ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬಿ ಮಕ್ಕಳ ಬಾಲಮೇಳ

Last Updated 14 ಫೆಬ್ರುವರಿ 2011, 9:15 IST
ಅಕ್ಷರ ಗಾತ್ರ

ಹಾವೇರಿ: ಅಲ್ಲಿದ್ದ  ವಸ್ತುಗಳ ಉತ್ಪಾದಕರು ಮಕ್ಕಳೇ, ಅಂಗಡಿಗಳನ್ನಿಟ್ಟು ಮಾರಾಟ ಮಾಡಿದವರೂ ಅವರೇ, ಕೊಂಡುಕೊಳ್ಳಲು ಬಂದವರು ಶಿಕ್ಷಕರು, ಊರ ಜನರು. ಮಾರಾಟಗಾರರಲ್ಲಿ ಹಾಗೂ ಕೊಳ್ಳುವವರಲ್ಲಿ ಕುತೂಹಲ, ಉತ್ಸಾಹ ಎದ್ದು ಕಾಣುತ್ತಿತ್ತು. ಇದೆಲ್ಲದರ ನಡುವೆ ನಡೆದದ್ದು ಭರ್ಜರಿ ವ್ಯಾಪಾರ...!

ರಾಣೆಬೆನ್ನೂರು ತಾಲ್ಲೂಕಿನ ಮಾಕನೂರು ಗ್ರಾಮದ ಶ್ರೀ ಮಾರ್ಕಂಡೇಶ್ವರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ಅಧ್ಯಯನದ ಜತೆಗೆ ಮಕ್ಕಳ ಪ್ರತಿಭೆಯನ್ನು ಹೊರ ಹಾಕುವ, ಅವರಲ್ಲಿ ವ್ಯವಹಾರ ಜ್ಞಾನ ಹಾಗೂ ಸ್ವಾವಲಂಬಿತನ ಮೂಡಿಸುವ ಉದ್ದೇಶದಿಂದ ಆಯೋಜಿಸಿದ ಬಾಲಮೇಳದಲ್ಲಿ ಕಂಡು ಬಂದ ದೃಶ್ಯಗಳಿವು.

ಮಕ್ಕಳು ತಾವೇ ತಯಾರಿಸಿದ ವಸ್ತುಗಳನ್ನು ಪೈಪೋಟಿ ಮೇಲೆ ಮಾರಾಟ ಮಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, ಈ ಮಕ್ಕಳು ಯಾವುದೇ ವ್ಯಾಪಾರಿಗಳಿಗಿಂತ ಕಡಿಮೆ ಇಲ್ಲ ಎನ್ನುವ ಭಾವನೆ ವ್ಯಕ್ತಪಡಿಸಿದರು.

ಕೆಲವರು ವಿಜ್ಞಾನ ವಸ್ತುಗಳ ಪ್ರದರ್ಶನದ ಜತೆಗೆ ಅನೇಕ ಮಾದರಿಗಳನ್ನು ತಯಾರಿಸಿ ಅವುಗಳನ್ನು ಮಾರಾಟ ಮಾಡಿದರೆ, ಕೆಲವರು ಗಣಿತ ಮಾದರಿಗಳ ಪ್ರದರ್ಶನ ನಡೆಸಿದರು.
ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯ ಕವಿಗಳ ಭಾವಚಿತ್ರಗಳ ಪ್ರದರ್ಶನದ ಜತೆಗೆ ತಮಗೆ ಇಷ್ಟವಾದ ಕವಿಗಳ ಭಾವಚಿತ್ರಗಳನ್ನು ಖರೀದಿಸಲು ಅಲ್ಲಿ ಅವಕಾಶವನ್ನು ಕಲ್ಪಿಸಿದ್ದರು.

ಮಕ್ಕಳು ತಮ್ಮಲ್ಲಿಯೇ ಕೆಲವು ಗುಂಪುಗಳನ್ನು ಮಾಡಿಕೊಂಡು ತಯಾರಿಸಿದ ಕರಕುಶಲ ವಸ್ತುಗಳು, ಅಲಂಕಾರಿಕ ವಸ್ತುಗಳು ಯಾವುದೇ ಗೃಹ ಕೈಗಾರಿಕೆಗಳು ತಯಾರಿಸುವ ಉತ್ಪನ್ನಗಳಿಗೆ ಸರಿ ಸಮಾನವಾಗಿದ್ದವು. ಹೀಗಾಗಿ ಮೇಳದಲ್ಲಿ ಹೆಚ್ಚು ವಹಿವಾಟು ನಡೆದಿದ್ದು ಇಲ್ಲಿಯೇ.

ಅಷ್ಟೇ ಅಲ್ಲದೇ ಮೇಳದಲ್ಲಿ ಪಾಲ್ಗೊಂಡ ಜನರಿಗೆ ಮೋಜು ತರುವ ಆಟಗಳನ್ನು ಆಡಿಸಿದ ಮಕ್ಕಳು, ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚುವ ಕೆಲ ಆಟಗಳನ್ನು ಆಡಿಸಿದರು. ಗೆದ್ದ ವಿದ್ಯಾರ್ಥಿಗಳಿಗೆ ಸ್ವತಃ ವಿದ್ಯಾರ್ಥಿಗಳೇ ಬಹುಮಾನ ನೀಡಿದರು.

ಅತಿ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ವಸ್ತುಗಳನ್ನು ತಯಾರಿಸಬಹುದೆಂಬುದನ್ನು ತೋರಿಸಿಕೊಟ್ಟ ವಿದ್ಯಾರ್ಥಿಗಳ ಪ್ರತಿಭೆಗೆ ಊರಿನ ನಾಗರಿಕರಷ್ಟೇ ಅಲ್ಲ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಬಿ.ಕೊಡ್ಲಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗೋವಿಂದಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಪ್ರೇಮಾ, ತಾ.ಪಂ. ಸದಸ್ಯ ಎಂ.ಸಿ.ಮಲ್ಲನಗೌಡರ ಸೇರಿದಂತೆ ಅನೇಕರು ತಲೆದೂಗಿದರು. ವಿನೂತನ ಕಾರ್ಯಕ್ರಮ ಆಯೋಜಿಸಿದ ಶಾಲೆಯ ಶಿಕ್ಷಕರನ್ನು ಪ್ರಶಂಸಿಸಿದರು.

ಇನ್ನೂ ಕೆಲ ವಿದ್ಯಾರ್ಥಿಗಳು ಪ್ರದರ್ಶಿಸಿದ ಬ್ಯಾಂಕಿಂಗ್ ಮಾದರಿಗಳು ಸಾಮಾನ್ಯ ಜನರು ಕೂಡಾ ಸಲೀಸಾಗಿ ಬ್ಯಾಂಕಿನ ವ್ಯವಹಾರವನ್ನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವಲ್ಲದೇ, ಮಾಕನೂರು ಕಾಪೋರೇಶನ್ ಬ್ಯಾಂಕಿನ ಸಿಬ್ಬಂದಿ ಈ ಮಾದರಿಗಳನ್ನು ನೋಡಿ ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಬೆನ್ನು ತಟ್ಟಿದರು.

‘ಮಕ್ಕಳಿಗೆ ಸ್ವತಃ ಮಾಡಿ ಕಲಿಯುವುದು ಕಲಿಕೆಯಲ್ಲಿಯೇ ಅತ್ಯಂತ ಪ್ರಭಾವಶಾಲಿ ಕಲಿಕೆಯಾಗಲಿದೆ. ಮಕ್ಕಳಿಗೆ ವಸ್ತುಗಳನ್ನು ತಯಾರಿಸುವ ಹಾಗೂ ಅವುಗಳನ್ನು ಮಾರುಕಟ್ಟೆ ಮಾಡುವ ತಿಳಿವಳಿಕೆಯನ್ನುಂಟು ಮಾಡುವ ಉದ್ದೇಶದಿಂದ ಈ ಬಾಲಮೇಳ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು, ಶಿಕ್ಷಕರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದರ ಪರಿಣಾಮ ಬಾಲ ಮೇಳ ಅತ್ಯಂತ ಯಶಸ್ವಿಯಾಯಿತು ಎಂದು ಹೇಳುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯ ಸಿ.ನಿಂಗನಗೌಡ ಹಾಗೂ ಹಿರಿಯ ಶಿಕ್ಷಕ ಚನ್ನಮಲ್ಲಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT