ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬಿ ಬದುಕಿಗೆ ಮಾದರಿ

Last Updated 9 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಅಂಗವಿಕಲರನ್ನು ಅನುಕಂಪದಿಂದ ನೋಡಬೇಕು ಎಂಬ ಭಾವನೆ ಅನೇಕರಲ್ಲಿದೆ. ಕೆಲವು ಅಂಗವಿಕಲರು ಸಮಾಜದ ಅನುಕಂಪ ಬಯಸುತ್ತಾರೆ. ಆದರೆ ಯಾರ ಅನುಕಂಪವನ್ನೂ ಬಯಸದೆ ಎಲ್ಲರಂತೆ ಸ್ವಾವಲಂಬಿಗಳಾಗಿ ಬದುಕಬೇಕು ಎಂಬ ಮನೋಭಾವದವರೂ ಇದ್ದಾರೆ. ತುಮಕೂರು ತಾಲ್ಲೂಕಿನ ಸಿರಿವರ ಗ್ರಾಮದ ಹನ್ನೊಂದು ಮಂದಿ ಅಂಗವಿಕಲರು ಅಂತಹ ಸ್ವಾವಲಂಬಿ ಬದುಕಿಗೆ ಹೆಸರಾದವರು. ಅವರು ಬದುಕಿನ ದಾರಿ ಕಂಡುಕೊಂಡ ಬಗೆ ಅನೇಕರಿಗೆ ಮಾದರಿ.

ಸಿರಿವರದ ನಾಗರಾಜಯ್ಯ, ದೊಡ್ಡರಾಮಯ್ಯ, ಗೋವಿಂದಯ್ಯ, ತಿಮ್ಮರಾಜು, ಶಿವಶಂಕರ, ಎಸ್.ಎಚ್.ಕುಮಾರ್, ಪಾಲಾಕ್ಷಯ್ಯ, ಗೋವಿಂದರಾಜು, ನಾಗರಾಜು, ಕೆಂಪಲಿಂಗಯ್ಯ, ಕದರಯ್ಯ, ಮಂಜುನಾಥ್ ಅವರು ಅಂಗವಿಕಲತೆ ಮತ್ತು ಬಡತನ ಜತೆಗೆ ಸಮಾಜದ ತಾತ್ಸಾರಕ್ಕೆ ತುತ್ತಾದವರು.ಇವರೆಲ್ಲರೂ  ಒಂದಾಗಿ ಸ್ವಾವಲಂಬಿ ಬದುಕು ರೂಪಿಸಿಕೊಂಡ ಬಗೆ ಅನೇಕರಿಗೆ ಅಚ್ಚರಿಯನ್ನುಂಟು ಮಾಡುತ್ತದೆ. ಮೊದಲು ‘ಜೀವನ ನಿರ್ವಹಣೆಗೆ ಒದ್ದಾಡುತ್ತಿದ್ದೆ, ಈಗ ನೋಡಿ ಹೇಗಿದ್ದೇನೆ’ ಎನ್ನುತ್ತಾರೆ ಸಣ್ಣ ಟೀ ಅಂಗಡಿ ನಡೆಸುತ್ತಿರುವ ಶಿವಶಂಕರ್.

‘ನಾವು ಹನ್ನೊಂದು ಜನರೂ ಒಂದಾಗಿ ಕಲ್ಪತರು ಬ್ಯಾಂಕಿನಲ್ಲಿ 2008ರಲ್ಲಿ ಉಳಿತಾಯ ಖಾತೆ ತೆರೆದೆವು. ಪ್ರತಿ ವಾರ ನಮ್ಮ ಆದಾಯದಲ್ಲಿ ಇಂತಿಷ್ಟು ಹಣ ಉಳಿತಾಯ ಮಾಡತೊಡಗಿದವು. ನಮ್ಮ ಉಳಿತಾಯದ ಶಕ್ತಿ ಮನಗಂಡ ಬ್ಯಾಂಕಿನವರು 2010ರಲ್ಲಿ 35 ಸಾವಿರ ರೂ ‘ಗುಂಪು ಸಾಲ’ ನೀಡಿದರು. ಆ ಹಣದಿಂದ ಬದುಕು ಕಟ್ಟಿಕೊಂಡೆವು’ ಎನ್ನುತ್ತಾರೆ ನಾಗರಾಜ್.

ಅವರೆಲ್ಲ ಸೇರಿ ಕಟ್ಟಿಕೊಂಡಿರುವ ‘ಮಾರುತಿ ಸ್ವಸಹಾಯ ಸಂಘ’ದ ಸಭೆ ವಾರಕ್ಕೊಮ್ಮೆ ನಡೆಯುತ್ತದೆ. ಸಭೆಯಲ್ಲಿ ಆದಾಯ, ಉಳಿತಾಯ ಹಾಗೂ ವಹಿವಾಟಿನ ವಿವರ, ಲಾಭ, ನಷ್ಟಗಳ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುತ್ತಾರೆ.ಅಂಗವಿಕಲರಾದ ನಾಗರಾಜು ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಂಪಲಿಂಗಯ್ಯ ಎಮ್ಮೆ ಸಾಕುತ್ತಿದ್ದಾರೆ. ಮತ್ತೊಬ್ಬರು ತರಕಾರಿ ವ್ಯಾಪಾರ, ಇನ್ನೊಬ್ಬರು ಚಪ್ಪಲಿ ಅಂಗಡಿ. ಒಬ್ಬೊಬ್ಬರೂ ಅವರವರ ಮನೋಭಾವಕ್ಕೆ  ಅನುಗುಣವಾದ ಉದ್ಯೋಗ ಮಾಡುತ್ತ ಬದುಕು ಕಟ್ಟಿಕೊಂಡಿದ್ದಾರೆ.

ಮೊದಲು ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿರುತ್ತಿದ್ದೆವು. ಈಗ ನಮ್ಮದೇ ಸ್ವಂತ ಉದ್ಯೋಗ,ವ್ಯಾಪಾರ. ನಮ್ಮ ಜೀವನಕ್ಕೆ ಸಾಕಾಗುವಷ್ಟು ಹಣ ದುಡಿಯುತ್ತಿದ್ದೇವೆ ಎನ್ನುತ್ತಾರೆ. ಅವರೆಲ್ಲ ಸೇರಿ ತಿಂಗಳಿಗೆ 400 ರೂ ಸಾಲದ ಕಂತು ಕಟ್ಟುತ್ತಾರೆ.

ಮೊದಲ ಕಂತಿನಲ್ಲೇ ನಾಲ್ಕು ಸಾವಿರ ರೂ ಪಾವತಿ ಮಾಡಿದ್ದರು. ಅದು ಅವರ ಛಲವನ್ನು ಎತ್ತಿ ತೋರಿಸಿತು. ಇದೇ ನಿಜವಾದ ಯಶೋಗಾಥೆ  ಎಂದು ಕಲ್ಪತರು ಬ್ಯಾಂಕಿನ ಮ್ಯಾನೇಜರ್ ಬಿ. ಪರಮೇಶ್ ತಮ್ಮ ಬಳಿ ಬರುವ ಗ್ರಾಹಕರಿಗೆಲ್ಲ ಹೇಳುತ್ತ ಈ ಹನ್ನೊಂದು  ಜನರ ಸಂಘಶಕ್ತಿ ಹಾಗೂ ಸ್ವಾವಲಂಬಿ ಬದುಕಿನ ಆಶಯವನ್ನು ಪ್ರಶಂಶಿಸುತ್ತಾರೆ.

ದೈಹಿಕ ಅಂಗವಿಲಕತೆಯನ್ನು ಬಂಡವಾಳ ಮಾಡಿಕೊಂಡು ಸಮಾಜದ ಅನುಕಂಪ ಗಿಟ್ಟಿಸುವ ಜನರು ಹೆಚ್ಚಾಗಿರುವ ಈ ಕಾಲದಲ್ಲಿ ಸಾಲ ಮಾಡಿ ಬದುಕು ರೂಪಿಸಿಕೊಂಡಿರುವ ಈ ಹನ್ನೊಂದು ಮಂದಿ ಅಂಗವಿಕಲರು ಸ್ವಾವಲಂಬಿ ಬದುಕಿಗೆ ಮಾದರಿ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT