ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿಗಳ ವೇಷದಲ್ಲಿ ಕಳ್ಳರು, ಸುಳ್ಳರು, ವಂಚಕರು...

Last Updated 16 ಜನವರಿ 2011, 9:35 IST
ಅಕ್ಷರ ಗಾತ್ರ

ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರ್. ಅಲ್ಲಿದ್ದ ಆರ್.ಕೆ.ಮಲಾಯತ್ ಎಂಬ ಜಾದೂಗಾರ 2008ರ ಅಕ್ಟೋಬರ್ ತಿಂಗಳಲ್ಲಿ ಸುದ್ದಿಯಲ್ಲಿದ್ದರು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಕೆಲವು ಸ್ವಘೋಷಿತ ಸ್ವಾಮೀಜಿಗಳು ಆಗ ಆ ಊರಿನಲ್ಲಿ ಬೀಡುಬಿಟ್ಟಿದ್ದರು. ಮೂರು ದಿನ ಅಲ್ಲಿ ಅವರಿಗೆ ಜಾದೂ ಪಾಠ. ಮಲಾಯತ್ ಜಾದೂ ಕಲಿಸುವ ಗುರು. ತಲೆಗೆ ಐದು ಸಾವಿರ ರೂಪಾಯಿ ಶುಲ್ಕ. ಗಾಳಿಯಿಂದ ವಿಭೂತಿಯನ್ನು ಹಿಡಿದು ಹಣೆಗೆ ಬಳಿದುಕೊಳ್ಳುವುದು, ಖಾಲಿ ನೆಲದ ಮೇಲೆ ಕುಂಕುಮವೋ ವಿಭೂತಿಯೋ ಸುರಿಯುವಂತೆ ಮಾಡುವುದು, ಬಾಯಿಯಿಂದ ಶಿವಲಿಂಗ ಉದ್ಭವವಾಗುವ ಕರಾಮತ್ತು ತೋರಿಸುವುದು ಇವೇ ಮೊದಲಾದ ಜಾದೂಗಳನ್ನು ಮಲಾಯತ್ ಅವರಿಗೆ ಕಲಿಸಿದರು. ಕೆಲವು ಸ್ವಘೋಷಿತ ಸ್ವಾಮೀಜಿಗಳು ಅವನ್ನು ಯಶಸ್ವಿಯಾಗಿ ಕಲಿತರು. ಇನ್ನು ಕೆಲವರು ಅದು ತಮ್ಮ ಕೈಗೆ ಎಟುಕದ ವಿದ್ಯೆ ಎಂದುಕೊಂಡು ಬರಿಗೈಲಿ ಹೋದರು. ಇಂಥ ತಂತ್ರಗಳನ್ನು ತೋರಿಸಿದರೆ ಭಕ್ತ ಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮತ್ತ ಬರುತ್ತಾರೆಂಬುದು ಆ ಸ್ವಾಮೀಜಿಗಳ ಭಾವನೆ. ಇತ್ತೀಚೆಗೆ ಮಲಾಯತ್ ಹೇಳಿದಂತೆ ತಮ್ಮಿಂದ ಜಾದೂ ಕಲಿತು ಹೋದ ಕೆಲವರು ಈಗ ಪ್ರಭಾವಿ ಸ್ವಾಮೀಜಿಗಳಾಗಿದ್ದಾರೆ.

ಅರಿಷಡ್ವರ್ಗಗಳನ್ನು ಗೆದ್ದವನು, ಬದುಕಿನ ಗಾಢಾರ್ಥ-ಗೂಡಾರ್ಥವನ್ನು ಬಲ್ಲವನು, ಸ್ಥಾನ-ಮಾನದಲ್ಲಿ ದೇವರಿಗೆ ತುಂಬಾ ಹತ್ತಿರವಾದವನು, ಸಮಾಜದ ಓರೆಕೋರೆಗಳನ್ನು ತನ್ನ ಬೋಧನಾ ಸೂತ್ರಗಳಿಂದಲೇ ತಿದ್ದಬಲ್ಲವನು, ಲೋಕಕಲ್ಯಾಣ ಕಾರ್ಯಕ್ರಮಗಳನ್ನು ಮಾಡುವವನು- ಇವೇ ಮೊದಲಾದ ವ್ಯಾಖ್ಯೆಗಳು ಸ್ವಾಮೀಜಿಗಳಿಗೆ ಉಂಟು. ಬ್ರಹ್ಮಚರ್ಯ ಪಾಲಿಸುವವರೇ ಸನ್ಯಾಸಿಗಳು. ಈ ವ್ಯಾಖ್ಯೆಯ ಚೌಕಟ್ಟನ್ನು ಮೀರಿದವರೆಲ್ಲರನ್ನೂ ಕಳ್ಳ ಸ್ವಾಮೀಜಿ ಅಥವಾ ಕಳ್ಳ ಸನ್ಯಾಸಿ ಎಂದು ಕರೆಯಬೇಕಾಗುತ್ತದೆ.
ಆದರೆ, ಜನಮಾನಸ ಲೈಂಗಿಕ ವಿಚಾರದಲ್ಲಿ ಸಿಕ್ಕಿಬೀಳುವ ಸ್ವಾಮಿಗಳನ್ನು ಬಲು ಬೇಗ ಕಳ್ಳ ಸ್ವಾಮಿಗಳೆನ್ನುತ್ತದೆ. ಅಕ್ರಮ ಆಸ್ತಿ ಮಾಡಿಕೊಂಡ, ರಾಜಕೀಯ ಪ್ರೇರಣೆಯಿಂದ ಹೇಳಿಕೆಗಳನ್ನು ಕೊಡುತ್ತಾ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡುವ, ನಿಯಮಬಾಹಿರವಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿದ, ಯಾರೋ ಕಲಿಸುತ್ತಾ ಬಂದ ಯೋಗವಿದ್ಯೆ ತಮ್ಮದೇ ಶೋಧ ಎಂಬಂತೆ ಮಾತನಾಡುವ ಸ್ವಾಮೀಜಿಗಳನ್ನು ಭ್ರಷ್ಟಾಚಾರವನ್ನು ಒಪ್ಪಿಕೊಂಡಷ್ಟೇ ಸಲೀಸಾಗಿ  ಸಮಾಜ ಒಪ್ಪಿಕೊಂಡುಬಿಡುತ್ತದೆ. ಕಾಮಿ ಸ್ವಾಮೀಜಿ ಎಂಬುದನ್ನು ದೊಡ್ಡ ಕುತೂಹಲದಿಂದ, ಅಪರಾಧಿ ಎಂಬ ಪಟ್ಟಿಕಟ್ಟುತ್ತಾ ನೋಡುವ ನಮ್ಮ ಸಮಾಜದ ಜನ ಈಗಾಗಲೇ ಪ್ರಭಾವಿಯಾಗಿರುವ ಸ್ವಾಮೀಜಿಗಳ ಅದೆಷ್ಟೋ ಅನೈತಿಕತೆಗೆ ಒಪ್ಪಿಗೆಯ ಮುದ್ರೆ ಒತ್ತಿದ್ದಾಗಿದೆ. ತಾತ್ವಿಕವಾಗಿ ಯಾವುದೇ ಅನೈತಿಕತೆ ಎಸಗುವ ಸ್ವಾಮೀಜಿಯನ್ನು ಕಳ್ಳಸ್ವಾಮಿ ಎಂದೇ ಪರಿಗಣಿಸಬೇಕಾಗುತ್ತದೆ. ಈ ಮಾನದಂಡದಿಂದ ಸೋಸುತ್ತಾ ಹೋದರೆ ಉಳಿದುಕೊಳ್ಳುವ ‘ನಿಜಾರ್ಥದ’ ಸ್ವಾಮೀಜಿಗಳ ಸಂಖ್ಯೆ ತುಂಬಾ ಕಡಿಮೆಯಾದೀತು.

ನಮ್ಮದೇ ಸೃಷ್ಟಿ
ಬೋಧಿಸುವವರನ್ನು ನಾವು ಮೊದಲಿನಿಂದಲೂ ಸೃಷ್ಟಿಸಿಕೊಂಡಿದ್ದೇವೆ. ಪ್ರಜೆಗಳ ಹಿತ ಚಿಂತಿಸಲು ರಾಜನಿಗೆ ಮಂತ್ರಿಯಂತೆ ರಾಜಗುರುವೂ ಬೇಕು. ಜಾತಿಯನ್ನು ರಕ್ಷಿಸಲು ಒಂದು ಪೀಠ, ಸರ್ಕಾರಕ್ಕೆ ದಾರಿ ತೋರಿಸಲು ಇನ್ನೊಂದು ಪೀಠ, ಸಾತ್ವಿಕ ಆಹಾರ ಪದ್ಧತಿ ಸಾರಲು ಒಬ್ಬ ಸ್ವಾಮೀಜಿ, ಯೋಗ ಹೇಳಿಕೊಡಲು ಇನ್ನೊಬ್ಬ ಸ್ವಾಮೀಜಿ, ಔಷಧಿಯಿಲ್ಲದೆ ರೋಗ ವಾಸಿ ಮಾಡಲು ಮಗದೊಬ್ಬ... ಹೀಗೆ ಮನುಷ್ಯ ಬದಲಾದ ಕಾಲಕ್ಕೆ ತಕ್ಕಂತೆ ಸ್ವಾಮೀಜಿಗಳನ್ನು ಸೃಷ್ಟಿಸುತ್ತಲೇ ಬಂದಿದ್ದಾನೆ. ತನ್ನ ಬುದ್ಧಿಶಕ್ತಿಯ ಮಿತಿಯಲ್ಲೇ ಬಗೆಹರಿಸಿಕೊಳ್ಳಬಹುದಾದ ಸಮಸ್ಯೆಗೂ ಪರಿಹಾರ ಕೇಳಲೊಂದು ಆಕೃತಿ ಬೇಕು ಎಂಬ ಮನಃಸ್ಥಿತಿ ಜಾಗತಿಕವಾದದ್ದು. ಹೆಸರಾಂತ ಮನಃಶಾಸ್ತ್ರಜ್ಞ ಕಾರ್ಲ್ ಯೂಂಗ್ ಈ ಅಭಿಪ್ರಾಯವನ್ನು ಪುಷ್ಟೀಕರಿಸಿದ್ದಾರೆ. ಸಿಗ್ಮಂಡ್ ಫ್ರಾಯ್ಡಾ ಗರಡಿಯಲ್ಲಿ ಅರಿವನ್ನು ವಿಸ್ತರಿಸಿಕೊಂಡ ಯೂಂಗ್ ಪ್ರಕಾರ ಮನುಷ್ಯ ಹುಟ್ಟಾ ಧಾರ್ಮಿಕ ಸ್ವಭಾವದವನು. ಈ ಕಾರಣದಿಂದಲೇ ಅವನ ಮನಸ್ಸು ಬೋಧನೆಯನ್ನು ನಿರಂತರವಾಗಿ ಸ್ವೀಕರಿಸಬಯಸುತ್ತದೆ.

ಫಾರ್ಮುಲಾ ಒನ್ ರೇಸಿನಲ್ಲಿ ಕಾರು ಓಡಿಸಿ ಅಸಂಖ್ಯ ಪ್ರಶಸ್ತಿಗಳನ್ನು ಬಾಚಿಕೊಂಡ ಮೈಕಲ್ ಶೂಮಾಕರ್ ತಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವ ಉದ್ದೇಶದಿಂದ ಭಾರತದ ಯೋಗಗುರುವನ್ನು ನೇಮಿಸಿಕೊಂಡಿದ್ದರು. ಆ ಗುರುವಿನಿಂದ ಆಗಾಗ ಶೂಮಾಕರ್‌ಗೆ ಭಾರತೀಯ ತತ್ವಜ್ಞಾನದ ಪಾಠವೂ ನಡೆಯುತ್ತಿತ್ತು. ಲೋಲುಪತೆಯನ್ನು ಮುದ್ದಿಸುವ ಆಧುನಿಕ ಮಾನವ ತನ್ನ ಕಾಲಿಗೇ ಸುತ್ತಿಕೊಂಡ ಸಮಸ್ಯೆಗಳ ಅರಿವನ್ನು ತಂತಾನೇ ಪಡೆಯದಷ್ಟು ಚಟುವಟಿಕೆನಿರತ. ಅದಕ್ಕೇ ಉಸಿರಾಡುವುದನ್ನು ಹೇಳಿಕೊಡಲು, ನೀರು ಕುಡಿಯುವುದನ್ನು ವಿವರಿಸಲು, ಸಾತ್ವಿಕ ಆಹಾರದ ಪಾಠ ಹೇಳಲು, ನಿದ್ದೆ ಮಾಡುವ ಅವಧಿಯನ್ನು ನಿಗದಿಪಡಿಸಲು, ಅಷ್ಟೇ ಏಕೆ ಸಂಭೋಗದಿಂದ ಸಿಗುವ ಸುಖದ ಪ್ರಮಾಣವನ್ನು ವಿಶ್ಲೇಷಿಸಿ ಹೇಳಲು ಬೋಧಕರು ಹುಟ್ಟಿಕೊಂಡಿದ್ದಾರೆ.

ಅವರ ಹುಟ್ಟಿಗೆ ಕಾರಣರಾದವರು ನಾವೇ ಅಲ್ಲವೇ? ಅಂಥವರಿಗೆ ಸ್ವಾಮೀಜಿ, ಗುರೂಜಿ, ಸತ್ಸಂಗ ಗುರು ಎಂದೆಲ್ಲ ಕರೆಯುವ ಮೂಲಕ ಪೀಠದ ಮೇಲೆ ಕೂರಿಸುವುದು ಈಗ ಮಾಮೂಲು.ಹಾಗೆ ನೋಡಿದರೆ ಸ್ವಾಮೀಜಿಗಳು ಲೈಂಗಿಕ ಸುಖ ಬಯಸುತ್ತಿರುವ ಸಂಗತಿ ಹೊಸತೇನೂ ಅಲ್ಲ. ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಪ್ರಕಟಗೊಂಡ ಕನ್ನಡ ಕಾದಂಬರಿಯೊಂದರಲ್ಲಿ ಸ್ವಾಮೀಜಿಯೊಬ್ಬರು ಮನೆಯ ಅಟ್ಟದ ಮೇಲೆ ತೊಟ್ಟಿಲನ್ನು ಕಟ್ಟಿಬಿಟ್ಟಿರುತ್ತಾರೆ. ಮಠಾಧಿಪತಿಯೊಬ್ಬ ಪೀಠದಲ್ಲಿ ಇದ್ದುಕೊಂಡು ಲೈಂಗಿಕ ಸುಖ ಪಡೆಯಲು ಮನಸ್ಸಾಗದೆ ಮಠ ತ್ಯಜಿಸಿ ಮದುವೆ ಮಾಡಿಕೊಳ್ಳುವ ದಿಟ್ಟ ನಿರ್ಧಾರ ತೆಗೆದುಕೊಂಡಾಗ  ‘ಅರೆರೆ’ ಎಂಬ ಅಚ್ಚರಿಯ ವ್ಯಕ್ತಪಡಿಸುವ ಜನ ಮತ್ತೊಬ್ಬ ಸ್ವಾಮೀಜಿ ತನ್ನ ನೆಲೆಯ ಪಕ್ಕದ ಜಾಗಗಳನ್ನೆಲ್ಲ ಒತ್ತುವರಿ ಮಾಡಿಕೊಂಡು ಬೇಲಿ ಹಾಕಿಕೊಂಡರೆ ಸುಮ್ಮನೆ ಇರುತ್ತಾರೆ.

ಕಾಮವಷ್ಟೇ ಯಾಕೆ ಸುದ್ದಿ?
ಭಾರತೀಯ ಮನುಷ್ಯನದ್ದು ಭಕ್ತಿಸಹಜ ಮನಸ್ಸು. ಯಾವುದರಲ್ಲೇ ಆಗಲಿ ಭಕ್ತಿ ನೆಟ್ಟರೆ ಮುಗಿಯಿತು; ಅದರಿಂದ ಕೀಳುವುದು ಕಷ್ಟ.ತುಂಬುಪ್ರಾಯದ ಹುಡುಗಿ ಕಾವಿ ತೊಟ್ಟುಕೊಂಡು ಅಯೋಧ್ಯೆಯು ರಾಮನದ್ದೇ ಹೌದು ಎಂದು ವಾದಿಸುತ್ತಾ ಗಂಟೆಗಟ್ಟಲೆ ನಿರರ್ಗಳವಾಗಿ ಭಾಷಣ ಮಾಡುವುದರ ಮೇಲೆ ಭಕ್ತಿ ಇಟ್ಟವರಿದ್ದಾರೆ. ಲೈಂಗಿಕತೆಯಿಂದಲೇ ಮೋಕ್ಷ ಎಂದು ಪ್ರತಿಪಾದನೆ ಮಾಡುವವರಿಗೆ ಕಿವಿಕೊಟ್ಟವರಿದ್ದಾರೆ. ‘ಮೆಲ್ಲಗೆ ಉಸಿರನ್ನು ಎಳೆದುಕೊಳ್ಳಿ....ಬಿಡಿ’ ಎಂಬ ಪಾಠವನ್ನು ತದೇಕಚಿತ್ತತೆಯಿಂದ ಪಾಲಿಸಿದವರಿದ್ದಾರೆ. ಸ್ವಾಮೀಜಿಗಳ ಬೋಧನೆಗಳ ಪುಸ್ತಕಗಳಿಗೆ ಮೊದಲಿನಿಂದಲೂ ದೊಡ್ಡ ಮಾರುಕಟ್ಟೆ ಇರುವುದೂ ಇದೇ ಕಾರಣಕ್ಕೆ. ಹೀಗೆ ಬೋಧನೆ ಮಾಡುವ ಸ್ವಾಮೀಜಿಗಳ ಸೃಷ್ಟಿಕರ್ತರು ನಾವೇ ಎಂಬುದು ಬಹು ಮುಖ್ಯವಾದ ಸತ್ಯ.

ಸಂತ ಬಿಮಾನಂದ ಜೈ ಮಹಾರಾಜ್ ಎಂಬಾತನನ್ನು ದೆಹಲಿ ಪೊಲೀಸರು ಬಹುಕೋಟಿ ಲೈಂಗಿಕ ಹಗರಣದಲ್ಲಿ ಬಂಧಿಸಿದಾಗ ಜನ ಕುತೂಹಲದ ಕಣ್ಣರಳಿಸಿದ್ದರು. ಯಾಕೆಂದರೆ, ಅವನ ಆ ಜಾಲದಲ್ಲಿ ಗಗನಸಖಿಯೊಬ್ಬಳು ಭಾಗಿಯಾಗಿದ್ದಳು. ‘ಸ್ವಾಮಿ ಜೀ’ ಎಂದೇ ಜನಪ್ರಿಯನಾಗಿದ್ದ ಕುಮಾರ್ ಸಹಾಯ್ ಎಂಬಾತ ಬಾಲಕಿಯೊಬ್ಬಳನ್ನು ಅಪಹರಿಸಿ ಬಂಧನಕ್ಕೊಳಗಾಗಿದ್ದ. ಅಷ್ಟೇ ಏಕೆ, ಕಂಚಿ ಸ್ವಾಮೀಜಿ ಜಯೇಂದ್ರ ಸರಸ್ವತಿ ಅವರ ಮೇಲೂ ಕೊಲೆಯ ಆರೋಪ ಇತ್ತಲ್ಲವೇ? ಅಹಮದಾಬಾದ್‌ನಲ್ಲಿ ಗುರುಕುಲ ನಡೆಸುತ್ತಿದ್ದ ಗುರು ಅಸರಮ್ ಬಾಪು ಇಬ್ಬರು ಹುಡುಗರ ಸಾವಿನ ಪ್ರಕರಣದಲ್ಲಿ ಪೊಲೀಸರ ವಿಚಾರಣೆಗೆ ಒಳಪಟ್ಟಿದ್ದೂ ಸುದ್ದಿಯಾಗಿತ್ತು.

ಸ್ವಾಮೀಜಿಗಳ ಲೈಂಗಿಕತೆ, ಕೊಲೆ ಪ್ರಕರಣಗಳು ಮಾತ್ರ ದೊಡ್ಡದಾಗಿ ಸುದ್ದಿಯಾಗುವುದರಲ್ಲಿ ವಿದ್ಯುನ್ಮಾನ ಮಾಧ್ಯಮದ ಪಾತ್ರ ದೊಡ್ಡದು. ನಿತ್ಯಾನಂದ ಸ್ವಾಮಿಯ ಹಗರಣ ಅಷ್ಟು ಜೋರಾಗಿ ಎದ್ದುಕಾಣಲು ಕಾರಣ ವಾಹಿನಿಗಳು ತೋರಿದ ವಿಡಿಯೋ ಕ್ಲಿಪಿಂಗ್ಸಇದನ್ನು ನೋಡಿದ್ದೇ ಅನೇಕ ಭಕ್ತರು ಕೆರಳಿದರು. ಆಶ್ರಮದ ಎದುರಿನ ಕಟೌಟ್‌ಗಳನ್ನು ಮುರಿದು, ಹರಿದು, ಬೆಂಕಿ ಇಟ್ಟರು. (ಅದಕ್ಕೆ ಪ್ರಚೋದನೆ ಕೊಡಲಾಯಿತೆಂಬ ಆರೋಪವೂ ಇದೆ. ಅದು ಬೇರೆ ಮಾತು.) ಕೆಲವರು ಆತ ಹಾಗೆ ಎಂದು ತಾವು ಭಾವಿಸಿಯೇ ಇರಲಿಲ್ಲ ಎಂದು ಅಭಿಪ್ರಾಯ ಕೊಟ್ಟರು. ಈ ರೀತಿ ಮಾತನಾಡಿದವರಲ್ಲಿ ಅನೇಕರು ಕೆಲವೇ ದಿನಗಳ ಹಿಂದೆ ನಿತ್ಯಾನಂದ ಲೈಂಗಿಕತೆಯ ಕುರಿತು ನೀಡಿದ ಉಪನ್ಯಾಸ ಕೇಳಿದವರೇ ಆಗಿದ್ದರು.

ಸ್ವಾಮೀಜಿಯ ಹಣೆಪಟ್ಟಿ ಹೊತ್ತ ವ್ಯಕ್ತಿಯಿಂದ ಲೈಂಗಿಕ ಪಾಠವನ್ನು ಮೈಯೆಲ್ಲಾ ಕಿವಿಯಾಗಿ ಕೇಳುವ ಜನ, ಅಕಸ್ಮಾತ್ ಆತ ‘ಒಪ್ಪಿತ ಲೈಂಗಿಕ ಚಟುವಟಿಕೆ’ಯಲ್ಲಿ ತೊಡಗಿಕೊಂಡರೆ ಸಹಿಸುವುದಿಲ್ಲ ಎಂಬುದಕ್ಕೂ ಈ ಪ್ರಕರಣ ಉದಾಹರಣೆಯಾಗುತ್ತದೆ. ಮೊನ್ನೆ ಮೊನ್ನೆ ನಟಿ ರಂಜಿತಾ ಸುದ್ದಿಗೋಷ್ಠಿ ಮಾಡಿದ ನಂತರ ಇದೇ ನಿತ್ಯಾನಂದ ಜನ್ಮದಿನ ಆಚರಿಸಿಕೊಂಡಿದ್ದು, ಅದಕ್ಕೆ ಕನ್ನಡದವರೂ ಸೇರಿದಂತೆ ನಟೀಮಣಿಯರು ಹೋಗಿ ಬಂದದ್ದು ಸುದ್ದಿಯಾಯಿತು. ನಿತ್ಯಾನಂದ ಹಾಗೂ ಆತನ ಭಕ್ತ ಸಮುದಾಯದಲ್ಲಿ ಸುದ್ದಿಯಾಗುತ್ತಿರುವ ನಟಿಯರ ಭಂಡತನ ಎಂಥದು ಎಂಬುದನ್ನು ಈ ಬೆಳವಣಿಗೆ ಪುಷ್ಟೀಕರಿಸುತ್ತದೆ.

ಜನ ಸ್ವಾಮೀಜಿಯನ್ನು ನಂಬುತ್ತಾರೆ. ಅವರ ಮಾತನ್ನು ಕೇಳುತ್ತಾರೆ. ಗೌರವ ಕೊಡುತ್ತಾರೆ. ಅವರಿಗೆ ರಾಜಕೀಯ ಪ್ರಭಾವ ಮೂಡುತ್ತದೆ. ಮಠ ಕಟ್ಟುತ್ತಾರೆ. ಕೇಂದ್ರಗಳು, ಶಾಖೆಗಳು ಕವಲೊಡೆಯುತ್ತವೆ. ಕಪ್ಪುಹಣ ಸಂಗ್ರಹ ಕೇಂದ್ರವಾಗಿಯೂ ಕೆಲಸ ನಿರ್ವಹಿಸುವ ಕೆಲವು ಮಠಗಳಲ್ಲಿ ನೀತಿಬೋಧನೆ ಮಾತ್ರ ನಿರಂತರ. ರಾಜಕಾರಣಿಗಳನ್ನು ಕಾಪಾಡಲು ಮುಂದಾಗುವ ಸ್ವಾಮೀಜಿಗಳೂ ನಮ್ಮ ನಡುವೆ ಇದ್ದಾರೆ. ಇವೆಲ್ಲವೂ ಒಪ್ಪಿತ ಎಂಬಂತೆ ಜಾರಿಯಲ್ಲಿರುವಾಗ ‘ಕಳ್ಳ ಸ್ವಾಮಿ’ ಎಂಬ ಹಣೆಪಟ್ಟಿಗೆ ಯಾರು ಒಳಪಡುತ್ತಾರೆಂಬುದೇ ದೊಡ್ಡ ಜಿಜ್ಞಾಸೆಯಾಗಿ ಕಾಣುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT