ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾರ್ಥಕ್ಕಾಗಿ ರಾಜ್ಯದ ಹಿತ ಬಲಿಕೊಟ್ಟ ಮುಖ್ಯಮಂತ್ರಿ

Last Updated 1 ಅಕ್ಟೋಬರ್ 2012, 5:10 IST
ಅಕ್ಷರ ಗಾತ್ರ

ಕನಕಪುರ: ರಾಜ್ಯದ ಜನತೆ ಬರದಿಂದ ತತ್ತರಿಸಿರುವಾಗ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸುವ ಮೂಲಕ ಸರ್ಕಾರ ಜನತೆಗೆ ದ್ರೋಹವೆಸಗಿದೆ ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ್ಲ್ಲಲಿ ಕರವೇ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ದಿಢೀರ್ ರಸ್ತೆ ತಡೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಕಾವೇರಿ ವಿಚಾರವಾಗಿ ಸಮರ್ಥ ವಕೀಲರನ್ನು ನೇಮಕ ಮಾಡುವಲ್ಲಿ ನಿರ್ಲಕ್ಷ ವಹಿಸಿದೆ.
 
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕಾವೇರಿ ನದಿ ನೀರು ಪ್ರಾಧಿಕಾರದ ಸಭೆಯಿಂದ ಹೊರನಡೆದ ಮುಖ್ಯಮಂತ್ರಿಗಳು ಹೀಗೆ ಮಧ್ಯರಾತ್ರಿಯ್ಲ್ಲಲಿ ನೀರು ಹರಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ತಮಿಳುನಾಡಿಗೆ ನೀರು ಹರಿಸುವುದರ ಬದಲು ಕಾನೂನು ಹೋರಾಟ ಮಾಡಬಹುದಿತ್ತು. ಅಥವಾ ರಾಜ್ಯದ ಹಿತದೃಷ್ಟಿಯಿಂದ ಸಮರ್ಥ ವಕೀಲರನ್ನು ನೇಮಕ ಮಾಡಿ ಕೇಂದ್ರ ಹಾಗೂ ಸುಪ್ರೀಂ ಕೋರ್ಟಿಗೆ ರಾಜ್ಯದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಬಹುದಿತ್ತು. ಅದ್ಯಾವುದನ್ನೂ ಮಾಡದೆ ಸರ್ಕಾರ ತನ್ನ ಸ್ವಾರ್ಥಕ್ಕಾಗಿ ರಾಜ್ಯದ ಹಿತವನ್ನು ಬಲಿಕೊಟ್ಟಿದೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ರಾಜ್ಯದ ಸಮಸ್ಯೆಯನ್ನು ಅರಿತು ತೀರ್ಮಾನ ಕೈಗೊಳ್ಳಬೇಕಿತ್ತು. ತಮಿಳುನಾಡು ಸರ್ಕಾರದ ಓಲೈಕೆಗೆ ಮನಸೋತು 9 ಕ್ಯೂಸೆಕ್ ನೀರುಬಿಡುವಂತೆ ಸೂಚಿಸಿರುವುದು ಅಸಮಂಜಸವಾಗಿದೆ.

 ಇಷ್ಟ್ಲ್ಲೆಲಾ ಅನ್ಯಾಯವಾಗುತ್ತಿದ್ದರೂ ರಾಜ್ಯದ ಸಂಸದರು ತುಟಿ ಬಿಚ್ಚದಿರುವುದು ದೌರ್ಭಾಗ್ಯ. ಜನತೆಯ ಹಿತಕ್ಕಿಂತ ಇವರಿಗೆ ಅಧಿಕಾರದ ವ್ಯಾಮೋಹವೇ ಮುಖ್ಯವಾಗಿದೆ ಎಂದು ಸಂಸದರನ್ನು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಆಟೊ ರಿಕ್ಷಾ ಘಟಕದ ಅಧ್ಯಕ್ಷ ಅಂದಾನಿಗೌಡ ಮಾತನಾಡಿ, ಕಾವೇರಿ ನದಿ ನೀರು ಕೇವಲ ಮಂಡ್ಯ ಜಿಲ್ಲೆಯ ರೈತರಿಗೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರಿನ ನಾಗರಿಕರಿಗೂ ಈ ನೀರು ಪೂರೈಕೆಯಾಗುತ್ತದೆ.

ಬೆಂಗಳೂರಿನ ಜನತೆ ನೀರು ಹಂಚಿಕೆಯನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಇಲ್ಲವಾದರೆ ಕಲುಷಿತ ನೀರನ್ನು ಕುಡಿಯ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ವೇದಿಕೆಯ ನೂರಾರು ಕಾರ್ಯಕರ್ತರು ಎಂ.ಜಿ.ರಸ್ತೆಯಲ್ಲಿ ಅರ್ಧ ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿ ಟೈರುಗಳಿಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.  

ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿ, ಕಾರ್ಮಿಕ ಘಟಕದ ಅಧ್ಯಕ್ಷ ಉಮೇಶ್, ದ್ವಿಚಕ್ರವಾಹನ ಘಟಕದ ರವಿಕುಮಾರ್, ನಗರ ಉಪಾಧ್ಯಕ್ಷ ಭದ್ರೇಶ್, ಕರವೇ ಮುಖಂಡರಾದ ನಾರಾಯಣಸ್ವಾಮಿ, ನವೀನ್, ಸಂತೋಷ, ಶಿವಣ್ಣ, ಮಂಜುನಾಥ್, ಮಾದೇವ್ ಮೊದಲಾದವರು ಪ್ರತಿಭಟನೆಯ್ಲ್ಲಲಿ ಪಾಲ್ಗೊಂಡಿದ್ದರು.

ಕದಂಬ ಸೇನೆಯ ರಸ್ತೆ ತಡೆ
ರಾಮನಗರ: ಸುಪ್ರೀಂ ಕೋರ್ಟ್ ಆದೇಶಕ್ಕೆ  ಮಣಿದು ರಾತ್ರೋರಾತ್ರಿ ಕಾವೇರಿ ನೀರು ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಕದಂಬ ಸೇನೆಯ ಕಾರ್ಯಕರ್ತರು ನಗರದ ಐಜೂರು ವೃತ್ತದಲ್ಲಿ ಭಾನುವಾರ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

ತಮಿಳುನಾಡಿಗೆ ಪ್ರತಿ ದಿನ 9 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ದುರದೃಷ್ಟಕರ. ಈಗಾಗಲೇ ಬರದಿಂದ ನೊಂದಿರುವ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರವು  ಕೂಡಲೇ ಮಧ್ಯ ಪ್ರವೇಶಿಸಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಕಾವೇರಿ ನದಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್‌ಗೆ ರಾಜ್ಯದಲ್ಲಿರುವ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದೆ. ಸರ್ಕಾರದ ಬೇಜವಾಬ್ದಾರಿತನದಿಂದ ರಾಜ್ಯದ ರೈತರಿಗೆ ವ್ಯತಿರಿಕ್ತವಾದ ತೀರ್ಪು ಬಂದಿದೆ. ರಾಜ್ಯದ ರೈತರ ಹಿತ ಕಾಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕದಂಬ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಶಿವಕುಮಾರ್ ಒತ್ತಾಯಿಸಿದರು.

ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದಿದ್ದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕದ್ದುಮುಚ್ಚಿ ರಾತ್ರೋ ರಾತ್ರಿ ನೀರು ಬಿಟ್ಟಿರುವುದು ಸರ್ಕಾರದ ದ್ವಿಮುಖ ನೀತಿಯನ್ನು ತೋರಿಸುತ್ತದೆ. ರಾಜ್ಯದ ರೈತರಿಗೆ ಇಷ್ಟೆಲ್ಲಾ ಅನ್ಯಾಯ ಆಗುತ್ತಿದ್ದರೂ ಸಂಸತ್ ಸದಸ್ಯರು ಹೊಣೆಗೇಡಿಗಳಂತೆ ವರ್ತಿಸುತ್ತಿದ್ದಾರೆ.
 
ರಾಜ್ಯದ ರೈತರ ಬಗ್ಗೆ ನಿಜವಾದ ಕಾಳಜಿ ಇರುವುದೇ ನಿಜವಾದರೆ ಎಲ್ಲರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಶಿವು, ನಗರ ಘಟಕದ ಅಧ್ಯಕ್ಷ ಟಿ.ಪಿ.ರವಿ, ಉಪಾಧ್ಯಕ್ಷ ಅಕ್ರಂಪಾಷಾ, ಅಚ್ಚಲು ನಾರಾಯಣ, ಕಿಟ್ಟಿ, ನವೀನ್‌ಕುಮಾರ್,  ದೇವೇಂದ್ರ ಕುಮಾರ್, ಕಿರಣ್, ಚಿಕ್ಕವೆಂಕಟಪ್ಪ , ಬಿ.ವಿ.ಹಳ್ಳಿಸಂತೋಷ್ ಇತರರು ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರದ ಕಚೇರಿಗಳ ಬಂದ್
ಚನ್ನಪಟ್ಟಣ: ತಮಿಳುನಾಡಿಗೆ ರಾತ್ರೋರಾತ್ರಿ ಕಾವೇರಿ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ತಾಲ್ಲೂಕಿನ ಜನಪರ ಸಂಘಟನೆಗಳು ಭಾನುವಾರ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.

ಪಟ್ಟಣದ ಸಾತನೂರು ಸರ್ಕಲ್ ಬಳಿ ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು, ಕನ್ನಡಿಗರ ಹಿತ ಕಾಯುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಕಳ್ಳತನದಲ್ಲಿ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಡುವ ಮೂಲಕ ರಾಜ್ಯದ ಜನತೆಗೆ ದ್ರೋಹ ಎಸಗಿದೆ ಎಂದು ಕಿಡಿಕಾರಿದರು.

ಸರ್ಕಾರದ ನಿಲುವನ್ನು ಖಂಡಿಸಿ ಸೋಮವಾರದಿಂದ ಕೇಂದ್ರ ಸರ್ಕಾರದ ಕಚೇರಿಗಳನ್ನು ಬಂದ್ ಮಾಡಿಸಿ ತೀವ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಎಚ್ಚರಿಸಿದರು.

ರಾಜ್ಯ ಸರ್ಕಾರದ ಪರ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಪಕವಾಗಿ ವಾದ ಮಂಡಿಸದೆ, ಕನ್ನಡಿಗರಿಗೆ ದ್ರೋಹ ಎಸಗಲಾಗಿದೆ. ಅಸಮರ್ಥ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬೆಂಗಳೂರಿನ ಜನತೆ ಕಾವೇರಿ ವಿಷಯದಲ್ಲಿ ಇದುವರೆಗೆ ಮೌನವಾಗಿರುವುದು ಸೂಕ್ತವಲ್ಲ ಎಂದು ವಿಷಾದಿಸಿದರು.

ಇದೇ ವೇಳೆ ಕಾಮಧೇನು ಗೋಶಾಲ ಟ್ರಸ್ಟ್‌ನ ಪದಾಧಿಕಾರಿಗಳು ಪಟ್ಟಣದ ಗಾಂಧಿ ಸ್ಮಾರಕ ಭವನದ ಎದುರು ನಡೆದ ಪ್ರತಿಭಟನೆಯಲ್ಲಿ ಗೋಮೂತ್ರ ವಿತರಿಸುವ ಮೂಲಕ ಕಾವೇರಿ ನೀರು ಖಾಲಿಯಾಗುತ್ತಿದ್ದು ಮುಂದೆ ನಮಗಿದೇ ಗತಿ ಎಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಸಾಗರ್, ಜಿಲ್ಲಾ ಕಾರ್ಯಾಧ್ಯಕ್ಷ ಸತ್ಯನಾರಾಯಣ, ಕರವೇ ವಿದ್ಯಾರ್ಥಿ ಮುಖಂಡ ಅಭಿಲಾಷ್,  ಬಾಬಾಜಾನ್, ಬೋರಣ್ಣ, ಕಾಮಧೇನು ಗೋಶಾಲ ಟ್ರಸ್ಟ್‌ನ ಅಧ್ಯಕ್ಷ ಎಂ.ಕೆ.ನಿಂಗಪ್ಪ, ಪದಾಧಿಕಾರಿಗಳಾದ ಮೆಂಗಳ್ಳಿ ಮಹೇಶ್, ಡಿ.ಟಿ.ತಿಲಕ್‌ರಾಜ್, ಸತೀಶ್, ಕುಮಾರಸ್ವಾಮಿ,ಅಶ್ವತ್ಥ್, ಕೋಲೂರು ನಾಗೇಂದ್ರ, ಜಯಕುಮಾರ್, ಸ್ವಾಮಿ, ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT