ ಹಾಕುವವರೂ, ಪೊಲೀಸ್‌ ರಕ್ಷಣೆಯನ್ನು ಪಡೆಯುವವರೂ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದಾರೆ. ಈ ಚಂದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕಲಮನ್ನು ನಮ್ಮ ಸಂವಿಧಾನಕ್ಕೆ ಸೇರಿಸಿಕೊಳ್ಳಲಾಗಿದೆಯೆ? ಎರಡು ಸಾಧ್ಯತೆಗಳಿವೆ: ಒಂದೋ ಅಭಿವ್ಯಕ್ತಿ ಸ್ವಾತಂತ್ರ್ಯವೇ ಶಾಂತಿ ಸುರಕ್ಷತೆಗೆ ಕುತ್ತು ತರುತ್ತಿದೆ, ಇಲ್ಲವೇ ಇವೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟ ಘಟನೆಗಳೇ ಅಲ್ಲ. ನನ್ನ ಪ್ರಕಾರ ಎರಡನೆಯ ಸಾಧ್ಯತೆಯೇ ಸಂಭವನೀಯ. ಹಾಗಾಗಿ ಅವನ್ನು ಬೇರೆ ಬೇರೆ ಸ್ವರೂಪದ ಸಮಸ್ಯೆಗಳನ್ನಾಗಿ ಗುರುತಿಸುವುದು ಅವುಗಳ ಪರಿಹಾರಕ್ಕೆ ನಿರ್ಣಾಯಕ. ಹಾಗೆ ಗುರುತಿಸದಿರುವುದರಿಂದಲೇ ಅವು ಬಿಗಡಾಯಿಸುತ್ತಿವೆ. ಹತ್ಯೆ ಮಾಡುವ ಪೃವೃತ್ತಿ ಹೆಚ್ಚಾಗುತ್ತಿರುವುದು ಕಾನೂನು ಸುವ್ಯವಸ್ಥೆಯ ವೈಫಲ್ಯ ಎಂಬ ನಿಟ್ಟಿನಲ್ಲಿ ಚರ್ಚೆ ನಡೆದರೆ ಅದಕ್ಕೆ ಪರಿಹಾರಗಳು ಗೋಚರಿಸಬಹುದು. ಇಂಥ ಅನೇಕ ಹತ್ಯೆಗಳು ಈಗಾಗಲೇ ನಡೆದರೂ ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸಲಿಕ್ಕೆ ಏಕೆ ಆಗಿಲ್ಲ?

ಯಾರೋ ಒಬ್ಬರು ಯಾವುದೋ ಜಾತಿಯ, ಮತದ, ಆಚರಣೆಯ ಕುರಿತು ಮಾಡಿದ ಪ್ರಚೋದನಕಾರಿ ಹೇಳಿಕೆಗಳಾಗಿರಬಹುದು ಅಥವಾ ಅಂಥ ಹೇಳಿಕೆಗಳಿಗೆ ಪ್ರತಿಯಾಗಿ ಬರುವ ಹಿಂಸಾತ್ಮಕ ಪ್ರತಿಕ್ರಿಯೆಗಳಿರಬಹುದು, ಅವಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಣ್ಣ ನೀಡಿದರೆ ದಾರಿ ತಪ್ಪುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಧಿಯಲ್ಲಿ ಬರುವ ಹೇಳಿಕೆಗಳು ಸರ್ವ ಜನಾಭಿಪ್ರಾಯ ಅಥವಾ ಹಿತಾಸಕ್ತಿಗೆ ಸಂಬಂಧಿಸಿರಬೇಕು. ಖಾಸಗಿ ಹೇಳಿಕೆಗಳು, ಕೆಲವು ಗುಂಪು, ಜಾತಿಗಳ ಸ್ವಾರ್ಥ, ಪೂರ್ವಗ್ರಹಪೀಡಿತ ಹೇಳಿಕೆಗಳು, ಅಜ್ಞಾನದಿಂದ ಮಾಡುವ ಹೇಳಿಕೆಗಳು ಇತ್ಯಾದಿಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಬಿಂಬಿಸಿದರೆ ಜನಾಭಿಪ್ರಾಯದ ಹೆಸರಿನಲ್ಲಿ ಸರ್ಕಾರದ ದಾರಿ ತಪ್ಪಿಸುವ ಕೆಲಸ ಆಗುತ್ತದೆ ಅಷ್ಟೆ. ಆದರೆ ಇಂದು ನಾವು ನೋಡುವುದೇನು? ಇಂಥವನ್ನೆಲ್ಲ ಯಾವಾಗಲೂ ವಿಚಾರವಾದಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾತ್ರವೇ ಧಕ್ಕೆ ತರುವ ಘಟನೆಗಳಾಗಿ ಬಿಂಬಿಸಲಾಗುತ್ತದೆ. ಅದೂ ಅವರೇ ತಿಳಿಸುವಂತೆ ಧಕ್ಕೆ ತರುವವರೆಲ್ಲ ಮತಾಂಧರು ಹಾಗೂ ಸಂಪ್ರದಾಯವಾದಿಗಳು. ಹಾಗಾದರೆ ಸಂಪ್ರದಾಯಸ್ಥರು ಹಾಗೂ ಮತಶ್ರದ್ಧೆಯುಳ್ಳವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ವಯವಾಗುವುದಿಲ್ಲವೆ?  ಉದಾಹರಣೆಗೆ, ದೇವಮೂರ್ತಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದರೆ ತಪ್ಪಿಲ್ಲ ಎನ್ನುವುದು ವಿಚಾರವಾದಿಯೊಬ್ಬನ ಸ್ವಾತಂತ್ರ್ಯವಾದರೆ, ಅದನ್ನು ಅಷ್ಟೇ ಕೆಟ್ಟದಾಗಿ ವಿರೋಧಿಸುವುದು ಸಂಪ್ರದಾಯವಾದಿಯ ಸ್ವಾತಂತ್ರ್ಯವೇಕಲ್ಲ?

ಇದನ್ನು ಗಮನಿಸಿದಾಗ ಕೆಲವು ವಿಚಾರವಾದಿಗಳು ತಮ್ಮ ಐಡಿಯಾಲಜಿಯನ್ನು ಮುಂದೊತ್ತಲು ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಮಂತ್ರವನ್ನು ಬಳಸುತ್ತಿದ್ದಾರೆ ಎಂದೆನಿಸುತ್ತದೆ. ಇದು ಎಲ್ಲಿಗೆ ಬಂದು ನಿಂತಿದೆಯೆಂದರೆ ಅವರು ಆಡುವ ಮಾತುಗಳು ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ದೃಷ್ಟಾಂತಗಳು ಎಂಬಂತೆ ಚರ್ಚೆಯಾಗುತ್ತದೆ. ಅವರ ಮಾತುಗಳು ಅವರು ನಂಬಿದ ರಾಜಕೀಯ ಐಡಿಯಾಲಜಿಗಳ ಪ್ರತಿಪಾದನೆಗಳು ಅಷ್ಟೆ. ಇಂಥ ಪ್ರತಿಪಾದನೆಗಳಿಗೆ ವಿರೋಧಿ ಐಡಿಯಾಲಜಿಗಳಿಂದ ಅದೇ ನೆಲೆಯಲ್ಲಿ ಪ್ರತಿಕ್ರಿಯೆ ಬರುವುದು ಸ್ವಾಭಾವಿಕ. ಅಂಥ ಪ್ರತಿಕ್ರಿಯೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂಬುದಾಗಿ ಬಿಂಬಿಸಿ ಅವುಗಳನ್ನು ಅಕ್ರಮಗೊಳಿಸಲಾಗುತ್ತದೆ. ನಿಜವಾಗಿಯೂ ನೋಡಿದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಇಂಥ ಘಟನೆಗಳಿಗೂ ಯಾವುದೇ ಸಂಬಂಧವಿಲ್ಲ. ಇಂಥ ಪ್ರಚೋದನಕಾರಿ ಮಾತುಗಳಿಂದ ಯಾವ ಜನಾಭಿಪ್ರಾಯ ಅಥವಾ ಸಮುದಾಯಗಳ ಹಿತಾಸಕ್ತಿಯನ್ನು ಅವರು ಪ್ರತಿನಿಧಿಸುತ್ತಾರೆ? ಆ ಸಮುದಾಯಗಳ ಲೋಕದಲ್ಲಂತೂ ಇವರ್‍‍್ಯಾರೂ ಪ್ರಸ್ತುತತೆ ಪಡೆದಂತೆ ಕಾಣುವುದಿಲ್ಲ. ಇದರ ಒಂದೇ ಪರಿಣಾಮವೆಂದರೆ ಸಾಮಾಜಿಕ ಸಂಘರ್ಷ ಹಾಗೂ ಅಶಾಂತಿ. ಹಾಗಾಗಿ ಇಂಥ ಉದಾಹರಣೆಗಳಲ್ಲಿ ಮುಖ್ಯವಾಗುವುದು ನಮ್ಮ ಸಂಸ್ಕೃತಿ, ಸಮಾಜದ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡುವವರು ಎಷ್ಟರ ಮಟ್ಟಿಗೆ ವೈಜ್ಞಾನಿಕವಾಗಿ, ಶಿಸ್ತುಬದ್ಧವಾಗಿ ತಮ್ಮ ತಿಳಿವಳಿಕೆಯನ್ನು ಹೊಂದಿದ್ದಾರೆ ಎಂಬ ಪ್ರಶ್ನೆ.

ಅಂದರೆ ಕಲಬುರ್ಗಿಯವರ ನಿರ್ದಿಷ್ಟ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಚರ್ಚೆ ನಡೆಸುವ ಬದಲು ಸಂಶೋಧನೆಯೊಂದನ್ನು ಮಂಡಿಸುವ ಹಾಗೂ ಖಂಡಿಸುವ ಕ್ರಮವೇನು ಎಂಬುದರ ಕುರಿತು ಚರ್ಚೆ ನಡೆಸಿದರೆ ಉಪಯುಕ್ತವಾಗಬಹುದು. ಬಹುಶಃ ಇಂಥ ತಿಳಿವಳಿಕೆಯನ್ನು ಹೆಚ್ಚೆಚ್ಚು ಬೆಳೆಸಿದಷ್ಟೂ ಸಂಶೋಧನೆಗೆ ಸಂಬಂಧಿಸಿದ ಸಂಘರ್ಷಗಳು ಕಡಿಮೆಯಾಗಬಹುದು. ನಮಗೆ ಯಾರ ಹೇಳಿಕೆಯ ಕುರಿತಾದರೂ ಅಸಮ್ಮತಿ ಇದ್ದರೆ, ಅದು ತಪ್ಪು ಎಂದೆನಿಸಿದರೆ ಅದರ ಮಿತಿಯನ್ನು ನಿದರ್ಶಿಸಿ ತೋರಿಸಿ ಮನದಟ್ಟಾಗುವಂತೆ ನಮ್ಮ ವಾದವನ್ನು ಮಂಡಿಸುವುದು ಸಂಶೋಧನಾ ಮಾರ್ಗ ಅಥವಾ ಅದು ಸಮಾಜಕ್ಕೆ ಅಪಾಯಕಾರಿ, ಕೆಲವರ ಹಿತಕ್ಕೆ ಧಕ್ಕೆ ತರುತ್ತದೆ ಎಂದೆನಿಸಿದರೆ, ಅದನ್ನೂ ಸಂಶೋಧನೆಯ ಮೂಲಕವೇ ನಿದರ್ಶಿಸಿ ತೋರಿಸಬೇಕಾಗುತ್ತದೆ.

ಅಂದರೆ ಸಂಶೋಧನೆಯಲ್ಲಿ ತಪ್ಪುಗಳು ಬೌದ್ಧಿಕವಾಗಿ ಪರಿಹರಿಸಬಲ್ಲ, ಪರಿಹರಿಸಬೇಕಾದ ಸಮಸ್ಯೆಗಳಾಗಿವೆಯೇ ವಿನಾ, ಸಂಶೋಧನಾ ಕೇಂದ್ರಗಳನ್ನು ಮುಚ್ಚಿಸುವ, ಸಂಶೋಧಕರ ಬರವಣಿಗೆಯನ್ನೇ ನಿಲ್ಲಿಸುವ ಸಮಸ್ಯೆಗಳಲ್ಲ. ಅಂಥ ಸಂಶೋಧನೆಗಳಿಗೆ ಅನೈತಿಕ, ಅಮಾನವೀಯ ಎಂದು ಹಣೆಪಟ್ಟಿ ಅಂಟಿಸಿಬಿಟ್ಟರೆ, ಸಂಶೋಧಕರ ಉದ್ದೇಶಗಳನ್ನೇ ಶಂಕಿಸಿಬಿಟ್ಟರೆ, ಅವರು ಎತ್ತಿದ ಪ್ರಶ್ನೆಗಳನ್ನು ಉತ್ತರಿಸಿದ ಹಾಗಾಗುವುದಿಲ್ಲ ಹಾಗೂ ಅದನ್ನು ಅಭಿವ್ಯಕ್ತಿ ಸಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವುದೂ ಮತ್ತೊಂದು ಮೋಸ.

ಅಂದರೆ ಇಂಥ ಮಾರ್ಗವನ್ನು ಯಾರಾದರೂ ತುಳಿದ ಕ್ಷಣದಲ್ಲೇ ಸಂಶೋಧನಾ ಕ್ಷೇತ್ರಕ್ಕೆ ಹೊರತಾದ ವಿಧಾನದಿಂದ ಅದನ್ನು ಎದುರಿಸಲು ತೊಡಗಿರುತ್ತಾರೆ. ಅಲ್ಲಿಂದಲೇ ಸಂಶೋಧಕರನ್ನು ಹಿಂಸಿಸುವ ಕೆಲಸ ಪ್ರಾರಂಭವಾಗುತ್ತದೆ. ಬಹುಶಃ ಕೊಲೆಗಡುಕರು ಕೂಡ ಇದೇ ಕೆಲಸಕ್ಕೆ ಮತ್ತೊಂದು ಅತಿಗೆ ಹೋಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT