ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಿಮಳೆಯಲ್ಲಿ...

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ನಮಸ್ಕಾರ. ನಾನು ಒಬ್ಬಳು ಕನ್ನಡತಿ. ಓದಿದ್ದು ತಂತ್ರಜ್ಞಾನ ಆದರೂ ಅದೇನೋ ಸೆಳೆತ ಸಾಹಿತ್ಯದಲ್ಲಿ. ಒಬ್ರು ಸರ್ ಹೇಳ್ತಿದ್ರು- ಕೆಮಿಸ್ಟ್ರಿ ಲ್ಯಾಬ್‌ಗೆ ಹೋದ್ರೆ ಒಂಥರಾ ವಾಸನೆ...

ಫಿಜಿಕ್ಸ್ ಲ್ಯಾಬ್‌ನಲ್ಲಿ ಸುಟ್ಟ ವಾಸನೆ, ಬಯೊ ಲ್ಯಾಬ್‌ನಲ್ಲಿ ಕೊಳೆತ ವಾಸನೆ... ಆದರೆ ಕನ್ನಡ ಡಿಪಾರ್ಟ್‌ಮೆಂಟ್‌ಗೆ ಹೋದರೆ ಏನೋ ಪರಿಮಳ... ಅದಕ್ಕೇ ಕನ್ನಡ ಕಸ್ತೂರಿ, ಅಲ್ವಾ?”. `ಸ್ವಾತಿಮಳೆ~ (www.swatimale.blogspot.in) ಬ್ಲಾಗ್‌ನ ಸೌಮ್ಯ ತಮ್ಮನ್ನು ತಾವು ಪರಿಚಯಿಸಿಕೊಳ್ಳುವುದು ಹೀಗೆ.

ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು ಎಂದು ಸೌಮ್ಯ ತಮ್ಮ ಬ್ಲಾಗ್ ಅನ್ನು ಕರೆದುಕೊಂಡಿದ್ದಾರೆ, `ಹುಚ್ಚು ಮನಸಿನ ಹತ್ತು ಮುಖಗಳು~ ಎಂದು ಶಿವರಾಮ ಕಾರಂತರು ಕರೆದುಕೊಂಡಂತೆ. `ಕಂಡ ಎಲ್ಲ ಕನಸುಗಳು ನನಸಾಗಿಬಿಟ್ಟರೆ, ಕನಸು ಕಾಣಲು ಇರುವ ಅರ್ಥವೇನು?~ ಎಂದು ಪ್ರಶ್ನಿಸುವ ಈ ಬ್ಲಾಗಿತಿ, `ಕೆಲವು ಕನಸುಗಳಾದರೂ ನನಸಾಗದೆ ಇರಬೇಕು~ ಎನ್ನುತ್ತಾರೆ.

`ಮತ್ತೆ ನಕ್ಕಳು ರಾಧೆ~, `ದೊಡ್ಮನೆ ಘಟ್ಟದಲ್ಲಿಯ ಸಂಜೆಯ ಸಾಲುಗಳು~, `ಜೋಡಿ ನಕ್ಷತ್ರಗಳ ಕಿವಿಯೋಲೆಯ ಹುಡುಗಿಗೆ~, `ನೋಟ್ ಬುಕ್ಕಿನ ಕೊನೆಯ ಪೇಜು~, `ಸುಮ್ನೆ ಒಂದು ಸುದ್ದಿ~- ಹೀಗೆ, ಸೌಮ್ಯ ಅವರ ಬರಹಗಳ ವೈವಿಧ್ಯ ಸಮೃದ್ಧವಾಗಿದೆ. ಸಣ್ಣ ಸಣ್ಣ ಸಂಗತಿಗಳು, ಖುಷಿಗಳು, ಮಾನವೀಯತೆ, ನಿಷ್ಕಲ್ಮಷ ಪ್ರೇಮ, ಸ್ನೇಹ... ಎಲ್ಲವೂ ಒಳಗೊಂಡಿರುವ `ಸ್ವಾತಿಮಳೆ~ ಬ್ಲಾಗ್‌ನ ಬರಹಗಳ ಓದು ಆಪ್ತ ತೋಯುವಿಕೆಯ ಅನುಭವ ನೀಡುವಂತಿದೆ.

ಸ್ವಾತಿಮಳೆಯಲ್ಲಿ ಕಂಡ `ಹುಡುಗೀರ ದುನಿಯಾ~ದ ಒಂದು ತುಣುಕು ಹೀಗಿದೆ:
ನನಗೆ ಗೊತ್ತು ತಲೆ ಬರಹವನ್ನು ನೋಡಿದೊಡನೆಯೇ ನೀವೆಲ್ಲ ಏನೇನು ಕಲ್ಪನೆ ಮಾಡಿಕೊಂಡಿರ್ತೀರ ಅಂತ! ಹುಡುಗೀರು ಎಂದೊಡನೆ ಒಂದು ಹತ್ತು ವರುಷಗಳ ಹಿಂದೆ ನೆನಪಿಗೆ ಬರುತ್ತಿದ್ದದ್ದು ಕಾಲ್ಗೆಜ್ಜೆಯ `ಘಲ್ ಘಲ್~, ಉದ್ದದ ಲಂಗ, ಒಂದಿಷ್ಟು ನಾಚಿಕೆಯ ರಂಗು, ಕಿಲ ಕಿಲ ನಗು. ಆದರೆ ಈಗ? ಪರಿಸ್ಥಿತಿ ಬದಲಾಗಿದೆ ಕಣ್ರೀ- low waist ಪ್ಯಾಂಟ್, ಕೃತಕವಾಗಿ straightning ಮಾಡಿಸಿದ ಕೂದಲು, ತುಟಿಯ ತುಂಬಾ ಗಾಢ ವರ್ಣದ ಲಿಪ್‌ಸ್ಟಿಕ್, ಕೃತಕ ನಗುವನ್ನು ಇಟ್ಟುಕೊಂಡು, ತರಹೇವಾರಿ ಉಂಗುರಗಳನ್ನು ಸಿಕ್ಕಿಸಿಕೊಂಡು ತಾವೇನು ಯಾವ ಹುಡುಗರಿಗೆ ಕಮ್ಮಿ ಎನ್ನುತ್ತ ಧಂ ಎಳೆಯೋ ಹುಡುಗೀರು. ಪಬ್ಬು-ಕ್ಲಬ್ಬುಗಳಲ್ಲಿ ಮಿನಿ, ಮೈಕ್ರೋ ಮಿನಿಯನ್ನು ಸಿಕ್ಕಿಸಿಕೊಂಡು ನಶೆಯೇರಿ ನಿಶೆಯಲ್ಲಿ ಗಾಡಿ ಚಲಾಯಿಸೋ ಹುಡುಗೀರು. ಏನೇ ಮಾಡಲಿ ಏನೇ ಇರಲಿ ಇದು ಹುಡುಗೀರ ದುನಿಯಾ.

ಹುಡುಗಿಯರದೊಂದು ಭಾರಿ ಕುತೂಹಲಕಾರಿ ಜಗತ್ತು. `ಮಾಫಿಯ~ ಜಗತ್ತಿಗಿಂತ ಒಂದು ಕೈ ಮೇಲೆಂದೇ ಹೇಳಬಹುದೇನೊ. ನೀವು ಒಂದು ಟ್ರೈನಲ್ಲಿ ಹೊರಟಿರುತ್ತೀರಿ. ನಿಮ್ಮ ಬೋಗಿಯೊಳಗೆ ಒಂದು 5-6 ಜನ ಹುಡುಗಿಯರ ಗುಂಪು ಇರುತ್ತದೆ. ಹಾಗೆ ಒಂದು ಹುಡುಗರ ಗುಂಪು ಇದೆ. ಆದರೆ ಆ ಹುಡುಗಿಯರ ಗುಂಪಿಗೇ  the force of attraction  ಜಾಸ್ತಿ ಇರುತ್ತದೆ. ಆ ಹುಡುಗಿಯರ ಗುಂಪಿನಲ್ಲಿ ಸಿಗರೇಟಿನ ಹೊಗೆಯಿಲ್ಲ, ಹೆಂಡದ ನಶೆಯೂ ಇಲ್ಲ. ಬೊಬ್ಬೆ-ಗಲಾಟೆಯೂ ಇಲ್ಲ. ಆದರೆ ಮಿಂಚು ಕೋಲುಗಳ ನೆನಪಿಸುವ ಒಂದೆಳೆಯ ಕಾಡಿಗೆ ಕಂಗಳ ಹೊಳಪಿದೆ. ಕಿಲ ಕಿಲ ನಗುವಿನ ಕಚಗುಳಿಯಿದೆ. ಒಂದಿಷ್ಟು ಗಾಸಿಪ್ ಇದೆ. ಚಾಂಚಲ್ಯದ ಚಮಕ್ ಇದೆ.

ಯಾಕೆ ಹೀಗೆ? ಈ ಹುಡುಗಿಯರಲ್ಲಿ ಅಂಥದ್ದೇನಿದೆ? ಸೌಂದರ್ಯವೊಂದೇ ಅವರ ಬಂಡವಾಳ ಅಲ್ಲ. ಅಲ್ಲಿ ಮುಗ್ಧತೆ-ಪ್ರಬುದ್ಧತೆಗಳ ಮಿಳಿತವಿದೆ, ಕುತೂಹಲ-ಮನೋನಿಗ್ರಹ, ಪ್ರೀತಿ ವಾತ್ಸಲ್ಯದ ಸೆಳೆತವಿದೆ, ಚಾಂಚಲ್ಯ-ದೃಢತೆಯ ಸಂಗಮವಿದೆ, ಕನಸು-ವಾಸ್ತವತೆಯ ಅರಿವಿದೆ. ನಾಜೂಕು-ನಯವಿದೆ. ನಗು-ಅಳುವಿನ ಹುಚ್ಚು ಹೊಳೆಯಿದೆ. ಚಾಣಾಕ್ಷತೆ-ಪೆದ್ದುತನ ಎರಡೂ ಸೇರಿಕೊಂಡಿದೆ. ಒಂಥರಾ dual nature,  ಭೂಮಿಯ ಎರಡು ಧ್ರುವಗಳ ಸಂಗಮ. ಅಥವಾ ಎರಡು ವಿರುದ್ಧ ವ್ಯಕ್ತಿತ್ವಗಳ ಸಂಗಮ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT