ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿಗಳೆಲ್ಲ ದಲ್ಲಾಳಿಗಳು: ಭಗವಾನ್

Last Updated 20 ಜನವರಿ 2011, 9:35 IST
ಅಕ್ಷರ ಗಾತ್ರ

ತುಮಕೂರು: ‘ಯಾವೊಬ್ಬ ಸ್ವಾಮೀಜಿಯೂ ಬಸವಣ್ಣನ ಅನುಯಾಯಿಯಾಗಿ ಉಳಿದಿಲ್ಲ. ಎಲ್ಲರೂ ದಲ್ಲಾಳಿಗಳಾಗಿದ್ದಾರೆ. ಜನರನ್ನು ಕಾಲಿಗೆ ಬೀಳಿಸಿಕೊಳ್ಳುವ, ಪಾದ ತೊಳೆಸಿ ದೂಳಿನ ನೀರು ಕುಡಿಸುವ ಗುಲಾಮ ಪದ್ಧತಿ ಪೋಷಿಸುತ್ತಿದ್ದಾರೆ’ ಎಂದು ಚಿಂತಕ ಡಾ.ಕೆ.ಎಸ್.ಭಗವಾನ್ ವಿಷಾದಿಸಿದರು.ಉದಯ ಬಾನು ಪ್ರಕಾಶನ ಮತ್ತು ಕಲ್ಪತರು ಸಾಂಸ್ಕೃತಿಕ ವೇದಿಕೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಿಕ್ಷಣ ತಜ್ಞ ಪ್ರೊ.ಸಿ.ಎಚ್.ಮರಿದೇವರು ರಚಿಸಿರುವ ‘ಅಡ್ಡಪಲ್ಲಕ್ಕಿ ಉತ್ಸವ ಮತ್ತು ದಸರಾ ದರ್ಬಾರು’ ಹಾಗೂ ‘ಚೀನಾ ದೇಶಕ್ಕೆ ಕರ್ನಾಟಕ ರಾಜ್ಯ ರೈತರ ಕೃಷಿ ಅಧ್ಯಯನ ಪ್ರವಾಸ’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸ್ವಾಮೀಜಿಗಳೆಲ್ಲರೂ ಅಧ್ಯಾತ್ಮ ಬೋಧಿಸುವವರಾಗಿದ್ದರೆ ಅವರಿಗೇಕೆ ಕೋಟ್ಯಂತ ರೂಪಾಯಿಯ ಆಸ್ತಿ, ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು ಹಾಗೂ ಐಶರಾಮಿ ವಾಹನಗಳು ಬೇಕು? ಎಂದು ಪ್ರಶ್ನಿಸಿದ ಅವರು, ಅಧ್ಯಾತ್ಮ ಜೀವನ ನಡೆಸುವವರು ಸರ್ವಜನರ ಪ್ರೀತಿ, ಕ್ಷೇಮ, ಕಲ್ಯಾಣ ಬಯಸಬೇಕು ಎಂದು ಸಲಹೆ ನೀಡಿದರು.ಸ್ವಾಮೀಜಿಗಳಿಗೆ ತುಮಕೂರು ಜನರು ಪದೇ ಪದೇ ಕಾಲಿಗೆ ಬಿದ್ದು ವಿಚಾರಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಸ್ವಾಮೀಜಿಗಳು ಕಾಲು ತೊಳೆಸಿದ ನೀರು ಕುಡಿಸಿ ಜನರ ತಲೆಯೊಳಕ್ಕೂ ಕಸ ತುಂಬಿದ್ದಾರೆ.

ಜನರು ಕಾಲಿಗೆ ಬೀಳಬೇಕೆಂದು ಸ್ವಾಮೀಜಿಗಳು ನಿರೀಕ್ಷಿಸುವುದು ಅಮಾನವೀಯ. ಇದು ಗುಲಾಮಗಿರಿಯ ಸಂಕೇತ ಕೂಡ. 12ನೇ ಶತಮಾನದಲ್ಲಿ ಶರಣರು ತಮ್ಮ ಪಾದಸ್ಪರ್ಶಕ್ಕೆ ಅವಕಾಶ ನೀಡುತ್ತಿದ್ದ ನಿದರ್ಶನಗಳಿಲ್ಲ. ಅಂದಿನ ಕಾಲದ ವಚನಗಳೆಲ್ಲವೂ ಮನುಷ್ಯನ ಘನತೆ ಎತ್ತಿಹಿಡಿಯುತ್ತವೆ. ಇಂದಿನ ವಿದ್ಯಾವಂತ ಯುವಜನತೆ ಮತ್ತು ವಿದ್ಯಾರ್ಥಿಗಳು ಕಂದಾಚಾರ ಪ್ರಶ್ನಿಸಬೇಕು. ಸ್ವತಂತ್ರವಾಗಿ ಆಲೋಚಿಸುವ ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜನರು ವೈಚಾರಿಕತೆ ಬೆಳೆಸಿಕೊಳ್ಳದೆ ಗುಲಾಮಗಿರಿಯ ಸಂಕೇತವಾದ ಅಡ್ಡಪಲ್ಲಕ್ಕಿ, ದಸರಾ ದರ್ಬಾರು ನಡೆಸುತ್ತಿರುವುದನ್ನು ಪ್ರೊ.ಸಿ.ಎಚ್.ಮರಿದೇವರು ಕೃತಿಯಲ್ಲಿ ಖಂಡಿಸಿದ್ದಾರೆ. ಹೀಗೆ ಪ್ರಶ್ನಿಸುವ ಮತ್ತು ವೈಚಾರಿಕ ದೃಷ್ಟಿಕೋನದಿಂದ ನೋಡುವಂತಹ ಮನೋಭಾವವನ್ನು ಪ್ರತಿಯೊಬ್ಬರು ವಿದ್ಯಾರ್ಥಿ ದಿಸೆಯಿಂದಲೇ ಬೆಳೆಸಿಕೊಳ್ಳಬೇಕು ಎಂದರು.ಕೃತಿ ಕುರಿತು ವಕೀಲ ಕೆ.ಎಸ್.ಸದಾಶಿವಯ್ಯ, ಪ್ರಾಧ್ಯಾಪಕ ರೇವಣಸಿದ್ದಯ್ಯ ಮಾತನಾಡಿದರು. ಕವಿಗಳಾದ ಕೆ.ಬಿ.ಸಿದ್ದಯ್ಯ, ಕವಿತಾಕೃಷ್ಣ, ಶಿಕ್ಷಣ ತಜ್ಞ ಪ್ರೊ.ಸಿ.ಎಚ್.ಮರಿದೇವರು, ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ, ಡಾ. ಸೋ.ಮು.ಭಾಸ್ಕರಾಚಾರ್, ಬಸವಲಿಂಗಪ್ಪ ಇನ್ನಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT