ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯದ ಓಟ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹಿಂದೂ ಸಮಾಜದ ವಿರಾಟ್ ಸ್ವರೂಪದ ಸಮಗ್ರ ದರ್ಶನವನ್ನು ಕಂಡ ಅಂತ್ಯಂತ ವರ್ಣ ರಂಜಿತ ಸಮಾರಂಭವೊಂದರಲ್ಲಿ ಬೆಳ್ತಂಗಡಿ ತಾಲೂಕಿನ ಸೋಣಂದೂರು, ಪಾರಂಕಿ, ಕೊಕ್ಕಡ, ನಿಡ್ಲೆ, ಮೂರ್ಕೊಡಿ, ಮಾನಂತಬೆಟ್ಟು, ಮುಂಡೂರು, ಮಾರಾಡಿ, ಈಂದಬೆಟ್ಟು, ಕಡಿರುದ್ಯಾವರ, ಕೊಯ್ಯೂರು, ಕಳಿಯ ಮೊದಲಾದ ಹಳ್ಳಿಗಳಿಗೆ ಸೇರಿದ ಸುಮಾರು ನೂರಾರು ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿ ಹೊಸ ಹೊಸ ಹೆಸರುಗಳನ್ನು ಇರಿಸಿಕೊಂಡಿದ್ದರು.
 
ಅಂತೋಣಿ ಆನಂದನಾದರೆ, ಸೈಮನ್ ಸೋಮನಾಗಿದ್ದ. ಮಾರ್ಸೆಲ್ ಗುರ್ವನಾದರೆ ಮಾರ್ಟಿನ್ ಮುಂಗ್ರನಾಗಿದ್ದ. ಬೆಂಜ ಭೋಜನಾಗಿದ್ದರೆ ಉಮ್ಮರ್ ಉಮೇಶನಾಗಿ ಹೆಸರು ಬದಲಿಸಿಕೊಂಡಿದ್ದರು...”. ಅಂದಿನ `ಹೊಸದಿಗಂತ~ ಪತ್ರಿಕೆಯ ಮುಖಪುಟದಲ್ಲಿದ್ದ ಅಕ್ಷರ ಅಕ್ಷರಗಳನ್ನು ಚಡ್ಡಿ ಅನಂತಣ್ಣ ಗಟ್ಟಿಯಾಗಿ ಓದಿ ಹೇಳುತ್ತಿದ್ದರೆ, ಆರಾಮ ಕುರ್ಚಿಯಲ್ಲಿ ಒರಗಿದ್ದ ಚಾಂದಚ್ಚ ಕಣ್ಣು ಮುಚ್ಚಿದ್ದರು.

ಶುಕ್ರವಾರ ಬೆಳಗ್ಗೆ ಬೆಳಗ್ಗೆಯೇ ಸುರುಳಿ ಸುತ್ತಿದ ದಿನಪತ್ರಿಕೆಯನ್ನು ಖಡ್ಗದಂತೆ ಬೀಸುತ್ತಾ, `ಇದ್ದೀರಾ ಮನೆಯಲ್ಲೆ...?~ ಎಂಬ ಪ್ರಶ್ನೆಯೊಂದಿಗೆ ಜಗಲಿಯೇರಿ ಬಂದಿದ್ದ ಅನಂತಣ್ಣ ತೆರೆದಿದ್ದ ಮುಂಬಾಗಿಲ ಒಳಗೆ ಕತ್ತು ತೂರಿದ್ದಾಗ, ಚಾವಡಿಯಲ್ಲಿ ಗೋಡೆಗಂಟಿಕೊಂಡಂತೆ ಇರಿಸಿದ್ದ ಬೆಂಚಿನ ಮೇಲೆ ನಿಂತು ಎತ್ತರದ ಗೋಡೆಯಲ್ಲಿ ತೂಗುತ್ತಿದ್ದ ಗಡಿಯಾರದ ಕೀಲಿ ತಿರುಗಿಸುತ್ತಿದ್ದ - ಪ್ರತಿ ಶುಕ್ರವಾರಕ್ಕೊಮ್ಮೆ ಅದಕ್ಕೆ ಕೀಲಿ ಕೊಡುವುದು ಕ್ರಮ- ಚಾಂದಚ್ಚ, `ಓಹ್! ಎಂಥದ್ದು ಇದು ಅನಂತಣ್ಣಾ, ಇಷ್ಟು ಬೆಳಗ್ಗೆ ಬೆಳಗ್ಗೆಯೇ ಸವಾರೀ? ಬನ್ನಿ, ಬನ್ನಿ~ ಎಂದು ಸ್ವಾಗತಿಸಿದ್ದರು.
 
ಆನಂತರ ಎಂದಿನಂತೆ, ಒಳಬಾಗಿಲತ್ತ ಕತ್ತು ತಿರುಗಿಸಿ ಗಟ್ಟಿಯಾಗಿ, `ಇಕಾ ನೋಡು.., ಅನಂತಣ್ಣ ಬಂದಿದ್ದಾರೆ~ ಎಂದು ಸೂಚನೆ ನೀಡಿದ್ದರು; ಅದರ ಅರ್ಥ `ಚಾ ಮಾಡು~ ಅಂತ. ಅದು ಅನಂತಣ್ಣನವರಿಗೂ ಗೊತ್ತುಂಟು.

`ನೀವು ನನ್ಗೆ ಚಾ ಕುಡಿಸ್ಲಿಕ್ಕೆ ಹೊರಟಿದ್ದೀರಿ, ಇಲ್ಲಿ ಈ ಪೇಪರಿನವ್ರ ವಿಷ ಕುಡಿಸ್ತಾ ಇದ್ದಾರೆ~ ಎಂದು ಅನಂತಣ್ಣ ಕೋಪದಿಂದ ಸಿಡುಕಿದ್ದಾಗ ಚಾಂದಚ್ಚನವರಿಗೆ ಅಶ್ಚರ್ಯವಾಗಿತ್ತು. ದಿನದ ಬಹುಪಾಲು ಸಮಯವನ್ನು ಮಿಠಾಯಿ ಅವುಲಿಯಾರ ಜೊತೆಗಿನ ಪಟ್ಟಾಂಗಕ್ಕೇ ಮೀಸಲಿಟ್ಟಿದ್ದ ಅನಂತಣ್ಣ ಇತ್ತೀಚೆಗೆಲ್ಲ ಅಬ್ಬರದ ಸ್ವರದಲ್ಲಿ ಮಾತಾಡುವುದನ್ನೇ ನಿಲ್ಲಿಸಿಬಿಟ್ಟಿದ್ದರು.

ಪೇಪರಿನಲ್ಲಿ ಏನು ಬಂದಿರಬಹುದು? ಆದರೂ ತನ್ನ ಕುತೂಹಲವನ್ನು ಮುಚ್ಚಿಟ್ಟಿದ್ದ ಚಾಂದಚ್ಚ, `ಈ ಜಬ್ಬು ಗಡಿಯಾರಕ್ಕೆ ದಿನಕ್ಕೆ ಎರಡು ಸರ್ತಿ ಕೀ ಕೊಡದಿದ್ರೆ ನಡಿಯುವುದೇ ಇಲ್ಲ. ಈಗ ನಿಮ್ಮ ವಾಚಿನಲ್ಲಿ ಗಂಟೆ ಎಷ್ಟಾಯ್ತೂ?~ ಎಂದು ವಿಚಾರಿಸಿದ್ದರು.
ತಾನು ತಂದಿದ್ದ ದಿನಪತ್ರಿಕೆಯನ್ನು ಪಕ್ಕದಲ್ಲಿದ್ದ ಮರದ ಸೋಫಾದ ಮೇಲೆ ಸಿಟ್ಟಿನಿಂದ ಬಿಸಾಡಿದ್ದ ಅನಂತಣ್ಣ, `ಆ ಮಿಠಾಯಿ ಮುದುಕ ಹೇಳುವುದು ಸುಳ್ಳಲ್ಲ; ಒಂದು ವರ್ಷ ಯಾವ್ದೇ ಪೇಪರು ಓದದಿದ್ರೆ ಅದೆಂಥಾ ಬೀಪಿ ಇದ್ರೂ ನಾರ್ಮಲ್ಲಿಗೆ ಬಂದು ಎರಡು ವರ್ಷ ಹೆಚ್ಚು ಬದುಕ್ಲಿಕ್ಕೆ ಆಗ್ತದಂತೆ~ ಎನ್ನುತ್ತಾ ಸೋಫಾದ ಮೇಲೆ ತಾನು ಎಸೆದಿದ್ದ ಪೇಪರನ್ನು ಮತ್ತೊಮ್ಮೆ ಎತ್ತಿಕೊಂಡು ಅದನ್ನು ಸುರುಳಿ ಸುತ್ತಿ ತನ್ನ ತೊಡೆಗೆ ಹೊಡೆದುಕೊಳ್ಳುತ್ತಾ, `ಇವ್ರಿಗೆ ಚೂರಾದ್ರೂ ಭಾಷೆ ಉಂಟಾ? ಇವ್ರಿಗೆ ಬರೀಲಿಕ್ಕೆ ಕಲ್ಸಿದವರನ್ನು ಮೊದ್ಲು ಗಡೀಪಾರು ಮಾಡ್ಬೇಕು~ ಎಂದು ಗುಡುಗಿದ್ದರು.

ಗೋಡೆ ಗಡಿಯಾರದ ತೂತಿಗೆ ಕೀಲಿ ತುರುಕಿಸಿ ಬೆಂಚಿನ ಮೇಲೆ ನಿಂತಿದ್ದ ಚಾಂದಚ್ಚನವರಿಗೆ ಗಾಬರಿಯಾಯಿತು. ಆದರೂ ಅನಂತಣ್ಣನವರ ಮಾತಿನ ಬಗ್ಗೆ ಆಸಕ್ತಿಯಿಲ್ಲದವರಂತೆ ನಟಿಸುತ್ತಾ, `ನೀವು ಗಂಟೆ ಎಷ್ಟು ಅಂತ ಹೇಳ್ಳೇ ಇಲ್ಲಾ?~ ಎಂದು ಮತ್ತೊಮ್ಮೆ ಪಶ್ನಿಸಿದ್ದರು. ಚಾಂದಚ್ಚನವರ ಉದ್ದೇಶಪೂರ್ವಕ ಉಡಾಫೆಯನ್ನು ಗಮನಿಸಿದ ಅನಂತಣ್ಣನವರಿಗೆ ಸಿಟ್ಟು ನೆತ್ತಿಗೇರಿತ್ತು, `ಅಲ್ಲ ಚಾಂದಚ್ಚ.

ನೀವು ಮನುಷ್ಯರಾ ಅಥ್ವಾ ಕಲ್ಲಾ? ನಾನು ಇಷ್ಟೆಲ್ಲ ಬೊಬ್ಬೆ ಹೊಡೀತಿದ್ದೇನಲ್ಲ! ಯಾಕೆ, ಏನು ಅಂತ ಕೇಳ್ಬೇಕು ಅಂತ ಅನ್ಸುವುದೇ ಇಲ್ವಾ?~ ಮತ್ತೊಮ್ಮೆ ಸಿಡುಕಿದ್ದರು. ಇನ್ನು ಅವರನ್ನು ನಿರ್ಲಕ್ಷಿಸಿದರೆ ತೊಂದರೆಯೇ ಎಂದು ಭಾವಿಸಿದ ಚಾಂದಚ್ಚ, `ಕೂತ್ಕೊಳ್ಳಿ, ಕೂತ್ಕೊಳ್ಳಿ..., ಹಾಗೆ ತಲೆ ಹೋಗುವಂತದ್ದು ಎಂತ ಆಯ್ತು ಅನಂತಣ್ಣಾ? ಎಂತ ಅಂತ ಬಂದಿದೆ ಪೇಪರ್ನಲ್ಲಿ?~ ಗೋಡೆ ಗಡಿಯಾರಕ್ಕೆ ಕೀ ಕೊಡುವ ಯೋಚನೆಯನ್ನು ಕೈಬಿಟ್ಟು, ಬೆಂಚಿನಿಂದ ಇಳಿಯುತ್ತಾ ಅರ್ಧ ಆತಂಕ, ಅರ್ಧ ಕುತೂಹಲದಿಂದಲೇ ಪ್ರಶ್ನಿಸಿದ್ದರು.

ಸೋಫಾದಲ್ಲಿ ದೊಪ್ಪನೆ ಕುಳಿತುಕೊಂಡ ಅನಂತಣ್ಣ, `ಇನ್ನೆಂತ ಆಗ್ಲಿಕ್ಕುಂಟು ಚಾಂದಚ್ಚಾ? ತಲೆ ಇದ್ದವರು ಮಾಡುವ ಕೆಲ್ಸವಾ ಇದೂ? ನಾನೇ ನಿನ್ನೆ ಕಣ್ಣಾರೆ ನೋಡಿದ್ದೇನೆ. ಅಷ್ಟು ಚಂದದ ಫಂಕ್ಷನ್ನು. ಆದ್ರೆ ಅದ್ಕೆ ಅಷ್ಟೆಲ್ಲ ಕುಣಿದಾಟ ಬೇಕಿತ್ತಾ; ಅದು ಬೇರೆ ವಿಷ್ಯ. ನಾನು ಪ್ರಶ್ನೆ ಮಾಡ್ಲಿಕ್ಕೆ ಹೋಗುವುದಿಲ್ಲ. ಅವ್ರ ಹತ್ರ ದುಡ್ಡಿದೆ; ಮಾಡಿದ್ರು. ನಾನು ನೋಡಿಲ್ಲಪ್ಪ, ಅಷ್ಟೊಂದು ಶಿಸ್ತಿನ ಮೆರವಣಿಗೆ. ಐದು ಸಾವಿರ ಜನ್ರು ಒಟ್ಟಿಗೆ ಕೂತು ಊಟ ಮಾಡುವುದು ಅಂತ ಅಂದ್ರೆ ಅದೇನು ಕುಶಾಲಾ? ಅಲ್ಲಿ ಯಾರು ಇಲ್ಲಾಯ್ತು ಹೇಳಿ.
 
ಪೇಜಾವರ ಸ್ವಾಮಿಗಳು ಇದ್ರು; ಧರ್ಮಸ್ಥಳದ ಹೆಗ್ಡೆಯವರಿದ್ರು. ಈಗ ಪೇಪರಿನಲ್ಲಿ ಹೀಗೆಲ್ಲ ಬಂದ್ರೆ ಅವ್ರ ಹೆಸ್ರು ಸುಮ್ನೆ ಸುಮ್ನೆ ಹಾಳಾಗ್ತದಾ ಇಲ್ವಾ? ನೀವೇ ಹೇಳಿ~ ಎನ್ನುತ್ತಾ, ಎದುರಿಗೆ ಇದ್ದ ಆರಾಮ ಕುರ್ಚಿಯಲ್ಲಿ ಒರಗಿದ ಚಾಂದಚ್ಚನವರತ್ತ ಅಂದಿನ `ಹೊಸದಿಗಂತ~ ಪೇಪರನ್ನು ಚಾಚಿದ್ದರು.

`ನನ್ನ ಮುಖಕ್ಕೆ ಪೇಪರು ಹಿಡ್ರೆ ನನ್ಗೆ ಓದ್ಲಿಕ್ಕೆ ಬರ್ತದಾ? ಏನು ಬರ್ದಿದ್ದಾರೆ ಅಂತ ನೀವೇ ಗಟ್ಟಿಯಾಗಿ ಓದಿದ್ರೆ, ಸಂಗ್ತಿ ಎಂಥದ್ದು ಅಂತಾದ್ರೂ ನನ್ಗೂ ಅರ್ಥ ಆದೀತು~. ತನಗೂ ಕೋಪ ಬರುತ್ತದೆ ಎಂಬುದನ್ನು ಪ್ರಕಟಿಸುವವರಂತೆ ಗಟ್ಟಿಯಾಗಿಯೇ ಹೇಳುವಷ್ಟರಲ್ಲಿ ಎರಡು ಗ್ಲಾಸುಗಳಲ್ಲಿ  ಚಹ ಹಿಡಿದುಕೊಂಡು ಐಸಮ್ಮ ಚಾವಡಿಗೆ ಬಂದುಬಿಟ್ಟಿದ್ದರು.

ಓದಲೆಂದು ಪೇಪರು ಬಿಡಿಸುತ್ತಿದ್ದ ಅನಂತಣ್ಣ ಗಲಿಬಿಲಿಯಿಂದ, `ಸ್ವಲ್ಪ ಇರು, ನಿನ್ನ ಹೆಂಡ್ತಿ ಒಳಗೆ ಹೋದನಂತ್ರ ಓದುತ್ತೇನೆ~ ಎಂಬಂತೆ ಕೈ, ಬಾಯಿ ಕಣ್ಣುಗಳಲ್ಲೇ ಅದೆಷ್ಟೇ ಸೂಚಿಸಲು ಯತ್ನಿಸಿದ್ದರೂ ಚಾಂದಚ್ಚನವರಿಗೆ ಅನಂತಣ್ಣನ ಸಂಜ್ಞೆಗಳ ತಲೆ ಬುಡ ಅರ್ಥವಾಗಿದ್ದಿರಲಿಲ್ಲ.

ಹತ್ತಿರ ಬಂದ ಹೆಂಡತಿಯತ್ತ ತಿರುಗಿ, `ನೋಡು, ಈ ಅನಂತಣ್ಣ ಪೇಪರಿನಲ್ಲಿ ಅದೆಂಥದ್ದೋ ಬಾಂಬು ಕಟ್ಟಿಕೊಂಡು ಬಂದಿದ್ದಾರೆ ಅಂತ ಕಾಣ್ತದೆ. ಓದಿ ಹೇಳಿ ಆಂದ್ರೆ ಹೇಳಿದ್ರೆ ಓದುವುದಿಲ್ಲ. ನಿನ್ಗೆ ಓದ್ಲಿಕ್ಕೆ ಬರ್ತದಲ್ಲಾ, ನೀನಾದ್ರೂ ಒಮ್ಮೆ ಓದಿ ಹೇಳು~ ಎಂದವರೇ, ಅನಂತಣ್ಣನತ್ತ ಕೈ ಚಾಚುತ್ತಾ, `ಅದನ್ನು ಅವ್ಳಿಗೆ ಒಮ್ಮೆ ಕೊಡಿ. ಅವ್ಳೇ ಗಟ್ಟಿ ಓದ್ತಾಳೆ~ ಎಂದುಬಿಟ್ಟಿದ್ದರು.

ಅನಂತಣ್ಣನವರ ಮುಖ ಇದ್ದಕ್ಕಿದ್ದಂತೆ ಕಪ್ಪಿಟ್ಟಿತು. ಆದರೂ ತಕ್ಷಣ ಎಚ್ಚೆತ್ತುಕೊಂಡು, ಹತ್ತಿರ ಬಂದು ಕೈ ಚಾಚಿದ ಐಸಮ್ಮನವರತ್ತ ದಿನಪತ್ರಿಕೆಯ ಎರಡನೇ ಪುಟದಲ್ಲಿ ಪ್ರಕಟವಾಗಿದ್ದ ಸಿನೆಮಾದ ಜಾಹೀರಾತೊಂದರ ಮೇಲೆ ಬೆರಳಿಡುತ್ತಾ, `ಎಂಥ ಬಾಂಬೂ ಇಲ್ಲ ಇವ್ರೇ. ನಿಮ್ಮ ಯಜಮಾನ್ರಿಗೆ ಜಯಮಾಲಾ ಏಕ್ಟ್ ಮಾಡಿರುವ ಸಿನೆಮಾ ತೋರಿಸುವಾ ಅಂತ ಮಾತಾಡ್ತಿದ್ದೆ~ ಎಂದಿದ್ದರು.

ಐಸಮ್ಮ ಒಂದು ಕ್ಷಣ ಗಂಡನನ್ನು ದುರುಗುಟ್ಟಿ ನೋಡಿದರು. `ಅದು ಸರಿ. ಹೆಣ್ಮಕ್ಳನ್ನು ಮದುವೆ ಮಾಡಿ ಕೊಟ್ಟಾಯ್ತು. ಗಂಡು ಮಗ ಕೆಲ್ಸಕ್ಕೆ ಸೇರಿ ತಿಂಗ್ಳು ತಿಂಗ್ಳಿಗೆ ಖರ್ಚಿಗೆ ಅಂತ ಕಳಿಸ್ತಾ ಇದ್ದಾನೆ. ಇನ್ನು ಇವ್ರ ಸಿನ್ಮಾ ನೋಡ್ದೆ ಏನ್ ಮಾಡ್ತಾರೇ?~ ಎಂದು ನಗುತ್ತಾ ಪೇಪರಿನ ಮೇಲೆ ಅನಂತಣ್ಣ ಬೆರಳಿಟ್ಟ ಜಾಗವನ್ನು ದಿಟ್ಟಿಸಿ ನೋಡಿದ್ದರು. ಪ್ರಭಾತ್ ಥಿಯೇಟರಿನಲ್ಲಿ `ಹೌಸ್‌ಫುಲ್~ ಮೂರನೇ ವಾರದಲ್ಲಿ ಓಡುತ್ತಿರುವ ಅಂಬರೀಶ್-ಜಯಮಾಲಾ ನಟಿಸಿರುವ `ಭರ್ಜರಿ ಬೇಟೆ~ಯ ಜಾಹೀರಾತು ಅದು.

`ಇವ್ಳ ಮಂಗ್ಳೂರಿನ ತುಳು ಮಾತಾಡುವ ಹುಡುಗಿ ಅಲ್ವಾ ಅನಂತಣ್ಣಾ? ಎಂಥಾ ಚಾನ್ಸು ನೋಡಿ ಅವ್ಳದ್ದು. ದುಡ್ಡೇ ದುಡ್ಡು. ಅವ್ಳಿಗೆ ಮದುವೆ ಆಯ್ತೊ?~ ಎಂದು ಕುತೂಹಲದಿಂದ ಪ್ರಶ್ನಿಸಿದ್ದರು. `ಯಾಕೇ? ಮದ್ವೆಯಾಗ್ದಿದ್ರೆ ನಿಮ್ಮ ಮಗ್ನಿಗೆ ಮಾತಾಡ್ವ ಅಂತ ಯೋಚ್ನೆ ಏನಾದ್ರೂ ಉಂಟಾ ಹೇಗೇ?~ ಅನಂತಣ್ಣ ದೊಡ್ಡ ಕಂಟಕವೊಂದರಿಂದ ಬಚಾವಾದವರ ಸಂತೋಷದಲ್ಲಿ ಕೇಳಿದ್ದರು. ಒಂದು ಕ್ಷಣ ಯೋಚಿಸಿದ ಐಸಮ್ಮ ಗಂಡನತ್ತ ಕೋಪದ ನೋಟ ಬೀರಿ, `ಮಗ್ನಿಗೆ ಬೇಡ; ಅವ್ನ ಬದ್ಲು ಇವ್ರಿಗೇ ಮಾತಾಡಿ ನೋಡುವುದು ಒಳ್ಳೇದು.

ಇಲ್ಲಿ ಮನೆ ಗುಡಿಸಿ ಸಾರಿಸ್ಲಿಕ್ಕೆ ನಾನಿದ್ದೇನೆ; ನನ್ನನ್ನು ಒಬ್ಳನ್ನೇ ಇಲ್ಲಿ ಬಿಟ್ಟು ಊರೂರು ಸರ್ಕೀಟು ಸುತ್ತುವಾಗ ಇವ್ರಿಗೆ ಇನ್ನೊಂದು ಬೇಕಾದೀತು~ ಎಂದು ಸಿಡುಕಿದ್ದರು.
ಹೆಂಡತಿಯ ಸಿಟ್ಟಿನ ಕಾರಣ ಚಾಂದಚ್ಚನವರಿಗೆ ಚೆನ್ನಾಗಿ ಗೊತ್ತಿತ್ತು.

ಕಳೆದ ವರ್ಷದ ರಂಜಾನ್ ಮಾಸವೂ ಸೇರಿದಂತೆ ಸುಮಾರು ಎರಡು ತಿಂಗಳ ಕಾಲ `ಮೊರಾದಾಬಾದ್~ನ ಮಗನ ಮನೆಯಲ್ಲಿ ಇದ್ದು ಬಂದಿದ್ದ ದಿನಗಳಲ್ಲಿ, ಇಲ್ಲಿ ಇಬ್ಬರು ಕೆಲಸದವರನ್ನು ಇಟ್ಟುಕೊಂಡು ಮನೆ ಮತ್ತು ತೋಟ ಎರಡನ್ನೂ ಒಬ್ಬಳೇ ಸಂಭಾಳಿಸಿ ಸುಸ್ತಾಗಿದ್ದ ಹೆಂಡತಿಯ ಸಿಟ್ಟು ತಣಿಯಲು ಇನ್ನೂ ಒಂದು ಮಳೆಗಾಲ ಬಂದು ಹೋಗಬೇಕಾದೀತು ಎಂದು ಗೊತ್ತಿತ್ತು.  

ಬೊಳುವಾರು ಮಹಮ್ಮದ್ ಕುಂಞಿ ಅವರ ಕಾದಂಬರಿಯ ಆಯ್ದ ಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT